ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ಘಟಕ: ಕಳಚಿಕೊಂಡ ಶಿರಾ, ಪಾವಗಡ

Last Updated 14 ಮೇ 2017, 5:31 IST
ಅಕ್ಷರ ಗಾತ್ರ

ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್‌ಟಿಸಿ) ತುಮಕೂರು ವಿಭಾಗಕ್ಕೆ ಹೊಸದಾಗಿ ಮಧುಗಿರಿ ಘಟಕ ಇನ್ನೇನು ಸೇರ್ಪಡೆಯಾಗುತ್ತಿದೆ ಎಂಬುವಷ್ಟರಲ್ಲಿ ಶಿರಾ ಮತ್ತು ಪಾವಗಡ ಘಟಕಗಳು ಈ ವಿಭಾಗದಿಂದ ಕಳಚಿಕೊಳ್ಳುತ್ತಿವೆ.

ಮಧುಗಿರಿ ಘಟಕದ ಉದ್ಘಾಟನೆಯನ್ನು ಮುಂದಿನ ತಿಂಗಳು ಮಾಡುವ ಸಿದ್ಧತೆಯಲ್ಲಿ ವಿಭಾಗದ ಅಧಿಕಾರಿಗಳು ತುರುಸಿನ ಕೆಲಸ ಕಾರ್ಯದಲ್ಲಿ ತೊಡಗಿದ್ದಾರೆ. ಅಷ್ಟರಲ್ಲಿ ಶಿರಾ ಮತ್ತು ಪಾವಗಡ ಘಟಕಗಳನ್ನು ಈ ವಿಭಾಗದಿಂದ ಬೇರ್ಪಡಿಸಿ ಇಲಾಖೆ ಆದೇಶ ಹೊರಡಿಸಿದೆ.

ಕಾರಣ ಏನು: ನಿಗಮವು ಹೊಸದಾಗಿ ಚಿತ್ರದುರ್ಗ ವಿಭಾಗವನ್ನು ಪ್ರಾರಂಭಿಸಲು ನಿರ್ಧರಿಸಿದೆ. ಇದಕ್ಕಾಗಿ ದಾವಣಗೆರೆ ಮತ್ತು ತುಮಕೂರು ವಿಭಾಗದ ಕೆಲವು ಘಟಕಗಳನ್ನು ಸೇರ್ಪಡೆ ಮಾಡುತ್ತಿದೆ.
ದಾವಣಗೆರೆ ವಿಭಾಗದ ವ್ಯಾಪ್ತಿಯ ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ ಘಟಕಗಳನ್ನು ಹಾಗೂ  ತುಮಕೂರು ವಿಭಾಗ ಶಿರಾ ಮತ್ತು ಪಾವಗಡ ಘಟಕಗಳನ್ನು ಸೇರಿಸುತ್ತಿದೆ.

‘ಚಿತ್ರದುರ್ಗ ವಿಭಾಗಕ್ಕೆ ಪ್ರತ್ಯೇಕ ಸೌಲಭ್ಯಗಳನ್ನು ಕಲ್ಪಿಸುವವರೆಗೂ ಶಿರಾ ಮತ್ತು ಪಾವಗಡ ಘಟಕಗಳು ಈಗಿರುವಂತೆಯೇ ತುಮಕೂರು ವಿಭಾಗದ ವಿಭಾಗೀಯ ಕಾರ್ಯಾಗಾರ, ಟೈರು, ರಿಟ್ರೇಡಿಂಗ್ ಘಟಕ ಹಾಗೂ ಉಗ್ರಾಣ ಬಳಸಿಕೊಳ್ಳಬೇಕು.

ಅದೇ ರೀತಿ ಚಿತ್ರದುರ್ಗ, ಹೊಸದುರ್ಗ ಹಾಗೂ ಚಳ್ಳಕೆರೆ ಘಟಕಗಳು ದಾವಣಗೆರೆ ವಿಭಾಗದ ವಿಭಾಗೀಯ ಕಾರ್ಯಾಗಾರದಲ್ಲಿನ ಉಗ್ರಾಣ, ಟೈರು, ರಿಟ್ರೇಡಿಂಗ್ ಘಟಕ ಬಳಸಿಕೊಳ್ಳಬೇಕು’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಆದೇಶಿಸಿದ್ದಾರೆ.

ಸಾರಿಗೆ ನಿಗಮವು ಆಡಳಿತ ಹಿತದೃಷ್ಟಿಯಿಂದ ಹೊಸದಾಗಿ ಚಿತ್ರದುರ್ಗ ವಿಭಾಗವನ್ನು ಪ್ರಾರಂಭಿಸಲು ನಿರ್ಧರಿಸಿರಬಹುದು. ಆದರೆ, ತುಮಕೂರು ವಿಭಾಗಕ್ಕೆ ಒಂದನ್ನು ಕೊಟ್ಟು ಎರಡನ್ನು ಕಿತ್ತುಕೊಂಡಂತಾಗಿದೆ ಎಂದು ವಿಭಾಗದ ಕೆಲ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಶಿರಾ ಮತ್ತು ಪಾವಗಡ ಘಟಕ ತುಮಕೂರು ವಿಭಾಗದಲ್ಲಿಯೇ ಇದ್ದರೆ ಆಡಳಿತಾತ್ಮಕವಾಗಿ ಅನುಕೂಲವಾಗುತ್ತದೆ. ತುಮಕೂರು ಸಮೀಪ ಆಗುವುದರಿಂದ ಸಿಬ್ಬಂದಿ ಕಚೇರಿ ಕೆಲಸ ಕಾರ್ಯಕ್ಕೆ ಬೇಗ ಬಂದು ಹೋಗಬಹುದು.

ಅಭಿವೃದ್ಧಿ ಕಾರ್ಯ ಕೈಗೊಳ್ಳಲು, ಘಟಕದ ವ್ಯಾಪ್ತಿಯಲ್ಲಿ ಯಾವುದಾದರೂ ಮಾರ್ಗದಲ್ಲಿ ಬಸ್ ಸಂಪರ್ಕ ಕೊರತೆ ಇದ್ದರೆ ಕಲ್ಪಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದರು.  ಅಲ್ಲದೇ, ಸಾರ್ವಜನಿಕರಿಗೂ ದೂರು ಸಲ್ಲಿಸಲು ಅನುಕೂಲ ಆಗುತ್ತಿತ್ತು. ಇನ್ನು ಮುಂದೆ ಇದೆಲ್ಲ ಇರೊಲ್ಲ’ ಎಂದು ಚಾಲಕರು ಮತ್ತು ನಿರ್ವಾಹಕರು ವಿವರಿಸಿದರು.

ಒಂದು ಘಟಕ ಪ್ರಾರಂಭವಾಗಬೇಕಾದರೆ ಸಾರ್ವಜನಿಕರು ಎಷ್ಟೋ ವರ್ಷ ಹೋರಾಟ ನಡೆಸಿರುತ್ತಾರೆ. ಕಾರಣ ಅದರಿಂದ ತಮ್ಮ ಸುತ್ತಮುತ್ತಲಿನ ಪ್ರದೇಶಕ್ಕೆ ಒಂದಿಷ್ಟು ಬಸ್ ಸಂಪರ್ಕ ವ್ಯವಸ್ಥೆ ಆಗುತ್ತದೆ, ಐಟಿಐ, ಡಿಪ್ಲೊಮಾ ಮಾಡಿದವರಿಗೆ ಒಂದಿಷ್ಟು ಉದ್ಯೋಗವಕಾಶ ಲಭಿಸುತ್ತದೆ ಎಂಬ ಆಶಯ ಇರುತ್ತದೆ.

ಆದರೆ, ಈಗ ಘಟಕಗಳು ಮಾತ್ರ ಇಲ್ಲಿದ್ದು, ಆಡಳಿತ ನಿಯಂತ್ರಣ ದೂರದ ಚಿತ್ರದುರ್ಗ ವಿಭಾಗಕ್ಕೆ ಒಳಪಟ್ಟರೆ ಸ್ಪಂದಿಸುವುದು ಕಷ್ಟ ಎಂದು ಸಾರ್ವಜನಿಕರು ಹೇಳುತ್ತಾರೆ.

ಚಿತ್ರದುರ್ಗ ವಿಭಾಗ ವ್ಯಾಪ್ತಿ ಘಟಕಗಳು
ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ, ಶಿರಾ, ಪಾವಗಡ

ಉಳಿಯುವ ಘಟಕಗಳು
ತುಮಕೂರು–1, ತುಮಕೂರು–2, ಕುಣಿಗಲ್, ತುರುವೇಕೆರೆ, ತಿಪಟೂರು

ಮಾಹಿತಿ ಇಲ್ಲ
‘ನಿಗಮವು ಹೊಸದಾಗಿ ಚಿತ್ರದುರ್ಗ ವಿಭಾಗ ಮಾಡುತ್ತಿದೆ ಎಂಬ ಮಾಹಿತಿ ಇದೆ. ಆದರೆ, ನಮ್ಮ ವಿಭಾಗದ ಯಾವ ಘಟಕಗಳನ್ನು ಅದಕ್ಕೆ ಸೇರಿಸಲಾಗುತ್ತಿದೆ ಎಂಬುದು ಗೊತ್ತಿಲ್ಲ.

ಅಧಿಕೃತವಾಗಿ ಈವರೆಗೂ ನಿಗಮದ  ಹಿರಿಯ ಅಧಿಕಾರಿಗಳಿಂದ ಮಾಹಿತಿ ಬಂದಿಲ್ಲ’ ಎಂದು ಸಾರಿಗೆ ನಿಗಮದ ತುಮಕೂರು ವಿಭಾಗದ ವಿಭಾಗೀಯ ಅಧಿಕಾರಿ ಎಫ್‌.ಸಿ.ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ವಿಭಾಗದಿಂದ ಹೊಸದಾಗಿ ಮಧುಗಿರಿಯಲ್ಲಿ ಘಟಕ ಸ್ಥಾಪನೆ ನಡೆಯುತ್ತಿದೆ. ಗುಬ್ಬಿಯಲ್ಲೂ ಘಟಕ ಸ್ಥಾಪನೆಗೆ ಬೇಡಿಕೆ ಇದ್ದು, ಆದರೆ ಇಲಾಖೆ ಮಟ್ಟದಲ್ಲಿ ಇದಿನ್ನೂ ಪರಿಶೀಲನೆ ಹಂತದಲ್ಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT