ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿಡಿಲು ಮುನ್ಸೂಚನೆ’ಗೆ ಉಪಕರಣ

ಜನ–ಜಾನುವಾರು ಸಾಯುವುದನ್ನು ತಡೆಯಲು ಕ್ರಮ
Last Updated 14 ಮೇ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಿಡಿಲಿನಿಂದ ಜನರು ಹಾಗೂ ಜಾನುವಾರುಗಳು ಸಾಯುವುದನ್ನು ತಡೆಯಲು ರಾಜ್ಯದ 10 ಕಡೆ ‘ಸಿಡಿಲು ಮುನ್ಸೂಚನೆ’ ಉಪಕರಣಗಳನ್ನು ಅಳವಡಿಸಲು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಸಿದ್ಧತೆ ನಡೆಸಿದೆ.

ರಾಜ್ಯದಲ್ಲಿ ಈ ವರ್ಷ ಮುಂಗಾರು ಪೂರ್ವ ಉತ್ತಮ ಮಳೆಯಾಗಿದೆ. ಅದರೊಂದಿಗೆ ಸಿಡಿಲು, ಗುಡುಗಿನ ಆರ್ಭಟವೂ ಜೋರಾಗಿದೆ. ಇದರಿಂದ ಎರಡು ತಿಂಗಳಲ್ಲೇ ಸಿಡಿಲಿಗೆ 30 ಮಂದಿ ಬಲಿಯಾಗಿದ್ದಾರೆ.  ಇದನ್ನು  ತಪ್ಪಿಸಲು ಕೆಎಸ್‌ಎನ್‌ಡಿಎಂಸಿ ಈ ಕ್ರಮಕ್ಕೆ ಮುಂದಾಗಿದೆ.

‘ಸಿಡಿಲನ್ನು ತಡೆಯಲು ಆಗುವುದಿಲ್ಲ. ಆದರೆ, ಅದರ ಮುನ್ಸೂಚನೆ ಸಿಕ್ಕಿದರೆ ಅನೇಕರ ಪ್ರಾಣ ಉಳಿಸಬಹುದು. ಸಿಡಿಲು ಬರುವ ಅರ್ಧಗಂಟೆಗೂ ಮುನ್ನ ಈ ಸಾಧನ ಮಾಹಿತಿ ನೀಡುತ್ತದೆ’ ಎಂದು ಕೇಂದ್ರ ನಿರ್ದೇಶಕ ಡಾ. ಶ್ರೀನಿವಾಸ ರೆಡ್ಡಿ ತಿಳಿಸಿದರು.

‘ಸಿಡಿಲಿನಿಂದ ಸತ್ತವರ ಸಂಖ್ಯೆ ಹೆಚ್ಚು ಇರುವಲ್ಲಿ ಈ ಉಪಕರಣ ಅಳವಡಿಸುತ್ತೇವೆ. ಇದನ್ನು ಪ್ರತ್ಯೇಕವಾಗಿ ಅಳವಡಿಸುವ ಅಗತ್ಯವಿಲ್ಲ. ಈಗಿರುವ ಹವಾಮಾನ ಮುನ್ಸೂಚನೆ ಸಾಧನದೊ ಂದಿಗೆ ಜೋಡಿಸಿದರೆ ಸಾಕು. ಮಳೆ ಮೋಡ ಸಾಗುವಾಗ ಅದು ಮಾಹಿತಿ ರವಾನಿಸುತ್ತದೆ’ ಎಂದು ವಿವರಿಸಿದರು.

‘ಅರ್ಥ್‌ ನೆಟ್‌ವರ್ಕ್ಸ್‌ ಎಂಬ ವಿದೇಶಿ ಕಂಪೆನಿ ಜೊತೆ ಈ ಬಗ್ಗೆ ಮಾತುಕತೆ ನಡೆದಿದೆ. ಆಂಧ್ರಪ್ರದೇಶ ಸರ್ಕಾರವು ಈಗಾಗಲೇ ಈ ಕಂಪೆನಿ ಜೊತೆ ಒಪ್ಪಂದ ಮಾಡಿಕೊಂಡಿದೆ.  ಸಿಡಿಲಿನ ಮಾಹಿತಿ ನೀಡಲು ವರ್ಷಕ್ಕೆ ₹45 ಲಕ್ಷ ನೀಡಬೇಕು ಎಂದು ಕಂಪೆನಿ ಬೇಡಿಕೆ ಇಟ್ಟಿದೆ’
‘ಉಪಕರಣದ ನಿರ್ವಹಣೆಯನ್ನು ಕಂಪೆನಿಯೇ ನೋಡಿಕೊಳ್ಳುತ್ತದೆ. ಅವರು ನೀಡುವ ಸಿಡಿಲಿನ ಮುನ್ಸೂಚನೆಯನ್ನು ಜನರಿಗೆ ತಲುಪಿಸುವುದಷ್ಟೇ ನಮ್ಮ ಕೆಲಸ. ಈ ಮಾಹಿತಿಯನ್ನು ಜನರಿಗೆ ತ್ವರಿತ ಗತಿಯಲ್ಲಿ  ತಲುಪಿಸುವುದು  ಸವಾಲಿನ ವಿಷಯ’ ಎಂದು ಹೇಳಿದರು.

‘ಜನರಿಗೆ ಮಾಹಿತಿ ನೀಡಲು ಆ್ಯಪ್‌ ಅಭಿವೃದ್ಧಿಪಡಿಸುವ ಚಿಂತನೆ ಇದೆ.  ಜೊತೆಗೆ, ಇತರ ಸಾಧ್ಯತೆಗಳ ಬಗ್ಗೆಯೂ ಚರ್ಚಿಸುತ್ತಿದ್ದೇವೆ’ ಎಂದರು.

‘ಅರ್ಥ್‌ ನೆಟ್‌ವರ್ಕ್ಸ್‌ನ ಯಾವುದೇ ಘಟಕಗಳು ದೇಶದಲ್ಲಿ ಇಲ್ಲ. ಏನಾದರೂ ವ್ಯತ್ಯಯ ಕಂಡುಬಂದರೆ  ಅವರನ್ನು ಸಂಪರ್ಕಿಸಲು ಕಷ್ಟವಾಗುತ್ತದೆ. ಹಾಗಾಗಿ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ದೇಸಿ ಕಂಪೆನಿಗಾಗಿಯೂ ಹುಡುಕಾಟ ನಡೆಸುತ್ತಿದ್ದೇವೆ’ ಎಂದು ಹೇಳಿದರು.

‘ಆಂಧ್ರದಲ್ಲಿ ಈ ಯೋಜನೆಗೆ ಸರ್ಕಾರವೇ ಹಣ ನೀಡಿದೆ. ಆದರೆ, ಇಲ್ಲಿ ನಮ್ಮ ಕೇಂದ್ರದ ವತಿಯಿಂದ   ಈ ಸಾಧನ ಅಳವಡಿಸುವ ಚಿಂತನೆ ಇದೆ’ ಎಂದು ತಿಳಿಸಿದರು.

‘ಈ ಉಪಕರಣದಿಂದ ಸಿಡಿಲಿನ ಮಾಹಿತಿಯಲ್ಲದೆ ಭಾರಿ ಮಳೆ, ಗಾಳಿಯ ಮುನ್ಸೂಚನೆಯೂ ಸಿಗುತ್ತದೆ. ಸಿಡಿಲು ಅಪ್ಪಳಿಸುವ ಪ್ರದೇಶ, ತೀವ್ರತೆ ಬಗ್ಗೆಯೂ ಇದರಿಂದ ತಿಳಿಯಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT