ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘಟಿತರಾಗಿ ಬೇಡಿಕೆ ಈಡೇರಿಸಿಕೊಳ್ಳಿ

Last Updated 16 ಮೇ 2017, 4:45 IST
ಅಕ್ಷರ ಗಾತ್ರ

ಗೌರಿಬಿದನೂರು: ನಾಯಕ ಜನಾಂಗ ವಾಲ್ಮೀಕಿ ಹೆಸರಿನಲ್ಲಿ ಸಂಘಟನೆಗೊಂಡು ತಮ್ಮ ಬೇಡಿಕೆ ಈಡೇರಿಸಿಕೊಳ್ಳುವುದು ಅನಿವಾರ್ಯ ಎಂದು ಮಹರ್ಷಿ ವಾಲ್ಮೀಕಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಪ್ರಸನ್ನಾನಂದ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.

ಪಟ್ಟಣದ ಉತ್ತರ ಪಿನಾಕಿನಿ ನದಿ ದಡದ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ತಾಲ್ಲೂಕು ನಾಯಕ ಸಂಘ ಹಾಗೂ ಎಲ್ಲಾ ನಾಯಕ ಸಂಘಟನೆಗಳು ಸೋಮವಾರ ಆಯೋಜಿಸಿದ್ದ ಚಿಂತನಾ ಸಭೆಯಲ್ಲಿ ಮಾತನಾಡಿದರು. ‘ದೇಶದ ಭವ್ಯ ಸಾಂಸ್ಕೃತಿಕ ಪರಂಪರೆಗೆ ಕೊಡುಗೆ ನೀಡಿರುವ ಇತರೆ ಸಮುದಾಯಗಳ ಪೈಕಿ ವಾಲ್ಮೀಕಿ ಸಮುದಾಯ ಆಗ್ರಸ್ಥಾನದಲ್ಲಿದೆ. ನಾಯಕ ಜನಾಂಗ ಸಂಘಟನೆಗೊಳ್ಳುವುದು ಬೇರೆ ಜಾತಿಗಳ ಮೇಲೆ ಬಲ ಪ್ರದರ್ಶನಕ್ಕಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕಾಗಿದೆ’ ಎಂದು ತಿಳಿಸಿದರು.

‘ಕೇಂದ್ರ ಸರ್ಕಾರ ನಾಯಕ ಜನಾಂಗಕ್ಕೆ ಶೇ 7.5ರಷ್ಟು ಮೀಸಲಾತಿ ಕಲ್ಪಿಸಿರುವಂತೆ ರಾಜ್ಯ ಸರ್ಕಾರವೂ ನೀಡುತ್ತಿರುವ ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸಬೇಕು. ಈಗ ನೀಡುತ್ತಿರುವ ಅಲ್ಪ ಮೀಸಲಾತಿಯಲ್ಲಿ ಇತರೆ ಜನಾಂಗದವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರದಿಂದ ಸವಲತ್ತು ಪಡೆಯುವ ಮೂಲಕ ವಂಚಿಸುತ್ತಿವೆ’ ಎಂದರು.

‘ಮೀಸಲಾತಿ ಎಂದರೆ ಸಾಕು ಕೆಲವರಿಗೆ ಇರುಸು ಮುರಸು ಆಗುತ್ತದೆ. ಮೀಸಲಾತಿ ಸಂವಿಧಾನ ಹಕ್ಕು ಯಾರ ಸೊತ್ತು ಅಲ್ಲ’ ಎಂದರು.

‘ಸಂವಿಧಾನ ಬದ್ಧವಾಗಿ ನೀಡುತ್ತಿದ್ದ ಬಡ್ತಿಯನ್ನು ರದ್ದುಗೊಳಿಸಿರುವುದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸಬೇಕಾಗಿದೆ. ರಾಜ್ಯದಲ್ಲಿ ಬ್ಯಾಕ್ ಲಾಗ್ ಹುದ್ದೆಗಳು ಸಮರ್ಪಕ ರೀತಿಯಲ್ಲಿ ಭರ್ತಿ ಮಾಡುತ್ತಿಲ್ಲ’ ಎಂದು ದೂರಿದರು.

‘ಅವಿಭಜಿತ ಕೋಲಾರ ಜಿಲ್ಲೆಯಲ್ಲಿ  ನಾಯಕ ಜನಾಂಗ 5 ಲಕ್ಷ ಜನ ಸಂಖ್ಯೆ ಇದೆ. ಆದರೂ ನಾಯಕ ಸಮುದಾಯದಿಂದ ವಿಧಾನಸಭೆ ಸದಸ್ಯ ಇಲ್ಲವೇ ವಿಧಾನ ಪರಿಷತ್‌ ಸದಸ್ಯ ಸ್ಥಾನ ಗಳಿಸಲು ಸಾಧ್ಯವಾಗಿಲ್ಲ. ಆದರೆ ಕಡಿಮೆ ಜನಸಂಖ್ಯೆ ಯಿರುವ ಇತರೆ ಜನಾಂಗದವರು ಅಧಿಕಾರ ಪಡೆಯಲು ಯಶಸ್ವಿಯಾಗುತ್ತಿದ್ದಾರೆ. ಇದಕ್ಕೆ ಅವರಲ್ಲಿರುವ ಒಗ್ಗಟ್ಟು ಕಾರಣ. ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಬೇಕು ಉಳಿದಂತೆ ಜನಾಂಗದ ವಿಷಯಕ್ಕೆ ಬಂದಾಗ ಎಲ್ಲರೂ ಒಂದಾಗಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.

ನಾಯಕ ಜನಾಂಗದ ಮುಖಂಡ ಆರ್.ಅಶೋಕ್ ಕುಮಾರ್ ಮಾತನಾಡಿ, ‘ರಾಜ್ಯದಲ್ಲಿ ಇತರೆ ಸಮುದಾಯದ ಮಠಗಳು ಬಹಳ ಶ್ರೀಮಂತಗೊಳ್ಳುವ ಮೂಲಕ ವೈದ್ಯಕೀಯ ಹಾಗೂ ಎಂಜಿನಿಯರ್ ಶಿಕ್ಷಣ ಸಂಸ್ಥೆಗಳು ಪಡೆದು ಪ್ರಬಲವಾಗಿವೆ. ಆದರೆ ನಮ್ಮ ವಾಲ್ಮೀಕಿ ಪೀಠಕ್ಕೆ ಶಕ್ತಿ ತುಂಬಬೇಕಾಗಿದೆ. ಮಠ ಆರ್ಥಿಕವಾಗಿ ಪ್ರಬಲವಾಗಿದ್ದಾಗ ಮಾತ್ರ ನಮ್ಮ ಜನಾಂಗ ಮುಂದುವರೆಯಲು ಸಾಧ್ಯ. ಆದ್ದರಿಂದ ರಾಜ್ಯದ ಎಲ್ಲಾ ನಾಯಕ ಜನಾಂಗದ ಪ್ರತಿಯೊಬ್ಬರು ವರ್ಷಕ್ಕೆ ₹ 1 ಮಠಕ್ಕೆ ನೀಡುವ ಮೂಲಕ ಮಠವನ್ನು ಬೆಳೆಸಬಹುದು’ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಪ್ರಸನ್ನಾನಂದ ಶ್ರೀಗಳನ್ನು  ವಾಲ್ಮೀಕಿ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯ ಗಳೊಂದಿಗೆ ಅದ್ಧೂರಿಯಾಗಿ ಮೆರವಣಿಗೆ ನಡೆಸಲಾಯಿತು.
ತಾಲ್ಲೂಕು ನಾಯಕ ಸಂಘದ ಅಧ್ಯಕ್ಷ ಎನ್. ಬಾಬಣ್ಣ, ಜಲತಜ್ಞ ಕೆ. ನಾರಾಯಣಸ್ವಾಮಿ, ಭವ್ಯಾ ರಂಗನಾಥ್, ರಾಘವೇಂದ್ರ ಹನುಮಾನ್, ಎಚ್.ವಿ. ಶಿವಶಂಕರ್, ಕರೆತಿಮ್ಮಯ್ಯ, ಸಿದ್ದರಾಮಯ್ಯ, ಪೊಲೀಸ್ ಮೂರ್ತಿ, ನಾರಾಯಣಸ್ವಾಮಿ, ರಾಮಾಂಜಿ, ರಾಮಾಂಜನಪ್ಪ, ಓಬಳಪ್ಪ, ಕದಿರಪ್ಪ, ಪೆದ್ದಗಂಗಪ್ಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT