ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಯಕ್ತಿಕ ಮಾಹಿತಿ ಎಚ್ಚರ ಇರಲಿ

Last Updated 16 ಮೇ 2017, 19:30 IST
ಅಕ್ಷರ ಗಾತ್ರ
ವಾಸ್ತವಿಕ ಜಗತ್ತಿನಲ್ಲಿ ವೈಯಕ್ತಿಕ ಜೀವನ ಎಂದರೆ ಅದು ಖಾಸಗಿ ವಿಷಯ. ಆದರೆ, ತಂತ್ರಜ್ಞಾನದ ಜಗತ್ತಿನಲ್ಲಿ ಖಾಸಗಿತನ ಎಂಬುದಕ್ಕೆ ಅರ್ಥವೇ ಇಲ್ಲ. ಕಂಪ್ಯೂಟರ್‌, ಮೊಬೈಲ್‌ ಆ್ಯಪ್‌ಗಳಲ್ಲಿ ಸಂಗ್ರಹವಾಗಿರುವ ನಮ್ಮ ಮಾಹಿತಿಗಳು ಕೆಲವು ತಂತ್ರಜ್ಞಾನ ಕಂಪೆನಿಗಳಿಗೆ ಆದಾಯ ತಂದುಕೊಡುವ ಸಂಪನ್ಮೂಲವಾಗಿದೆ.
 
ಕಳೆದ ವಾರ ಅಮೆರಿಕದಲ್ಲಿ ಒಂದು ವಿಚಾರ ಭಾರಿ ಸುದ್ದಿ ಮಾಡಿತು. ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ ನೀಡುವ ‘ಉಬರ್‌’ ಕಂಪೆನಿಯು ತನ್ನ ಪ್ರತಿ ಸ್ಪರ್ಧಿ ಸಂಸ್ಥೆ ‘ಲಿಫ್ಟ್’ಗೆ ಸೇರಿದ ಮಾಹಿತಿಗಳನ್ನೆಲ್ಲ ಕಲೆ ಹಾಕಿತ್ತು. ಪ್ರತಿಸ್ಪರ್ಧಿಗೆ ಪ್ರಬಲ ಪೈಪೋಟಿ ನೀಡುವುದಕ್ಕಾಗಿ ಈ ರೀತಿ ಮಾಡಿದ್ದಾಗಿ ನಂತರ ಅದು ಹೇಳಿತು.

 ‘ಅನ್‌ರೋಲ್‌ಡಾಟ್‌ಮಿ’ (unroll.me) ಎಂಬ ಅನಗತ್ಯ ಇ-ಮೇಲ್‌ಗಳು ಬಳಕೆದಾರರ ಇಮೇಲ್‌ಗಳಿಗೆ ಬರದಂತೆ ತಡೆಯುವ ಸೇವೆಯನ್ನು (ಇಮೇಲ್‌ ಡೈಜೆಸ್ಟ್‌ ಸರ್ವಿಸ್‌) ಉಚಿತವಾಗಿ ನೀಡುವ ಕಂಪೆನಿಯಿಂದ ಉಬರ್‌, ಈ ಮಾಹಿತಿ  ಖರೀದಿಸಿತ್ತು.
 
ಮಾಹಿತಿ ಸಿಕ್ಕಿದ್ದಾದರೂ ಹೇಗೆ? 
ಆಗಿದ್ದಿಷ್ಟೆ: ಲಿಫ್ಟ್‌ ಟ್ಯಾಕ್ಸಿ ಸೇವೆಯನ್ನು ಬಳಸುವ ಕೆಲವು ಗ್ರಾಹಕರು ‘ಅನ್‌ರೋಲ್‌ಡಾಟ್‌ಮಿ’ ಸೇವೆಯನ್ನೂ ಪಡೆದುಕೊಳ್ಳುತ್ತಿದ್ದಾರೆ. ಲಿಫ್ಟ್ ಕಂಪೆನಿಯು ತನ್ನ ಗ್ರಾಹಕರಿಗೆ  ಕಳುಹಿಸಿದ್ದ ಇ–ಮೇಲ್‌ ಸಂವಹನಗಳನ್ನು ಆಧಾರವಾಗಿಟ್ಟುಕೊಂಡು, ‘ಅನ್‌ರೋಲ್‌ಡಾಟ್‌ಮಿ’, ತನ್ನ ಬಳಿ ನೋಂದಣಿ ಮಾಡಿಕೊಂಡಿರುವ ಲಿಫ್ಟ್‌ ಬಳಕೆದಾರರ ಮಾಹಿತಿಗಳನ್ನು ಉಬರ್‌ಗೆ ಮಾರಾಟ ಮಾಡಿತ್ತು!
 
 ಇದು ಒಂದು ಉದಾಹರಣೆಯಷ್ಟೇ. ನಾವು ಬಳಸುವ ಗೂಗಲ್‌, ಫೇಸ್‌ಬುಕ್‌ಗಳಂತಹ ದೊಡ್ಡ ದೊಡ್ಡ ಅಂತರ್ಜಾಲ ತಾಣ ಮತ್ತು  ಸಂಸ್ಥೆಗಳ ಬಳಿ ಕೋಟ್ಯಂತರ ಜನರ ಮಾಹಿತಿಗಳು ಇವೆ. ಬೇರೆ ಬೇರೆ  ಸಂಸ್ಥೆಗಳಿಂದ ಮಾಹಿತಿ ಸಂಗ್ರಹಿಸಿ ಇತರರಿಗೆ ಮಾರಾಟ ಮಾಡುವ ಮಧ್ಯವರ್ತಿ ಸಂಸ್ಥೆಗಳು ಮಾಹಿತಿ ತಂತ್ರಜ್ಞಾನ ಜಗತ್ತಿನಲ್ಲಿ ಹಲವಾರು ಇವೆ. ಆ್ಯಪ್‌, ಸಾಫ್ಟ್‌ವೇರ್‌ ಮತ್ತು ಬೇರೆ ಬೇರೆ ವೆಬ್‌ಸೈಟ್‌ಗಳನ್ನು ಬಳಕೆ ಮಾಡುವಾಗ   ಹೆಚ್ಚು ಜಾಗರೂಕರಾಗಿರಬೇಕು. ಖಾಸಗಿತನಕ್ಕೆ ಧಕ್ಕೆಯಾಗದಂತೆ   ನೋಡಿಕೊಳ್ಳಬೇಕು. ಇಲ್ಲಿ ಉಲ್ಲೇಖಿಸಿರುವ ಕೆಲವು ಸಲಹೆಗಳನ್ನು ಪಾಲಿಸಿದರೆ  ಖಾಸಗಿತನ ರಕ್ಷಿಸಿಕೊಳ್ಳಬಹುದು.
 
ಖಾಸಗಿತನ  ರಕ್ಷಿಸಿಕೊಳ್ಳುವ ನಿಯಮ  
ಯಾವುದೇ ಆ್ಯಪ್‌, ಸಾಫ್ಟ್‌ವೇರ್‌ಗಳನ್ನು ಅನುಸ್ಥಾಪಿಸಿಕೊಳ್ಳುವಾಗ (ಇನ್‌ಸ್ಟಾಲ್‌), ವೆಬ್‌ಸೈಟ್‌ಗಳ ಸೇವೆ ಬಳಸುವಾಗ ಅವುಗಳ ಖಾಸಗಿತನ ನೀತಿಗಳನ್ನು   ಗಮನವಿಟ್ಟು ಓದುವುದು ಒಳಿತು.
 
‘ಅನ್‌ರೋಲ್‌ಡಾಟ್‌ಮಿ ’ ಪ್ರಕರಣದಲ್ಲಿ ಹಾಗಿದ್ದು ಇದೇ. ಅದು ಬಳಕೆದಾರರ ಮಾಹಿತಿಗಳನ್ನು ಮೂರನೇ ವ್ಯಕ್ತಿಗಳಿಗೆ ನೀಡುತ್ತಿದೆ ಎಂಬುದು ರಹಸ್ಯವಾಗಿ ಏನೂ ಇರಲಿಲ್ಲ. 
 
‘ನಾವು ಬಳಕೆದಾರರ ಖಾಸಗಿ ಅಲ್ಲದ ಮಾಹಿತಿಗಳನ್ನು ಯಾವುದೇ ಉದ್ದೇಶಕ್ಕೆ ಸಂಗ್ರಹಿಸಬಹುದು ಇಲ್ಲವೇ ಬಳಸಬಹುದು, ವರ್ಗಾವಣೆ ಮಾಡಬಹುದು, ಮಾರಬಹುದು ಅಥವಾ ಬಹಿರಂಗಪಡಿಸಬಹುದು’ ಎಂದು ಅದು ಹೇಳುತ್ತದೆ. ಅಲ್ಲದೇ,  ‘ದತ್ತಾಂಶಗಳನ್ನು ಯಾವುದೇ ಉತ್ಪನ್ನಗಳ ಮಾರುಕಟ್ಟೆ ಅಧ್ಯಯನದ ಉದ್ದೇಶಕ್ಕೆ ಬಳಸಬಹುದು’ ಎಂಬ ಅಂಶವೂ ಅದರ ಷರತ್ತುಗಳಲ್ಲಿವೆ.
 
ಏನು ಮಾಡಬೇಕು?: ಯಾವುದೇ ಆ್ಯಪ್, ವೆಬ್‌ಸೈಟ್‌ಗೆ ಸೈನ್‌ ಇನ್‌ ಆಗುವಾಗ ಅವುಗಳು ತಮ್ಮ ನಿಯಮಗಳನ್ನು ಒಪ್ಪುವಂತೆ ಕೇಳುತ್ತವೆ. ಅವುಗಳ ನಿಯಮಗಳ ಪಟ್ಟಿ ದೊಡ್ಡದಿರುತ್ತದೆ. ಹಾಗಿದ್ದರೂ ಬಿಡುವು ಮಾಡಿಕೊಂಡು ಓದಿದರೆ ಮುಂದೆ ನಮ್ಮ ಮಾಹಿತಿಗಳು ಇತರರ ಕೈಗೆ ಸಿಗುವುದನ್ನು ತಪ್ಪಿಸಬಹುದು. ನಿಯಮಗಳಲ್ಲಿ ಮಾಹಿತಿ ಹಂಚುವ  ಪ್ರಸ್ತಾಪ ಇದ್ದರೆ, ಅವುಗಳಿಂದ ದೂರ ಉಳಿದರೆ ಆಯಿತು. 
 
 ಸಂಸ್ಥೆಗಳ ವಹಿವಾಟಿನ ಬಗ್ಗೆ ಗಮನ ನೀಡಿ
ಉಚಿತ ಸೇವೆ ಕೊಡುತ್ತವೆ ಎಂಬ ಕಾರಣದಿಂದ ಆ್ಯಪ್‌, ಸಾಫ್ಟ್‌ವೇರ್‌ಗಳನ್ನು ಅಳವಡಿಸಿಕೊಳ್ಳುವವರು ಹಲವರಿದ್ದಾರೆ. ಅಂತಹವುಗಳನ್ನು ಬಳಸುವುದಕ್ಕೂ ಮುನ್ನ ಆ ಸಂಸ್ಥೆಗಳು ಹೇಗೆ ವ್ಯವಹಾರ ನಡೆಸುತ್ತವೆ ಅಥವಾ ಅವುಗಳ ವ್ಯಾಪಾರ ಮಾದರಿ (ಬಿಸಿನೆಸ್‌ ಮಾಡೆಲ್‌) ಏನು ಎಂಬುದನ್ನು ಎಂಬುದನ್ನು ಅಧ್ಯಯನ ಮಾಡುವುದು ಉತ್ತಮ.  
 
ಬಹುತೇಕ ಸಂದರ್ಭಗಳಲ್ಲಿ ಇವುಗಳು ಗ್ರಾಹಕರ ಮಾಹಿತಿಗಳನ್ನು ಮೂರನೇ ವ್ಯಕ್ತಿ ಇಲ್ಲವೇ ಸಂಸ್ಥೆಗಳಿಗೆ ಮಾರಾಟ ಮಾಡುತ್ತವೆ. ಉದಾಹರಣೆಗೆ: ನಮ್ಮ ವಯಸ್ಸು, ಇರುವ ಸ್ಥಳ, ಶಾಪಿಂಗ್‌ ಚಟುವಟಿಕೆಗಳ ಮಾಹಿತಿಗಳನ್ನು ಈ ಸಂಸ್ಥೆಗಳು ರಿಟೇಲ್‌ ಕಂಪೆನಿಗಳಿಗೆ ಮಾರಾಟ ಮಾಡುತ್ತವೆ. ಈ ದತ್ತಾಂಶಗಳನ್ನು ಬಳಸಿ ಕಂಪೆನಿಗಳು ಗ್ರಾಹಕರನ್ನು ಸಂಪರ್ಕಿಸುತ್ತವೆ.
 
ಆ್ಯಪ್‌ಗಳ ಪರಿಶೀಲನೆ ನಡೆಸಿ
ನಾವು ಹೆಚ್ಚಾಗಿ ಬಳಸುವ ಆನ್‌ಲೈನ್‌ ಖಾತೆಗಳನ್ನು ನಿಯಮಿತವಾಗಿ ಪರೀಕ್ಷಿಸುವುದು ಒಳ್ಳೆಯ ಅಭ್ಯಾಸ. ಫೇಸ್‌ಬುಕ್‌, ಗೂಗಲ್‌ ಅಥವಾ ಟ್ವೀಟರ್‌ಗಳ ನಮ್ಮ ಖಾತೆಗಳಲ್ಲಿ ಕೆಲವು ಆ್ಯಪ್‌ಗಳು ಬಂದು ಕೂತಿರುತ್ತವೆ. ನಮ್ಮ ಅರಿವಿಗೆ ಬರದಂತೆ ನಾವು ಅವುಗಳಿಗೆ ಲಾಗ್‌ ಇನ್‌ ಕೂಡ ಆಗಿರುತ್ತೇವೆ.  ನಾವು ಇದುವರೆಗೆ ಬಳಸದೇ ಇರುವ ಆ್ಯಪ್‌ಗಳು ನಮ್ಮ ಮಾಹಿತಿಗಳನ್ನು ಸಂಗ್ರಹಿಸುತ್ತಿರಬಹುದು.  ಇವುಗಳ ಕಾರ್ಯಾಚರಣೆ ಸ್ಥಗಿತಗೊಳಿಸುವುದು ಒಳ್ಳೆಯ ಉಪಾಯ.
 
ಹೀಗೆ ಮಾಡಿ
ಫೇಸ್‌ಬುಕ್‌: ಸೆಟ್ಟಿಂಗ್‌ಗೆ ಹೋಗಿ, ಆ್ಯಪ್ಸ್‌ ಎಂಬ ಆಯ್ಕೆಯನ್ನು ಕ್ಲಿಕ್‌ ಮಾಡಬೇಕು. ನಮ್ಮ ಫೇಸ್‌ಬುಕ್‌ ಖಾತೆಗೆ ಬೇರೆ ಯಾವ ಆ್ಯಪ್‌ಗಳು ಸೇರಿವೆ ಎಂಬುದು ಅಲ್ಲಿ ಕಾಣುತ್ತದೆ.
 
ಗೂಗಲ್‌: ಲೇಬಲ್‌ ಪಟ್ಟಿಯಲ್ಲಿ ಕನೆಕ್ಟೆಟೆಡ್‌ ಆ್ಯಪ್ಸ್‌ ಅಂಡ್‌ ಸೈಟ್ಸ್‌ ಎಂಬ ಆಯ್ಕೆ ಇದೆ. ಅಲ್ಲಿ ಖಾತೆಗೆ ಜೋಡಣೆಯಾಗಿರುವ ಆ್ಯಪ್‌ಗಳು ಕಾಣ ಸಿಗುತ್ತವೆ.
 
ಟ್ಟಿಟರ್‌:  ‘ಸೆಟ್ಟಿಂಗ್ ಆಂಡ್‌ ಪ್ರೈವಸಿ’ನಲ್ಲಿ ಆ್ಯಪ್ಸ್‌ ಎಂಬ ಆಯ್ಕೆ ಇದೆ. ಅಲ್ಲಿ ಇಣುಕಿದಾಗ ಖಾತೆಯಲ್ಲಿ ಬಂದು ಕುಳಿತ ಆ್ಯಪ್‌ಗಳು ಕಾಣುತ್ತವೆ. ಒಂದು ವೇಳೆ, ನಿರ್ದಿಷ್ಟ ಆ್ಯಪ್‌ ಅನ್ನು ಆರು ತಿಂಗಳುಗಳಿಂದ ಬಳಸದೇ ಇದ್ದರೆ ಅವುಗಳನ್ನು ಮೊಬೈಲ್‌ ಅಥವಾ ಕಂಪ್ಯೂಟರ್‌ನಿಂದ ತೆಗೆಯುವಂತೆ ತಜ್ಞರು ಸಲಹೆ ನೀಡುತ್ತಾರೆ. 
 
ಕಂಪ್ಯೂಟರ್‌, ಮೊಬೈಲ್‌ನಲ್ಲಿ ಉಳಿಸಿಕೊಂಡ ಆ್ಯಪ್‌ಗಳನ್ನೂ ಕೂಲಂಕಷವಾಗಿ ಗಮನಿಸಿ, ಅವುಗಳು ವೈಯಕ್ತಿಕ ಮಾಹಿತಿಗಳನ್ನು ಹಂಚುತ್ತವೆ ಎಂಬುದನ್ನು ಗೊತ್ತಾದರೆ, ಅವುಗಳನ್ನೂ ತೆಗೆಯುವುದು ಒಳ್ಳೆಯದು ಎಂಬುದು ಅವರ ಅಂಬೋಣ.
 ಬ್ರಿಯಾನ್‌ ಎಕ್ಸ್‌. ಚೆನ್‌, ನ್ಯೂಯಾರ್ಕ್‌ ಟೈಮ್ಸ್‌
****
ಅಳಿಸಿದರೂ ಮಾಹಿತಿ ಇರುತ್ತದೆ

ಮೊಬೈಲ್‌ ಮತ್ತು ಕಂಪ್ಯೂಟರ್‌ಗಳಿಂದ ಆ್ಯಪ್‌ ಅಥವಾ ಸಾಫ್ಟ್‌ವೇರ್‌ಗಳನ್ನು ಅಳಿಸಿ ಹಾಕಿದರೆ ನಮ್ಮ ಉಪಕರಣದಲ್ಲಿದ್ದ ದತ್ತಾಂಶಗಳು ಅಳಿಯಬಹುದು. ಆದರೆ, ಕಂಪೆನಿಯ ಸರ್ವರ್‌ಗಳಲ್ಲಿ ಅವು ಹಾಗೆಯೇ ಇರುತ್ತವೆ. ಅಂತಹ ಸಂದರ್ಭದಲ್ಲಿ ಆ ಕಂಪೆನಿಗಳಲ್ಲಿ ಗ್ರಾಹಕರು ನೋಂದಣಿ ಮಾಡಿರುವ ಖಾತೆಯನ್ನು ತೆಗೆದು ಹಾಕಬಹುದು.

ಇನ್ನೂ ಕೆಲವು ಕಂಪೆನಿಗಳಿಗೆ ಮೇಲ್‌ ಮೂಲಕ ಸಂವಹನ ನಡೆಸಿ ಖಾತೆಯನ್ನು ಅಳಿಸಿ ಹಾಕಲು ಮನವಿ ಮಾಡಬಹುದು.
ಇಷ್ಟೆಲ್ಲ ಆದರೂ, ಕಂಪೆನಿ ಬಳಿ ಇರುವ ಬಳಕೆದಾರರ ಮಾಹಿತಿ ಸಂಪೂರ್ಣವಾಗಿ ಅಳಿಸಿಹೋಗುತ್ತದೆ ಅಥವಾ ಅವುಗಳು ಇತರರೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ ಎಂಬುದನ್ನು ಖಾತ್ರಿಯಾಗಿ ಹೇಳಲು ಸಾಧ್ಯವಿಲ್ಲ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT