ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷಧಾರೆ ವ್ಯರ್ಥವಾಗದಿರಲಿ ಮಳೆಗಾಲಕ್ಕೆ ಸನ್ನದ್ಧತೆ ಇರಲಿ

Last Updated 16 ಮೇ 2017, 19:39 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಸತತ ಬರ, ಬಿಸಿಲಿನ ಝಳ. ಜನ–ಜಾನುವಾರುಗಳಿಗೆ ಕುಡಿಯುವ ನೀರಿಗೂ ತತ್ವಾರ. ಬರದ ಬೇಗೆ ಹಾಗೂ ಬಿಸಿಲಿನ ಹೊಡೆತದಿಂದ ಕಂಗೆಟ್ಟ ಜನರಿಗೆ ಮುಂಗಾರುಪೂರ್ವ ಮಳೆ ಒಂದಿನಿತು ಸಾಂತ್ವನ ನೀಡಿದೆ.

ಇದರ ಬೆನ್ನಿಗೇ, ನೈರುತ್ಯ ಮುಂಗಾರು ವಾಡಿಕೆಗಿಂತ ಮೂರು ದಿನ ಮೊದಲೇ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳನ್ನು ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಪ್ರಕಟಿಸಿದೆ.

ಇದರಿಂದಾಗಿ ಕೇರಳಕ್ಕೂ ಮುಂಗಾರು ಪ್ರವೇಶ ಬೇಗ ಆಗಬಹುದು ಎಂಬ ಆಶಾಭಾವ ಮೂಡಿದೆ. ಈ ಬಗ್ಗೆ ನಿಖರವಾಗಿ ಈಗಲೇ ಏನೂ ಹೇಳಲಿಕ್ಕಾಗದು ಎಂದು ಇಲಾಖೆ ಹೇಳಿದೆಯಾದರೂ ಮುಗಿಲನ್ನೇ ದಿಟ್ಟಿಸುತ್ತಿರುವ ಸಮಸ್ತ ಜನಕೋಟಿಗೆ  ಮಳೆ ಕುರಿತ ಸಣ್ಣ ಶುಭಸೂಚನೆಯೂ ಬೆಟ್ಟದಷ್ಟು ಹಿಗ್ಗು ಹೊತ್ತುತರಬಲ್ಲುದು.

ಈ ವರ್ಷದ ಮುಂಗಾರು, ವಾಡಿಕೆ ಪ್ರಮಾಣದ ಮಳೆ ತರಲಿದೆ ಎಂಬ ಮುನ್ಸೂಚನೆ ಈಗಾಗಲೇ ಹೊರಬಿದ್ದಿರುವುದರಿಂದ ಕೃಷಿ ವಲಯದ ನಿರೀಕ್ಷೆಗಳು ಸಹಜವಾಗಿಯೇ ಹೆಚ್ಚಿವೆ. ದೇಶದ ಗ್ರಾಮೀಣ ಆರ್ಥಿಕತೆಯ ಜೀವನಾಡಿ ಮುಂಗಾರು ಮಳೆ.

ಕಷ್ಟ ಕರಗಿಸುವ, ಹೊಸ ಪಯಣಕ್ಕೆ ಸನ್ನದ್ಧಗೊಳಿಸುವ ಶಕ್ತಿ ಈ ವರ್ಷಧಾರೆಗೆ ಇದೆ. ಆದರೆ ಒಂದೊಂದು ಹನಿಯನ್ನೂ ಹಿಡಿದಿಟ್ಟುಕೊಳ್ಳಲು ನಾವು ಸನ್ನದ್ಧರಾಗಬೇಕಾಗಿದೆ. ಹಿಡಿದಿಟ್ಟ ನೀರನ್ನು ಮಿತವಾಗಿ ಬಳಸುವ ತಿಳಿವಳಿಕೆಗೆ ತೆರೆದುಕೊಳ್ಳಬೇಕಾಗಿದೆ.

ಹವಾಮಾನ ಇಲಾಖೆಯ ಮುನ್ಸೂಚನೆಯಿಂದ ಹಿಗ್ಗಿ ಮೈಮರೆತರೆ ಭೂತಾಯಿ ನಮ್ಮನ್ನು ಖಂಡಿತ ಕ್ಷಮಿಸಳು. ಬರ ಎಳೆದಿರುವ ಬರೆ ನಮ್ಮನ್ನು ಸದಾ ಜಾಗೃತ ಸ್ಥಿತಿಯಲ್ಲಿ ಇರಿಸಬೇಕು. ಎಲ್ಲೋ ‘ಪಾತಾಳ’ದಲ್ಲಿ ಇರುವ ‘ಗಂಗೆ’ಗೆ ಕೈಚಾಚುವ ಬದಲು ಬೊಗಸೆಗೆ ಸಿಗುವ, ಕಣ್ಣಿಗೆ ಕಾಣುವ ಮಳೆನೀರನ್ನು ಹಿಡಿದಿಟ್ಟುಕೊಳ್ಳುವುದು ಸುಲಭವಲ್ಲವೇ? ಆದರೆ ಅದಕ್ಕೆ ನಮ್ಮ ಆಡಳಿತ ವ್ಯವಸ್ಥೆ ಸನ್ನದ್ಧವಾದಂತೆ ತೋರುತ್ತಿಲ್ಲ.

ಮಳೆನೀರು ಸಂಗ್ರಹದ ಮಹತ್ವವನ್ನೂ ಅರಿತಂತೆ ಕಾಣುವುದಿಲ್ಲ. ಮಳೆನೀರನ್ನು ಸಮರ್ಪಕವಾಗಿ ಸಂಗ್ರಹಿಸಿದರೆ, ಸಂರಕ್ಷಿಸಿದರೆ, ಇಂಗಿಸಿದರೆ ಜ್ವಲಂತ ಜಲಸಮಸ್ಯೆಗಳು ತಾವಾಗಿಯೇ ನಿವಾರಣೆಯಾಗುತ್ತವೆ. ಮರುಬಳಕೆಯ ಸಾಧ್ಯತೆಯು ಮತ್ತಷ್ಟು ಸಮಸ್ಯೆಗಳಿಗೆ ಮದ್ದಾಗಬಲ್ಲುದು.

ಇದರಿಂದಾಗಿ ಅಂತರ್ಜಲ ಬಳಕೆ ಪ್ರಮಾಣವನ್ನು ತಗ್ಗಿಸಬಹುದು. ಅಂತರ್ಜಲ ಮರುಪೂರಣಗೊಳಿಸಬಹುದು. ಆದರೆ ಈ ಸಂಬಂಧದ ಸೂಕ್ಷ್ಮಗಳಿಗೆ ಜನರು ತೆರೆದುಕೊಳ್ಳುವಂತೆ ಮಾಡಲು ನಮ್ಮ ಆಳುವ ವರ್ಗ ಗಂಭೀರ ಪ್ರಯತ್ನ ಮಾಡಿದಂತೆ ಕಾಣುವುದಿಲ್ಲ. ತೋರಿಕೆಯ ಯತ್ನಗಳೇ ಹೆಚ್ಚು. ಬದ್ಧತೆಯಂತೂ ಇಲ್ಲವೇ ಇಲ್ಲ.

ಗ್ರಾಮೀಣ ಪ್ರದೇಶದಲ್ಲಿ ಕೆರೆಕಟ್ಟೆಗಳಲ್ಲಿ ಹೂಳು ತುಂಬಿಕೊಂಡಿದೆ. ಜಲಮೂಲಗಳು ಒತ್ತುವರಿಗೆ ಒಳಗಾಗಿವೆ. ನಗರಗಳಲ್ಲಿ ಕೆರೆ, ಕಾಲುವೆಗಳನ್ನು  ದೈತ್ಯ ಕಟ್ಟಡಗಳು ನುಂಗಿವೆ. ಅಭಿವೃದ್ಧಿ ಹೆಸರಿನಲ್ಲಿ ಮರಗಳ ಹನನಕ್ಕೆ ಕೊನೆಯೇ ಇಲ್ಲವಾಗಿದೆ. ಎರಡು ಸಲ ತುಸು ಜೋರು ಮಳೆ ಬಿದ್ದರೆ ನಗರ–ಪಟ್ಟಣಗಳ ತಗ್ಗು ಪ್ರದೇಶಗಳು ಜಲಾವೃತಗೊಳ್ಳುತ್ತವೆ. ಮಳೆ ಎಂದರೆ ಬೆಂಗಳೂರಿನ ಜನ  ಬೆಚ್ಚಿಬೀಳುವ ಸ್ಥಿತಿ ಇದೆ.

ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವ ಚಾಳಿ ನಮ್ಮದು. ಮುಂಗಾರು ಆರಂಭವಾಗುವ ವೇಳೆಗೆ ರಸ್ತೆ, ಚರಂಡಿ ದುರಸ್ತಿಯಂಥ ಕಾಮಗಾರಿಗಳು ಪೂರ್ಣಗೊಂಡಿರಬೇಕು. ಆದರೆ ನಮ್ಮಲ್ಲಿ ಕರಾರುವಾಕ್ಕಾದ ಅಂಥ ಯೋಜನೆ–ಯೋಚನೆ ಎರಡೂ ಇಲ್ಲ ಎಂಬುದು ಸಂಕಷ್ಟದ ಪ್ರತಿ ಸಂದರ್ಭದಲ್ಲೂ ಸಾಬೀತಾಗಿದೆ.

ಬೆಂಗಳೂರಿನಲ್ಲಿ ಕೆಲವೆಡೆ ಚರಂಡಿಗಳ ಹೂಳೆತ್ತುವ ಕಾರ್ಯವನ್ನು ಈಚೆಗೆ ಆರಂಭಿಸಿರುವುದೇ ಇದಕ್ಕೊಂದು ನಿದರ್ಶನ. ರಾಜಕಾಲುವೆ ಮತ್ತು ಕೆರೆಗಳ ಒತ್ತುವರಿಯಿಂದ ನೀರಿನ ನೈಸರ್ಗಿಕ ಹರಿವಿನ ಜಾಡು ತುಂಡರಿಸಿದೆ. ಪರಿಣಾಮವಾಗಿ ಸಿಕ್ಕಸಿಕ್ಕಲ್ಲಿ ನೀರು ನುಗ್ಗತೊಡಗುತ್ತದೆ. ಇಂಥ ಸಮಸ್ಯೆಗಳನ್ನು ನಿವಾರಿಸಲು ದಿಟ್ಟ ಹೆಜ್ಜೆ ಇಡಬೇಕು. ಇಚ್ಛಾಶಕ್ತಿ ತೋರಬೇಕು.

ಸಂಭವನೀಯ ಪ್ರತಿಕೂಲ ಪರಿಸ್ಥಿತಿ ಎದುರಿಸಲು ಈ ಕ್ಷಣದಿಂದಲೇ ಸನ್ನದ್ಧರಾಗಬೇಕು. ಕ್ರಿಯಾಯೋಜನೆ ಸಿದ್ಧವಾಗಿರಬೇಕು. ಸ್ಥಳೀಯ ಸಂಸ್ಥೆಗಳು ಮತ್ತು ಸರ್ಕಾರ ಸಮನ್ವಯದಿಂದ ಕೆಲಸ ಮಾಡಬೇಕು. ಈ ಸಲದ ಮಳೆಗಾಲ ಒಳಿತನ್ನು ಮಾತ್ರ ತರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT