ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಅಭ್ಯರ್ಥಿಗಳಿಗೆ ಅನ್ಯಾಯ: 4345 ಹುದ್ದೆಗಳ ಸಂದರ್ಶನಕ್ಕೆ ಆಯ್ಕೆಯಾದ ಕನ್ನಡಿಗರು 15ಜನ!

Last Updated 17 ಮೇ 2017, 5:04 IST
ಅಕ್ಷರ ಗಾತ್ರ

ತುಮಕೂರು: ಕೇಂದ್ರೀಯ ವಿದ್ಯಾಲಯ ಸಂಘಟನೆಯು ದೇಶದ ಕೇಂದ್ರೀಯ ವಿದ್ಯಾಲಯಗಳಲ್ಲಿ ಖಾಲಿ ಇರುವ ಪಿಆರ್‌ಟಿ ಶಿಕ್ಷಕರ (ಪ್ರಾಥಮಿಕ ಶಾಲಾ ಶಿಕ್ಷಕರು) ಹುದ್ದೆಗೆ ನಡೆಸಿದ ಪರೀಕ್ಷೆಯಲ್ಲಿ ಅನ್ಯಾಯವಾಗಿದೆ ಎಂದು ರಾಜ್ಯದ ಅಭ್ಯರ್ಥಿಗಳು ದೂರಿದ್ದಾರೆ.

ಜನವರಿಯಲ್ಲಿ ಪರೀಕ್ಷೆ ನಡೆದಿತ್ತು. ಅಭ್ಯರ್ಥಿಗಳು ತೆಗೆದುಕೊಂಡಿರುವ ಅಂಕಗಳನ್ನು ಕೇಂದ್ರೀಯ ಸಂಘಟನೆಯು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿಲ್ಲ. ಬದಲಿಗೆ ಸಂದರ್ಶನಕ್ಕೆ ಆಯ್ಕೆಯಾಗಿರುವ ಅಭ್ಯರ್ಥಿಗಳ ನೋಂದಣಿ ಸಂಖ್ಯೆ ಹಾಗೂ ಕಟ್‌ ಆಫ್‌ ಅಂಕಗಳನ್ನು ಪ್ರಕಟಿಸಿದೆ. ಇದರಲ್ಲಿ ರಾಜ್ಯದ ಕೇವಲ 15 ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗಿದ್ದಾರೆ. ಕೇರಳದಿಂದ 15, ಚೆನ್ನೈ 13, ಕರ್ನಾಟಕದಲ್ಲಿ 15, ಹೈದರಾಬಾದ್‌ನಿಂದ 140 ಜನರು ಆಯ್ಕೆಯಾಗಿದ್ದಾರೆ. ಅಂದರೆ ದಕ್ಷಿಣ ಭಾರತದ ರಾಜ್ಯಗಳಿಂದ 184 ಮಂದಿ ಆಯ್ಕೆಯಾಗಿದ್ದಾರೆ. ಆದರೆ ದೆಹಲಿಯ ಒಂದೇ ಪರೀಕ್ಷಾ ಕೇಂದ್ರದಲ್ಲಿ 5,041 ಮಂದಿ ಆಯ್ಕೆಯಾಗಿದ್ದಾರೆ.

ವೆಬ್‌ಸೈಟ್‌ನಲ್ಲಿ ಅಂಕಗಳನ್ನು ಪ್ರಕಟಿಸಿಲ್ಲ. ಕಟ್‌ ಆಫ್‌ ಅಂಕಗಳನ್ನು ಮಾತ್ರ ಪ್ರಕಟಿಸಿರುವುದು ಸರಿ ಅಲ್ಲ. ಸಂದರ್ಶನಕ್ಕೆ ಆಯ್ಕೆಯಾದವರಲ್ಲಿ ರಾಜ್ಯದವರು ಬೆರಳಣಿಕೆಯಷ್ಟು ಇದ್ದಾರೆ. ಇದು ಅನುಮಾನಕ್ಕೆ ಕಾರಣವಾಗಿದೆ ಎನ್ನುತ್ತಾರೆ ಪರೀಕ್ಷೆ ಬರೆದಿರುವ ರಾಜ್ಯದ ಅಭ್ಯರ್ಥಿಗಳು.

‘ಪಿಆರ್‌ಟಿ ಶಿಕ್ಷಕರ ಹುದ್ದೆಗೆ ಅರ್ಹತೆ ಪಡೆಯಬೇಕಾದರೆ ಕೇಂದ್ರೀಯ ಸಂಘಟನೆ ನಡೆಸುವ ಸಿಟಿಇಟಿ (ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ) ಪಾಸಾಗಬೇಕು. ಈ ಪರೀಕ್ಷೆಯು ಸಹ ಅತ್ಯಂತ ಕಠಿಣವಾಗಿರುತ್ತದೆ. ರಾಜ್ಯದಲ್ಲಿ ಈ ಪರೀಕ್ಷೆ ತೆಗೆದುಕೊಂಡವರಲ್ಲಿ ಶೇ 18ರಿಂದ 20ರಷ್ಟು ಮಂದಿ ಪಾಸಾಗುತ್ತಾರೆ. ಆದರೆ ಶಿಕ್ಷಕರ ಹುದ್ದೆಯ ಪರೀಕ್ಷೆಯಲ್ಲಿ ಏಕೆ ಆಯ್ಕೆಯಾಗಿಲ್ಲ. ಇದರಲ್ಲಿ ನಮಗೆ ಗುಮಾನಿ ಕಾಣುತ್ತಿದೆ’ ಎಂದು ಪರೀಕ್ಷೆ ಬರೆದ ಅಭ್ಯರ್ಥಿಯೊಬ್ಬರು ಹೇಳಿದರು.

‘ದೆಹಲಿ, ಗುಜರಾತ್‌, ಜೈಪುರ ಪರೀಕ್ಷಾ ಕೇಂದ್ರದ ಅಭ್ಯರ್ಥಿಗಳು ಮಾತ್ರ ಹೆಚ್ಚಾಗಿ ತೇರ್ಗಡೆಯಾಗಿದ್ದಾರೆ. ರಾಜ್ಯದ ಅಭ್ಯರ್ಥಿಗಳಿಗೆ ಬೆಂಗಳೂರು ಪರೀಕ್ಷಾ ಕೇಂದ್ರವಾಗಿತ್ತು. ಇಲ್ಲಿ ಪರೀಕ್ಷೆ  ಬರೆದವರಿಗೆ ಅನ್ಯಾಯ ಆಗಿದೆ. ದೆಹಲಿ ಕೇಂದ್ರದಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಪೈಕಿ ಮೀನ ಹೆಸರಿನ ಉಪನಾಮ ಇರುವವರೇ ಹೆಚ್ಚಿದ್ದಾರೆ’ ಎಂದು  ಹೇಳಿದರು.

ಕರ್ನಾಟಕದಿಂದ ಸಂದರ್ಶನಕ್ಕೆ ಆಯ್ಕೆಯಾಗಿರುವ 15 ಜನರ ಹೆಸರನ್ನು ಗಮನಿಸಿದರೆ ಹತ್ತು ಮಂದಿಯ ಹೆಸರು ಉತ್ತರ ಭಾರತದವರ ಹೆಸರಿನಂತೆಯೇ ಇದೆ. ಐವರು ಮಾತ್ರ ರಾಜ್ಯದವರು ಇದ್ದಂತೆ ಕಾಣುತ್ತದೆ. 

‘ಪರಿಶಿಷ್ಟ ಜಾತಿಯ ಕೋಟಾದಡಿ ರಾಜ್ಯದಲ್ಲಿ ಕೇವಲ ಒಬ್ಬರೇ ಒಬ್ಬರು ಸಂದರ್ಶನಕ್ಕೆ  ಅರ್ಹತೆ ಪಡೆದಿದ್ದಾರೆ. ಅಂದರೆ ರಾಜ್ಯದಲ್ಲಿ ಬುದ್ಧಿವಂತರು ಇಲ್ಲವೇ? ಸಿಟಿಇಟಿ ಪರೀಕ್ಷೆಯಲ್ಲಿ ಪಾಸಾಗುವರು ಪಿಆರ್‌ಟಿ ಪರೀಕ್ಷೆಯಲ್ಲಿ ಏಕೆ ಪಾಸಾಗುತ್ತಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಸೂಕ್ತ ವೇದಿಕೆಯಲ್ಲಿ ಪ್ರಶ್ನಿಸಬೇಕು’ ಎಂದು ಅಭ್ಯರ್ಥಿಯೊಬ್ಬರು ಒತ್ತಾಯಿಸಿದರು.

‘ಪಿಆರ್‌ಟಿ ಶಿಕ್ಷಕರ ಆಯ್ಕೆ ಮಾತ್ರವಲ್ಲ ಪಿಜಿಟಿ (ಸ್ನಾತಕೋತ್ತರ ಪದವೀಧರ ಶಿಕ್ಷಕರು) ಆಯ್ಕೆಯಲ್ಲೂ ಇದೇ ರೀತಿಯ ಅನ್ಯಾಯ ಆಗಿದೆ. ಕೇವಲ ಉತ್ತರ ಭಾರತದವರೇ ಆಯ್ಕೆಯಾಗುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT