ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥನ ಕೇಂದ್ರಿತ ಚಿತ್ರಗಳ ಕನಸುಗಾರ

Last Updated 18 ಮೇ 2017, 19:30 IST
ಅಕ್ಷರ ಗಾತ್ರ
ಹೊಸ ಕಾಲದ ಸಿನಿಮಾಗಳನ್ನು ಮಾಡಬೇಕು ಎಂಬ ಆಸೆಯೊಂದಿಗೆ ‘ಚಂದನವನ’ಕ್ಕೆ ಕಾಲಿಡುತ್ತಿರುವ ಕನಸು ಕಂಗಳ ನಟ ಶ್ರೇಯಸ್. ಇವರು ಅಭಿನಯಿಸಿರುವ ‘ರಂಗ್‌ಬಿರಂಗಿ’ ಎನ್ನುವ ಸಿನಿಮಾ ಸದ್ಯದಲ್ಲೇ ತೆರೆ ಕಾಣಲು ಸಿದ್ಧತೆ ನಡೆಸುತ್ತಿದೆ. ಇವರ ಇನ್ನೊಂದು ‘ಸಿನಿಮಾ’ ಡೇವಿಡ್ ಸೆಟ್ಟೇರುವ ತವಕದಲ್ಲಿದೆ.
 
ಕನ್ನಡ ಚಿತ್ರರಂಗದಲ್ಲೀಗ ಹೊಸ ಪ್ರತಿಭೆಗಳ ಸುಗ್ಗಿಯ ಕಾಲ. ಈ ಸುಗ್ಗಿ ಸಂಭ್ರಮದ ಭಾಗವಾಗಿ ಗುರ್ತಿಸಿಕೊಂಡಿರುವ ಶ್ರೇಯಸ್‌ – ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವ, ಆ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವ ಹಂಬಲ ಹೊಂದಿದ್ದಾರೆ. 
 
‘ನಾನು ಅಭಿನಯ ಆರಂಭ ಮಾಡಿದ್ದು ರಂಗಭೂಮಿಯಿಂದ. ನನಗೆ ರಂಗತರಬೇತಿ ನೀಡಿದವರು ಪ್ರಕಾಶ್ ಬೆಳವಾಡಿ. ನಂತರ ಪ್ರದೀಪ್ ಬೆಳವಾಡಿ ಹಾಗೂ ಸತ್ಯ ಅವರ ಜೊತೆ ಕೆಲಸ ಮಾಡುತ್ತಿದ್ದೆ.  ಇಂದ್ರಜಿತ್ ಲಂಕೇಶ್ ಜೊತೆ ‘ಲವ್‌ ಯೂ ಆಲಿಯಾ’ ಚಿತ್ರದಲ್ಲಿ ಸಹಾಯಕ ನಿರ್ದೇಶಕ ಆಗಿ ಕೆಲಸ ಮಾಡಿದೆ’ ಎನ್ನುವ ಶ್ರೇಯಸ್ ತಕ್ಕಮಟ್ಟಿಗಿನ ಸಿದ್ಧತೆಯೊಂದಿಗೆ ಚಿತ್ರರಂಗ ಪ್ರವೇಶಿಸಿದ್ದಾರೆ.
 
‘‘ಡೇವಿಡ್’ ಸಿನಿಮಾದ ಛಾಯಾಗ್ರಹಣ ನಡೆಸಲು ಹಾಲಿವುಡ್‌ನ ಸ್ಟೀವ್‌ ರೈಸ್‌ ಒಪ್ಪಿಕೊಂಡಿದ್ದಾರೆ’’ ಎನ್ನುತ್ತಾರೆ ಶ್ರೇಯಸ್. ಭಾರ್ಗವ್‌ ಅವರು ಇದರ ನಿರ್ದೇಶಕರು. ಡೇವಿಡ್ ಸಿನಿಮಾ ಡಿಸೆಂಬರ್ ಕೊನೆಯಲ್ಲಿ ತೆರೆಯ ಮೇಲೆ ಬರುವ ನಿರೀಕ್ಷೆ ಇದೆ.
 
ಹಿರಿಯ ನಟ ಅವಿನಾಶ್ ಅವರೂ ಇದರಲ್ಲಿ ನಟಿಸುತ್ತಿದ್ದಾರಂತೆ. ಕೊಲೆಯೊಂದರ ಸುತ್ತ ಇರುವ ನಿಗೂಢತೆಯ ಬಗ್ಗೆ ‘ಡೇವಿಡ್‌’ ಸಿನಿಮಾದ ಕಥಾವಸ್ತು ಇರಲಿದೆ. ಇದನ್ನು ಬೆಂಗಳೂರಿನಲ್ಲೇ ಚಿತ್ರೀಕರಿಸಲಾಗುತ್ತದೆ. ‘ಹೊಸ ಕಾಲದ ಸಿನಿಮಾ ಇದು’ ಎಂದು ಅವರು ತಿಳಿಸಿದರು.
 
ಶ್ರೇಯಸ್ ಅವರು ಈ ಹಿಂದೆ ಚಿತ್ರ ನಿರ್ಮಾಣ ತಂಡದ ಜೊತೆ ಕೂಡ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಅಂದಹಾಗೆ ಶ್ರೇಯಸ್ ಬೆಂಗಳೂರಿನ ಹುಡುಗ. ಅವರ ತಂದೆ ಕಲಾ ನಿರ್ದೇಶಕರು.
 
‘ಸಿನಿಮಾ, ಅಭಿನಯದತ್ತ ಮುಖ ಮಾಡಲು ನನಗೆ ನನ್ನ ತಂದೆಯೇ ಪ್ರೇರಣೆ. ಪದವಿ ಪೂರೈಸಿದ ನಂತರ ಮೂರು ತಿಂಗಳು ಕೆಲಸ ಮಾಡಿದೆ. ಕೆಲಸ ಸಾಕು ಎನಿಸಿತು. ರಂಗಭೂಮಿಯತ್ತ ಮುಖ ಮಾಡಿದೆ’ ಎಂದು ಶ್ರೇಯಸ್ ಹೇಳುತ್ತಾರೆ.
 
ಶ್ರೇಯಸ್ ಅವರು ‘ಆಟಂ’, ‘ಬೀಯಿಂಗ್ ಸಿಂಗಲ್’ ಎಂಬ ಕಿರುಚಿತ್ರಗಳನ್ನು ಸಿದ್ಧಪಡಿಸಿದ್ದಾರೆ. ಮಾಸ್‌ ಹಾಗೂ ಕ್ಲಾಸ್‌ ಪಾತ್ರಗಳೆರಡನ್ನೂ ಮಾಡುವ ಆಸೆಯಿರುವ ಅವರಿಗೆ ಕನ್ನಡದಲ್ಲಿ ಹೀರೊ ಆಧಾರಿತ ಸಿನಿಮಾಗಳ ಜೊತೆಯಲ್ಲೇ, ಕಥೆಯನ್ನು ಆಧರಿಸಿದ ಸಿನಿಮಾಗಳು ಇನ್ನಷ್ಟು ಬರಬೇಕು ಎಂಬ ಬಯಕೆ ಇದೆ. ರಾಮ್‌ಗೋಪಾಲ್‌ ವರ್ಮಾ ಅವರ ಸಿನಿಮಾಗಳ ಪ್ರಭಾವ ಕೂಡ ಶ್ರೇಯಸ್ ಅವರ ಮೇಲೆ ಆಗಿರುವಂತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT