ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಸಾಹದ ‘ಪಿರಂಗಿ’ ಮತ್ತು ಬಹುದೂರದ ಗುರಿ

Last Updated 18 ಮೇ 2017, 19:30 IST
ಅಕ್ಷರ ಗಾತ್ರ
‘ಗುರಿ ತಲುಪುವವರೆಗೂ ಎಲ್ಲರೂ ಅಲೆಮಾರಿಗಳು’.
 
ತೆರೆಯ ಮೇಲೆ ಹೀಗೊಂದು ಸಾಲು ಕ್ಷಣಕಾಲ ಮಿಂಚಿ ಮರೆಯಾಯಿತು. ಮರುಕ್ಷಣ ‘ಪಿರಂಗಿಪುರ’ ಎಂಬ ಶೀರ್ಷಿಕೆಯೂ, ಸುಲಭಕ್ಕೆ ಗುರ್ತೇ ಸಿಗದಂಥ ಗೆಟಪ್‌ನಲ್ಲಿನ ಸಂಚಾರಿ ವಿಜಯ್‌ ಮುಖವೂ ಮೂಡಿನಿಂತಿತು. 
 
ಇದೆಲ್ಲಿದೆ ಪಿರಂಗಿಪುರ? ಎಂದು ಹುಬ್ಬೇರಿಸಬೇಡಿ. ಇದೊಂದು ಕಾಲ್ಪನಿಕ ಊರು. ಅಷ್ಟೇ ಅಲ್ಲ, ಜನಾರ್ದನ್‌ ಪಿ. ಜಾನಿ ಅವರ ಕನಸು ಕನವರಿಕೆಗಳ ಸಾಕಾರರೂಪದಲ್ಲಿ ಜೀವತಳೆದ ಊರು. 
 
ಸಿದ್ಧಮಾದರಿಯನ್ನು ಒಡೆದು ಹೊಸತೇನನ್ನಾದರೂ ಕಟ್ಟಬೇಕು ಎಂಬ ಹಟದಿಂದ ಜನಾರ್ದನ್‌ ಅವರು ಕಳೆದ ಎರಡು ವರ್ಷಗಳಿಂದ ಈ ಸಿನಿಮಾ ಕಥೆಗಾಗಿ ಶ್ರಮಿಸುತ್ತಿದ್ದಾರೆ. ಎರಡು ಸಾವಿರಕ್ಕೂ ಅಧಿಕ ಚಿತ್ರಗಳನ್ನು ಬಿಡಿಸಿಕೊಂಡು ಕಲ್ಪನೆಯ ಊರಿಗೆ ಜೀವ ತುಂಬುತ್ತಿದ್ದಾರೆ. ಕನ್ನಡದ ಜೊತೆಗೆ ತಮಿಳು ಮತ್ತು ತೆಲುಗು ಭಾಷೆಗಳಲ್ಲಿಯೂ ಏಕಕಾಲದಲ್ಲಿ ಚಿತ್ರ ನಿರ್ಮಾಣವಾಗುತ್ತಿರುವುದು ವಿಶೇಷ. 
 
‘ಪಿರಂಗಿಪುರ’ ಚಿತ್ರದ ಬಗ್ಗೆ ಪ್ರಾಥಮಿಕ ಮಾಹಿತಿ ನೀಡುವ ಸಲುವಾಗಿಯೇ ಚಿತ್ರತಂಡ ಇತ್ತೀಚೆಗೆ ಪತ್ರಿಕಾಗೋಷ್ಠಿ ಕರೆದಿತ್ತು. 
 
ರಾಜಾರಾಮ್‌ ಎನ್ನುವ ವ್ಯಕ್ತಿಯ ಬದುಕಿನ ಏರಿಳಿತಗಳನ್ನು ಮನೋಸೈದ್ಧಾಂತಿಕ ರೀತಿಯಲ್ಲಿ ಕಟ್ಟಿಕೊಡಲು ಹೊರಟಿದ್ದಾರೆ ನಿರ್ದೇಶಕರು. ಪ್ರಾಚೀನ ಕಾಲದ ಅಪರಾಧ ಚರಿತ್ರೆಯನ್ನು ಬಿಂಬಿಸುವ ಹಚ್ಚೆಗಳನ್ನು ಹೊಂದಿರುವ ‘ಪಿರಂಗಿಗಳು’ ಎಂಬ ಪಾತ್ರಗಳನ್ನೂ ಅವರು ಸೃಷ್ಟಿಸಿದ್ದಾರೆ. ಜೈ ಮತ್ತು ರಾಣಾ ಎನ್ನುವ ಇಬ್ಬರು ಕಲಾವಿದರು ಈ ವಿಶಿಷ್ಟ ಪಾತ್ರಗಳಿಗಾಗಿ ಅಷ್ಟೇ ವಿಶಿಷ್ಟವಾಗಿ ಸಿದ್ಧರಾಗುತ್ತಿದ್ದಾರೆ.
 
‘ಬೆಂಗಳೂರಿನಿಂದ ರಾಜಸ್ತಾನದವರೆಗಿನ ಪ್ರಯಾಣದ ಕಥನ ಇದು. ಇದಕ್ಕಾಗಿ ನಮ್ಮ ತಂಡ ಸುಮಾರು ಎಪ್ಪತ್ತು ದಿನಗಳ ಕಾಲ ಪ್ರಯಾಣ ಮಾಡಲಿದೆ. ಮುಖ್ಯಭೂಮಿಕೆಯಲ್ಲಿರುವ ಸಂಚಾರಿ ವಿಜಯ್‌ ಮೂರು ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ನಕ್ಷತ್ರ ಮತ್ತು ರಾಕಿ ಎಂಬ ಇನ್ನೆರಡು ವಿಶಿಷ್ಟ ಪಾತ್ರಗಳ ಕಥೆಯೂ ಅವರ ಜತೆಗೇ ಸಾಗಲಿದೆ’ ಎಂದು ವಿವರ ನೀಡಿದರು ಜನಾರ್ದನ್‌. 
 
ಈ ಚಿತ್ರಕ್ಕಾಗಿ ರಾಜಸ್ತಾನದಲ್ಲಿ ಒಂದು ಗ್ರಾಮವನ್ನು ಮರುರೂಪಿಸುವ ಯೋಚನೆಯೂ ತಂಡಕ್ಕಿದೆ. ಇದಕ್ಕಾಗಿ ತಮಿಳಿನ ಖ್ಯಾತ ಕಲಾನಿರ್ದೇಶ ಬಾಲಚಂದರ್‌ ಶ್ರಮಿಸುತ್ತಿದ್ದಾರೆ. ಪಾಕಿಸ್ತಾನದ ಗಡಿಯಿಂದ 40 ಕಿ.ಮೀ. ದೂರದಲ್ಲಿ ಈ ಊರು ಇದೆ.
 
ಚಿತ್ರದ ಹೊಸ ಪೋಸ್ಟರ್‌ ಬಿಡುಗಡೆ ಮಾಡಲು ಬಂದಿದ್ದ ನಾಗತಿಹಳ್ಳಿ ಚಂದ್ರಶೇಖರ್‌ ಅವರು ಹೊಸಬರ ಈ ಪ್ರಯತ್ನವನ್ನು ಮನದುಂಬಿ ಶ್ಲಾಘಿಸಿದರು. ‘ಈ ಕಥೆಯನ್ನು ನಾನು ಕೇಳಿದ್ದೇನೆ. ನೂರಾ ಅರವತ್ತು ವರ್ಷ ಹಿಂದಿನ ಕಾಲಕ್ಕೆ ಜಗ್ಗುವ ಹಾಗೆಯೇ ಇಂದಿನ ವರ್ತಮಾನಕ್ಕೆ ಒಗ್ಗುವ ವಿಶಿಷ್ಟ ಕಥೆ ಇದು.
 
ರಂಗಭೂಮಿ, ಸಾಹಿತ್ಯ, ಚಿತ್ರಕಲೆ ಮೂರೂ ಕ್ಷೇತ್ರಗಳಲ್ಲಿರುವವರು ಈ ತಂಡದಲ್ಲಿದ್ದಾರೆ. ಆದ್ದರಿಂದಲೇ ಈ ತಂಡದ ಬಗ್ಗೆ ಭರವಸೆ ಮೂಡುತ್ತದೆ’ ಎಂದರು.
ಸಂಚಾರಿ ವಿಜಯ್‌ ಮಾತನಾಡಿ, ‘ಇಡೀ ತಂಡ ಸಾಕಷ್ಟು ಶ್ರಮಿಸುತ್ತಿದೆ. ಚಿತ್ರದ ಕೊನೆಯ ಇಪ್ಪತ್ತು ನಿಮಿಷ ಚೇಸಿಂಗ್‌ ಇರಲಿದೆ.
 
ಸಾಂಕೇತಿಕವಾಗಿಯೂ ಚಿತ್ರದಲ್ಲಿ ಬಳಕೆಯಾಗುತ್ತದೆ’ ಎಂದು ವಿವರಣೆ ನೀಡಿದರು. ಶ್ಯಾಮ್‌ ಎಲ್‌. ರಾಜ್‌ ಸಂಗೀತ, ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ದಿನೇಶ್‌ ಸುಬ್ಬರಾಯನ್‌ ಸಾಹಸ ಚಿತ್ರಕ್ಕಿದೆ. ಇನ್ನು ಇಪ್ಪತ್ತು ದಿನಗಳಲ್ಲಿ ಚಿತ್ರೀಕರಣ ಪ್ರಾರಂಭಿಸುವ ಯೋಚನೆಯಲ್ಲಿ ಚಿತ್ರತಂಡವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT