ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಬದ್ಧತೆ ತೋರಿ

Last Updated 19 ಮೇ 2017, 5:26 IST
ಅಕ್ಷರ ಗಾತ್ರ

ಕೋಲಾರ: ‘ನಿರಂತರ ಕಲಿಕೆಯೊಂದಿಗೆ ಬೋಧನಾ ಕ್ರಮದಲ್ಲಿನ ಅನುಮಾನಗಳನ್ನು ಪರಿಹರಿಸಿಕೊಂಡು ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಬದ್ಧತೆ ತೋರಿ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ (ಡಿಡಿಪಿಯು) ಎ.ಕೆ.ಪಾಪಣ್ಣ ಸಲಹೆ ನೀಡಿದರು.

ಜಿಲ್ಲಾಡಳಿತ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಪಿಯುಸಿ ಅರ್ಥಶಾಸ್ತ್ರ ಉಪನ್ಯಾಸಕರಿಗೆ ನಗರದಲ್ಲಿ ಹಮ್ಮಿಕೊಂಡಿರುವ 10 ದಿನಗಳ ಜಿಲ್ಲಾ ಮಟ್ಟದ ವಿಷಯಾಧಾರಿತ ತರಬೇತಿ ಕಾರ್ಯಾಗಾರಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಉತ್ತಮ ಉಪನ್ಯಾಸಕರಾಗಲು ನಿರಂತರ ಕಲಿಕೆ ಅಗತ್ಯ’ ಎಂದು ಅಭಿಪ್ರಾಯಪಟ್ಟರು.

‘ಕಲಿಕೆಗೆ ಉತ್ಸಾಹ ತೋರಿ ಉಪನ್ಯಾಸಕರೂ ವಿದ್ಯಾರ್ಥಿಗಳಾದಾಗ ಮಾತ್ರ ಉತ್ತಮ ಬೋಧನೆ ಸಾಧ್ಯ. ಈ ಬಾರಿ ಜಿಲ್ಲೆಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಅತಿ ಕಡಿಮೆ ಶೇ 43ರಷ್ಟು ಫಲಿತಾಂಶ ಬಂದಿದೆ. ಗ್ರಾಮೀಣ ಮಕ್ಕಳಿಗೆ ಕ್ಲಿಷ್ಟವಾಗಿರುವ ಅರ್ಥಶಾಸ್ತ್ರ ಬೋಧನೆಯಲ್ಲಿ ಸುಧಾರಣೆಗೆ ಒತ್ತು ನೀಡಲಾಗುತ್ತಿದೆ’ ಎಂದರು.

‘ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಶೈಕ್ಷಣಿಕ ವರ್ಷದ ಆರಂಭಕ್ಕೂ ಮುನ್ನವೇ ಉಪನ್ಯಾಸಕರಿಗೆ ತರಬೇತಿ ನೀಡಲು ಚಿಂತನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಥಶಾಸ್ತ್ರಕ್ಕೆ ಜಿಲ್ಲಾ ಹಂತದಲ್ಲಿ ಹಾಗೂ ವಾಣಿಜ್ಯ ಮತ್ತು ಲೆಕ್ಕಶಾಸ್ತ್ರ ವಿಷಯಕ್ಕೆ ವಿಭಾಗ ಮಟ್ಟದಲ್ಲಿ ತರಬೇತಿ ನಡೆಯುತ್ತಿದೆ. ಉಪನ್ಯಾಸಕರು ತರಬೇತಿಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ಬೋಧನಾ ಕ್ರಮ ಉತ್ತಮಪಡಿಸಿಕೊಳ್ಳಬೇಕು. ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದರು.

ಸವಾಲಾಗಿ ಸ್ವೀಕರಿಸಿ: ‘ಅರ್ಥಶಾಸ್ತ್ರ ವಿಷಯ ಕಲಿಕೆಯಲ್ಲಿನ ಕಷ್ಟವೇ ಈ ಬಾರಿಯ ಫಲಿತಾಂಶ ಕುಸಿತಕ್ಕೆ ಮುಖ್ಯ ಕಾರಣ. ಅರ್ಥಶಾಸ್ತ್ರಕ್ಕೆ ಕಲಾ ವಿಭಾಗದಲ್ಲಿ ವಿಶೇಷ ಪ್ರಾಶಸ್ತ್ಯ ನೀಡಲಾಗಿದ್ದು, ಅನ್ವಯಿಕ ಜ್ಞಾನ ಇದರ ಅರಿವಿಗೆ ಅಗತ್ಯವಿದೆ. ಉಪನ್ಯಾಸಕರು ಅರ್ಥಶಾಸ್ತ್ರ ಬೋಧನೆಯನ್ನು ಸವಾಲಾಗಿ ಸ್ವೀಕರಿಸಬೇಕು’ ಎಂದು ಜಿಲ್ಲಾ ಪಿಯುಸಿ ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ.ನಟರಾಜ್ ಹೇಳಿದರು.

ಜಿಲ್ಲಾ ಪಿಯುಸಿ ಪ್ರಾಂಶುಪಾಲರ ಸಂಘದ ಖಜಾಂಚಿ ಬಿ.ಎಸ್.ಬಾಲಾಜಿ ಮಾತನಾಡಿ, ‘ಮಕ್ಕಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿ ತುಂಬುವ ಉದ್ದೇಶದಿಂದ ಅರ್ಥಶಾಸ್ತ್ರ ಪಠ್ಯ ವಿಷಯ ಕಾಲ ಕಾಲಕ್ಕೆ ಬದಲಾಗುತ್ತಿದೆ’ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್‌ ಮಾತನಾಡಿ, ‘ಇಲಾಖೆಯು ಈ ಹಿಂದೆ ಶೈಕ್ಷಣಿಕ ವರ್ಷ ಮುಗಿಯುವ ಹಂತದಲ್ಲಿ ತರಬೇತಿ ನೀಡುತ್ತಿತ್ತು. ಆದರೆ, ಈಗ ಶೈಕ್ಷಣಿಕ ವರ್ಷದ ಆರಂಭಕ್ಕೂ ಮುನ್ನವೇ ತರಬೇತಿ ನೀಡುವ ಮೂಲಕ ಬೋಧನಾಕ್ರಮ ಉತ್ತಮಪಡಿಸಿಕೊಳ್ಳುವ ಅವಕಾಶವನ್ನು ಉಪನ್ಯಾಸಕರಿಗೆ ಕಲ್ಪಿಸಿದೆ’ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪಿಯುಸಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳಾದ ಚಂದ್ರಪ್ಪ, ರತ್ನಪ್ಪ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT