ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಸೌಲಭ್ಯ ವಂಚಿತ ಬೋವಿ ವಡ್ಡರು

Last Updated 20 ಮೇ 2017, 6:11 IST
ಅಕ್ಷರ ಗಾತ್ರ

ಹುಮನಾಬಾದ್: ತಾಲ್ಲೂಕಿನ ಗಡಿಗ್ರಾಮ ಬೆಮಳಖೇಡಾ ಗ್ರಾಮದ ಬೋವಿ ವಡ್ಡ ಸಮುದಾಯದವರಿಗೆ ವಸತಿ ಸೌಲಭ್ಯ ಇಲ್ಲದ ಕಾರಣ ಇಲ್ಲಿನ  ಮಾಣಿಕನಗರದ ಕೆಎಸ್‌ಆರ್‌ಟಿಸಿ ವಸತಿಗೃಹ ಸಮುಚ್ಚಯ ಎದುರಿನ ರಸ್ತೆಬದಿ ಗುಡಿಸಲಲ್ಲಿ ವಾಸಿಸುತ್ತಿದ್ದಾರೆ.

‘ಸರ್ಕಾರದಿಂದ ಆಧಾರ್‌ ಸಂಖ್ಯೆ, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಎಲ್ಲವನ್ನೂ ಹೊಂದಿದ್ದೇವೆ. ವಸತಿ ಸೌಲಭ್ಯಕ್ಕಾಗಿ ಸ್ಥಳೀಯ ಪುರಸಭೆಗೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ’ ಎಂಬುದು ಅವರ ಆರೋಪ.

‘ಕೊರೆವ ಚಳಿ, ಬೇಸಿಗೆಯಲ್ಲಿ ಬಿಸಿಲಿನ ತಾಪ, ಮಳೆಯಲ್ಲಿ ವಾಸಿಸುತ್ತೇವೆ.  ಇದರ ನಡುವೆ ವಿಷಜಂತುಗಳ ಕಾಟ. ವಾಹನಗಳು ಮೇಲೆ ಹಾಯುವ ಭೀತಿ ಜತೆಗೆ ಅನಾರೋಗ್ಯಕ್ಕೆ ಕಾರಣವಾಗುವ ವಾಹನಗಳ ವಿಷಪೂರಿತ ಹೊಗೆ. ಹೀಗೆ, ಹಲವು ಸಮಸ್ಯೆಗಳ ನಡುವೆ  ದಿನ ಕಳೆಯುತ್ತಿದ್ದೇವೆ. ಎಲ್ಲರೆದುರು ಗೋಳು ಹೇಳಿಕೊಂಡು ಸಾಕಾಗಿದೆ. ಈಗ ದೇವರ ಮೇಲೆ ಭಾರಹಾಕಿದ್ದೇವೆ’ ಎಂದು ಪೆಂಟವ್ವ, ನಾಗಪ್ಪ ಅಳಲು ತೋಡಿಕೊಂಡರು.  

‘ಬೀಸುವ ಕಲ್ಲು, ಒರಳು, ಇತ್ಯಾದಿ ಸಾಮಗ್ರಿ ಕಲ್ಲಲ್ಲಿ ಕಟೆದು ಮಾರಾಟ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತೇವೆ. ಹಳ್ಳಿಗಳಲ್ಲಿ ಒಂದಿಷ್ಟು ಮಾರಾಟ ಆಗುತ್ತವೆ. ಜತೆಗೆ ತಾಲ್ಲೂಕು ಕೇಂದ್ರದಲ್ಲೂ ಆಧುನಿಕ ಯಂತ್ರಗಳ ಭರಾಟೆಯಲ್ಲೂ ಸಂಪ್ರದಾಯಸ್ಥರು ಹೊಸ ಮನೆಗಳಲ್ಲಿ ಕಡ್ಡಾಯವಾಗಿ ವರಳು, ಬೀಸುವ ಕಲ್ಲು ಹಾಕುತ್ತಾರೆ ಎಂಬ ಕಾರಣಕ್ಕಾಗಿ ತಾಲ್ಲೂಕು ಕೇಂದ್ರದಲ್ಲಿ ಗುಡಿಸಲು ಹಾಕಿಕೊಂಡು ಜೀವನ ಮಾಡುತ್ತಿದ್ದೇವೆ’ ಎಂದು ಗುಡಿಸಲು ವಾಸಿ ತಿಮ್ಮವ್ವ ಹೇಳಿದರು.

(ಸರ್ಕಾರದಿಂದ ಪಡೆದ ಆಧಾರ್‌ ಸಂಖ್ಯೆ, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿಗಳನ್ನು  ಪ್ರದರ್ಶಿಸಿಸುತ್ತಿರುವ ನಿವಾಸಿಗಳು)

‘ಈ ಕೆಲಸವನ್ನೇ ನಂಬಿ  ಎರಡು ದಶಕಗಳ ಹಿಂದೆ ತಾಲ್ಲೂಕಿನ ಗಡಟಿ ಗ್ರಾಮ ಬೆಮಳಖೇಡಾದಿಂದ ಬಂದು ನೆಲೆಸಿದ್ದೇವೆ. ಜನಪ್ರತಿನಿಧಿಗಳಿಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ನಾವು ನೆನಪಾಗುತ್ತೇವೆ. ಬಯಲಲ್ಲೇ ಬಟ್ಟೆ ಮರೆಯಲ್ಲಿ ಮಾನ ಮುಚ್ಚಿಕೊಂಡು ಸ್ನಾನ ಮಾಡುತ್ತೇವೆ. ಯಾವ ಅಧಿಕಾರಿಗಳೂ ನಮ್ಮ ನೆರವಿಗೆ ಬಂದಿಲ್ಲ’ ಎಂದು ದೂರಿದರು.

‘ಇಂಥ ಕಷ್ಟದ ಬದುಕು ಯಾರಿಗೂ ಬೇಡ. ನಮ್ಮೊಂದಿಗೆ ಅಂತ್ಯಗೊಳ್ಳಲಿ’ ಎನ್ನುತ್ತಾರೆ ಭಾಗಮ್ಮ. ಅದೇ ಕಾರಣಕ್ಕೆ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸುತ್ತೇವೆ ಎನ್ನುತ್ತಾರೆ ಯಲ್ಲಮ್ಮ.

‘ತಹಶೀಲ್ದಾರ್‌, ತಾಲ್ಲೂಕು ಪಂಚಾಯಿತಿ ಇಒ ಅಥವಾ ಪುರಸಭೆ ಮುಖ್ಯಾಧಿಕಾರಿ  ಸಮಸ್ಯೆ ಬಗೆಹರಿಸುವುದು ದೂರದ ಮಾತು. ಒಮ್ಮೆ ಕಣ್ಣು ಹಾಯಿಸಿಯೂ ನಮ್ಮತ್ತ ನೋಡಿಲ್ಲ. ಈ ಮಾರ್ಗದಲ್ಲಿ ವಾಯುವಿಹಾರಕ್ಕೆ ತೆರಳುತ್ತಿದ್ದ ಕ್ಷೇತ್ರದ ಶಾಸಕ ರಾಜಶೇಖರ ಬಿ.ಪಾಟೀಲ ಅವರ ಬಳಿ ನೋವು ತೋಡಿಕೊಂಡಾಗ ಸಂಬಂಧಪಟ್ಟವರ ಜತೆ  ಮಾತನಾಡಿ ಶೀಘ್ರ ಸೌಲಭ್ಯ ಕಲ್ಪಿಸಿಕೊಡುವುದಾಗಿ ಹೇಳಿದ್ದರು. ಅವರು ಸಂಬಂಧಿತರಿಗೆ ಹೇಳಿದರೂ ಅಧಿಕಾರಿಗಳು ಸ್ಪಂದಿಸದ ಕಾರಣ ನಾವುಗಳು ಬಯಲಲ್ಲೇ ಬದುಕುತ್ತಿದ್ದೇವೆ’ ಎಂದು ಮರೆಪ್ಪ ಅಳಲು ತಿಳಿಸಿದರು.

**

ನಮ್ಮ ಜನಾಂಗದ  ಬಗ್ಗೆ ಅನುಕಂಪದ ಮಾತಾಡುತ್ತಾರೆ.  ಹೇಳಿದ್ದು ಕಾರ್ಯ ರೂಪಕ್ಕೆ ಬಂದದ್ದು   ವಿರಳ. ಸರ್ಕಾರ ಗಮನ ಹರಿಸಿ ಶೀಘ್ರ ಸಮಸ್ಯೆ ಬಗೆಹರಿಸಬೇಕು
-ಮಾಣಿಕರಾವ ವಾಡೇಕರ್, ಬೋವಿ ವಡ್ಡರ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT