ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ನಲ್ಲಿ ಸಂಪರ್ಕ ಅಧಿಕೃತಗೊಳಿಸಿ

Last Updated 21 ಮೇ 2017, 5:33 IST
ಅಕ್ಷರ ಗಾತ್ರ

ದಾವಣಗೆರೆ: ಪಾಲಿಕೆ ವ್ಯಾಪ್ತಿಯ ನಾಗರಿಕರಿಗೆ ಕುಡಿಯುವ ನೀರು ಪೂರೈಕೆಗೆ ವರ್ಷಕ್ಕೆ ₹ 23 ಕೋಟಿ ವೆಚ್ಚವಾಗುತ್ತಿದ್ದು, ಮನೆ ಹಾಗೂ ವಾಣಿಜ್ಯ ಉಪಯೋಗಕ್ಕೆ ಸಂಬಂಧಿಸಿದ ನಲ್ಲಿ ಸಂಪರ್ಕಗಳನ್ನು ಇನ್ನೂ ಹೆಚ್ಚಿಸುವ ನಿರ್ಣಯಕ್ಕೆ ಶನಿವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಮ್ಮತದಿಂದ ಒಪ್ಪಿಗೆ ಸೂಚಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ 1.44 ಲಕ್ಷ ಡೋರ್‌ ನಂಬರ್‌ ಹೊಂದಿರುವ ಮನೆಗಳಿವೆ. ಆದರೆ, ಇವುಗಳಲ್ಲಿ ಕೇವಲ 45 ಸಾವಿರ ಮನೆಗಳು ಮಾತ್ರ ಅಧಿಕೃತವಾಗಿ ನಲ್ಲಿ ಸಂಪರ್ಕ ಪಡೆದಿವೆ. ಇದರಿಂದ ನೀರಿನ ಕಂದಾಯವು ತುಂಬಾ ಕಡಿಮೆ ಬರುತ್ತಿದೆ. ಅನಧಿಕೃತವಾಗಿ ನಲ್ಲಿ ಸಂಪರ್ಕ ಪಡೆದ ಎಲ್ಲಾ ಮನೆಗಳ ಮಾಲೀಕರಿಂದ ನೀರಿನ ಕಂದಾಯವನ್ನು ಸಂಗ್ರಹಿಸಬೇಕು ಎಂದು ಪಾಲಿಕೆ ಸದಸ್ಯ ದಿನೇಶ್‌ ಕೆ.ಶೆಟ್ಟಿ ಸಲಹೆ ನೀಡಿದರು.

‘ನಾಗರಿಕರಿಗೆ ಅಗತ್ಯ ನೀರು ಪೂರೈಸುವಷ್ಟು ನೀರಿನ ಲಭ್ಯತೆ ಇದೆ. ಆದರೆ, ಕೆಲ ವಾಲ್‌ಮನ್‌ಗಳು ಭ್ರಷ್ಟರಾಗಿದ್ದು, ಹಣ ಕೊಟ್ಟವರ ಮನೆಗಳ ಮಾರ್ಗಗಳಿಗೆ ಮಾತ್ರ ನೀರು ಬಿಡುತ್ತಾರೆ. ಅಂಥವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ದಿನೇಶ್‌ ಕೆ.ಶೆಟ್ಟಿ ಆಗ್ರಹಿಸಿದರು.

ನಗರದಲ್ಲಿ 43 ಸಾವಿರ ಮನೆಗಳು ಅನಧಿಕೃತವಾಗಿ ನಲ್ಲಿ ಸಂಪರ್ಕ ಪಡೆದಿವೆ. ಇವುಗಳನ್ನು ಸಕ್ರಮ ಮಾಡಿ, ನೀರಿನ ಕಂದಾಯ ಸಂಗ್ರಹಿಸಬೇಕು. ಜೊತೆಗೆ ವಾಣಿಜ್ಯ ಉಪಯೋಗಕ್ಕಾಗಿ ಎಷ್ಟು ಹೋಟೆಲ್‌, ಮಳಿಗೆಗಳಿಗೆ ನೀರಿನ ಸಂಪರ್ಕ ಕಲ್ಪಿಸಿಕೊಡಲಾಗಿದೆ ಎನ್ನುವ ಬಗ್ಗೆ ಮಾಹಿತಿ ನೀಡಬೇಕು ಎಂದು ಸದಸ್ಯ ಶಿವನಳ್ಳಿ ರಮೇಶ್‌ ಒತ್ತಾಯಿಸಿದರು.

ಆಯುಕ್ತ ಬಿ.ಎಚ್‌.ನಾರಾಯಣಪ್ಪ ಪ್ರತ್ರಿಕ್ರಿಯಿಸಿ, ‘ಪ್ರಸ್ತುತ ಪಾಲಿಕೆ ವ್ಯಾಪ್ತಿಯಲ್ಲಿ ವಾಣಿಜ್ಯ ಉಪಯೋಗಕ್ಕಾಗಿ ಪಡೆದ 800 ನಲ್ಲಿ ಸಂಪರ್ಕಗಳಿವೆ’ ಎಂದು ಮಾಹಿತಿ ನೀಡಿದರು.
ಇದಕ್ಕೆ ಅಸಮಾಧಾನಗೊಂಡ ಶಿವನಳ್ಳಿ ರಮೇಶ್‌, ವರ್ಷದಲ್ಲಿ ಕನಿಷ್ಠ 4,000 ನಲ್ಲಿಗಳಿಗೆ ವಾಣಿಜ್ಯ ಸಂಪರ್ಕ ಕಲ್ಪಿಸುವಂತೆ ಅಧಿಕಾರಿಗಳು ಸೂಚಿಸಬೇಕು ಎಂದು ಒತ್ತಾಯಿಸಿದರು.

ಅಧಿಕಾರಿಗಳು ಭ್ರಷ್ಟರಾಗಿದ್ದಾರೆ. ಕಾಮಗಾರಿಗಳು ವೇಗವಾಗಿ ನಡೆಯುತ್ತಿಲ್ಲ. ನಗರದ ಅಭಿವೃದ್ಧಿಗಾಗಿ ಇನ್ನೂ ಸಾವಿರ ಕೋಟಿ ಅನುದಾನ ತಂದು ಸುರಿದರೂ ಅಭಿವೃದ್ಧಿ ಸಮರ್ಪಕವಾಗಿ ನಡೆಯದ ಕೆಟ್ಟ ವ್ಯವಸ್ಥೆ ಇದೆ. ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕಾಗಿ ಎಷ್ಟು ಅರ್ಜಿಗಳು ಬಂದಿವೆ? ಈ ಬಗ್ಗೆ ಮಾಹಿತಿ ನೀಡಿ ಎಂದು ದಿನೇಶ್‌ ಶೆಟ್ಟಿ ಆಯುಕ್ತರನ್ನು ಕೇಳಿದರು.ಇದಕ್ಕೆ ಪ್ರತಿಕ್ರಿಯಿಸಿದ ಉಪ ಆಯುಕ್ತ ರವೀಂದ್ರ, ‘7,500 ಅರ್ಜಿಗಳು ಬಂದಿವೆ. ಇವುಗಳಲ್ಲಿ 3,554 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಕೇಂದ್ರ, ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳಿಂದ ಶೌಚಾಲಯ ನಿರ್ಮಾಣಕ್ಕೆ ಒಟ್ಟು ₹ 15 ಸಾವಿರ ಅನುದಾನ ನೀಡಲಾಗುತ್ತಿದೆ’ ಎಂದು ಹೇಳಿದರು.

9,014 ವೈಯಕ್ತಿಕ ಶೌಚಾಲಯವಿಲ್ಲ: ಪಾಲಿಕೆ ವ್ಯಾಪ್ತಿಯಲ್ಲಿ  9,014 ವೈಯಕ್ತಿಕ ಶೌಚಾಲಯ ಇಲ್ಲದೇ ಇರುವ ಮನೆಗಳಿವೆ. ಕೊಳಚೆ ಪ್ರದೇಶಗಳಲ್ಲಿನ ಜಾಗದ ಕೊರತೆ, ಅಸಮರ್ಪಕ ಒಳಚರಂಡಿ ವ್ಯವಸ್ಥೆಯಿಂದಾಗಿ ಶೌಚಾಲಯಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿಲ್ಲ ಎಂದು ನಾರಾಯಣಪ್ಪ ಸಭೆಯ ಗಮನಕ್ಕೆ ತಂದರು.

ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ಮೂರು ತಿಂಗಳೊಳಗೆ ವಿಲೇವಾರಿ ಮಾಡಬೇಕು ಎಂದು ಮೇಯರ್‌ ಸೂಚಿಸಿದರು.ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿದ ಅರ್ಜಿ ನೀಡಲು ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆ ಎಂದು ಬಿಜೆಪಿ ಸದಸ್ಯ ಡಿ.ಕೆ.ಕುಮಾರ್ ದೂರಿದರು.

ಲಂಚ ಪಡೆದಿರುವ ಬಗ್ಗೆ ದೂರು ಬಂದರೆ ಆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್‌ ಎಚ್ಚರಿಕೆ ನೀಡಿದರು. ಭಯೋತ್ಪಾದನೆ ವಿರೋಧಿ ದಿನಾಚರಣೆ ಅಂಗವಾಗಿ ಪಾಲಿಕೆ ಸದಸ್ಯರು, ಸಿಬ್ಬಂದಿ ಪ್ರಮಾಣ ಸ್ವೀಕಾರ ಮಾಡಿದರು.

ಅಧಿಕಾರಿ ಅಮಾನತಿಗೆ ಸದಸ್ಯರ ಆಗ್ರಹ
‘ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಕಿರಿಯ ಎಂಜಿನಿಯರ್ ಉಮಾಪತಿ ವಾರ್ಡ್‌ಗಳ ಭೇಟಿ ಮಾಡಿ,ಜನರ ಸಮಸ್ಯೆ ಆಲಿಸುತ್ತಿಲ್ಲ.ಸದಸ್ಯರ ಮಾತಿಗೂ ಅವರುಬೆಲೆ ನೀಡುವುದಿಲ್ಲ. ಹೀಗಾದರೆ ಸಾರ್ವಜನಿಕರ ಕೆಲಸಗಳು ನಡೆಯುವುದಾದರೂ ಹೇಗೆ? ಅವರನ್ನು ಅಮಾನತು ಮಾಡಬೇಕು’ ಎಂದು ಎಂ.ಹಾಲೇಶ್‌ ಸೇರಿದಂತೆ ಹಲವರು ಆಗ್ರಹಿಸಿದರು.

ಹಕ್ಕುಪತ್ರ ನೀಡಲು ಒಪ್ಪಿಗೆ
ಸುಮಾರು 50 ವರ್ಷಗಳಿಂದ ಪಾಲಿಕೆ ವ್ಯಾಪ್ತಿಯ ಚೌಡೇಶ್ವರಿ ನಗರ, ಗಾಂಧಿನಗರ (ಚೌಡೇಶ್ವರಿ ದೇವಸ್ಥಾನದ ಬಳಿ) ಕಾರ್ಲ್‌ಮಾರ್ಕ್ಸ್‌ ನಗರ, ಶಿವನಗರ, ಇಂದಿರಾನಗರ, ಆಜಾದ್‌ ನಗರ ಸೇರಿದಂತೆ ನಗರದ  29 ಪ್ರದೇಶಗಳಲ್ಲಿನ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ 3,958 ಮನೆಗಳಿವೆ. ಅವುಗಳ ಮಾಲೀಕರಿಗೆ ಹಕ್ಕುಪತ್ರ ವಿತರಣೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಪಾಲಿಕೆ ಸದಸ್ಯರು ಒಪ್ಪಿಗೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT