ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೈನುಗಾರಿಕೆಯಿಂದ ವಾರ್ಷಿಕ ₹4 ಲಕ್ಷ ಗಳಿಕೆ’

Last Updated 21 ಮೇ 2017, 6:13 IST
ಅಕ್ಷರ ಗಾತ್ರ

ಭಾಲ್ಕಿ: ಕೃಷಿಯಲ್ಲಿ ಲಾಭವಿಲ್ಲ ಎಂದು ಹೆಚ್ಚಿನ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಅಲ್ಲದೆ, ಮಳೆಯನ್ನೇ ಅವಲಂಬಿಸಿ  ಒಣ ಕೃಷಿ ಮಾಡುವ ಬಹುತೇಕ ರೈತರು ಅತಿವೃಷ್ಟಿ, ಅನಾವೃಷ್ಟಿ, ಕೀಟಬಾಧೆ ಸೇರಿದಂತೆ  ಒಂದಿಲ್ಲೊಂದು ಸಮಸ್ಯೆಗಳಿಂದ ಪ್ರತಿವರ್ಷ ಉತ್ತಮ ಫಲ ಪಡೆಯಲು ಸಾಧ್ಯವಾಗದೆ ಕಷ್ಟದಲ್ಲಿದ್ದಾರೆ.

ಹೀಗಿರುವಾಗ ಕೃಷಿಯ ಜತೆಗೆ ಹೈನುಗಾರಿಕೆ ಮಾಡಿ ಕೈತುಂಬಾ ಸಂಪಾದಿಸಿ ಇತರರಿಗೆ ಮಾದರಿಯಾಗಿದ್ದಾರೆ ತಾಲ್ಲೂಕಿನ ನಿಡೇಬನ ಗ್ರಾಮದ ಪ್ರಗತಿಪರ ರೈತ ಗಣಪತಿ ಬಸವಣಪ್ಪಾ ಮೂಲಗೆ.

‘ಸ್ವಂತ 2 ಎಕರೆ ಹೊಲ ಸೇರಿದಂತೆ ವಾರ್ಷಿಕ ಇಂತಿಷ್ಟು ಹಣದ ಮೇಲೆ ಇತರರಿಂದ ಪಡೆದಿರುವ ಹೊಲದಲ್ಲಿ ತೊಗರಿ, ಉದ್ದು, ಸೋಯಾ, ಜೋಳ, ಕಡಲೆ ಬೆಳೆಯುತ್ತಿದ್ದೆ. ಆದರೆ, ನಿರೀಕ್ಷಿಸಿದಷ್ಟು ಫಸಲು ಬರುತ್ತಿರಲಿಲ್ಲ. ಆಗ ತಂದೆ ನಡೆಸಿಕೊಂಡು ಬಂದಿರುವ ಹೈನುಗಾರಿಕೆಗೆ ಹೆಚ್ಚು ಒತ್ತು ನೀಡಿದೆ. ಅದು ಕೈ ಹಿಡಿಯಿತು’ ಎಂದು  ಗಣಪತಿ ಮೂಲಗೆ ನುಡಿಯುತ್ತಾರೆ.

‘16 ಎಮ್ಮೆ, 8 ಆಕಳು, 12 ಕರುಗಳು ಸೇರಿದಂತೆ ಒಟ್ಟು 40 ಜಾನುವಾರುಗಳಿವೆ. ಅವುಗಳಲ್ಲಿ ಗೌಳಾರ್‌, ಮುರಾ, ದೇಶಿ, ಜೆರ್ಸಿ, ನಾಗಪುರ ಎಮ್ಮೆ ತಳಿಗಳಿವೆ. ಪ್ರತಿದಿನ ದನಗಳಿಗೆ 400 ಲೀಟರ್‌ ನೀರು, 150 ಸುಡು ಹಸಿರು ಹುಲ್ಲು, ಹೆಸರು, ಸೋಯಾ, ಮೆಕ್ಕೆ ಜೋಳ, ಹತ್ತಿ ಕಾಳು, ಬಾರ್ಲಿ ಕೊಡುತ್ತೇನೆ. ಆಕಳುಗಳು ಹೆಚ್ಚಿನ ಹಾಲು ಕೊಡಲಿ ಎಂದು ಗೌಧಾರಾ ಶಕ್ತಿ ಪೌಡರ್‌ ನಿತ್ಯ ಕೊಡುತ್ತೇನೆ. ಅಲ್ಲದೆ, ದನಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗಬಾರದು ಎಂದು ಮನೆಯಲ್ಲಿಯೇ ಕೊಳವೆ ಬಾವಿ ಕೊರೆಸಲಾಗಿದೆ’ ಎಂದರು.

‘ಬೆಳಿಗ್ಗೆ, ಸಂಜೆ ಸೇರಿ ಪ್ರತಿದಿನ 60 ಲೀಟರ್‌ ಹಾಲು ಕೊಡುತ್ತವೆ. ಹಾಲನ್ನು ಡೇರಿಗೆ ಕೊಡದೆ ಭಾಲ್ಕಿಯ ಹೋಟೆಲ್‌, ಮನೆಗಳಿಗೆ ಪ್ರತಿ ಲೀಟರ್‌ಗೆ ₹ 45 ರಿಂ 50 ದರದಲ್ಲಿ ನೀಡುತ್ತೇನೆ. ದಿನಕ್ಕ ₹2,700 ಆದಾಯ ಬರುತ್ತದೆ. ಅದರಲ್ಲಿ ಅರ್ಧದಷ್ಟು ಹಣ ದನಗಳ ನಿರ್ವಹಣೆಗೆ ಖರ್ಚು ಮಾಡುತ್ತೇನೆ.

ಖರ್ಚು ಕಳೆದು ನಿವ್ವಳ ₹ 1,250 ರಿಂದ 1,350 ಉಳಿಯುತ್ತದೆ. ವಾರ್ಷಿಕ ಒಂದೂವರೆ ಲಕ್ಷ  ಸಗಣಿ ಮಾರಾಟದಿಂದ ಸಂಪಾದಿಸುತ್ತೇನೆ. ಹೈನುಗಾರಿಕೆಗೆ ನಾನು ಮೀಸಲಿಡುವುದು ದಿನದ ಕೆಲವು ಗಂಟೆ ಮಾತ್ರ. ಉಳಿದ ಸಮಯದಲ್ಲಿ ಹೊಲದಲ್ಲಿ ಹೆಸರು, ಉದ್ದು, ಕಬ್ಬು ಸೇರಿದಂತೆ ಇತರ ಬೆಳೆಗಳನ್ನು ಬೆಳೆಯುತ್ತೇನೆ’ ಎಂದು ಹೇಳಿದರು.

* * 
ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪಶು ವೈದ್ಯಕೀಯ ಇಲಾಖೆಯಿಂದ ಅಗತ್ಯ ಸಲಕರಣೆ,  ವೈದ್ಯಕೀಯ ಸೇವೆ ನೀಡಬೇಕು

ಗಣಪತಿ ಬಸವಣಪ್ಪಾ ಮೂಲಗೆ
ಪ್ರಗತಿಪರ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT