ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಶಿಷ್ಯರ ಅಭಿಮಾನದ ಸಮಾಗಮ

Last Updated 22 ಮೇ 2017, 5:17 IST
ಅಕ್ಷರ ಗಾತ್ರ

ಚಿತ್ರದುರ್ಗ: ಗುರುಗಳನ್ನು ನೋಡಲು ಶಿಷ್ಯರು ಅಭಿಮಾನದಿಂದ ಹಾತೊರೆಯುತ್ತಿದ್ದರು. ಸುಮಾರು 26 ವರ್ಷಗಳ ಬಳಿಕ ಸಮಾಗಮಗೊಂಡ ಗುರು ಶಿಷ್ಯರು ಸಂತಸದಲ್ಲಿ ತೇಲಾಡಿದರು. ಬದುಕಿನ ಮೌಲ್ಯಯುತ ಗುಣಗಳನ್ನು ಧಾರೆ ಎರೆದ ಗುರುಗಳಿಗೆ ಹಳೆಯ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿದರು .

ಹೀಗೊಂದು ಹೃದಯಸ್ಪರ್ಶಿ ಕಾರ್ಯಕ್ರಮಕ್ಕೆ ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ಸಂಪಿಗೆ ಸಿದ್ಧೇಶ್ವರ ಪ್ರೌಢಶಾಲೆ ಸಾಕ್ಷಿಯಾಯಿತು. ಶಾಲೆ ಆವರಣದಲ್ಲಿ ಭಾನುವಾರ ನಡೆದ ಗುರು - ಶಿಷ್ಯರ ಸಮಾಗಮ ನಡೆಯಿತು.

ಬಹಳ ವರ್ಷಗಳ ನಂತರ ಸೇರಿಕೊಂಡ ಸ್ನೇಹಿತರು ಕೂಡ ತಮ್ಮ ಶಾಲಾ ದಿನಗಳ ತುಂಟಾಟ, ಜಗಳ, ಪ್ರೀತಿ, ವಿಶ್ವಾಸ, ಬಾಂಧವ್ಯಗಳನ್ನು ಹಂಚಿಕೊಂಡ ಆನಂದದ ಕ್ಷಣಗಳಿಗೆ ಈ ಕಾರ್ಯಕ್ರಮ ಪರಿಪೂರ್ಣ ವೇದಿಕೆಯಾಯಿತು. ಅಷ್ಟೇ ಅಲ್ಲದೆ, ಒಂದೇ ವೇದಿಕೆಯಲ್ಲಿ ತಮಗೆ ಪಾಠ ಕಲಿಸಿಕೊಟ್ಟ ಎಲ್ಲಾ ಶಿಕ್ಷಕರನ್ನು ಸನ್ಮಾನಿಸುವ ಮೂಲಕ ಶಿಷ್ಯವೃಂದ ಗುರುಗಳನ್ನು ತಮ್ಮ ಮನದ ಮಾತುಗಳಿಂದಲೇ ಸ್ಮರಿಸಿಕೊಂಡರು.

‘ಈ ಶಾಲೆಯನ್ನು ಮರೆಯದೆ ವಿದ್ಯೆ ಕಲಿಸಿಕೊಟ್ಟ ಗುರುಗಳನ್ನು ಕರೆಸಿ ಸನ್ಮಾನಿಸುತ್ತಿರುವುದು ಸಂತಸದ ವಿಷಯ. ಹಳೆಯ ವಿದ್ಯಾರ್ಥಿಗಳ ಸಂಘವನ್ನು ರಚಿಸಿ ಎಲ್ಲರ ವಿವರ ಸಂಗ್ರಹಿಸಿಡುವ ಕೆಲಸ ಆಗಬೇಕಿದೆ. ಶಾಲೆಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮಗಳಿಗೆ ನಿಮ್ಮನ್ನು ಸಂಪರ್ಕಿಸಲು ಸಹಕಾರಿ ಆಗಲಿದೆ.

ಮುಂದಿನ ದಿನಗಳಲ್ಲಿ ಸಂಘದ ಮೂಲಕ ಉತ್ತಮ ಕೆಲಸ ಕಾರ್ಯ ನಡೆಸಲು ಅನುಕೂಲ ಆಗಲಿದೆ’ ಎಂದು ಶಾಲಾ ಸ್ಥಳೀಯ ಸಲಹಾ ಸಮಿತಿ ನಿರ್ದೇಶಕರೂ ಆದ ನಿವೃತ್ತ ಶಿಕ್ಷಕ ಆರ್.ಮಹೇಶ್ವರಪ್ಪ ಹೇಳಿದರು.

‘ಮನುಷ್ಯರೆಲ್ಲರದೂ ಒಂದೇ ಜಾತಿ. ಉತ್ತಮ ಗುಣಗಳೇ ನಮಗೆಲ್ಲರಿಗೂ ಜೀವನದ ದಾರಿ ದೀಪ. ತಂದೆ, ತಾಯಿ, ಗುರುಗಳನ್ನು ಪ್ರೀತಿಸಿ ಅವರ ಮಾರ್ಗದರ್ಶನದಲ್ಲಿ ನಡೆಯುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದರೆ ಈ ಮಾನವ ಜನ್ಮ ಸಾರ್ಥಕ. ಈ ಅಂಶಗಳನ್ನು ನಾವೆಲ್ಲ ಎಂದಿಗೂ ಮರೆಯಬಾರದು’ ಎಂದು ನಿವೃತ್ತ ಶಿಕ್ಷಕಿ ಟಿ.ಗೌರಮ್ಮ ಅಭಿಪ್ರಾಯಪಟ್ಟರು.

‘ಅಧ್ಯಕ್ಷನಾಗಿ ನಗರಸಭೆಯಿಂದ ವಿವಿಧ ಅಭಿವೃದ್ಧಿ ಕಾರ್ಯ ಕೈಗೊಂಡಿರಬಹುದು. ಆದರೆ, ಗುರುಗಳನ್ನು ಒಂದೆಡೆ ಸೇರಿಸಿ ಹಳೆಯ ಸ್ನೇಹಿತರೊಂದಿಗೆ ಸನ್ಮಾನಿಸುತ್ತಿರುವುದು ನನಗೆ ಹೆಚ್ಚಿನ ಖುಷಿ ತಂದು ಕೊಟ್ಟಿದೆ’ ಎಂದು ನಗರಸಭೆ ಅಧ್ಯಕ್ಷ ಮಂಜುನಾಥ ಗೊಪ್ಪೆ ಅಭಿಪ್ರಾಯಪಟ್ಟರು. 

ಶಾಲಾ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಎಂ.ಬಿ.ಚನ್ನಬಸವಗೌಡ್ರು, ನಿವೃತ್ತ ಮುಖ್ಯಶಿಕ್ಷಕ ಎಚ್.ಎಸ್.ಸಿದ್ದಯ್ಯ, ಚಿತ್ರಕಲಾ ಶಿಕ್ಷಕ ಕೆ.ಆರ್.ಶಂಕರಪ್ಪ, ನಿವೃತ್ತ ಶಿಕ್ಷಕರಾದ ಸಿ.ಚನ್ನಬಸಪ್ಪ, ಎಂ.ಜಬೀವುಲ್ಲಾ, ನಿವೃತ್ತ ದೈಹಿಕ ಶಿಕ್ಷಕ ಎಸ್.ಆರ್.ಚಂದ್ರಶೇಖರಯ್ಯ ಮಾತ ನಾಡಿದರು. ಶಾಲೆಯ ಹಳೆ ವಿದ್ಯಾರ್ಥಿಗಳಾದ ಹಾಸ್ಯ ಸಾಹಿತಿ ಪಿ.ಜಗನ್ನಾಥ್, ದೇವೇಂದ್ರ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ನಾಗರಾಜ, ಎಲ್.ಚಂದ್ರಶೇಖರ, ಪ್ರಭುಪ್ರಸಾದ್, ಉಮಾಶಂಕರ, ಲಕ್ಷ್ಮೀ, ಶಾರದ, ಶಬೀನಾ, ಸಿ.ಎನ್.ಪ್ರಕಾಶ್, ಜಿ.ಚಂದ್ರಶೇಖರ, ಎಸ್.ಬಿ.ರವಿ ಕುಮಾರ್, ಶ್ರೀಕಾಂತ, ಸೋಮಶೇಖರ, ಮಲ್ಲಿಕಾರ್ಜುನ, ಸಂಪಿಗೆ ಸಿದ್ದೇಶ ಸೇರಿದಂತೆ 70ಕ್ಕೂ ಹೆಚ್ಚು ಸ್ನೇಹಿತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

‘ಅಭಿವೃದ್ಧಿಗೆ ಕ್ರಮ
ಮುಂದಿನ ದಿನಗಳಲ್ಲಿ ಗುರುಗಳ ಸಲಹೆಯಂತೆ ಹಳೆಯ ವಿದ್ಯಾರ್ಥಿಗಳ ಸಂಘವನ್ನು ಮತ್ತಷ್ಟು ಸಂಘಟಿಸಿ ಉತ್ತಮ ಕಾರ್ಯ ಕೈಗೊಳ್ಳಲಾಗುವುದು. ಈ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಕಲಿಕೆಗಾಗಿ ಹತ್ತು ಲ್ಯಾಪ್‌ಟಾಪ್‌ಗಳನ್ನು ನಗರಸಭೆಯ ಸಾಮಾನ್ಯ ನಿಧಿಯಿಂದ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಲೆಯ ಹಳೆ ವಿದ್ಯಾರ್ಥಿಯೂ ಆದ ನಗರಸಭೆ ಅಧ್ಯಕ್ಷ ಮಂಜುನಾಥ್ ಗೊಪ್ಪೆ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT