ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಾ ಮಾಧ್ಯಮ; ಹೋರಾಟ ಅಗತ್ಯ

ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಡಾ.ಮನುಬಳಿಗಾರ್‌ ಅಭಿಮತ
Last Updated 22 ಮೇ 2017, 6:09 IST
ಅಕ್ಷರ ಗಾತ್ರ

ಪಾಂಡವಪುರ: ‘ಭಾಷಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಎಲ್ಲ ಸಂಸದರು ಸಂಸತ್ತಿನಲ್ಲಿ ದನಿ ಎತ್ತಬೇಕು. ಅಲ್ಲದೆ, ಭಾಷಾ ಮಾಧ್ಯಮ ಪರವಾದ ಸಂವಿಧಾನಾತ್ಮಕ ಕಾಯ್ದೆ ರೂಪಿಸಲು ಹೋರಾಟ ನಡೆಸಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಡಾ.ಮನುಬಳಿಗಾರ್‌ ಆಗ್ರಹಿಸಿದರು. ಪಟ್ಟಣದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಭವನ ಉದ್ಫಾಟಿಸಿ ಅವರು ಮಾತನಾಡಿದರು.

ಸುಪ್ರೀಂಕೋರ್ಟ್ ತೀರ್ಪು ಪ್ರಾದೇಶಿಕ ಭಾಷೆ ಬೆಳವಣಿಗೆಗೆ ಮಾರಕವಾಗಿದೆ. ಈ ಸಂಬಂಧ  ಕಸಾಪ ಎಲ್ಲ ಪಕ್ಷದ ಮುಖಂಡರನ್ನು ಭೇಟಿ ಮಾಡಿ ಭಾಷಾ ಮಾಧ್ಯಮದ ಉಳಿವಿನ ಬಗ್ಗೆ ಚರ್ಚಿಸಲಾಗಿದೆ. ಪಕ್ಷಾತೀತವಾಗಿ ಎಲ್ಲ ಸಂಸದರು ಸಂಸತ್ತಿನಲ್ಲಿ ಹೋರಾಟ ನಡೆಸುವಂತೆ ಮನವಿ ಮಾಡಲಾಗಿದೆ ಎಂದರು.

ಬೆಂಗಳೂರಿನಲ್ಲಿ ಭಾಷೆಗೆ ಕುತ್ತು: ರಾಜಧಾನಿ ಬೆಂಗಳೂರಿನಲ್ಲಿ ಪರಭಾಷೆಯೇ ಪಾರುಪತ್ಯ ಮೆರೆದಿದೆ. ಕನ್ನಡಿಗರು ಸಹ ಆಂಗ್ಲ ಭಾಷೆಯಲ್ಲಿಯೇ ಮಾತನಾಡುತ್ತಾರೆ. ಹೀಗಿರುವಾಗ ಇತರೆ ಭಾಷಿಕರು ಕನ್ನಡ ಕಲಿಯುವುದೇ ಇಲ್ಲ. ಇಂತಹ ಸ್ಥಿತಿಯಲ್ಲಿ ಕನ್ನಡ ಮಾತನಾಡು ವವರು ಪರಕೀಯರಂತಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಕನ್ನಡ ಉಳಿದಿರುವುದೇ ಮಂಡ್ಯದಲ್ಲಿ: ಮಂಡ್ಯ ಜಿಲ್ಲೆಯ ಜನರು ಆಡು ಭಾಷೆಯಲ್ಲಿಯೇ ಸಹಜವಾಗಿ ಕನ್ನಡ ಮಾತನಾಡುತ್ತಾರೆ, ಸಂಪರ್ಕಿಸುತ್ತಾರೆ, ವ್ಯವಹರಿಸುತ್ತಾರೆ. ಇದರಿಂದಾಗಿ ಪರಭಾಷಿಕರು ಕೂಡ ಕನ್ನಡದಲ್ಲೇ ಮಾತನಾಡುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ. ಹೀಗಾಗಿ, ಕನ್ನಡ ಭಾಷೆ ಇಲ್ಲಿ ಅಜರಾಮರವಾಗಿ ಉಳಿದಿದೆ.

ಜತೆಗೆ ಇಲ್ಲಿ ಕನ್ನಡ ಸಾಹಿತ್ಯ ಕಾರ್ಯಕ್ರಮಗಳು ಕೂಡ ಯಶಸ್ವಿಯಾಗಿ ನಡೆಯುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೃಷಿ ಜಿಲ್ಲೆಯಾದ ಮಂಡ್ಯ ಜಿಲ್ಲೆಯಲ್ಲಿ ಸಾಹಿತ್ಯದ ಜತೆಗೆ ಕೃಷಿ ಮತ್ತು ಸಹಕಾರಿ ಸಮ್ಮೇಳನ ಆಯೋಜಿಸಿ ರೈತರನ್ನು ಜಾಗೃತಿಗೊಳಿಸುವ ಅಗತ್ಯವಿದೆ. ಈ ಕಾರ್ಯಕ್ರಮಕ್ಕೆ ರಾಜ್ಯ ಘಟಕದಿಂದ ವಿಶೇಷ ಅನುದಾನ ನೀಡಲಾಗುವುದು ಎಂದು ತಿಳಿಸಿದರು.

ಜ್ಞಾನಬಂಧು ವಿದ್ಯಾಲಯದ ಸಂಸ್ಥಾಪಕ ಎಂ.ಆರ್.ಕುಮಾರಸ್ವಾಮಿ ಮಾತನಾಡಿ, ಆರ್‌ಟಿಇ ಕಾಯ್ದೆ ಯಿಂದಲೇ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಕಾರ ಸುಮಾರು ರಾಜ್ಯದಲ್ಲಿ 4,800 ಮಕ್ಕಳ ಸರ್ಕಾರಿ ಶಾಲೆ ತೊರೆದಿದ್ದಾರೆ. ಹೀಗಾಗಿ, ಸರ್ಕಾರ ಕೂಡಲೇ ಆರ್‌ಟಿಇ ಕೈಬಿಟ್ಟು ಸರ್ಕಾರಿ ಶಾಲೆ ಬಲಗೊಳಿಸಬೇಕು ಎಂದು ಒತ್ತಾಯಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡಿ, ರೈತರ ನಾಡಿನಲ್ಲಿ ರೈತರನ್ನು ಉಳಿಸಿ ಎನ್ನುವುದು ಮತ್ತು ಕನ್ನಡ ನಾಡಿನಲ್ಲಿ ಕನ್ನಡ ಉಳಿಸಿ ಎನ್ನುವುದು ವಿಪರ್ಯಾಸವೇ ಸರಿ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಖಾಸಗೀಕ ರಣಗೊಳ್ಳುತ್ತಿರುವುದು ಅಪಾಯದ ಸೂಚನೆ ಎಂದು ಕಳವಳ ವ್ಯಕ್ತಪಡಿಸಿದರು.

ಸಂಸದ ಸಿ.ಎಸ್.ಪುಟ್ಟರಾಜು ದಾನಿಗಳ ನಾಮಫಲಕ ಉದ್ಫಾಟಿಸಿದರು. ಉಪ ವಿಭಾಗಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಕೆ.ರವಿ ಕುಮಾರ್, ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ಉಪಾಧ್ಯಕ್ಷ ಎಚ್.ಆರ್.ಧನ್ಯಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ರಮೇಶ್‌, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ.ರೇವಣ್ಣ, ನಿವೃತ್ತ ಪ್ರಾಂಶುಪಾಲ ನೀ.ಗಿರೀಗೌಡ, ಪುರಸಭೆ ಅಧ್ಯಕ್ಷೆ ಎಸ್.ಕೆ.ವಿನುತಾ, ತಾ.ಪಂ.ಅಧ್ಯಕ್ಷೆ ರಾಧಮ್ಮ, ಜಿ.ಪಂ.ಸದಸ್ಯೆ ಅನುಸೂಯ, ಬಿಇಒ ಬಿ.ಚಂದ್ರಶೇಖರ್‌ ಇದ್ದರು.

ರಾಜ್ಯ ಸರ್ಕಾರಕ್ಕೆ ಸರೋಜಿನಿ ಮಹಿಷಿ ಪರಿಷ್ಕತ ವರದಿ ಸಲ್ಲಿಕೆ
ಪಾಂಡವಪುರ:
ರಾಜ್ಯ ಸರ್ಕಾರಕ್ಕೆ ಪರಿಷ್ಕೃತ ಸರೋಜಿನಿ ಮಹಿಷಿ ವರದಿ ಸಲ್ಲಿಸಿದ್ದು, ಸರ್ಕಾರ ಅನುಷ್ಠಾನಗೊಳಿಸುವ ವಿಶ್ವಾಸವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಡಾ.ಮನು ಬಳಿಗಾರ ಇಲ್ಲಿ ಭಾನುವಾರ ತಿಳಿಸಿದರು.

ವರದಿ ಪರಿಷ್ಕರಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ.ಸಿದ್ದರಾಮಯ್ಯ ನೇತೃತ್ವದಲ್ಲಿ ಸಲ್ಲಿಸಲಾಗಿದೆ. ಅನುಷ್ಠಾನದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ರಾಜ್ಯವು ಭಾಷೆ ಜತೆಗೆ ಗಡಿ ಸಮಸ್ಯೆಯನ್ನೂ ಎದುರಿಸುತ್ತಿದ್ದು, ಭೌಗೋಳಿಕ ವಿಸ್ತೀರ್ಣತೆಯೂ ಕ್ಷೀಣಿಸುತ್ತಿದೆ. ಮಹಾಜನ ವರದಿ ರಾಜ್ಯಕ್ಕೆ ಸಮಾಧಾನಕರವಾದ ವಿಷಯವಾಗಿತ್ತು. ಮಹಾರಾಷ್ಟ್ರ ಈ ವರದಿ ಪರವಾಗಿದ್ದು, ಅದರ ಜಾರಿಗೆಗೆ ಒತ್ತಾಯಿಸಿತ್ತು. ಆದರೆ, ಜಾರಿಗೊಂಡ ನಂತರ ಅದು ವಿರೋಧಿಸಿದ್ದು ವಿಪರ್ಯಾಸ ಎಂದು ಹೇಳಿದರು.

ನ್ಯಾಯಾಲಯಗಳು ಪ್ರಾಂತ್ಯ ದೇಸಿ ಭಾಷೆ ಪರವಾಗಿಲ್ಲ. ಭಾಷಾ ಮಾಧ್ಯಮದ ವಿಚಾರವಾಗಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ರಾಜ್ಯಕ್ಕೆ ಮಾರಕವಾಗಿದೆ. ಇಂತಹ ತೀರ್ಪುಗಳು ಪ್ರಾದೇಶಿಕ ಭಾಷೆ ಗಳನ್ನು ಕೊಲ್ಲುತ್ತವೆ. ಎಲ್ಲ ಸಂಸದರು ಈ ತೀರ್ಪಿನ ವಿಚಾರವಾಗಿ ಗಂಭೀರವಾಗಿ ಚಿಂತಿಸಬೇಕಿದೆ.

ಮಾತೃಭಾಷೆಯಲ್ಲಿ ಶಿಕ್ಷಣ ನೀಡುವ ವಿಚಾರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಿ ಸಂವಿಧಾನಾತ್ಮಕವಾದ ಬದಲಾವಣೆ ತರುವಲ್ಲಿ ಹೋರಾಟ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಎಲ್ಲ ಮುಖಂಡರನ್ನು ಭೇಟಿ ಮಾಡಿ ಮನವಿ ಮಾಡಿದೆ ಎಂದರು.

ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಿರುವುದು ಸರಿಯಷ್ಟೆ. ಹೊಸ ತಲೆಮಾರಿಗೆ ಹಳಗನ್ನಡ ಮತ್ತು ನಡುಗನ್ನಡ ಪರಿಚಯಿಸದಿದ್ದರೆ ಭಾಷೆ ಉಳಿಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ವಿಚಾರಸಂಕಿರಣ ಮತ್ತು ಕಮ್ಮಟ ಆಯೋಜಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

*
ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳಿಗೆ ಉದ್ಯೋಗದಲ್ಲಿ ಶೇ  30ರಷ್ಟು ಮೀಸಲಾತಿ ನೀಡಬೇಕು ಹಾಗೂ ಸಮಾನ ಶಿಕ್ಷಣ ಜಾರಿಗೊಳಿಸಬೇಕು.
-ಕೆ.ಎಸ್.ಪುಟ್ಟಣ್ಣಯ್ಯ,
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT