ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿ ರೈತರೇ ಎಲ್ಲಾ; ಅನ್ಯ ವೃತ್ತಿಗಳ ಸದ್ದಿಲ್ಲ

Last Updated 22 ಮೇ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಕುಂಬಳಗೋಡು ಕ್ರಾಸ್‌ನಿಂದ ಎಡಕ್ಕೆ ತಿರುವು ಪಡೆದು, ನಾಲ್ಕಾರು ಕಿ.ಮೀ ಕ್ರಮಿಸಿದ್ದೆವಷ್ಟೆ. ಆಗಿನ್ನೂ ಸೂರ್ಯ ಉದಯಿಸುವ ಹೊತ್ತು. ಬಿಸಿಲಿನ ಮಾತೇ ಇರಲಿಲ್ಲ. ಆದರೆ ನಾವು ತುಳಿಯುತ್ತಿದ್ದ ಹಾದಿ ಮಾತ್ರ ನಾಟಕೀಯವೆಂಬಂತೆ ಬದಲಾಗುತ್ತಿತ್ತು. ಆವರೆಗೆ ನಾವು ಬಂದಿದ್ದ ಹೆದ್ದಾರಿಯ ಇಕ್ಕೆಲಗಳಲ್ಲಿ ಮರಗಳೇ ಇರಲಿಲ್ಲ. ತಿರುವು ಪಡೆದಿದ್ದ ಗ್ರಾಮೀಣ ರಸ್ತೆಯಲ್ಲೂ ಮರಗಳ ಸುಳಿವಿರಲಿಲ್ಲ. ಆದರೆ ಇದ್ದಕ್ಕಿದ್ದಂತೆ ರಸ್ತೆಗೆ ಚಪ್ಪರ ಹಾಕಿದಂತೆ ಸಾಲು ಮರಗಳು ಎದುರಾದವು. ಗಾಡಿ ವೇಗವಾಗಿದ್ದರಿಂದ ಯಾವೆಲ್ಲಾ ಮರಗಳಿದ್ದವು ಎಂಬುದು ತಿಳಿಯಲಿಲ್ಲ.

ಈ ಹಿಂದೆ ಸಿಕ್ಕಿದ್ದ ಐದಾರು ಹಳ್ಳಿಗಳು ಇನ್ನೂ ತೂಕಡಿಸುತ್ತಿದ್ದವು. ಈ ಮರಗಳ ಸಾಲು ದಾಟುತ್ತಿದ್ದಂತೆ ಎದುರಾದ ಸಣ್ಣ-ಪುಟ್ಟ ಹಳ್ಳಿಗಳೆಲ್ಲಾ ತೀರಾ ಚಟುವಟಿಕೆಯಿಂದ ಇದ್ದವು. ಅದನ್ನೆಲ್ಲಾ ಚಕಿತರಾಗಿ ನೋಡುತ್ತಿದ್ದ ವೇಳೆಯಲ್ಲೇ ಒಂದೆರಡು ಮೊಪೆಡ್‌ಗಳು ಬರ್ರ್‌ ಎಂದು ನಮ್ಮನ್ನು ಹಿಂದಿಕ್ಕಿ ಹೋದವು. ಅವುಗಳ ಸವಾರರೆಲ್ಲಾ ತೀರಾ ಧಾವಂತದಲ್ಲಿದ್ದಂತೆ ಅನ್ನಿಸಿತು. ಅಷ್ಟರಲ್ಲೇ ಹಾಲಿನ ಕ್ಯಾನ್‌ಗಳು ಜೋತುಬಿದ್ದಿದ್ದ ಮತ್ತಷ್ಟು ಮೊಪೆಡ್‌ಗಳು ನಮ್ಮನ್ನು ಹಿಂದಿಕ್ಕಿದವು. ಅದು ನಮಗೆ ಅಪರಿಚಿತ ರಸ್ತೆಯಾದ್ದರಿಂದ ನಮ್ಮ ಸವಾರಿ ನಿಧಾನವಾಗಿ ಹೊರಟಿತ್ತು. ಟ್ರೈಲರ್‌ ಎಳೆಯುತ್ತಿದ್ದ ಟಿಲ್ಲರ್‌ ಒಂದು ‘ಜಾಗ ಬಿಡಿ’ ಎಂದು ನಮ್ಮ ಹಿಂದಿನಿಂದ ಅರಚತೊಡಗಿತು. ಅರೆ, ಅದರಲ್ಲೂ ಏಳೆಂಟು ಹಾಲಿನ ಕ್ಯಾನ್‌ಗಳು! ಸರಿಸುಮಾರು ದೊಡ್ಡದೆನ್ನಬಹುದಾದ ಊರೊಂದು ಎದುರಾಯಿತು. ಅದು ಗೋಣಿಪುರ. ನಮ್ಮನ್ನು ಹಿಂದಿಕ್ಕಿದ್ದ ಮೊಪೆಡ್, ಟಿಲ್ಲರ್‌ಗಳೆಲ್ಲವೂ ಆ ಊರ ಮಧ್ಯದಲ್ಲಿದ್ದ ಹಾಲಿನ ಡೇರಿ ಎದುರು ನಿಂತಿದ್ದವು. ಹತ್ತಾರು ಜನ ಸರದಿಗಾಗಿ ಕಾದು ನಿಂತಿದ್ದರು, ಡೇರಿಗೆ ಹಾಲು ಹಾಕಲು.

ನಮ್ಮ ಗುರಿಯಾದ ತಿಪ್ಪೂರು ಇನ್ನೂ ಮುಂದೆ ಇತ್ತು. ಹೀಗಾಗಿ ಗಾಡಿ ಬಿಟ್ಟೆವು. ತಿಪ್ಪೂರಿನ ಹಾದಿಯೂ ಗೋಣಿಪುರಕ್ಕಿಂತ ಭಿನ್ನವಾಗೇನೂ ಇರಲಿಲ್ಲ. ಅಲ್ಲೂ ಡೇರಿಯ ಎದುರು ಜನ ಸಾಲುಗಟ್ಟಿ ನಿಂತಿದ್ದರು. ಜತೆಗೆ, ಟ್ರ್ಯಾಕ್ಟರ್‌–ಟಿಲ್ಲರ್‌ಗಳು ಆಗಲೇ ಹೊಲದತ್ತ ಹೊರಟಿದ್ದವು. ಇಲ್ಲಿ ಮೊಪೆಡ್‌ಗಳಲ್ಲೂ ರಾಶಿ–ರಾಶಿ ಹುಲ್ಲನ್ನು ಸಾಗಿಸುತ್ತಿದ್ದರು.

ನಾವು ಕೇಳುತ್ತಿದ್ದ ಮಾಹಿತಿ ನೀಡಲು ಅಲ್ಲಿ ಯಾರಿಗೂ ಅಕ್ಷರಶಃ ಬಿಡುವು ಇರಲಿಲ್ಲ. ಆಗಲೇ ಲುಂಗಿ ಕಟ್ಟಿ, ಹೊಲದತ್ತ ಹೊರಟಿದ್ದ ನಾರಾಯಣಪ್ಪನವರು ನಮ್ಮೊಂದಿಗೆ ಮಾತನಾಡಲು ಸಿದ್ಧರಾದರು.

ಆ ವೇಳೆಗೆ ತಲೆ ಕೆರೆಯುತ್ತಾ ಬಂದ ವ್ಯಕ್ತಿಯೊಬ್ಬರು, ‘ಅಣ್ಣ ಎದ್ದಿದ್ದು ಲೇಟ್‌ ಆಯ್ತು’ ಎಂದರು. ಅದಕ್ಕೆ ನಾರಾಯಣಪ್ಪನವರು, ‘ಈಗ್ಲೇ ಲೇಟ್ ಮಾಡಿದ್ಯ. ಇನ್ನೂ ಇಲ್ಲೇ ನಿಂತ್ಕೊಂಡು ಏನ್‌ ಮಾಡ್ತಿದ್ಯಾ? ಓಡು ಹೊಲದತ್ರ. ಎಲ್ಲಾ ಆಗ್ಲೆ ಸೊಪ್ಪು ಕುಯ್ತಾವ್ರೆ’ ಎಂದು ಗದರಿದರು. ಆ ವ್ಯಕ್ತಿ ತಲೆ ಕೆರೆಯುತ್ತಲೇ ಹೊರಟರು. ನಾನು ಗಡಿಯಾರದಲ್ಲಿ ಸಮಯ ನೋಡಿದೆ. ಆಗಿನ್ನೂ 6.20. ಬೆಳಗಿನ ಈ ಹೊತ್ತಿಗೇ ಲೇಟ್‌ ಆನ್ನುತ್ತಿದ್ದಾರಲ್ಲ ಅಂತ ತಲೆ ಕೆರೆದುಕೊಳ್ಳುವ ಸರದಿ ನಮ್ಮದಾಗಿತ್ತು. ನಮ್ಮ ಮುಖ ನೋಡಿಯೇ ಅರ್ಥಮಾಡಿಕೊಂಡ ನಾರಾಯಣಪ್ಪನವರು, ‘ರೇಷ್ಮೆ ಸೊಪ್ಪು ಕುಯ್ಯಿಸಬೇಕು. ಬಿಸಿಲಾದರೆ, ಸೊಪ್ಪು ಬಾಡಿಹೋಗುತ್ತೆ’ ಎಂದು ಅನುಮಾನ ಬಗೆಹರಿಸಿದರು.

ತಿಪ್ಪೂರು, ಗೋಣಿಪುರ, ಸೀಗೇಪಾಳ್ಯ... ಹೀಗೆ ಈ ಸುತ್ತಮುತ್ತಲಿನ ಏಳೆಂಟು ಹಳ್ಳಿಗಳ ಜಮೀನುಗಳು ‘ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಮತ್ತು ಟೌನ್‌ಷಿಪ್ (ಬಿಎಂಐಸಿ)’ ಯೋಜನೆಗಾಗಿ ನೋಟಿಫೈ ಆಗಿ 20 ವರ್ಷಗಳೇ ಕಳೆದಿವೆ. ರಸ್ತೆಯ ಉದ್ದೇಶಿತ ಮಾರ್ಗದಲ್ಲಿ ತುಸು ಬದಲಾವಣೆಯಾಗಿದ್ದು, ಯೋಜನೆಯು ಈ ಹಳ್ಳಿಗಳಿಂದ ಆಚೆಗೆ ಹೋಗಿದೆ. ನ್ಯಾಯಾಲಯದಲ್ಲಿ ಹತ್ತು ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ಯೋಜನೆ ನನೆಗುದಿಗೆ ಬಿದ್ದು, ವರ್ಷಗಳೇ ಕಳೆದರೂ ಈ ಜಮೀನುಗಳು ಡಿನೋಟಿಫೈ ಆಗಿಲ್ಲ. ಅಂದರೆ, ಈ ಜಮೀನು ಯಾವಾಗ ಬೇಕಾದರೂ ಹಳ್ಳಿಗರ ಕೈತಪ್ಪಬಹುದು. ಅಷ್ಟೂ ವರ್ಷಗಳಿಂದ ಇಂಥದ್ದೇ ಅತಂತ್ರ ಸ್ಥಿತಿಯಲ್ಲಿದ್ದಾರೆ ಹಳ್ಳಿಗರು. ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳೂ ಈ ಎರಡು ದಶಕದಲ್ಲಿ ಆಡಳಿತ ನಡೆಸಿವೆ. ಆದರೆ, ಯಾರಿಗೂ ಈ ಜನರ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ.

‘ರೀ... ಅವರಿಗೆ ಈ ಸಮಸ್ಯೆ ಬಗೆಹರಿಸೋದು ಬೇಕಾಗಿಲ್ಲ. ನಮ್ಮ ಜಮೀನು ನಮಗೆ ವಾಪಸ್‌ ಕೊಟ್ರೆ ಅವರಿಗೆ ಏನು ಸಿಗುತ್ತೆ? ಅದೇ ರೋಡ್‌ ಮಾಡೋರಿಗೆ ಕೊಟ್ರೆ ಏನ್‌ ಬೇಕಾದ್ರೂ ಸಿಗುತ್ತೆ. ಅದು ಅವರಿಗೂ ಗೊತ್ತು’ ಎಂಬುದು ತಿಪ್ಪೂರಿನ ಮೂರ್ತಿ ಅವರ ಆಕ್ರೋಶ.

‘ನಮ್ಮೂರಲ್ಲಿ ಸೋಮಾರಿಗಳೇ ಇಲ್ಲ. ಬೆಳಿಗ್ಗೆ ಇಷ್ಟೊತ್ತಿಗೇ ಕೆಲ್ಸ ಶುರು. ಹಾಲು ಕರೀಬೇಕು. ಡೈರಿಗೆ ಹಾಲು ಹಾಕಬೇಕು. ಹುಲ್ಲು  ಕುಯ್ದು, ಗಾಡಿಗೆ ತುಂಬಿಸ್ಬೇಕು. ಬಿಡುವೇ ಇಲ್ಲದಷ್ಟು ಕೆಲಸ. ನಮ್ಮೂರಲ್ಲೇ ಜಾಸ್ತಿ ಕೆಲ್ಸ ಸಿಗ್ತದೆ. ಹೀಗಾಗಿ ಯಾರೂ ಫ್ಯಾಕ್ಟ್ರಿಗೆ ಹೋಗೊಲ್ಲ, ಆಟೊ ಓಡ್ಸೋದೂ ಇಲ್ಲ. ನಮ್ಮ ಒಂದೈದಾರು ಹಳ್ಳೀಲಿ ಮಾತ್ರ ಹೀಗೆ. ಇನ್ನೆಲ್ಲಾ ಊರ್‌್ನೋರು ಬಿಡದೀಲಿ ಫ್ಯಾಕ್ಟ್ರಿಗೆ ಹೋಗ್ತಾರೆ. ಇಲ್ಲಾ ಆಟೊ, ಟ್ಯಾಕ್ಸಿ ಓಡಿಸ್ತಾರೆ. ನಮ್ಮ ಜಮೀನು ಕಿತ್ಕೊಂಡು, ನಾವೂ ಯಾವ್ದೊ ಫ್ಯಾಕ್ಟ್ರೀಲಿ ಕೂಲಿ ಕೆಲ್ಸ ಮಾಡ್ಬೇಕಾ’ ಎಂಬುದು ಅವರ ಪ್ರಶ್ನೆ.

‘ರೈತರ ಪರ ಹೋರಾಟ ಮಾಡೋಕೆ ಬರೋ ದೇವೇಗೌಡರೇ ಅಲ್ವೆ, ಈ ಪ್ರಾಜೆಕ್ಟ್‌ ತಂದದ್ದು. ಈಗ ಈ ರೀತಿ ಮಾತಾಡ್ತಾವ್ರೆ. ಈಗಿನ ಸಿ.ಎಂ ಸಿದ್ರಾಮಣ್ಣಾನೂ ಬಂದಿದ್ರು. ಹೊಲದಾಗಿ ಬೆಳೆದಿದ್ದ ರಾಗಿ ತೆನೆ ನೋಡಿ, ‘ಎಂಥಾ ಫಲವತ್ತಾದ ಭೂಮಿ’ ಅಂದಿದ್ರು. ಆಮೇಲೆ ಅತ್ತ ಹೋದೋರು ಏನೂ ಮಾಡ್ಲಿಲ್ಲ. ವಿಧಾಸೌಧಕ್ಕೆ ಹೋಗಿ ಕೇಳುದ್ರೆ, ‘ಸದನ ಸಮಿತಿ ಮಾಡಿದೀವಿ. ಎಲ್ಲಾ ಸರಿ ಆಗುತ್ತೆ’ ಅಂದವ್ರೆ. ಅದೇನ್‌ ಮಾಡ್ತಾರೋ ನೋಡ್ಬೇಕು’ ಎನ್ನುತ್ತಾರೆ ನಾರಾಯಣಪ್ಪ.

‘ನೋಡಿ ಸ್ವಾಮಿ, ದಿನಾ ನಮ್ಮೂರಿಂದ ನಾಲ್ಕರಿಂದ ನಾಲ್ಕೂವರೆ ಸಾವಿರ ಲೀಟರ್‌ ಹಾಲು ಬೆಂಗ್ಳೂರು ಡೇರಿಗೆ ಹೋಗುತ್ತೆ. ಕನಕಪುರ, ರಾಮನಗರ, ಕೆಂಗೇರಿಯಲ್ಲಿ ಇರೋ ಗೋಶಾಲೆಗಳು, ಬೆಂಗ್ಳೂರು ಸಿಟೀಲಿ ದನ ಸಾಕೋರಿಗೂ ಹುಲ್ಲು, ಜೋಳದ ಕಡ್ಡಿ ಕಳುಸ್ತೀವಿ. ನಮ್ಮೂರಿಂದಾನೆ ದಿನಾ 5–6 ಲಾರಿ ಹೋಗ್ತವೆ. ಅದೆಲ್ಲಾ ಒಟ್ಟು ಒಂದಿಪ್ಪತ್ತೈದು ಟನ್‌ ಮೇವು. ಇಡೀ ರಾಜ್ಯ ಬರ–ಬರ ಅಂತ ಬಾಯ್‌ ಬಡ್ಕೋತಿದೆ. ಈ ಬೇಸಿಗೇಲೂ ಇಷ್ಟೆಲ್ಲಾ ಮೇವು–ಹಾಲು ಕೊಡ್ತಿದೀವಿ. ಇಂಥಾ ಐನಾತಿ ಜಮೀನು ನಮ್ದು. ಇದ್ರುಮ್ಯಾಲೆ ಯಾಕ್‌ ಸ್ವಾಮಿ ನಿಮಗೆ ಕಣ್ಣು’ ಎಂದು ಅವರು ಬೇಸರಿಸುತ್ತಾರೆ.

ಹೌದು, ತಿಪ್ಪೂರಿನ ಆಚೆಗೆ ಇದ್ದ ಹಲವಾರು ಹಳ್ಳಿಗಳಲ್ಲಿ ಬರದ ಛಾಯೆ ಇತ್ತು. ಅಲ್ಲೆಲ್ಲಾ ಕಾರ್ಖಾನೆಗಳಿಗೆ ಕೂಲಿಗಳು–ಕೆಲಸಗಾರರನ್ನು ಕರೆದೊಯ್ಯುವ ವ್ಯಾನ್‌ಗಳ ಓಡಾಟ ಹೆಚ್ಚಾಗಿತ್ತು. ಆ ಹಳ್ಳಿಗಳ ಹೊಲಗದ್ದೆಗಳೆಲ್ಲಾ ಬಿಸಿಲಿನ ತಾಪಕ್ಕೆ ಕಾದು, ಒಣಗಿದ್ದವು. ಆದರೆ ತಿಪ್ಪೂರು, ಲಿಂಗಾಪುರ, ಗೋಣಿಪುರ, ಸೀಗೇಪಾಳ್ಯದ ಜಮೀನುಗಳು ಹಸಿರು ತುಂಬಿ ನಳನಳಿಸುತ್ತಿದ್ದವು. ಎಲ್ಲೆಡೆ ತೆಂಗು. ಅದರಡಿಯಲ್ಲಿ ಆಳೆತ್ತರ ಬೆಳೆದು ನಿಂತಿದ್ದ ಜೋಳ, ರೇಷ್ಮೆ ಸೊಪ್ಪು ಬರದ ಬೇಗೆಯನ್ನು ಮರೆಸಿದ್ದವು. ರಸ್ತೆಬದಿಯಲ್ಲಿದ್ದ ಹೊಲವೊಂದರಲ್ಲಿ ನವಿಲುಕೋಸುಗಳು ನಳನಳಿಸುತ್ತಿದ್ದವು. ಮತ್ಯಾರೊ ಹೊಲವನ್ನು ಉತ್ತಿ, ಬಿತ್ತನೆಗೆ ಅಣಿ ಮಾಡಿದ್ದರು. ಇನ್ಯಾರೊ ಜೋಳದ ಹೊಲಕ್ಕೆ ಕೊಳವೆ ಬಾವಿಯ ನೀರು ಹಾಯಿಸುತ್ತಿದ್ದರು. ವೃಷಭಾವತಿ ನದಿ ಕೊಳಕಾಗಿ ಹರಿಯುತ್ತಿದ್ದರೂ, ಅದರ ದಂಡೆಯಲ್ಲಿರುವ ಈ ಹಳ್ಳಿಗಳಲ್ಲಿ ಅಂತರ್ಜಲ ಉಳಿಸಿದ್ದಾಳೆ.  ತಿಪ್ಪೂರಿನ ಬಹುತೇಕ ಎಲ್ಲಾ ಮನೆಯವರೂ ಕೊಳವೆ ಬಾವಿ ಕೊರೆಸಿದ್ದಾರೆ. ಪ್ರತಿಯೊಂದರಲ್ಲೂ ನೀರು ದೊರೆತಿದೆ. ಅದೂ 300 ಅಡಿ ಆಳಕ್ಕಿಂತಲೂ ಮೊದಲೇ!

ತಿಪ್ಪೂರಿನ ರೈತರ ಮಾತಿನಲ್ಲೂ ಅರ್ಥವಿತ್ತು. ಇಷ್ಟೆಲ್ಲಾ ಫಲವತ್ತಾದ ಭೂಮಿಯನ್ನು ರಸ್ತೆಗೆ, ಟೌನ್‌ಶಿಪ್‌ಗಾಗಿ ಬಲಿಕೊಡಬೇಕೇಕೆ? ಹಾಗೇನಾದರೂ ಆದರೆ, ಅವು ನೀಡುತ್ತಿರುವ ಹಾಲು, ಮೇವು, ತರಕಾರಿಗಳನ್ನು ಕಳೆದುಕೊಳ್ಳಬೇಕಲ್ಲವೇ ಎಂಬ ಪ್ರಶ್ನೆ ಕಾಡುತ್ತಿತ್ತು. 

ನಾವು ಅಲ್ಲಿಂದ ಹೊರಡುವ ಮುನ್ನ ನಾರಾಯಣಪ್ಪನವರು, ‘ಸ್ವಾಮಿ, ಜಮೀನಿಲ್ದೆ ರೈತ ಬೆಳೆ ಬೆಳ್ಯೋದನ್ನೇ ನಿಲ್ಸಿದ್ರೆ, ನೀವೇನ್‌ ದುಡ್ಡು ತಿನ್ಕೊಂಡು ಬದ್ಕಕ್ಕಾಯ್ತದಾ’ ಎಂದು ನಕ್ಕರು.

**

ಸಮಸ್ಯೆಗಳಿಗೂ ಬರವಿಲ್ಲ
‘ನೋಟಿಫಿಕೇಷನ್ ಆಗಿರೋದ್ರಿಂದ ಜಮೀನು ಮಾರೋಕೆ ಆಗಲ್ಲ. ಮದ್ವೆ ಮಾಡ್ಬೇಕು, ಮನೆ ಕಟ್ಕೋಬೇಕು ಅಂದ್ರೆ ದುಡ್ಡಿಲ್ಲ. ಒಂದ್ಹತ್ತು ಗುಂಟೆ ಜಮೀನು ಮಾರಿ, ಅವೆಲ್ಲಾ ಮಾಡೋಣ ಅಂದ್ರೆ ಕೊಂಡ್ಕೋಳೋರು ಇಲ್ಲ. ಯಾರಾದ್ರು ಕೊಂಡ್ಕೊಂಡ್ರೂ, ರಿಜಿಸ್ಟ್ರು ಆಗಲ್ಲ. ರಿಜಿಸ್ಟ್ರು ಆಗ್ಬೇಕಂದ್ರೆ ಲಂಚ ಕೇಳ್ತಾರೆ. ಒಟ್ನಲ್ಲಿ ಏನೂ ಮಾಡ್ದಂಗೆ ಮಾಡವ್ರೆ’ ಎಂದು ಸಮಸ್ಯೆಗಳ ಸರಮಾಲೆ ಬಿಚ್ಚಿಡುತ್ತಾರೆ ಕೃಷ್ಣಪ್ಪ.

‘ಪಕ್ಕದ ಲಿಂಗಾಪುರದಲ್ಲಿ ಮೊನ್ನೆ ಒಬ್ರು, ಒಂದೆಕ್ರೆ ಜಮೀನನ್ನು ಒಂದೂವರೆ ಕೋಟಿಗೆ ಮಾರಿದ್ದಾರೆ. ಆದ್ರೆ ನಮ್ಮೂರಲ್ಲಿ ಅರ್ಧ ಎಕ್ರೆ ಜಮೀನು ಹೋಗಿದ್ದು ಬರೀ 20 ಲಕ್ಷಕ್ಕೆ. ಹೀಗಾಗಿ ಬೇಸಾಯ ಮಾಡೇ ಮದ್ವೆ ಮಾಡ್ಬೇಕಾಗಿದೆ. ಮನೆ ಕಟ್ಕೋಬೇಕಾಗಿದೆ’ ಎಂದು ಅವರು ನಿಟ್ಟುಸಿರು ಬಿಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT