ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಸಮರ್ಪಕ ವಿತರಣೆಗೆ ಸೂಚನೆ

Last Updated 24 ಮೇ 2017, 6:41 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನ ವಿವಿಧೆಡೆ ಮಳೆಯಾಗುತ್ತಿದ್ದು ರೈತರಿಗೆ ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರ ಸಮರ್ಪಕವಾಗಿ ಒದಗಿಸಲು ಆದ್ಯತೆ ನೀಡಬೇಕು ಎಂದು ಕೃಷಿಕ ಸಮಾಜದ ಅಧ್ಯಕ್ಷ ಎಂ. ಗೋವಿಂದಪ್ಪ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕಿನ ಕಾಗತಿಯ ಕೃಷಿ ತರಬೇತಿ ಕೇಂದ್ರದಲ್ಲಿ ಮಂಗಳವಾರ ನಡೆದ ಕೃಷಿಕ ಸಮಾಜದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ ವರ್ಷ ಸಕಾಲದಲ್ಲಿ ಬಿತ್ತನೆ ಬೀಜ ಸಮರ್ಪಕವಾಗಿ ಪೂರೈಕೆ ಆಗದೆ ರೈತರು ತೊಂದರೆ ಅನುಭವಿಸಿದರು. ಪ್ರತಿಭಟನೆಯೂ ನಡೆಯಿತು. ಈ ಬಾರಿ ಅಂಥ ಘಟನೆಗಳಿಗೆ ಅವಕಾಶ ನೀಡಬಾರದು ಎಂದು ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕ ನಾರಾಯಣಸ್ವಾಮಿ, ‘ತೊಗರಿ, ಅಲಸಂದಿ, ರಾಗಿಯ ಬಿತ್ತನೆ ಬೀಜ ಸರಬರಾಜಾಗಿದ್ದು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ. ಶೇಂಗಾ ಬೀಜಗಳಿಗೂ ಬೇಡಿಕೆ ಸಲ್ಲಿಸಿದ್ದು, ವಾರದೊಳಗೆ ಬರಲಿದೆ’ ಎಂದು ಭರವಸೆ ನೀಡಿದರು.

ರೇಷ್ಮೆ ಇಲಾಖೆಯಲ್ಲಿ ಹುಳು ಸಾಕಾಣಿಕೆ ಮನೆಗಳಿಗೆ ಸೌರವಿದ್ಯುತ್‌ ಸೌಲಭ್ಯ ಮಂಜೂರಾಗಿದೆ. ಆದರೆ ಇದುವರೆಗೂ ಅಳವಡಿಸಿಲ್ಲ ಎಂದು ಸಭೆಯಲ್ಲಿ ಸೇರಿದ್ದ ಸದಸ್ಯರು ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ‘ರೈತರನ್ನು ಅನಗತ್ಯವಾಗಿ ಕಚೇರಿಗೆ ಅಲೆಸುವ ಬದಲು ಬಾಕಿ ಇರುವ 20 ಮನೆಗಳಿಗೆ ಸೌರ ವಿದ್ಯುತ್‌ ಸೌಲಭ್ಯ ಒದಗಿಸಬೇಕು ಮತ್ತು ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು’ ಎಂದು ರೇಷ್ಮೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಾ. ನಾಗೇಂದ್ರಬಾಬು ಮಾತನಾಡಿ ಕೃಷಿ ಹೊಂಡಗಳಲ್ಲಿ ಮೀನು ಮರಿ ಸಾಕಲು ರೈತರಿಗೆ ಸಾವಿರ ಮರಿಗಳಿಗೆ ₹ 250 ದರದಲ್ಲಿ ನೀಡಲಾಗುತ್ತದೆ’ ಎಂದರು.

‘ಶಿಕ್ಷಣ ಇಲಾಖೆಯಲ್ಲಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಶಿಕ್ಷಕರಿಲ್ಲದೆ ತೊಂದರೆಯಾಗುತ್ತಿದೆ. ಕೆಲವೆಡೆ ಕಟ್ಟಡಗಳ ಕೊರತೆಯಿದ್ದು, ನಿವಾರಿಸಬೇಕು’ ಎಂದು ಅಧ್ಯಕ್ಷ ಎಂ. ಗೋವಿಂದಪ್ಪ ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಹಮದ್‌ ಖಲೀಲ್‌ ಮಾತನಾಡಿ, ‘ತಾಲ್ಲೂಕಿನಲ್ಲಿ 381 ಶಾಲೆಗಳಿಗೆ ಕಟ್ಟಡಗಳ ಅವಶ್ಯಕತೆ ಇದೆ. ಸರ್ವ ಶಿಕ್ಷಣ ಅಭಿಯಾನದ ಅನುದಾನ ಸ್ಥಗಿತವಾಗಿದೆ. ದುರಸ್ತಿಗಾಗಿ ಶಾಸಕರ ಅನುದಾನದಡಿ ₹40 ಲಕ್ಷ ಮಂಜೂರಾಗಿದ್ದು, ಹಂತ ಹಂತವಾಗಿ ಕಟ್ಟಡ ನಿರ್ಮಿಸಲಾಗುವುದು ಎಂದು ವಿವರಿಸಿದರು.

ಪಶುಭಾಗ್ಯ ಯೋಜನೆಗಾಗಿ ಸರ್ಕಾರದಿಂದ ಮಂಜೂರಾದ ಅನುದಾನ ಬ್ಯಾಂಕುಗಳಲ್ಲಿ ಕೊಳೆಯುತ್ತಿದೆ. ಫಲಾನುಭವಿಗಳಿಗೆ ಅನುದಾನ ನೀಡಿ ಎಂದು ಸದಸ್ಯ ಲಕ್ಷ್ಮಣರೆಡ್ಡಿ ಒತ್ತಾಯಿಸಿದರು. ಇದಕ್ಕೆ ಮೇ 31ರ ಒಳಗಾಗಿ ಅನುದಾನ ಬಿಡುಗಡೆ ಮಾಡಿಸುವುದಾಗಿ ಸಮಿತಿಯ ಸದಸ್ಯ ಆಂಜನೇಯರೆಡ್ಡಿ ಭರವಸೆ ನೀಡಿದರು. ಕೃಷಿಕ ಸಮಾಜದ ಖಜಾಂಚಿ ನಾಗಿರೆಡ್ಡಿ, ಸದಸ್ಯರಾದ ಕೊಂಗನಹಳ್ಳಿ ವೆಂಕಟೇಶ್‌, ಕೃಷ್ಣಾರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT