ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30ಕ್ಕೆ ಕೋಲಾರ ಜಿಲ್ಲಾ ಬಂದ್‌ಗೆ ನಿರ್ಧಾರ

Last Updated 24 ಮೇ 2017, 6:52 IST
ಅಕ್ಷರ ಗಾತ್ರ

ಕೆಜಿಎಫ್‌: ಕೇಂದ್ರ ಸರ್ಕಾರಿ ಸ್ವಾಮ್ಯದ ಬೆಮಲ್‌ ಕಾರ್ಖಾನೆಯನ್ನು ಖಾಸಗೀಕರಣ ಮಾಡದಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಮೇ 30ರಂದು ಕೋಲಾರ ಜಿಲ್ಲಾ ಬಂದ್ ನಡೆಸಲು ಸೋಮವಾರ ನಡೆದ ವಿವಿಧ ಸಂಘಟನೆಗಳ ಸಭೆಯಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಯಿತು.

‘ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಗೆ ಸೇರಿದ ಬೆಮಲ್‌ ಕಾರ್ಖಾನೆ ಕೋಲಾರ ಜಿಲ್ಲೆಯ ಹೆಮ್ಮೆಯ ಪ್ರತೀಕವಾಗಿದೆ. ಅದರಲ್ಲಿ ಷೇರು ಬಂಡವಾಳವನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಕೇಂದ್ರ ಸರ್ಕಾರ ನಡೆಸಿದೆ’ ಎಂದರು.

‘ಈ ಸಂಬಂಧವಾಗಿ ಕಾರ್ಮಿಕರ ನಿಯೋಗವು ಕೇಂದ್ರ ಸಚಿವರನ್ನು ಭೇಟಿ  ಮಾಡಿ ಮನವಿ ಮಾಡಿತ್ತು. ನಿಯೋಗಕ್ಕೆ ಹಿಂದೆ ರಕ್ಷಣಾ ಸಚಿವರಾಗಿದ್ದ ಮನೋಹರ ಪರಿಕರ್‌ ಸೇರಿದಂತೆ ಹಲವಾರು ಸಚಿವರು ಭರವಸೆ ನೀಡಿದ್ದರು. ಆದರೂ ಕೇಂದ್ರ ಸರ್ಕಾರ ಷೇರು ಬಂಡವಾಳ ಹಿಂತೆಗೆತ ಪ್ರಕ್ರಿಯೆಯನ್ನು ಮುಂದುವರಿಸಿದೆ’ ಎಂದು ಬೆಮಲ್‌ ಕಾರ್ಮಿಕ ಸಂಘದ ಅಧ್ಯಕ್ಷ ಆಂಜನೇಯರೆಡ್ಡಿ ಆರೋಪಿಸಿದರು.

‘ಕಾರ್ಮಿಕರ ಶಕ್ತಿಯನ್ನು ಪ್ರಧಾನಿ ಮೋದಿಗೆ ತೋರಿಸಬೇಕಾಗಿದೆ. ಈ ಹಿಂದೆ ಕೂಡ ಕಾರ್ಮಿಕರ ಶಕ್ತಿಗೆ ಮಣಿದ ಕೇಂದ್ರ ಸರ್ಕಾರ ತನ್ನ ಸಂಪುಟದ ನಿರ್ಧಾರವನ್ನು ಬದಲಾಯಿಸಿದ ಉದಾಹರಣೆಗಳಿವೆ. ಈಗ ಕೂಡ ಅದೇ ರೀತಿಯ ಒತ್ತಡವನ್ನು ಕೇಂದ್ರ ಸರ್ಕಾರದ ಮೇಲೆ ಹೇರಬೇಕಾಗಿದೆ’ ಎಂದರು.

ವಚನ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎನ್‌.ಆರ್‌.ಪುರುಷೋತ್ತಮ ಮಾತನಾಡಿ, ‘ಮಾಜಿ ಶಾಸಕರು ದೆಹಲಿಗೆ ಕರೆದುಕೊಂಡು ಹೋಗಿದ್ದ ನಿಯೋಗ ಏನು ಮಾಡಿಲ್ಲ. ಈಗಾಲಾದರೂ ಸಾರ್ವಜನಿಕರ ಬೆಂಬಲ ಪಡೆದು ಹೋರಾಟ ನಡೆಸಬೇಕು’ ಎಂದರು.

‘ಕೇಂದ್ರ ಸಚಿವರಾಗಿದ್ದ ಎಂ.ವಿ.ಕೃಷ್ಣಪ್ಪ ಅವರ ಪರಿಶ್ರಮದಿಂದ ಬೆಮಲ್‌ ಸ್ಥಾಪಿತವಾಯಿತು. ಅದನ್ನು ಖಾಸಗೀಕರಣ ಮಾಡಲು ಅವಕಾಶ ನೀಡಬಾರದು’ ಎಂದು ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಶ್ರೀಧರರಾಜ್‌ ಹೇಳಿದರು.

‘ಮೇ 30ರಂದು ನಡೆಯಲಿರುವ ಬಂದ್ ದಿನದಂದು ಸಂಸದರು ಮತ್ತು ಶಾಸಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು’ ಎಂದು ಕನ್ನಡ ಹೋರಾಟಗಾರ ರಾಜಗೋಪಾಲಗೌಡ ಆಗ್ರಹಿಸಿದರು. ಬಂದ್‌ಗೆ ಎಂ.ಜಿ.ಮಾರುಕಟ್ಟೆಯ ಎಲ್ಲ ವರ್ತಕರೂ ಬೆಂಬಲ ನೀಡುತ್ತೇವೆ ಎಂದು ಎಂ.ಜಿ.ಮಾರುಕಟ್ಟೆ ವರ್ತಕರ ಸಂಘದ ರಾಮಲಿಂಗಂ ಭರವಸೆ ನೀಡಿದರು.

ಮಾಜಿ ಶಾಸಕ ಎಸ್‌.ರಾಜೇಂದ್ರನ್‌ ಮಾತನಾಡಿ, ‘ಕೇಂದ್ರದಲ್ಲಿ ಸಚಿವರಾಗಿದ್ದ ಇಲ್ಲಿನ ಸಂಸದರು ಪ್ರಾಮಾಣಿಕ ಪ್ರಯತ್ನ ಮಾಡಿದ್ದರೆ, ಇಂದು ಬೆಮಲ್‌ ಖಾಸಗೀಕರಣದತ್ತ ಹೆಜ್ಜೆ ಹಾಕುತ್ತಿರಲಿಲ್ಲ. ಉಸ್ತುವಾರಿ ಸಚಿವ ರಮೇಶ್‌ಕುಮಾರ್‌ ಬೆಮಲ್‌ ಖಾಸಗೀಕರಣ ಮಾಡದಂತೆ ಒತ್ತಾಯಿಸಿದ್ದಾರೆ. ಅವರಿಗೆ ದೃಢ ಮನಸ್ಸಿದ್ದರೆ ಸಚಿವ ಸಂಪುಟದಲ್ಲಿ ನಿರ್ಧಾರ ತೆಗೆದುಕೊಳ್ಳಲಿ’ ಎಂದರು.

ಸರ್ಕಾರಿ ನೌಕರರ ಸಂಘದ ರವಿರೆಡ್ಡಿ, ಸಿಪಿಎಂನ ಅರ್ಜುನನ್‌, ಡಿವೈಎಫ್‌ಐ ಮುಖಂಡ ತಂಗರಾಜ್‌, ಎಐಎಡಿಎಂಕೆಯ ಅನ್ಬು, ಮಾಜಿ ಕಾರ್ಮಿಕರ ಸಂಘದ ಅಧ್ಯಕ್ಷ ಅಶ್ವತ್ಥ್‌ನಾರಾಯಣ, ಕೆಎಸ್‌ಆರ್‌ಟಿಸಿ ನೌಕರರ ಸಂಘದ ಪ್ರಸನ್ನರೆಡ್ಡಿ, ವಕೀಲರ ಸಂಘದ ಜ್ಯೋತಿಬಸು, ರಾಜ್‌ಕುಮಾರ್‌ ಅಭಿಮಾನಿ ಸಂಘದ ವಿ.ಎಸ್‌.ಪ್ರಕಾಶ್‌ ಸೇರಿದಂತೆ ಹಲವಾರು ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT