ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ನಗರದಲ್ಲಿ ಭಾರಿ ಗಾಳಿ– ಮಳೆ

Last Updated 24 ಮೇ 2017, 9:20 IST
ಅಕ್ಷರ ಗಾತ್ರ

ಧಾರವಾಡ: ಕಳೆದ ಮೂರ್ನಾಲ್ಕು ದಿನಗಳಿಂದ ವಿರಾಮ ನೀಡಿದ್ದ ಮಳೆ, ಮಂಗಳವಾರ ಸಂಜೆ ನಗರದಲ್ಲಿ ರಭಸದಿಂದ ಸುರಿಯಿತು.ಸುಮಾರು ಒಂದೂವರೆ ತಾಸು ಗುಡುಗು, ಮಿಂಚು, ಭಾರಿ ಗಾಳಿಯೊಂದಿಗೆ ಮಳೆ ಸುರಿದಿದ್ದರಿಂದ ನಗರದ ಕೆಲವು ರಸ್ತೆಗಳು ಜಲಾವೃತಗೊಂಡವು. ಕೆಲವೆಡೆ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ವಾರದ ಹಿಂದೆ ಸುರಿದ ಮಳೆಗಿಂತ ಹೆಚ್ಚು ರಭಸ ಕಂಡುಬಂತು.

ಮಂಗಳವಾರ ಬಿಸಿಲಿನ ಜೊತೆ ಸೆಕೆ ಕೂಡಾ ಹೆಚ್ಚಾಗಿದ್ದರಿಂದ ಮಳೆ ಬರುವ ನಿರೀಕ್ಷೆ ಇತ್ತು. ಸಂಜೆ ಐದರ ಸುಮಾರಿಗೆ ಒಮ್ಮಿಂದೊಮ್ಮೆಲೇ ಕಪ್ಪು ಮೋಡಗಳು ಕಂಡು ಬಂದವು. ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ನಿಂತು, ವಾಹನ ಸವಾರರು ಪರದಾಡಿದರು.

ಮಳೆಯಿಂದಾಗಿ ಹಲವೆಡೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು. ಇನ್ನೂ ಕೆಲವೆಡೆ ಗಾಳಿಯ ರಭಸಕ್ಕೆ ಮರದ ಟೊಂಗೆಗಳು ಮುರಿದು ಬಿದ್ದು, ಸಂಚಾರಕ್ಕೆ ಅಡಚಣೆಯುಂಟಾಯಿತು. ನಗರದ ಹೊಸಯಲ್ಲಾಪುರದ ಮನೆಯೊಂದರ ಮೇಲೆ ಮರದ ಟೊಂಗೆ ಮುರಿದು ಬಿದ್ದಿದ್ದರಿಂದ ಹೆಂಚುಗಳಿಗೆ ಹಾನಿಯಾಗಿದೆ.

ಆಲೂರು ವೆಂಕಟರಾವ್‌ ಭವನದ ಸಮೀಪ. ಶ್ರೀನಗರ ಗಣೇಶ ದೇವಸ್ಥಾನದ ಹಿಂಭಾಗ, ಸಾಧನಕೇರಿ, ಚೈತನ್ಯ ನಗರ, ಶ್ರೀರಾಮ ನಗರ, ರಾಣಿ ಚೆನ್ನಮ್ಮ ನಗರದ ಗಣೇಶ ದೇವಸ್ಥಾನದ ಬಳಿ. ರಾಧಾಕೃಷ್ಣ ನಗರ, ಹಳೆ ಬಸ್‌ ನಿಲ್ದಾಣದ ಸಮೀಪ, ಸಪ್ತಾಪುರ ಬಾವಿ ಬಳಿ ಮರ, ಮರದ ಟೊಂಗೆಗಳು ಮುರಿದು ಬಿದ್ದಿವೆ.

ಕೋರ್ಟ್‌ ಸರ್ಕಲ್‌ ಬಳಿ ಮಿನಿ ಗ್ಯಾರೇಜೊಂದರ ಮೇಲೆ ಮರದ ಕೊಂಬೆ ಮುರಿದು ಬಿದ್ದಿದ್ದು, ಗ್ಯಾರೇಜ್‌ ಮಾಲೀಕ ಅಶ್ಮತ್‌ ಪಠಾಣ ಗಾಯಗೊಂಡಿದ್ದಾರೆ. ಅಲ್ಲದೇ ವಿನಾಯಕ ನಗರದ ಮನೆಯೊಂದರ ಮೇಲೆ ವಿದ್ಯುತ್‌ ಕಂಬ ಮತ್ತು ಮರದ ಕೊಂಬೆ ಮುರಿದು ಬಿದ್ದಿದೆ.

ಹೆಸ್ಕಾಂ ಸಿಬ್ಬಂದಿ ವಿದ್ಯುತ್‌ ಪೂರೈಕೆ ಕಡಿತಗೊಳಿಸಿದ್ದರಿಂದ ಯಾವುದೇ ದೊಡ್ಡ ಪ್ರಮಾಣದ ಹಾನಿಯಾಗಿಲ್ಲ. ಚೆನ್ನಬಸವೇಶ್ವರ ನಗರದ 5ನೇ ಕ್ರಾಸ್‌ನಲ್ಲಿರುವ ಹಲವು ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ನಿವಾಸಿಗಳು ಪರದಾಡಿದರು. ಮನಿಕಿಲ್ಲಾದ ಕಿರಣ ಜಾಧವ ಅವರ ಮನೆಯಲ್ಲಿ ಮಳೆ ನೀರು ನುಗ್ಗಿದ್ದು, ಹೊರಹಾಕಲು ಹರಸಾಹಸ ಪಡಬೇಕಾಯಿತು.  

ಆಕಳು ಸಾವು: ಮಳೆಗೆ ತಾಲ್ಲೂಕಿನ ಮನಗುಂಡಿ ಗ್ರಾಮದಲ್ಲಿ ಐದು ಮನೆಯ ಹೆಂಚುಗಳು ಮತ್ತು ಮೂರು ಹಾಲಿನ ಡೇರಿಗಳ ಚಾವಣಿ ಶೀಟುಗಳು ಹಾರಿ ಹೋಗಿವೆ. ತಗಡಿನ ಶೀಟ್‌ ಬಿದ್ದ ಪರಿಣಾಮ ಆಕಳೊಂದು ಮೃತ ಪಟ್ಟಿದೆ.ಕುಂದಗೋಳ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಂಗಳವಾರ ಸಂಜೆ ಹದಭರಿತ ಮಳೆಯಾಗಿದೆ.

ಹುಬ್ಬಳ್ಳಿಯಲ್ಲಿ ಸಾಧಾರಣ ಮಳೆ
ಹುಬ್ಬಳ್ಳಿ: ನಗರದಲ್ಲಿ ಮಂಗಳವಾರ ಸಂಜೆ ಸಾಧಾರಣ ಮಳೆಯಾಯಿತು. ಬೆಳಿಗ್ಗೆಯಿಂದ  ಸೆಕೆ ಇತ್ತು. ಸಂಜೆ ವೇಳೆ ಮೋಡ ಕಟ್ಟಿ ಗುಡುಗು–ಸಿಡಿಲಿನ ಸಮೇತ ಮಳೆ ಸುರಿಯಿತು.

ಸ್ಟೇಷನ್‌ ರಸ್ತೆ, ಮಂಟೂರ, ಕೇಶ್ವಾಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿದರೆ ಮತ್ತೆ ಕೆಲವೆಡೆ ಮಳೆಯೇ ಆಗಿಲ್ಲ. ಮಳೆಯಿಂದಾಗಿ ಚನ್ನಮ್ಮ ವೃತ್ತದ ಈದ್ಗಾ ಮೈದಾನದ ಬಳಿ ಮಾವಿನ ಹಣ್ಣಿನ ವ್ಯಾಪಾರಿಗಳು ಮತ್ತು ಜನತಾ ಬಜಾರ್‌ ವ್ಯಾಪಾರಿಗಳು ತೊಂದರೆ ಅನುಭವಿಸಿದರು.

ಭಾರಿ ಗಾಳಿ ಬೀಸಿದ್ದರಿಂದ ವಸಂತ  ನಗರದ 1 ಮತ್ತು 2ನೇ ಕ್ರಾಸ್‌ನಲ್ಲಿ ಮರದ ದೊಡ್ಡ ಕೊಂಬೆಗಳೆರಡು ನೆಲಕ್ಕುರುಳಿವೆ. ವಿದ್ಯುತ್ ತಂತಿ ಮೇಲೆ ಕೊಂಬೆ ಬಿದ್ದಿದ್ದರಿಂದ ತಂತಿಗಳು ತುಂಡಾಗಿ, ವಿದ್ಯುತ್‌ ಕಂಬ ತುಂಡಾಗಿದೆ.

ಅದೃಷ್ಟವಶಾತ್‌ ಯಾವುದೇ ಅನಾಹುತ ಸಂಭವಿಸಿಲ್ಲ. ಇಡೀ ಬಡಾವಣೆ ಕತ್ತಲಲ್ಲಿ ಮುಳುಗಿತ್ತು. ಉಳಿದಂತೆ ಯಾವುದೇ ಅನಾಹುತ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ರಾತ್ರಿ ತನಕ ಜಿಟಿಜಿಟಿ ಮಳೆ ಬೀಳುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT