ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಮೆ ಪರಿಹಾರ ಮೊತ್ತ ಹೆಚ್ಚಳಕ್ಕೆ ಸೂಕ್ತ ಕ್ರಮ’

Last Updated 24 ಮೇ 2017, 10:47 IST
ಅಕ್ಷರ ಗಾತ್ರ

ರಾಮನಗರ: ‘ಸಂತ್ರಸ್ತ ರೈತರ ಕುಟುಂಬಗಳಿಗೆ ಈಗ ನೀಡಲಾಗುತ್ತಿರುವ ವಿಮೆ ಪರಿಹಾರದ ಮೊತ್ತವನ್ನು ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಕರ್ನಾಟಕ ಹಾಲು ಮಹಾಮಂಡಳದ ಅಧ್ಯಕ್ಷ ಪಿ. ನಾಗರಾಜು ಹೇಳಿದರು.

ಬೆಂಗಳೂರು ಸಹಕಾರ ಹಾಲು ಒಕ್ಕೂಟ ಹಾಗೂ ಬಮೂಲ್‌ ಕಲ್ಯಾಣ ಟ್ರಸ್ಟ್‌ನ ಸಹಯೋಗದಲ್ಲಿ ಅರ್ಚಕರಹಳ್ಳಿಯ ಬಿಜಿಎಸ್ ಅಂಧರ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಬಮೂಲ್ ವಿಮಾ ಯೋಜನೆಯ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸದ್ಯ ಈ ವಿಮೆ ಯೋಜನೆಯ ಅಡಿ ಸಹಜವಾಗಿ ಸಾವನ್ನಪ್ಪುವ ಸದಸ್ಯರ ಕುಟುಂಬಕ್ಕೆ ₹1ಲಕ್ಷ ಹಾಗೂ ಅಪಘಾತದಲ್ಲಿ ಮೃತಪಟ್ಟರೆ ₹3 ಲಕ್ಷ ಪರಿಹಾರ ನೀಡಲಾಗುತ್ತಿದೆ. ಇದನ್ನು ಕ್ರಮವಾಗಿ ₹ 2 ಲಕ್ಷ ಮತ್ತು ₹ 5 ಲಕ್ಷಕ್ಕೆ ಏರಿಸಲು ಯೋಜನೆ ರೂಪಿಸಬೇಕು’ ಎಂದು ಅವರು ಮಂಡಳದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದರು.

‘ಈ ವಿಮೆ ಯೋಜನೆಯ ಅಡಿ ಡೇರಿ ಸಂಘದ ಸದಸ್ಯರು ವಾರ್ಷಿಕ ₹142 ಭರಿಸಿದರೆ, ಕೆಎಂಫ್‌ ಸಹ ಅಷ್ಟೇ ಮೊತ್ತದ ಕಂತನ್ನು ತುಂಬಲಿದೆ. ಇದರಿಂದ ಕಷ್ಟ ಕಾಲದಲ್ಲಿ ನೊಂದ ಕುಟುಂಬಗಳಿಗೆ ಅನುಕೂಲ ಆಗಲಿದೆ. ರಾಮನಗರ ತಾಲ್ಲೂಕಿನಲ್ಲಿಯೇ ಈವರೆಗೆ ಸುಮಾರು ಹಾಲು 15,165 ಹಾಲು ಉತ್ಪಾದಕರು ಇದಕ್ಕೆ ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ ಈಚೆಗೆ ನಿಧನರಾದ 46 ಕುಟುಂಬಗಳಿಗೆ ಇಂದು ವಿಮೆಯ ನೆರವು ನೀಡಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

‘ರಾಸುಗಳಿಗೆ ನೀಡಲಾಗುವ ವಿಮೆ ಪರಿಹಾರದ ಮೊತ್ತ ಸಹ ಏರಿಕೆಗೊಂಡಿದ್ದು, ₹1ಲಕ್ಷದವರೆಗೂ ಪರಿಹಾರ ಸಿಗಲಿದೆ. ರಾಮನಗರ ತಾಲ್ಲೂಕಿನಲ್ಲಿ ಈವರೆಗೆ 23 ಸಾವಿರ ಹಸುಗಳಿಗೆ ವಿಮೆ ಮಾಡಿಸಲಾಗಿದೆ. ವಿಮೆ ಕಂತನ್ನು ಶೇ 1.53ಕ್ಕೆ ಇಳಿಸಲಾಗಿದೆ’ ಎಂದರು.

‘ಒಕ್ಕೂಟಕ್ಕೆ ಪೂರೈಕೆಯಾಗುತ್ತಿರುವ ಹಾಲಿನ ಪೈಕಿ ಶೇ 60ರಷ್ಟು ಮಾತ್ರ ದ್ರವ ರೂಪದಲ್ಲಿ ಮಾರಾಟ ಆಗುತ್ತಿದ್ದು, ಉಳಿದುದನ್ನು ವಿವಿಧ ಉತ್ಪನ್ನಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ವ್ಯವಸ್ಥೆಯಲ್ಲಿ ಹಣದ ಸೋರಿಕೆಯನ್ನು ತಡೆಗಟ್ಟಿದ ಪರಿಣಾಮ ಇಂದು ಕೆಎಂಎಫ್‌ ಲಾಭದತ್ತ ಮುಖ ಮಾಡಿದೆ. ಮುಂದಿನ ವರ್ಷದ ಒಳಗೆ ರೈತರಿಗೆ ಪ್ರತಿ ಲೀಟರ್‌ ಹಾಲಿಗೆ ₹30 ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಬೆಂಗಳೂರು ಹಾಲು ಒಕ್ಕೂಟದ ವ್ಯವ ಸ್ಥಾಪಕ ನಿರ್ದೇಶಕ ಡಿ.ಸಿ. ನಾಗರಾಜಯ್ಯ ಹೇಳಿದರು.

ಆತ್ಮಹತ್ಯೆ ಮಾಡಿಕೊಳ್ಳದಿರಿ: ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ ಆಶೀರ್ವಚನ ನೀಡಿ ‘ವಿಮೆ ಹಣ ನೀಡುತ್ತಾರೆ ಎನ್ನುವ ಕಾರಣಕ್ಕೆ ರೈತರು ಆತ್ಮಹತ್ಯೆಯ ಹಾದಿ ತುಳಿಯಬಾರದು. ಆತ್ಮಹತ್ಯೆ ಮಾಡಿಕೊಂಡರೆ ಜೀವವೂ ಉಳಿಯದು, ವಿಮೆಯೂ ಸಿಗದು’ ಎಂದು ಎಚ್ಚರಿಸಿದರು.

‘ರೈತರು ಬೆಳೆಯುವ ಬೆಳೆಗೆ ಇಂದು ಬೆಲೆ ಸಿಗದಿರಬಹುದು. ಆದರೆ ಅವರು ನೆಟ್ಟು ಪೋಷಿಸುವ ಮರ–ಗಿಡಗಳಿಗೆ ಬೆಲೆ ಕಟ್ಟಲಾಗದು. ಅವುಗಳು ನೀಡುವ ಗಾಳಿಯನ್ನು ನಗರದ ಮಂದಿಗೆ ಮಾರಾಟ ಮಾಡಲು ಆಕ್ಸಿಜನ್‌ ಆಡಿಟ್‌’ ಆಗುವ ಕಾಲ ದೂರವೇನಿಲ್ಲ’ ಎಂದು ಎಚ್ಚರಿಸಿದರು.

ಆದಿಚುಂಚನಗಿರಿ ಶಾಖಾ ಮಠದ ಅನ್ನದಾನೇಶ್ವರ ಸ್ವಾಮೀಜಿ, ಬೆಂಗಳೂರು ಒಕ್ಕೂಟದ ಅಧ್ಯಕ್ಷ ಅಪ್ಪಯ್ಯಣ್ಣ, ಪ್ರಧಾನ ವ್ಯವಸ್ಥಾಪಕ ಎಸ್‌.ಟಿ. ಸುರೇಶ್‌, ರಾಮನಗರ ವಿಭಾಗದ ಉಪ ವ್ಯವಸ್ಥಾಪಕ ಎನ್. ಶಿವಶಂಕರ್,  ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಹಿರಿಯ ವ್ಯವಸ್ಥಾಪಕ ಮ್ಯಾಥ್ಯುಸ್‌ ಹಾಗೂ ತಾಲ್ಲೂಕಿನ ವಿವಿಧ ಹಾಲು ಒಕ್ಕೂಟಗಳ ಸದಸ್ಯರು ಇದ್ದರು.

ಹಾಲು ಉತ್ಪಾದನೆ
1.50 ಲಕ್ಷ ಲೀಟರ್‌ ನಿತ್ಯ ಸಂಗ್ರಹವಾಗುವ ಹಾಲಿನ ಪ್ರಮಾಣ

168 ರಾಮನಗರ ತಾಲ್ಲೂಕಿನಲ್ಲಿರುವ ಕಾರ್ಯನಿರತ ಹಾಲು ಉತ್ಪಾದಕ ಸಂಘಗಳು

32,906 ಸಂಘಗಳಲ್ಲಿನ ಒಟ್ಟು ಸದಸ್ಯರು

11,426 ಸಂಘಗಳಲ್ಲಿನ ಮಹಿಳಾ ಸದಸ್ಯರು

* * 

ರೈತರೇ ವೈಜ್ಞಾನಿಕವಾಗಿ ಪಶು ಆಹಾರ ತಯಾರಿಸಿಕೊಳ್ಳಲು ಸಾಧ್ಯವಿದೆ. ಈ ಸಂಬಂಧ ಹಳ್ಳಿಗಳಲ್ಲಿ ಶೀಘ್ರದಲ್ಲಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗುವುದು
ಪಿ. ನಾಗರಾಜು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT