ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರತಿನಿಧಿಗಳು ತುಟಿ ಬಿಚ್ಚದಷ್ಟು ಸೋಮಾರಿಗಳು

ಪೂರ್ವಭಾವಿ ಸಭೆಯಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಕಿಡಿ
Last Updated 25 ಮೇ 2017, 4:52 IST
ಅಕ್ಷರ ಗಾತ್ರ

ಕೋಲಾರ: ‘ಬಯಲುಸೀಮೆ ಜಿಲ್ಲೆಗಳ ಜನಪ್ರತಿನಿಧಿಗಳು ಶಾಶ್ವತ ನೀರಾವರಿ ಯೋಜನೆಗಳ ವಿಚಾರವಾಗಿ ಸದನದಲ್ಲಿ ಕನಿಷ್ಠ ತುಟಿ ಬಿಚ್ಚಿ ಮಾತನಾಡದಷ್ಟು ಸೋಮಾರಿಗಳಾಗಿದ್ದಾರೆ’ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಕಿಡಿಕಾರಿದರು.

ಸಂಘವು ಜೂನ್‌ 1ರಂದು ಹಮ್ಮಿ ಕೊಂಡಿರುವ ವಿಧಾನಸೌಧ ಮುತ್ತಿಗೆ ಮತ್ತು ಬೈಕ್‌ ರ್‌್ಯಾಲಿ ಕಾರ್ಯಕ್ರಮದ ಸಿದ್ಧತೆ ಕುರಿತು ನಗರದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಬಯಲುಸೀಮೆ ಜಿಲ್ಲೆಗಳ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನದ ಬೇಡಿಕೆ ಈಡೇರಿಸುವಲ್ಲಿ ರಾಜ್ಯ ಸರ್ಕಾರ ಮಾತು ತಪ್ಪಿದೆ’ ಎಂದು ದೂರಿದರು.

‘ಜನಪ್ರತಿನಿಧಿಗಳು ಬೀದಿಗಿಳಿದು ಹೋರಾಟ ಮಾಡದಿದ್ದರೆ ಸರ್ಕಾರ ಎಚ್ಚೆತ್ತುಕೊಳ್ಳುವುದಿಲ್ಲ. ಆದರೆ, ಬಯಲುಸೀಮೆ ಭಾಗದ ಜನಪ್ರತಿನಿಧಿ ಗಳಿಗೆ ನೀರಿನ ಸಮಸ್ಯೆ ಪರಿಹರಿಸುವ ಇಚ್ಛಾಶಕ್ತಿ ಇಲ್ಲ. ಕೊಟ್ಟ ಮಾತು ಉಳಿಸಿಕೊಳ್ಳುವ ಯೋಗ್ಯತೆ ಇಲ್ಲದ ಜನ ಪ್ರತಿನಿಧಿಗಳು ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಹೇಗೆ ದುಡ್ಡು ಮಾಡಬೇಕೆಂದು ಯೋಚನೆ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಕೊಲೆ ಮಾಡಿದಂತೆ: ‘ಜನ ತಮ್ಮ ಕಷ್ಟ ಸುಖಗಳಿಗೆ ಸ್ಪಂದಿಸುವ ವ್ಯಕ್ತಿಗೆ ಮತ ಹಾಕಬೇಕು. ಚುನಾವಣೆಯಲ್ಲಿ ಪ್ರಾಮಾ ಣಿಕ ವ್ಯಕ್ತಿಯನ್ನು ಆಯ್ಕೆ ಮಾಡದಿದ್ದರೆ ಪ್ರಜಾಪ್ರಭುತ್ವವನ್ನೇ ಕೊಲೆ ಮಾಡಿದಂತೆ. ವಿಧಾನಸೌಧ ಮುತ್ತಿಗೆ ಹಾಗೂ ಬೈಕ್‌ ರ್‌್ಯಾಲಿಯಲ್ಲಿ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಯಿಂದ ತಲಾ 10 ಸಾವಿರ ಸದಸ್ಯರು ಭಾಗವಹಿಸುತ್ತಾರೆ. ಈ ಹೋರಾಟವನ್ನು ಸರಿಯಾಗಿ ನಿರ್ವಹಿಸಿದರೆ ಇದೊಂದು ದೊಡ್ಡ ಐತಿಹಾಸಿಕ ಚಳವಳಿಯಾಗುತ್ತದೆ. ಸಂಘದ ಮುಖಂಡರು ಈ ದಿಸೆಯಲ್ಲಿ ಶಕ್ತಿಮೀರಿ ಕೆಲಸ ಮಾಡಬೇಕು’ ಎಂದರು.

‘ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಪರಿಹಾರಕ್ಕೆ ಗಟ್ಟಿ ಹೋರಾಟ ನಡೆಸಬೇಕಾದ ಅಗತ್ಯವಿದೆ. ಈ ಹೋರಾಟವು ದೊಡ್ಡ ಚಳವಳಿ ಯಾಗಿ ಪರಿಣಾಮ ಬೀರಲು ಹೆಚ್ಚಿನ ಸಿದ್ಧತೆ ನಡೆಸಬೇಕು. ಗ್ರಾಮ ಪಂಚಾಯಿತಿವಾರು ಜನರನ್ನು ಹಾಗೂ ಸದಸ್ಯರನ್ನು ಸಂಘಟಿಸಬೇಕು’ ಎಂದು ಕಿವಿಮಾತು ಹೇಳಿದರು.

ರಾಜ್ಯ ರೈತ ಸಂಘದ ಕಾರ್ಯದರ್ಶಿ ಶಿವಪ್ಪ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರಸ್ವಾಮಿ, ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ರಾಮೇಗೌಡ, ಪದಾಧಿಕಾರಿಗಳಾದ ಶಾಮಣ್ಣ, ನಾರಾಯಣಸ್ವಾಮಿ ಸಭೆಯಲ್ಲಿ ಪಾಲ್ಗೊಂಡಿದ್ದರು.

*
ಎತ್ತಿನಹೊಳೆ ಯೋಜನೆಯಿಂದ ಕೋಲಾರಕ್ಕೆ ಹನಿ ನೀರೂ ಬರುವುದಿಲ್ಲ. ಜನಪ್ರತಿನಿಧಿಗಳು ಬೀದಿಗಿಳಿದು ಹೋರಾಟ ಮಾಡಿದಿದ್ದರೆ ಯಾವ ನೀರಾವರಿ ಯೋಜನೆಯೂ ಅನುಷ್ಠಾನಗೊಳ್ಳುವುದಿಲ್ಲ.
-ಕೋಡಿಹಳ್ಳಿ ಚಂದ್ರಶೇಖರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT