ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಲ ವೃದ್ಧಿಗೆ ಸಹಕರಿಸಿ

Last Updated 25 ಮೇ 2017, 6:22 IST
ಅಕ್ಷರ ಗಾತ್ರ

ಮಂಡ್ಯ: ‘ಮಳೆ ನೀರು ಸಂಗ್ರಹಣೆಗೆ ಯೋಜನೆ ರೂಪಿಸಿಕೊಂಡು ಜಲ ಸಂರಕ್ಷಣೆಯಲ್ಲಿ ತೊಡಗಬೇಕು. ಆ ಮೂಲಕ ಅಂತರ್ಜಲ ವೃದ್ಧಿಗೆ ಸಹಕರಿಸಬೇಕು’ ಎಂದು ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ ಸಲಹೆ ನೀಡಿದರು.

ನಗರದ ಗಾಂಧಿ ಭವನದಲ್ಲಿ ಜೈ ಭಾರತ ಮಾತಾ ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ನಿಂದ ಬುಧವಾರ ನಡೆದ ‘ರಾಷ್ಟ್ರೀಯ ನದಿ ಜೋಡಣೆ’ ಯೋಜನೆಯ ಅನುಷ್ಠಾನಕ್ಕೆ ಒತ್ತಾಯಿಸಿ ಸಹಿ ಸಂಗ್ರಹ ಅಭಿಯಾನದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಬರಗಾಲ ತೀವ್ರವಾಗಿದೆ. ಈಗಬೀಳುತ್ತಿರುವ ಮಳೆ ನೀರು ಸಂಗ್ರಹಣೆಗೆ ಹೆಚ್ಚು ಒತ್ತು ನೀಡುವುದು ಅಗತ್ಯ. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೀರಿನ ಅಗತ್ಯತೆ ಎಷ್ಟು ಎಂಬುದನ್ನು ಅರಿತುಕೊಳ್ಳಬೇಕು. ನಂತರ ಗ್ರಾಮಗಳಲ್ಲಿನ ಕೆರೆ ಹೂಳು ಎತ್ತುವ ಮೂಲಕ ನೀರು ಸಂರಕ್ಷಣೆಯ ಯೋಜನೆ ರೂಪಿಸಬೇಕು ಎಂದು ತಿಳಿಸಿದರು.

ರೈತರು ಆತ್ಮಹತ್ಯೆ ಮಾಡಿಕೊಂಡಾಗ ಪರಿಹಾರ ನೀಡುವ ಬದಲು, ಆತ್ಮಹತ್ಯೆ ತಪ್ಪಿಸಲು ಪರಿಹಾರ ನೀಡುವುದು ಅಗತ್ಯ. ಇದರಿಂದ ರೈತರ ಕುಟುಂಬಗಳನ್ನು ಉಳಿಸಿದಂತಾಗುತ್ತದೆ. ಯಾವುದೇ ಸರ್ಕಾರಗಳು ಅಂತಹ ನಿರ್ಣಯ ತೆಗೆದುಕೊಳ್ಳಲು ಮುಂದಾಗದೇ ಇರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಿಂದ ರಾಜ್ಯಗಳಿಗೆ, ಜಿಲ್ಲೆಯಿಂದ ಜಿಲ್ಲೆಗಳಿಗೆ ನೀರು ಬಳಸಿಕೊಳ್ಳಬಹುದು ಎಂಬುದನ್ನು ರಾಷ್ಟ್ರೀಯ ಜಲ ನೀತಿ ರೂಪಿಸಬೇಕು. ಇದನ್ನು ತಡೆಯಲು ಯಾವುದೇ ನ್ಯಾಯಾಲಯಗಳು ಹಾಗೂ ಸರ್ಕಾರಗಳು ಅಡ್ಡ ಬರದಂತೆಯೂ ನಿಯಮ ರೂಪಿಸಬೇಕು ಎಂದು ಒತ್ತಾಯಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಧರ್ಮದ ಪರ ಇದ್ದಾರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಪರ ಇದ್ದಾರೆ. ಇವರಿಬ್ಬರ ನಡುವೆ ರೈತರು ಯಾವ ರೀತಿ ಸಮಸ್ಯೆ ಹೇಳಿಕೊಳ್ಳುವುದು ಎಂದು ಅಸಮಾಧಾನ ವ್ಯಕ್ತ ಪಡಿಸಿದ ಅವರು, ಉತ್ತರ ಭಾರತದಲ್ಲಿ ನನೆಗುದಿಗೆ ಬಿದ್ದಿರುವ ನದಿಗಳನ್ನು ದಕ್ಷಿಣ ಭಾರತದ ನದಿಗಳಿಗೆ ಜೋಡಿಸುವ ‘ರಾಷ್ಟ್ರೀಯ ನದಿ ಜೋಡಣೆ’ ಯೋಜನೆ ಅನುಷ್ಠಾನ ಆಗಬೇಕು ಎಂದು ಅವರು ಮನವಿ ಮಾಡಿದರು.

ಜೈ ಭಾರತ ಮಾತಾ ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ಮಹದೇವ್‌್ ಮಾತನಾಡಿ, ‘ಮೀಸಲಾತಿ ತೆಗೆದರೆ ಸಮಾಜ ಅಭಿವೃದ್ಧಿ ಆಗುತ್ತದೆ. ಎಲ್ಲರೂ ಒಂದೇ ಎಂಬ ಭಾವನೆ ಬರುತ್ತದೆ’ ಎಂದು ಅಭಿಪ್ರಾಯಪಟ್ಟರು.

ಇದಕ್ಕೂ ಮುನ್ನ ಪ್ರಧಾನ ಮಂತ್ರಿ ಅವರಿಗೆ ಮನವಿ ಮಾಡಲು ‘ರಾಷ್ಟ್ರೀಯ ನದಿ ಜೋಡಣೆ’ ಅನುಷ್ಠಾನ ಆಗಬೇಕು ಎಂದು ಒತ್ತಾಯಿಸಿ ಸಹಿ ಸಂಗ್ರಹಿಸುವ ಕಾರ್ಯಕ್ರಮ ನಡೆಯಿತು.  ಮಹಾತ್ಮಗಾಂಧಿ ಸ್ಮಾರಕ ಟ್ರಸ್ಟ್‌ ಅಧ್ಯಕ್ಷ ಜಿ.ಮಾದೇಗೌಡ, ರೈತ ಮುಖಂಡರಾದ ಶಂಭೂನಹಳ್ಳಿ ಸುರೇಶ್‌, ಹನಿಯಂಬಾಡಿ ನಾಗರಾಜು, ಪಣಕನಹಳ್ಳಿ ನಾಗಣ್ಣ, ಹೊಳಲು ನಾಗರಾಜು, ಲತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT