ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಮೊಬೈಲ್‌ ಕೊಡುವ ನೆಪದಲ್ಲಿ ಗ್ರಾಹಕರಿಗೆ ವಂಚನೆ

Last Updated 25 ಮೇ 2017, 6:39 IST
ಅಕ್ಷರ ಗಾತ್ರ

ಸಿರ್ಸಿ (ಜನವಾಡ): ಹೊಸ ಮೊಬೈಲ್‌ ಕೊಡುವ ನೆಪದಲ್ಲಿ ಬೆಂಗಳೂರು ಮೂಲದ ಸಂಸ್ಥೆಯೊಂದು ಧಾರವಾಡದ ಖುಷಿ ಎಂಟರ್‌ಪ್ರೈಸಸ್‌ ಹೆಸರಲ್ಲಿ ಪ್ಲಾಸ್ಟಿಕ್‌ ಮೂರ್ತಿಗಳನ್ನು ಕಳುಹಿಸಿ ಬೀದರ್‌ ತಾಲ್ಲೂಕಿನ ಸಿರ್ಸಿ(ಎ) ಗ್ರಾಮದ ಮಲ್ಲಿಕಾರ್ಜುನ ನಾಗನಕೇರಿ ಅವರಿಗೆ ವಂಚನೆ ಮಾಡಿದೆ.

20 ದಿನಗಳ ಹಿಂದೆ ಬೆಂಗಳೂರಿನಿಂದ ಮಹಿಳೆಯೊಬ್ಬರು ಕರೆ ಮಾಡಿ ಖುಷಿ ಎಂಟರ್‌ಪ್ರೈಸಸ್‌ ಹೆಸರಲ್ಲಿ ಪರಿಚಯಿಸಿಕೊಂಡಿದ್ದಾರೆ. ‘ಅದೃಷ್ಟ ಗ್ರಾಹಕರ ಆಯ್ಕೆ ಪ್ರಕ್ರಿಯೆಯಲ್ಲಿ ನಿಮ್ಮ ಮೊಬೈಲ್‌ ಸಂಖ್ಯೆ ಆಯ್ಕೆಯಾಗಿದೆ.

ನಿಮ್ಮ ಮನೆಗೆ ಸ್ಯಾಮಸಂಗ್‌ ಗ್ಯಾಲಕ್ಸಿ ಮೊಬೈಲ್‌ ಫೋನ್, ಬಂಗಾರದ ಲೇಪನ ಇರುವ ಆಭರಣ ಕಳುಹಿಸಲಾಗುವುದು. ನೀವು ಮೊದಲೇ ಹಣ ಕಳುಹಿಸುವ ಅಗತ್ಯವಿಲ್ಲ. ಅಂಚೆ ಮೂಲಕ ಮೊಬೈಲ್‌ ಫೋನ್‌ ಕೈಸೇರಿದ ನಂತರ ₹ 1,600 ಪಾವತಿಸಬೇಕು’ ಎಂದು ನಂಬಿಸಿದ್ದಾರೆ. 

ಮನೆಯ ವಿಳಾಸವನ್ನೂ ಬರೆದುಕೊಂಡಿದ್ದಾರೆ. ನಂತರ ಅಂಚೆ ಮೂಲಕ ಬಾಕ್ಸ್‌ ಕಳುಹಿಸಿ ಹಣಕೊಟ್ಟು ಬಿಡಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಅಂಚೆ ಇಲಾಖೆ  ಸಿಬ್ಬಂದಿಗೆ ಸಂಶಯ ಬಂದು ಇವೆಲ್ಲ ಮೋಸದ ವ್ಯವಹಾರವಾಗಿರುವುದರಿಂದ ಎಚ್ಚರಿಕೆ ವಹಿಸುವಂತೆ ತಿಳಿವಳಿಕೆಯನ್ನೂ ನೀಡಿದ್ದಾರೆ.

ಕುತೂಹಲ ತಾಳಲಾಗದೆ ಮಲ್ಲಿಕಾರ್ಜುನನ ಸಹೋದರ ಯಲ್ಲಾಲಿಂಗ ನಾಗನಕೇರಾ ₹ 1,600 ಹಣ ಪಾವತಿಸಿದಾಗ ಅದರಲ್ಲಿ ಪ್ಲಾಸ್ಟಿಕ್‌ ಮೂರ್ತಿ ಹಾಗೂ ಅಲ್ಯುಮಿನಿಯಂನ ಸರ ಇತ್ತು. ನೀರು ತಗುಲಿದ ತಕ್ಷಣ ಅದರ ಬಣ್ಣವೂ ಮಾಸಿ ಹೋಗಿದೆ.

ವಂಚಕರು  98451 54861 ಮೊಬೈಲ್‌ ಸಂಖ್ಯೆಯಿಂದ ಕರೆ ಮಾಡುತ್ತಿದ್ದಾರೆ. ಮೋಸ ಹೋದವರಲ್ಲಿ ಬೀದರ್‌ ತಾಲ್ಲೂಕಿನ ಗ್ರಾಮಸ್ಥರೇ ಅಧಿಕ ಸಂಖ್ಯೆಯಲ್ಲಿದ್ದಾರೆ.

ದೂರು ಕೊಟ್ಟರೆ ಪೊಲೀಸ್‌ ಠಾಣೆ ಹಾಗೂ ಕೋರ್ಟ್‌ಗೆ ಅಲೆಯಬೇಕಾಗುವುದು ಎನ್ನುವ ಭಯದಿಂದ ಪೊಲೀಸರಿಗೆ ದೂರು ನೀಡಿಲ್ಲ ಎಂದು ಸಿರ್ಸಿ ಗ್ರಾಮಸ್ಥ ಯಲ್ಲಾಲಿಂಗ ನಾಗನಕೇರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT