ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಸಿ ಬೀಜ ಸಂವರ್ಧನೆಗೆ ನಿಂತ ಯುವ ರೈತ

Last Updated 26 ಮೇ 2017, 10:33 IST
ಅಕ್ಷರ ಗಾತ್ರ

ರಾಮನಗರ: ಪಾರಂಪರಿಕ ತಳಿಗಳನ್ನು ಸಂರಕ್ಷಿಸಲು ಶ್ರಮಿಸುತ್ತಿರುವ ತಾಲ್ಲೂಕಿನ ನಿಜಿಯಪ್ಪನದೊಡ್ಡಿಯ ಯುವರೈತ ಎನ್‌. ಆರ್.ಸುರೇಂದ್ರ ಅವರಿಗೆ ಸರ್ಕಾರದ ಕರ್ನಾಟಕ ಜೀವವೈವಿಧ್ಯ ಮಂಡಳಿ ₹25 ಸಾವಿರ ಪ್ರೋತ್ಸಾಹ ನೀಡಿ ಈಚೆಗೆ ಸನ್ಮಾನಿಸಿದೆ.

ಅಳಿವಿನ ಅಂಚಿನಲ್ಲಿರುವ ದೇಸಿ ತಳಿಯ ಬೀಜ ಭಂಡಾರ ಸ್ಥಾಪಿಸಿ, ಆಸಕ್ತ ರೈತರಿಗೆ ಬೀಜ ಕೊಟ್ಟು ದ್ವಿಗುಣಗೊಳಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ತಾವು ಬೆಳೆದ ಕೃಷಿ ಉತ್ಪನ್ನ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಿ ಮಧ್ಯವರ್ತಿಗಳ ಶೋಷಣೆಯಿಂದ ತಪ್ಪಿಸಿಕೊಂಡಿದ್ದಾರೆ. ಜತೆಗೆ ಮಳೆ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.

ಅವರಿಗೆ ಐದು ಎಕರೆ ಜಮೀನಿದೆ. ಕೊಳವೆ ಬಾವಿ ಇದೆ. ಪಿಯು ಓದುತ್ತಿದ್ದ ಅವರು ಕೃಷಿಯ ಸೆಳೆತಕ್ಕೆ ಒಳಗಾಗಿ ಅರ್ಧಕ್ಕೆ ಓದು ನಿಲ್ಲಿಸಿ ಕಳೆದ ಎಂಟು ವರ್ಷದಿಂದ ಪೂರ್ಣಾವಧಿ ಕೃಷಿಕರಾಗಿ ದೇಸಿ ತಳಿಗಳ ಬೀಜದ ಮೂ

ಅವರ ತೋಟದ ಹೆಸರು ‘ಸುಂದರವನ‘. ಇಲ್ಲಿ ಸೊಪ್ಪು, ತರಕಾರಿ, ಭತ್ತ, ರಾಗಿ, ನವಣೆ, ಹುಚ್ಚೆಳ್ಳು, ತೊಗರಿ, ಮಾವು, ಬಾಳೆ ಬೆಳೆದಿದ್ದಾರೆ. ಜೇನು ಸಾಕಣೆ ಮಾಡುತ್ತಿದ್ದಾರೆ. ಹಸು, ಕುರಿ, ಎಮ್ಮೆ, ಹಾಗೂ ಮೊಲ ಸಾಕಿದ್ದಾರೆ. ತೋಟದ ಸುತ್ತಲೂ ಬಗೆ ಬಗೆಯ ಗಿಡಗಳನ್ನು ನೆಟ್ಟು ಹಸಿರು ಬೇಲಿ ನಿರ್ಮಿಸಿದ್ದಾರೆ.

ಎಲ್ಲ ಬೆಳೆಗಳಿಗೆ ಹಸಿರೆಲೆ ಗೊಬ್ಬರ, ಎರೆಗೊಬ್ಬರದ ದ್ರಾವಣ, ತಿಪ್ಪೆಗೊಬ್ಬರ, ಎರೆಹುಳು ಗೊಬ್ಬರ, ಜೀವಾಮೃತ ಕೊಡುತ್ತಾರೆ. ಸ್ವತಃ ತಯಾರಿಸಿದ ಜೈವಿಕ  ಕೀಟನಾಶಕ ಬಳಕೆ ಮಾಡುತ್ತಾರೆ. ಸಂಪೂರ್ಣವಾಗಿ ಸಾವಯವ ಕೃಷಿ ಅನುಸರಿಸುತ್ತಿದ್ದಾರೆ.

ಅವರ ನೇತೃತ್ವದಲ್ಲಿ ಬೀಜ ಬ್ಯಾಂಕ್ ಸ್ಥಾಪನೆಯಾಗಿ ಏಳು ವರ್ಷವಾಗಿದೆ. ಅವರ ಬಳಿ ಸೊಪ್ಪು, ತರಕಾರಿ, ಏಕದಳ ಮತ್ತು ದ್ವಿದಳ ಧಾನ್ಯಗಳ 80 ಬಗೆಯ ದೇಸಿ ಬೀಜಗಳು ಸಂಗ್ರಹವಿದೆ. ಭತ್ತ, ರಾಗಿ, ನವಣೆಯ ನಾಟಿ ತಳಿಗಳನ್ನು 800ಕ್ಕೂ ಹೆಚ್ಚು ಸ್ಥಳೀಯ ರೈತರಿಗೆ ನೀಡಿದ್ದಾರೆ.

ಅವರ ಬಳಿ ಒಂದು ಕಿಲೋ ಬೀಜ ಪಡೆದುಕೊಂಡರೆ ಅದಕ್ಕೆ ಪ್ರತಿಯಾಗಿ ಸಂಪೂರ್ಣ ಸಾವಯವದಲ್ಲಿ ಬೆಳೆದು ಎರಡು ಕಿಲೋ ಹಿಂತಿರುಗಿಸಬೇಕು. ಸಾವಯವ ಕೃಷಿಕರಲ್ಲದವರಿಗೆ ಕಿಲೋಗೆ ಇಂತಿಷ್ಟು ಎಂದು ದರ ನಿಗದಿ ಮಾಡಲಾಗಿದೆ. ಅವರಿಂದ ಮರಳಿ ಬೀಜ ಪಡೆಯುವುದಿಲ್ಲ.

ಅಲ್ಲದೆ, ಸಸಿಮಡಿ ತಯಾರಿಕೆ, ನಾಟಿ, ಗೊಬ್ಬರ, ಜೈವಿಕ ಕೀಟನಾಶಕ ಸಿಂಪರಣೆ, ಸಸ್ಯ ಸಂರಕ್ಷಣೆ, ಕೊಯ್ಲು, ಬೀಜ ಸಂರಕ್ಷಣೆ ವಿಷಯವಾಗಿ ಅವರು ಈ ಸಂದರ್ಭದಲ್ಲಿ ಮಾರ್ಗದರ್ಶನ ನೀಡುತ್ತಾರೆ. ‘ಒಣ ಭೂಮಿ ರೈತರಿಗೆ ದೇಸಿ ತಳಿ ಬೀಜಗಳು ವರದಾನ. ಅವಕ್ಕೆ ರೋಗ ಕಡಿಮೆ. ಮಳೆಯಾಶ್ರಯದಲ್ಲಿ ಸೊಗಸಾಗಿ ಬೆಳೆಯುತ್ತವೆ.

ಕಡಿಮೆ ಗೊಬ್ಬರದಲ್ಲೂ ಉತ್ತಮ ಇಳುವರಿ ನೀಡುತ್ತವೆ. ಒಕ್ಕಣೆ, ಸಂಸ್ಕರಣೆ ಸುಲಭ. ಪೌಷ್ಟಿಕಾಂಶಗಳ ಆಗರ. ಜತೆಗೆ ಬೀಜ ಸ್ವಾತಂತ್ರ್ಯ ಸಂರಕ್ಷಣೆಗೆ ಸಹಕಾರಿ’ ಎನ್ನುತ್ತಾರೆ ಎನ್.ಆರ್.ಸುರೇಂದ್ರ ಅವರು.

‘ಕಳೆದ ಮೂರು ದಶಕದ ಹಿಂದೆ ರೈತರ ಹೊಲ, ಗದ್ದೆಗಳಲ್ಲಿ ಅಧಿಕವಾಗಿ ದೇಸಿ ತಳಿಗಳೇ ಇದ್ದವು. ಬೇಸಾಯ ಕಡಿಮೆ ಖರ್ಚಿನದಾಗಿತ್ತು. ಆಹಾರದ ಭದ್ರತೆ, ಜತೆಗೆ ಆರೋಗ್ಯವೂ ಚೆನ್ನಾಗಿತ್ತು. ಹಸಿರುಕ್ರಾಂತಿ ಕಾಲೂರಿದಾಗ ಹೈಬ್ರಿಡ್ ತಳಿಗಳು ಪೇಟೆಗೆ ದಾಂಗುಡಿ ಇಟ್ಟವು. ರೈತರು ಅವುಗಳ ಆಕರ್ಷಣೆಗೆ ಮಾರು ಹೋದರು’ ಎಂದು ಅವರು  ವಿವರಿಸಿದರು.

‘ಕಾಲಕ್ರಮೇಣ ದೇಸಿ ತಳಿಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳತೊಡಗಿದವು. ಬೇಸಾಯ ವೆಚ್ಚ ದುಬಾರಿಯಾಯಿತು. ಲಾಭಾಂಶ ಕಡಿಮೆ. ಸಾಲ ಮತ್ತು ಬಡ್ಡಿ ಅಧಿಕವಾದವು. ಇದರಿಂದ ಬೇಸತ್ತು ಬೇಸಾಯ ತಾತ್ಸಾರ ಮಾಡಿದರು. ಈಗ ತಪ್ಪಿನ ಅರಿವಾಗಿ ಮತ್ತೆ ರೈತರು ದೇಸಿ ತಳಿಗಳ ಕಡೆಗೆ ದೃಷ್ಟಿ ಹರಿಸಿದ್ದಾರೆ’ ಎಂದು ಅವರು ತಿಳಿಸಿದರು.

ಗ್ರಾಹಕರಿಗೆ ನೇರ ಮಾರಾಟ
ಕೆಂಪು ಮುಂಡಗದ ಅಕ್ಕಿ’ ಹೆಸರಿನ ಬ್ರಾಂಡ್ ಅಡಿಯಲ್ಲಿ ತಾವು ಬೆಳೆದ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರುತ್ತಾರೆ. ದೇಸಿ ತಳಿ ಬೀಜಗಳನ್ನು ಸಣ್ಣ ಪೊಟ್ಟಣದಲ್ಲಿ ಇಟ್ಟು ₹10 ದರ ನಿಗದಿ ಮಾಡಿ ಕೃಷಿ ಮೇಳಗಳಲ್ಲೂ ಮಾರುತ್ತಾರೆ. ಎರೆಹುಳು, ಎರೆಗೊಬ್ಬರ, ಮಾವು, ಬಾಳೆ, ಹಾಲು ಇನ್ನಿತರ ಉತ್ಪನ್ನಗಳ ಮಾರಾಟದಿಂದ ಸಾಕಷ್ಟು ಆದಾಯವೂ ಇದೆ ಎನ್ನುತ್ತಾರೆ ಆರ್.ಸುರೇಂದ್ರ.

* * 

ಒಣಭೂಮಿ ರೈತರಿಗೆ ದೇಸಿ ತಳಿ ಬೀಜಗಳು ವರದಾನ. ಮಳೆಯಾಶ್ರಯದಲ್ಲಿ ಸೊಗಸಾಗಿ ಬೆಳೆಯುತ್ತವೆ. ಕಡಿಮೆ ಗೊಬ್ಬರದಲ್ಲೂ ಉತ್ತಮ ಇಳುವರಿ ನೀಡುತ್ತವೆ
ಎನ್‌.ಆರ್. ಸುರೇಂದ್ರ
ಯುವ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT