ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಜೆತನಕ್ಕೆ ಇದೂ ಕಾರಣವಾಗಬಹುದು

Last Updated 26 ಮೇ 2017, 19:30 IST
ಅಕ್ಷರ ಗಾತ್ರ

ಮಣಿಪಾಲ್ ಫರ್ಟಿಲಿಟಿ ಇತ್ತೀಚೆಗೆ ಅಧ್ಯಯನವೊಂದನ್ನು ನಡೆಸಿತು. ಪ್ರಜನನ ಸಾಮರ್ಥ್ಯ ಹೊಂದಿರುವ ಭಾರತೀಯ ಮಹಿಳೆಯರಲ್ಲಿ ಶೇ. 20–25ರಷ್ಟು  ಮಹಿಳೆಯರು ‘ಪಾಲಿಸಿಸ್ಟಿಕ್ ಒವೇರಿಯನ್ ಸಿಂಡ್ರೋಮ್’ ಸಮಸ್ಯೆ ಎದುರಿಸುತ್ತಿರುವುದು ಅದರಿಂದ ತಿಳಿದುಬಂದಿತು.

‘ಪಾಲಿಸಿಸ್ಟಿಕ್ ಒವೇರಿಯನ್ ಸಿಂಡ್ರೋಮ್’ ಅನ್ನು ಪಿಸಿಓಎಸ್ ಎಂದೂ ಕರೆಯುತ್ತಾರೆ. ಮಣಿಪಾಲ್ ಫರ್ಟಿಲಿಟಿಯ ಈ ಅಧ್ಯಯನ, ಪಿಸಿಒಎಸ್ 15ರಿಂದ 30 ವಯೋಮಾನದ ಮಹಿಳೆಯರಲ್ಲಿ ಅತಿ ಹೆಚ್ಚಿನ ಮಟ್ಟದಲ್ಲಿ ಏರಿಕೆಯಾಗುವುದನ್ನು ತಿಳಿಸಿತ್ತು. ಅದರಲ್ಲೂ ಕಳೆದ ಹತ್ತು ವರ್ಷಗಳಿಗೆ ಹೋಲಿಸಿದರೆ ಇದರ ಪ್ರಮಾಣ ಭೀತಿ ಉಂಟುಮಾಡಿರುವುದಂತೂ ಹೌದು.

ಭಾರತೀಯ ಮಹಿಳೆಯರಲ್ಲಿ ಐವರಲ್ಲಿ ಒಬ್ಬರು ಮಹಿಳೆಯರಿಗೆ ಈ ಸಮಸ್ಯೆ ಎದುರಾಗುತ್ತಿದೆ. ಭಾರತದ ಪೂರ್ವ ರಾಜ್ಯಗಳಲ್ಲಿ ಈ ಪ್ರಮಾಣ ನಾಲ್ವರಲ್ಲಿ ಒಬ್ಬ ಮಹಿಳೆಗೆ ಇದೆ. ಈ ಅಂಕಿ–ಅಂಶ ಆತಂಕಪಡುವ ವಿಚಾರವಲ್ಲವೇ?

ಮಹಿಳೆಯರಲ್ಲಿ ಹಾಗೂ ಪ್ರಾಯದ ಹುಡುಗಿಯರಲ್ಲಿ ಈ ಸಮಸ್ಯೆ ಯಾವ ಪ್ರಮಾಣದಲ್ಲಿ ಹೆಚ್ಚುತ್ತಿದೆ ಎಂದರೆ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಇದಕ್ಕೆಂದು ರಾಷ್ಟ್ರೀಯ ಸಮೀಕ್ಷೆಯನ್ನೂ ನಡೆಸಿತು.

ಸಮಸ್ಯೆ ಪತ್ತೆಯಾಗದೇ ಅಥವಾ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರಕದೆ  ಬಂಜೆತನಕ್ಕೆ ಎಡೆ ಮಾಡಿಕೊಡಬಹುದಾದ ಸಾಧ್ಯತೆ ಈ ಸಮೀಕ್ಷೆಯನ್ನು ಕೈಗೊಳ್ಳುವ ಮುಖ್ಯ ಕಾರಣಗಳಲ್ಲಿ ಒಂದಾಗಿತ್ತು.

ಪಾಲಿಸಿಸ್ಟಿಕ್ ಒವೇರಿಯನ್ ಸಿಂಡ್ರೋಮ್ ಎಂದರೆ: ಪಾಲಿಸಿಸ್ಟಿಕ್ ಒವೇರಿಯನ್ ಸಿಂಡ್ರೋಮ್, ಅಂಡಾಶಯ ಸಂಬಂಧಿ ತೊಂದರೆಯಾಗಿದ್ದು, ಇತ್ತೀಚೆಗೆ ಮಹಿಳೆಯರಲ್ಲಿ ಬಂಜೆತನ ಉಂಟುಮಾಡುವಲ್ಲಿ ಇದರ ಪ್ರಮಾಣವೇ ಹೆಚ್ಚಿದೆ. ಮಹಿಳೆಯರಲ್ಲಿ ಹಾರ್ಮೋನಿನ ಅಸಮತೋಲನ ಹಾಗೂ ಮೆಟಬಾಲಿಸಂನ ಸಮಸ್ಯೆ ಇದರ ಪ್ರಮುಖ ಲಕ್ಷಣ. ಈ ಅಸಮತೋಲನ ಅಂಡಾಶಯಗಳಲ್ಲಿ ಸಮಸ್ಯೆಗಳನ್ನು ಹುಟ್ಟಿಹಾಕುತ್ತದೆ.

ಇದರ ಲಕ್ಷಣಗಳನ್ನು ತಿಳಿಯೋಣ

* ಅನಿಯಮಿತ ಋತುಚಕ್ರ ಇದರ ಮೊದಲ ಲಕ್ಷಣ. ಸರಿಯಾದ ಅವಧಿಗೆ ಋತುಚಕ್ರವಾಗದೇ ಇರುವುದು ಅಥವಾ ಋತುಚಕ್ರ ನಿಂತುಹೋಗುವುದು.

* ಮುಖದ ಮೇಲೆ ಅತಿಯಾದ ಕೂದಲು ಬೆಳೆಯುವುದು ಇದರ ಮತ್ತೊಂದು ಲಕ್ಷಣ. ಮುಖ, ಕೆನ್ನೆ ಹಾಗೂ ದೇಹದ ಇತರ ಅಂಗಗಳ ಮೇಲೆ ಪುರುಷರಿಗೆ ಕೂದಲು ಇರುವುದು ಸಹಜ. ಆದರೆ ಇದು ಮಹಿಳೆಯರಲ್ಲೂ ಕಾಣಿಸಿಕೊಳ್ಳುತ್ತದೆ. ಇದನ್ನೇ ಹಿರ್ಸುಟಿಸಂ ಎನ್ನುತ್ತಾರೆ. ಪಿಸಿಒಎಸ್ ಇರುವ ಶೇ.70ರಷ್ಟು ಮಹಿಳೆಯರಿಗೆ ಹೀಗಾಗುತ್ತದೆ. ಮುಖದ ಮೇಲೆ, ಎದೆಯ ಮೇಲೆ ಹಾಗೂ ಬೆನ್ನಿನ ಮೇಲೆ ಕೂದಲುಗಳು ಕಾಣಿಸಿಕೊಳ್ಳುತ್ತದೆ.

* ಕೂದಲು ತೆಳುವಾಗುವುದು ಹಾಗೂ ಕೂದಲು ಉದುರುವುದು. ಪುರುಷರಂತೆ ಬೊಕ್ಕತಲೆಯಾಗುವುದು.

* ತೂಕ ಹೆಚ್ಚುವುದು ಹಾಗೂ ತೂಕ ಇಳಿಸಿಕೊಳ್ಳಲು ಸಾಧ್ಯವಾಗದೇ ಇರುವುದು.

* ಚರ್ಮ ಕಪ್ಪಾಗುವುದು, ಅದರಲ್ಲೂ ಕತ್ತಿನ ಭಾಗದಲ್ಲಿ, ತೊಡೆಸಂದುಗಳಲ್ಲಿ ಹಾಗೂ ಎದೆಯ ಕೆಳಭಾಗದಲ್ಲಿ ಚರ್ಮ ಕಪ್ಪಾಗುತ್ತದೆ.

ಪಿಸಿಒಎಸ್ ಇರುವವರಲ್ಲಿ ಶೇ.60 ಮಹಿಳೆಯರು ಸ್ಥೂಲಕಾಯದವರಾಗಿರುತ್ತಾರೆ. ಶೇ.35ರಿಂದ 50 ಮಹಿಳೆಯರಿಗೆ ಯಕೃತ್ತು ಊತಗೊಳ್ಳುವ ತೊಂದರೆ ಎದುರಾಗುತ್ತದೆ. ಶೇ. 70ರಷ್ಟು ಮಹಿಳೆಯರಿಗೆ ಇನ್ಸುಲಿನ್ ಪ್ರತಿರೋಧಕ, ಶೇ.60-70 ಮಹಿಳೆಯರಲ್ಲಿ ಹೆಚ್ಚಿನ ಮಟ್ಟದ ಆಂಡ್ರೊಜೆನ್ ಉತ್ಪತ್ತಿಯಾಗುವ ಸಮಸ್ಯೆಗಳು ಕಂಡುಬರುತ್ತವೆ.

ಸಮಸ್ಯೆಯು ದುಪ್ಪಟ್ಟಾಗಲು ಅನಾರೋಗ್ಯಕರ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿ, ವ್ಯಾಯಾಮದ ಕೊರತೆಯೇ ಬಹುಮುಖ್ಯ ಕಾರಣಗಳಾಗಿವೆ.

ಬಂಜೆತನಕ್ಕೆ ಕಾರಣ

ಪಿಸಿಒಎಸ್ ಲಕ್ಷಣಗಳನ್ನು ಗುರುತಿಸದೇ ಇದ್ದರೆ ಅದು ಬಂಜೆತನಕ್ಕೆ ಕಾರಣವಾಗುತ್ತದೆ.  ಪಿಸಿಒಎಸ್ ಹೊಂದಿರುವ ಮಹಿಳೆಯರಲ್ಲಿ, ಅಂಡಾಣುಗಳ ಬೆಳವಣಿಗೆ ಸಮರ್ಪಕವಾಗಿ ಸಾಧ್ಯವಾಗುವುದಿಲ್ಲ. ಅಂಡಾಣು ಬಿಡುಗಡೆಯಾಗುವಲ್ಲಿಯೂ ತೊಂದರೆಯಾಗುವುದರಿಂದ ಗರ್ಭಧಾರಣೆಗೆ ಅಡ್ಡಿಯಾಗಬಹುದು.

ಬಹಳಷ್ಟು ಮಹಿಳೆಯರು ಈ ಸಮಸ್ಯೆ ತಮಗಿದೆ ಎಂದು ಅತಿ ತಡವಾಗಿ ಕಂಡುಕೊಳ್ಳುತ್ತಾರೆ. ತಾವು ಗರ್ಭ ಧರಿಸಲು ಸಾಧ್ಯವಾಗದೇ ಇದ್ದಾಗ ಈ ಸಮಸ್ಯೆ ಬೆಳಕಿಗೆ ಬರುತ್ತದೆ. ಈ ಸಮಸ್ಯೆ ಯಾವ ಮಹಿಳೆಯಲ್ಲಿ ಬೇಕಾದರೂ ಕಾಣಿಸಿಕೊಳ್ಳಬಹುದು. ಪ್ರೌಢಾವಸ್ಥೆ ತಲುಪಿದ ನಂತರ ಯಾವಾಗ ಬೇಕಾದರೂ ತಲೆದೋರಬಹುದು. ಆದರೆ ಸ್ಥೂಲಕಾಯ ಹೊಂದಿದ್ದರೆ ಅಥವಾ ಆನುವಂಶಿಕವಾಗಿಯೂ ಬರುವ ಸಾಧ್ಯತೆ ಹೆಚ್ಚು.


(ಮುಂದುವರೆಯುತ್ತದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT