ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

Last Updated 27 ಮೇ 2017, 7:11 IST
ಅಕ್ಷರ ಗಾತ್ರ

ಕಲಬುರ್ಗಿ: ಭರವಸೆಗಳನ್ನು ಈಡೇರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಸಿಐಟಿಯು ಸಂಘಟನೆ ಮತ್ತು ಸಕಾಲಕ್ಕೆ ವೇತನ ಪಾವತಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ ಜಿಲ್ಲಾ ಸಮಿತಿ ಸದಸ್ಯರು ನಗರದಲ್ಲಿ ಶುಕ್ರವಾರ ಪ್ರತ್ಯೇಕ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿದರು.

ಸಿಐಟಿಯು: ನಗರದ ಸರ್ದಾರ ವಲ್ಲಭಭಾಯ್‌ ಪಟೇಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಸಿಐಟಿಯು ಸಂಘಟನೆ ಮುಖಂಡರು ಮತ್ತು ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸರ್ಕಾರದ ಪ್ರಣಾಳಿಕೆ ದಹಿಸಿದರು.

ಸಂಘಟನೆಯ ನಾಯಕಿ ಶಾಂತಾ ಘಂಟಿ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮೂರು ವರ್ಷ ಅವಧಿ ಪೂರೈಸಿದರೂ ಭರವಸೆಗಳನ್ನು ಈಡೇರಿಸಿಲ್ಲ. ಜನಸಾಮಾನ್ಯರನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ’ ಎಂದರು.

‘ಮೂರು ವರ್ಷಗಳ ಅವಧಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಆಹಾರ ಹಕ್ಕಿನ ಮೇಲೆ ನಡೆದಿದೆ.  ಕೋಮು ವೈಷಮ್ಯ ಹೆಚ್ಚಾಗಿದ್ದು ಅಲ್ಪಸಂಖ್ಯಾತರು, ದೀನದಲಿತರ ಮೇಲೆ ಹಲ್ಲೆ ನಡೆಯುತ್ತಿದೆ. ಸರ್ಕಾರವು ಜನರ ಬದುಕಿನ ಸುಧಾರಿಸಲು ಕ್ರಮ ಕೈಗೊಳ್ಳಬೇಕೆ ಹೊರತು ಅವರನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಬಾರದು’ ಎಂದರು.ಸಂಘಟನೆಯ ಮುಖಂಡರಾದ ರಾಮು, ಆನಂದ,  ನಾಗಯ್ಯಸ್ವಾಮಿ, ಗೌರಮ್ಮ ಪಾಟೀಲ, ಮಹದೇವಮ್ಮ ಮತ್ತು ದೇವಮ್ಮ ಪಾಲ್ಗೊಂಡಿದ್ದರು.

ಹೊರಗುತ್ತಿಗೆ ನೌಕರರ ಸಂಘ: ಸರ್ಕಾರಿ ವಸತಿ ನಿಲಯಗಳಲ್ಲಿನ ಹೊರಗುತ್ತಿಗೆ ನೌಕರರನ್ನು ಕಾಯಂಗೊಳಿಸುವಂತೆ ಆಗ್ರಹಿಸಿ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಬಳಿ ಹೊರಗುತ್ತಿಗೆ ನೌಕರರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಮಾತನಾಡಿ, ‘ನೇರ ನೇಮಕಾತಿ ಮತ್ತು ಎಸ್ಸೆಸ್ಸೆಲ್ಸಿ ಕಡ್ಡಾಯದ ಷರತ್ತು ಕೈಬಿಟ್ಟು ಹೊರಗುತ್ತಿಗೆ ನೌಕರರಿಗೆ ಉದ್ಯೋಗ ಭದ್ರತೆ ಕಲ್ಪಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಕೆಲಸದಿಂದ ತೆಗೆದು ಹಾಕಲಾದ ನೌಕರರನ್ನು ಪುನಃ ನೇಮಿಸಿಕೊಳ್ಳಬೇಕು. ಪ್ರತಿ ತಿಂಗಳು ಸಕಾಲಕ್ಕೆ ವೇತನ ಪಾವತಿಸಬೇಕು’ ಎಂದರು.

ಸಂಘದ ಕಾರ್ಯದರ್ಶಿ ಮೋಹನ ಎಂ.ಕಟ್ಟಿಮನಿ, ಮುಖಂಡರಾದ ಭಾಗಣ್ಣ ದೇವನೂರ ಆಳಂದ, ಕಲಾವತಿ ಅಫಜಲಪುರ, ಪರಶುರಾಮ ಜೇವರ್ಗಿ, ಫಾತಿಮಾ ಬೇಗಂ ಮತ್ತು ರಾಜು ಚಿತ್ತಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT