ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ– ಕೃಷಿ ಚಟುವಟಿಕೆಗೆ ಚಾಲನೆ

Last Updated 27 ಮೇ 2017, 9:51 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಮೇ ತಿಂಗಳ ಮೊದಲ ವಾರದಿಂದಲೇ ಮಳೆ ಬೀಳಲು ಪ್ರಾರಂಭವಾಗಿದ್ದು ಖುಷ್ಕಿ ಭೂಮಿಯನ್ನು ಹೊಂದಿರುವ ರೈತರು ಉಳುಮೆಯಲ್ಲಿ ತೊಡಗಿದ್ದರೆ,  ನೀರಾವರಿ ಮೂಲಗಳನ್ನು ಹೊಂದಿರುವ ರೈತರು ಮುಸುಕಿನ ಜೋಳ ನಾಟಿಯಲ್ಲಿ ತೊಡಗಿದ್ದಾರೆ.

ಈ ಬಾರಿಯು ಮುಸುಕಿನಜೋಳ ಬಿತ್ತನೆ ಪ್ರದೇಶ ಹೆಚ್ಚಾಗುವ ಸಾಧ್ಯತೆ ಇದ್ದು, ಈಗಾಗಲೇ ಕೊಳವೆ ಬಾವಿಗಳನ್ನು ಹೊಂದಿರುವ ಅರ್ಧಕ್ಕೂ ಹೆಚ್ಚಿನ ರೈತರು ಜೋಳ ಬಿತ್ತನೆ ಕೆಲಸವನ್ನು ಮುಗಿಸಿದ್ದಾರೆ.

ತಾಲ್ಲೂಕಿನಲ್ಲಿ ಮುಂಗಾರು ಪೂರ್ವ ಮಳೆ ಉಳುಮೆಗೆ ತೊಂದರೆಯಾಗದಂತೆ ಹದವಾಗಿ ಬೀಳುತ್ತಿದ್ದರೂ ಕೆರೆಗಳಿಗೆ ನೀರು ಬಂದಿಲ್ಲ. ಸಾಸಲು ಹೋಬಳಿಯ ಒಂದೆರಡು ಸಣ್ಣ ಪುಟ್ಟ ಕೆರೆಗಳಿಗೆ ಅಲ್ಪಸ್ವಲ್ಪ ನೀರು ಬಂದಿವೆ. ಉಳಿದಂತೆ ಯಾವುದೇ ಕೆರೆಗಳಲ್ಲೂ ನೀರು ಇಲ್ಲದೆ ಬರಿದಾಗಿವೆ.

ಕೃಷಿ ಇಲಾಖೆ ಅಂಕಿ ಅಂಶದಂತೆ ಜನವರಿಯಿಂದ ಮೇ ತಿಂಗಳ ಕೊನೆಯ ವಾರಕ್ಕೆ ವಾಡಿಕೆ ಮಳೆ 134 ಮಿ.ಮೀ ಆಗಬೇಕಿತ್ತು, ಆದರೆ 206 ಮಿ.ಮೀ ಮಳೆ ಬಿದ್ದಿದೆ. ತಾಲ್ಲೂಕಿನ ಐದು ಹೋಬಳಿಗಳ ಪೈಕಿ ಹೆಚ್ಚಿನ ಮಳೆ ಈ ಬಾರಿ ತೂಬಗೆರೆ ಹೋಬಳಿಯಲ್ಲಿ 238 ಮಿ.ಮೀ ಬಿದ್ದಿದೆ. ಸಾಸಲು ಹೋಬಳಿ 229 ಮಿ.ಮೀ, ಕಸಬಾ ಹೋಬಳಿ 204 ಮಿ.ಮೀ, ದೊಡ್ಡಬೆಳವಂಗಲ 184 ಮಿ.ಮೀ, ಮಧುರೆ ಹೋಬಳಿಯಲ್ಲಿ 172 ಮಿ.ಮೀ ಮಳೆ ಬಿದ್ದಿದೆ.

ಕೃಷಿ ಇಲಾಖೆಯ 2017–18ನೇ ಸಾಲಿನ ಮುಂಗಾರು ಹಂಗಾಮಿನ ವಿವಿಧ ಬೆಳೆಗಳ ಬಿತ್ತನೆ ಗುರಿ (ಹೆಕ್ಟೇರ್‌ನಲ್ಲಿ) ಹೀಗಿದೆ: ರಾಗಿ ನೀರಾವರಿ ಪ್ರದೇಶದಲ್ಲಿ 204 , ಖುಷ್ಕಿಯಲ್ಲಿ 8,936 , ಮುಸುಕಿನ ಜೋಳ ನೀರಾವರಿ ಪ್ರದೇಶದಲ್ಲಿ  1,768,  ಖುಷ್ಕಿಯಲ್ಲಿ  8,432, ಭತ್ತ ನೀರಾವರಿ ಪ್ರದೇಶದಲ್ಲಿ 32, ಖುಷ್ಕಿಯಲ್ಲಿ 18, ತೃಣಧಾನ್ಯ ಖುಷ್ಕಿಯಲ್ಲಿ 25, ಪಾಪ್‌ಕಾರ್ನ್‌ ನೀರಾವರಿ ಪ್ರದೇಶದಲ್ಲಿ 120, ಮೇವಿನಜೋಳ ನೀರಾವರಿ ಪ್ರದೇಶದಲ್ಲಿ 101, ಖುಷ್ಕಿಯಲ್ಲಿ 629 ಹೆಕ್ಟೇರ್‌ನಲ್ಲಿ ಬೆಳೆಯುವ ಗುರಿ ಇದೆ.

ತೊಗರಿ ನೀರಾವರಿ 136, ಖುಷ್ಕಿಯಲ್ಲಿ 449,  ಅವರೆ  ನೀರಾವರಿ 44, ಖುಷ್ಕಿಯಲ್ಲಿ 336, ಅಲಸಂದೆ ನೀರಾವರಿ 56, ಖುಷ್ಕಿಯಲ್ಲಿ  104 , ನೆಲಗಡಲೆ ನೀರಾವರಿ 19, ಖುಷ್ಕಿಯಲ್ಲಿ 81, ಸಾಸಿವೆ ಖುಷ್ಕಿಯಲ್ಲಿ 150 ಹೆಕ್ಟೇರ್‌ ಬೆಳೆ ಗುರಿ ಇದೆ.

ಹುಚ್ಚೆಳ್ಳು ಖುಷ್ಕಿಯಲ್ಲಿ 70 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗುವ ಗುರಿಯನ್ನು ಹೊಂದಲಾಗಿದೆ. ಒಟ್ಟಾರೆ ನೀರಾವರಿ ಪ್ರದೇಶದಲ್ಲಿ 2,480 ಹೆಕ್ಟೇರ್‌ ಹಾಗೂ ಖುಷ್ಕಿಯಲ್ಲಿ 19,350 ಹೆಕ್ಟೇರ್‌ ಪ್ರದೇದಲ್ಲಿ ವಿವಿಧ ಬೀಜಗಳ ಬಿತ್ತನೆಯಾಗುವ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ.

ಶೇ 50ರಷ್ಟು ಹಣ ಪಾವತಿ: ಕೃಷಿ ಹೊಂಡಗಳಿಗೆ ಸೂಕ್ತ ಸುರಕ್ಷತೆ ಇಲ್ಲದ ಕಾರಣದಿಂದಾಗಿ ಮಳೆಗಾಲದಲ್ಲಿ ನೀರು ತುಂಬಿರುವ ಸಂದರ್ಭದಲ್ಲಿ ಹೊಂಡಗಳಲ್ಲಿ ಮುಳುಗಿ ಮೃತ ಪಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಇದನ್ನು ತಪ್ಪಿಸುವ ಸಲುವಾಗಿ ಈ ವರ್ಷದಿಂದ ಕೃಷಿ ಹೊಂಡಗಳ ಸುತ್ತ ಸುರಕ್ಷತ ಪರದೆಗಳನ್ನು (ಶೇಡ್‌ನೆಟ್‌) ನಿರ್ಮಿಸಿಕೊಳ್ಳುವ ರೈತರಿಗೆ ಶೇ50ರಷ್ಟು ಸಹಾಯದನವನ್ನು ನೀಡಲಾಗುತ್ತಿದೆ. ಈ ಹಿಂದೆ ಕೃಷಿ ಭಾಗ್ಯ ಯೋಜನೆಯಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡಿರುವ ರೈತರು ಸಹ ಶೇಡ್‌ನೆಟ್‌ಗಳನ್ನು ನಿರ್ಮಿಸಿಕೊಳ್ಳಲು ಸಹಾಯದನವನ್ನು ಪಡೆಯಬಹುದು ಎಂದು ಕೃಷಿ ಇಲಾಖೆ ಪ್ರಕಟಣೆ ತಿಳಿಸಿದೆ.  

ಬಿತ್ತನೆ ಬೀಜ ದಾಸ್ತಾನು
ತಾಲ್ಲೂಕಿನಲ್ಲಿ ಹದವಾಗಿ ಮಳೆ ಬೀಳುತ್ತಿರುವುದರಿಂದ ರೈತರು ಭೂಮಿಯನ್ನು ಉಳುಮೆ ಮಾಡಿ ಹದಗೊಳಿಸುತ್ತಿದ್ದಾರೆ.ಹೀಗಾಗಿ ಕೃಷಿ ಇಲಾಖೆ ಮೂಲಕ ರೀಯಾಯಿತಿ ದರದಲ್ಲಿ ವಿವಿಧ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲು ಈಗಾಗಲೇ ತಾಲ್ಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ರಾಗಿ ಸೇರಿದಂತೆ ಅಗತ್ಯ ಇರುವ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗಿದೆ ಎಂದು ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಿ.ತಿಮ್ಮೇಗೌಡ ತಿಳಿಸಿದ್ದಾರೆ.

ಬಿತ್ತನೆ ಬೀಜ ಪಡೆಯುವ ರೈತರು, ಪಹಣಿ, ಬ್ಯಾಂಕ್‌ ಪಾಸ್‌ ಪುಸ್ತಕ ಹಾಗೂ ಆಧಾರ್‌ ಕಾರ್ಡ್‌ನ ಜೆರಾಕ್ಸ್‌ ಪ್ರತಿಗಳನ್ನು ಕಡ್ಡಾಯವಾಗಿ ಇಲಾಖೆಗೆ ನೀಡಬೇಕು ಎಂದು ತಿಳಿಸಿದ್ದಾರೆ. ಬಿಆರ್‌ಜಿ  ತೊಗರಿ, ಅಲಂಸದೆ, ಎಂಆರ್‌–1 ರಾಗಿ, ಸಿಪಿ–818, ಸಿಪಿ–848,ಪಿ–3436 ಮುಸುಕಿನಜೋಳ ಬಿತ್ತನೆ ಬೀಜಗಳನ್ನು ರೈತರು ಹೋಬಳಿ ಕೇಂದ್ರದಲ್ಲಿನ ರೈತ ಸಂಪರ್ಕ ಕೇಂದ್ರಗಳಿಂದ ಪಡೆಯಬಹುದಾಗಿದೆ.          

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT