ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ್ಟನಡುದಾರಿ

Last Updated 27 ಮೇ 2017, 19:30 IST
ಅಕ್ಷರ ಗಾತ್ರ

-ಸಬಿತಾ ಬನ್ನಾಡಿ

**
ತಿಟ್ಟು ಏರಲು ಹೊರಟು ನಟ್ಟ ನಡು ದಾರಿಯಲಿ
ಬಿಟ್ಟು ಬರುವೆನು ಎಂದು ಹಟವು ಸಲ್ಲ
ಹಿಂದೆ ಬಂದರು ಅಷ್ಟೆ ಮುಂದೆ ಹೋದರು ಅಷ್ಟೆ
ಪಯಣವಲ್ಲದೆ ಬೇರೆ ದಾರಿ ಇಲ್ಲ

ಸವೆದ ಹಾದಿಯ ತುಂಬಾ ಕಲ್ಲುಮುಳ್ಳಿನ ನಂಟು
ಮುಂದೆ ಇದ್ದೀತು ಹೂವ ಕಣಿವೆಯ ಸೊಂಪು
ಸಮೆಸಮೆದು ಜಾರುತಿದೆ ಏಕತಾನದ ರಸ್ತೆ
ಎಡಬಲದಲೆಲ್ಲೆಡೆಯು ತಂತಿಬೇಲಿಯ ಗಂಟು

ಮುರಿಯಬೇಕೆಂಬ ಹೆಬ್ಬಯಕೆಯಬ್ಬರದಿ
ಮೈಯ ಭಾರವ ಬಿಟ್ಟು ತೇಲಿಹೋಗಲಿ ನಾವೆ
ಕಣ್ಣು ಕಾಣದ ಹೊಚ್ಚಹೊಸ ತೀರಸೇರಲಿ
ಇನ್ನು ಹಿಂದಿಲ್ಲ ಏನಿದ್ದರೂ ಮುಂದೆ

ಗಾಡಿ ಹೊರಳಲಿ ಇಳಿಜಾರಲಿ
ಇಳಿಜಾರಿನ ಸೊಗಸು ಮರೆಸೀತು ಏರುಬ್ಬಸದಾಯಾಸ
ದಾಟಿ ಹೋದೀತು ಎಲ್ಲ ಬಂಧದ ಜಾಲಿ.
ಕಣ್ಣು ಕಾಣುವವರೆಗೂ ಬಣ್ಣ ಬಣ್ಣದ
ತಿರುವು ಸಗ್ಗ ಸೊಗದ ಸವಿ ಮನದ ತುಂಬ

ಎತ್ತೆತ್ತ ನೋಡಿದರೂ ಕಣಿವೆಯಗಾಧದ ನೋಟ.
ಕೊಟ್ಟ ಕೊನೆ ಯಾವುದೆಂದರಿಯದ ಮಾಟ
ದೂರದಲ್ಲೆಲ್ಲೋ ಕರುಳ ನೆರಳಿನ ಸಿಳ್ಳಿನಾಟ

ಚೆಲುವ ಬಲೆಯಲ್ಲೂ ಏಕತಾನದಗಾನ
ಹೊತ್ತುತಂದಿತು ಗಾಳಿ ಮತ್ತೆ ಮರುಕದ ಮಾತು
ಮನದ ದಾರಿಯ ಕೊನೆಗೂ ಇದೆ ಪ್ರಪಾತ

ದಾರಿಯಂಚಲಿ ಕುಳಿತ ಮುಪ್ಪು ಮುದುಕಿಯ
ಮುಖದಿ ನೂರು ಗೆರೆಗಳ ಆಟ
ನಕ್ಕು ನುಡಿದಳು ಅವಳು ಸಾಕು ನಿಲ್ಲಿಸು ಓಟ.
ಓಡಿದಷ್ಟೂ ಸಿಕ್ಕೀತು ಹೊಸತೆನಿಸುವ ಬಯಲು.
ಅಲ್ಲಿ ಮತ್ತದೇ ಹಳತುಬೇಲಿ
ಬಯಲ ಆಳದಲೆಲ್ಲ ಮೊಳೆತ ಕಲ್ಲಿನ ತಿವಿತ

ನಗೆ ಬುಗ್ಗೆಯಲಿ ಮಿಂದು ನೇವರಿಸಿ ಮುಖಸವರಿ
ತಗೋ ಇದನು ನಡು
ಎಂದು ನೀಡಿದಳೊಂದು ಬೇಲಿಯಗಿಡ.
ಇದು ನಿನ್ನ ಬಳಿ ಇರಲಿಲ್ಲ. ನಟ್ಟು ನೀರುಣಿಸಿ ನೋಡು.
ಬೇಲಿಗೆ ಬೇಲಿಯೇ ಮೊಳೆತು ಹೂಬಿಟ್ಟು
ನೀಡುವುದು ನಿನಗೆ ನೆಲದಲ್ಲೇ ಕಾಮನಬಿಲ್ಲು

ಮುದುಕಿಯ ಮುಖದ ಒಂದೊಂದು ನಿರಿಗೆಯಲೂ ತಣ್ಣಗೆ ಹರಿವ ನದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT