ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಫ್‌ಸಿ ಗೆಲುವಿನ ರೂವಾರಿ ವಿನೀತ್‌...

Last Updated 28 ಮೇ 2017, 19:30 IST
ಅಕ್ಷರ ಗಾತ್ರ

ಭಾರತದ ಫುಟ್‌ಬಾಲ್‌ ಕ್ವಿತಿಜ ದಲ್ಲಿ ಭರವಸೆಯ ತಾರೆಯಾಗಿ ಗೋಚರಿಸಿರುವ ಪ್ರತಿಭಾನ್ವಿತ ಆಟಗಾರ ಸಿ.ಕೆ. ವಿನೀತ್‌. ಎಳವೆಯಲ್ಲಿಯೇ ಫುಟ್‌ಬಾಲ್‌ ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡುವ ಕನಸು ಹೊತ್ತಿದ್ದ ಕಣ್ಣೂರಿನ ಆಟಗಾರ ಮಿಂಚಿ ಮರೆಯಾಗಲಿಲ್ಲ. 

ಕಠಿಣ ಪರಿಶ್ರಮ ಮತ್ತು ಅರ್ಪಣಾ ಭಾವದಿಂದ ಈ ಕ್ರೀಡೆಯಲ್ಲಿ ನೈಪುಣ್ಯ ಸಾಧಿಸಿದ ಅವರು  ರಾಷ್ಟ್ರೀಯ ಸೀನಿಯರ್‌ ತಂಡದಲ್ಲೂ ಆಡಿ ಸೈ ಅನಿಸಿಕೊಂಡಿದ್ದಾರೆ.

ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ಆರಂಭವಾದಾಗಿನಿಂದಲೂ ತಂಡದ ಅವಿಭಾಜ್ಯ ಅಂಗವಾಗಿರುವ ಅವರು ಐ ಲೀಗ್‌, ಫೆಡರೇಷನ್‌ ಕಪ್‌ ಮತ್ತು ಎಎಫ್‌ಸಿ ಕಪ್‌ ಟೂರ್ನಿಗಳಲ್ಲೂ ಮಿಂಚಿದ್ದಾರೆ. ಹೋದ ವಾರ ಕಟಕ್‌ನಲ್ಲಿ ನಡೆದಿದ್ದ ಫೆಡರೇಷನ್‌ ಕಪ್‌ನಲ್ಲಿ ಬಿಎಫ್‌ಸಿ ಪ್ರಶಸ್ತಿ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

*ಫುಟ್‌ಬಾಲ್‌ ಕ್ರೀಡೆಯಲ್ಲಿ ಆಸಕ್ತಿ ಚಿಗುರೊಡೆದಿದ್ದು ಹೇಗೆ?
ಎಳವೆಯಲ್ಲಿಯೇ ಫುಟ್‌ಬಾಲ್‌ನಲ್ಲಿ ಎತ್ತರದ ಸಾಧನೆ ಮಾಡುವ ಕನಸು ಹೊತ್ತಿದ್ದೆ. ಐದನೇ ತರಗತಿಯಲ್ಲಿದ್ದಾಗ ಅಪ್ಪ, ಕಣ್ಣೂರಿನಲ್ಲಿರುವ ನವೋದಯ ಶಾಲೆಗೆ ಸೇರಿಸಿದರು. ಶಾಲಾ ಹಂತದ ಟೂರ್ನಿಗಳಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದರಿಂದ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತಿ ಪಡೆಯುವ ಅವಕಾಶ ಒದಗಿತು.

ಪಿಯುಸಿ ಓದುತ್ತಿದ್ದಾಗ ವೇಲಾಯುಧನ್‌ ಅವರ ಮಾರ್ಗದರ್ಶನ ಸಿಕ್ಕಿತು. ಅವರು  ಹಲವು ಕೌಶಲಗಳನ್ನು ಹೇಳಿಕೊಟ್ಟು ಪ್ರತಿಭೆಗೆ ಸಾಣೆ ಹಿಡಿದರು. ಪದವಿ ಓದುತ್ತಿದ್ದಾಗ ಭರತನ್‌ ಅವರ ಬಳಿ ಐದು ವರ್ಷ ತರಬೇತಿ ಪಡೆದೆ.

ಆ ನಂತರ ಚೆನ್ನೈ ಕಸ್ಟಮ್ಸ್‌ ಮತ್ತು ಕೆಎಸ್‌ಇಬಿ ಪರ ಆಡುವ ಅದೃಷ್ಟ ಒದಗಿತು. ಪದವಿ ಮುಗಿದ ನಂತರ ಚಿರಾಗ್ ಯುನೈಟೆಡ್‌ ಕೇರಳ ಕ್ಲಬ್‌ಗೆ ಸೇರಿದೆ. ಬಳಿಕ ಪ್ರಯಾಗ್‌ ಯುನೈಟೆಡ್‌ ಮತ್ತು ಬೆಂಗಳೂರು ಫುಟ್‌ ಬಾಲ್‌ ಕ್ಲಬ್‌ ತಂಡಗಳ ಪರ ಆಡುವ ಅವಕಾಶ ದೊರೆ ಯಿತು. ಜೊತೆಗೆ ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ ಕೇರಳ ಬ್ಲಾಸ್ಟರ್ಸ್‌ ತಂಡವನ್ನು ಪ್ರತಿನಿಧಿಸುವ ಸೌಭಾಗ್ಯವೂ ನನ್ನದಾಯಿತು.

*ಈ ವರ್ಷ ಮತ್ತೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದೀರಿ. ಇದರ ಬಗ್ಗೆ ಹೇಳಿ?
2013ರಲ್ಲಿ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದೆ. ಆಗ ಮೂರು ಪಂದ್ಯಗಳಲ್ಲಿ ಆಡಿದ್ದೆ. 2015ರಲ್ಲೂ ಮೂರು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದೆ. ಎರಡು ವರ್ಷಗಳ ನಂತರ  ಮತ್ತೆ ತಂಡಕ್ಕೆ ಆಯ್ಕೆಯಾಗಿದ್ದು ಖುಷಿ ನೀಡಿದೆ.

*ಈ ಬಾರಿ ಬಿಎಫ್‌ಸಿ ತಂಡ ಫೆಡರೇಷನ್‌ ಕಪ್‌ ಗೆಲ್ಲುವಲ್ಲಿ ನಿಮ್ಮ ಪಾತ್ರ ನಿರ್ಣಾಯಕವಾಗಿತ್ತು. ಇದರ ಬಗ್ಗೆ ಹೇಳಿ?
ಶಿಲ್ಲಾಂಗ್‌ ಲಜಾಂಗ್‌ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದೆ. ಅದರಿಂದ ಚೇರಿಸಿಕೊಂಡ ನಂತರ ಕೆಲ ಪಂದ್ಯ ಗಳಲ್ಲಿ ಗುಣಮಟ್ಟದ ಆಟ ಆಡಲು ವಿಫಲ ವಾಗಿದ್ದೆ. ಆ ಕೊರಗು ಇನ್ನಿಲ್ಲದ ಹಾಗೆ ಕಾಡುತ್ತಿತ್ತು. ಮೋಹನ್‌ ಬಾಗನ್‌ ವಿರುದ್ಧದ ಫೈನಲ್‌ ಪಂದ್ಯ ನಮ್ಮ ಪಾಲಿಗೆ  ಮಹತ್ವದ್ದಾಗಿತ್ತು. ಈ ಪಂದ್ಯದಲ್ಲಿ ಲಯ ಕಂಡುಕೊಂಡು  ಹೆಚ್ಚುವರಿ ಅವಧಿಯಲ್ಲಿ ಎರಡು ಗೋಲು ಗಳಿಸಿದೆ. ನನ್ನ ಆಟದಲ್ಲಿ ಗೆಲುವು ಅರಳಿದ್ದರಿಂದ ಅತೀವ ಖುಷಿ ಆಗಿದೆ. ಮುಂದಿನ ಟೂರ್ನಿಗಳಲ್ಲೂ ಇದೇ ಆಟ ಮುಂದುವರಿಸುವ ವಿಶ್ವಾಸ ಇದೆ.

*ಬಿಎಫ್‌ಸಿಯ ಯಶಸ್ಸನ್ನು ಹೇಗೆ ವ್ಯಾಖ್ಯಾನಿಸುತ್ತೀರಿ?
ಕ್ಲಬ್‌ ಶುರುವಾದ ನಾಲ್ಕೇ ವರ್ಷಗಳಲ್ಲಿ ನಾವು ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದೇವೆ. ಈ ಯಶಸ್ಸಿನ ಹಿಂದೆ  ಮಾಲೀಕರು, ಮುಖ್ಯ ಕೋಚ್‌, ಸಹಾಯಕ ಸಿಬ್ಬಂದಿ ಮತ್ತು ಆಟಗಾರರು ಹೀಗೆ ಎಲ್ಲರ ಪರಿಶ್ರಮವೂ  ಅಡಗಿದೆ. ತಂಡದಲ್ಲಿರುವ ಎಲ್ಲರ ನಡುವೆಯೂ  ಉತ್ತಮ ಬಾಂಧವ್ಯ ಏರ್ಪಟ್ಟಿದೆ. ಇದ ಕ್ಕಿಂತಲೂ ಮುಖ್ಯವಾಗಿ ಪ್ರತಿ ಪಂದ್ಯದಲ್ಲೂ ನಾವು ಯೋಜನೆಗೆ ಅನುಗುಣವಾಗಿ ಆಡುತ್ತೇವೆ.

*ಈ ಬಾರಿಯ ಐ ಲೀಗ್‌ನಲ್ಲಿ ಬಿಎಫ್‌ಸಿಗೆ ಪ್ರಶಸ್ತಿ ಉಳಿಸಿಕೊಳ್ಳಲು ಆಗಲಿಲ್ಲವಲ್ಲ?
ಟೂರ್ನಿಯ ಆರಂಭದ ಕೆಲ ಪಂದ್ಯಗಳಲ್ಲಿ ತುಂಬಾ ಚೆನ್ನಾಗಿ ಆಡಿದ್ದೆವು. ಆದರೆ ಆ ನಂತರದ ಪಂದ್ಯಗಳಲ್ಲಿ  ಚಾಂಪಿಯನ್ನರ ಹಾಗೆ ಹೋರಾಡಲಿಲ್ಲ.  ಅಂತಿಮ ಘಟ್ಟದಲ್ಲಿ ಗೆಲುವಿನ ಮುದ್ರೆ ಒತ್ತಿದರೂ ಪ್ರಶಸ್ತಿ ಮರೀಚಿಕೆಯಾಯಿತು.  ಮುಖ್ಯವಾಗಿ ಅದೃಷ್ಟವೂ ನಮ್ಮ ಕೈಹಿಡಿಯಲಿಲ್ಲ.

*ಫೆಡರೇಷನ್‌ ಕಪ್‌ ಟೂರ್ನಿಯ ವೇಳೆ ಸುನಿಲ್‌ ಚೆಟ್ರಿ ಸೇರಿದಂತೆ ಕೆಲ ಆಟ ಗಾರರು ಗಾಯಗೊಂಡಿದ್ದರು. ಅವರ ಅನುಪಸ್ಥಿತಿ ಕಾಡಲಿಲ್ಲವೇ?
ಫುಟ್‌ಬಾಲ್‌ನಲ್ಲಿ ಸಂಘಟಿತ ಹೋರಾಟ ದಿಂದ ಮಾತ್ರ ಪಂದ್ಯ ಗೆಲ್ಲಲು ಸಾಧ್ಯ ಎಂಬುದು ಚೆನ್ನಾಗಿ ಗೊತ್ತು. ಹೀಗಾಗಿ ನಿರ್ದಿಷ್ಟ ಆಟಗಾರರ ಮೇಲೆ  ನಾವು ಅವಲಂಬನೆಯಾಗಿಲ್ಲ.

*ವೇಲಾಯುಧನ್‌ ಅವರ ನಂತರ ಅನೇಕ ಕೋಚ್‌ಗಳ ಬಳಿ ತರಬೇತಿ ಪಡೆದಿದ್ದೀರಿ?  ಅವರಿಂದ ನೀವು ಕಲಿತಿದ್ದೇನು?
ಪರಿಪೂರ್ಣ ಆಟಗಾರನಾಗಿ ಬೆಳೆಯುವಲ್ಲಿ ಎಲ್ಲಾ ಕೋಚ್‌ಗಳ ಸಹಕಾರವೂ ಇದೆ. ನನ್ನೊಳಗೊಬ್ಬ ಫುಟ್‌ಬಾಲ್‌ ಆಟಗಾರ ಇದ್ದಾನೆ ಎಂಬುದನ್ನು ಗುರು ತಿಸಿ, ಪೋಷಿಸಿದವರು ವೇಲಾಯುಧನ್‌. ಕ್ರೀಡಾ ಬದುಕಿಗೆ ಬುನಾದಿ ಹಾಕಿಕೊಟ್ಟವರು ಅವರೇ. ಇತರರಿಂದಲೂ ಸಾಕಷ್ಟು ಹೊಸ ವಿಷಯ ಮತ್ತು ಕೌಶಲಗಳನ್ನು ಕಲಿತಿದ್ದೇನೆ.

*ಹೋದ ವರ್ಷ ಐಎಸ್‌ಎಲ್‌ನಲ್ಲಿ ಮಿಂಚಿದ್ದೀರಿ. ಆ ಅನುಭವ ಹೇಗಿತ್ತು?
ಸಚಿನ್‌ ತೆಂಡೂಲ್ಕರ್‌ ಮಾಲೀಕತ್ವದ ಕೇರಳ ಬ್ಲಾಸ್ಟರ್ಸ್‌ ತಂಡದಲ್ಲಿ ಆಡಿದ್ದು ತುಂಬಾ ಖುಷಿ ನೀಡಿತು. ಲೀಗ್‌ಗೆಂದೇ ವಿಶೇಷ ಸಿದ್ಧತೆಗಳನ್ನೇನೂ ಮಾಡಿಕೊಂಡಿರಲಿಲ್ಲ. ಹೀಗಿದ್ದರೂ ಐದು ಗೋಲು ಗಳನ್ನು ಬಾರಿಸಿದ್ದೆ. ಆದರೆ ತಂಡ ಪ್ರಶಸ್ತಿ ಗೆಲ್ಲದಿರು ವುದರಿಂದ ತುಂಬಾ ನಿರಾಸೆಯಾಯಿತು.

*ಕೋಚ್‌  ಅಲ್ಬರ್ಟ್‌ ರೋಕಾ ಅವರ ಬಗ್ಗೆ ಹೇಳಿ?
ನಾವು ಏನೇ ತಪ್ಪು ಮಾಡಿದರೂ ಅದನ್ನು ಗುರುತಿಸಿ ತಿದ್ದುತ್ತಾರೆ. ಅವರ ಯೋಜನೆ ಮತ್ತು ಆಲೋಚನೆಗಳನ್ನು ಆಟಗಾರರ ಮೇಲೆ ಹೇರದೆ ಸ್ವತಂತ್ರವಾಗಿ ಆಡಲು ಪ್ರೇರೇಪಿಸುತ್ತಾರೆ.

*ಬಿಎಫ್‌ಸಿಯ ಮೊದಲ ಕೋಚ್‌ ಆ್ಯಷ್ಲೆ ವೆಸ್ಟ್‌ವುಡ್‌ ಅವರ ಬಗ್ಗೆ ನಿಮ್ಮ ಅಭಿಪ್ರಾಯ?
ನಾನೊಬ್ಬ ಪರಿಪೂರ್ಣ ಸ್ಟ್ರೈಕರ್‌ ಆಗಿ ರೂಪುಗೊಳ್ಳುವಂತೆ ಮಾಡಿದ್ದೇ   ಆ್ಯಷ್ಲೆ ವೆಸ್ಟ್‌ವುಡ್‌.  ಯಾವ ಆಟಗಾರನನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಕಲೆ ಅವರಿಗೆ ತುಂಬಾ ಚೆನ್ನಾಗಿ ಸಿದ್ಧಿಸಿತ್ತು. ಅಂಗಳದಲ್ಲಿ ಕಟ್ಟುನಿಟ್ಟಾಗಿ ಇರುತ್ತಿದ್ದ ಅವರು ಅಂಗಳದ ಹೊರಗೆ  ಆಟಗಾರರ ಜೊತೆ ತುಂಬಾ ಆತ್ಮೀಯವಾಗಿ  ಬೆರೆಯುತ್ತಿದ್ದರು.

*ಸ್ಟ್ರೈಕರ್‌ ಮತ್ತು ವಿಂಗರ್‌. ಇವೆರಡರಲ್ಲಿ ನಿಮ್ಮ ನೆಚ್ಚಿನ ವಿಭಾಗ?
ಆರಂಭದ ದಿನಗಳಲ್ಲಿ ಸ್ಟ್ರೈಕರ್‌ ಆಗಿ ಆಡುತ್ತಿದ್ದೆ. ಕ್ರಮೇಣ ಮಿಡ್‌ಫೀಲ್ಡ್‌ ವಿಭಾಗದಲ್ಲಿ ಆಡುವ ಸವಾಲು ಎದುರಾಗಿತ್ತು. ಬಿಎಫ್‌ಸಿಗೆ ಸೇರಿದ ಮೇಲೆ ಸ್ಟ್ರೈಕರ್‌ ಆಗಿಯೇ ಗುರುತಿಸಿಕೊಂಡಿದ್ದೇನೆ. ಈ ಜವಾಬ್ದಾರಿ  ನಿಭಾಯಿಸುವುದೇ ಹೆಚ್ಚು ಖುಷಿ ನೀಡುತ್ತದೆ. ಕೆಲ ವೊಮ್ಮೆ ತಂಡದ ಅಗತ್ಯಕ್ಕೆ ಅನುಗುಣವಾಗಿ ಎಲ್ಲಾ ವಿಭಾಗಗಳಲ್ಲೂ ಆಡಬೇಕಾಗುತ್ತದೆ. ವೃತ್ತಿಪರ ಆಟಗಾರನಾಗಿ ಎಲ್ಲಾ ಸವಾಲುಗಳಿಗೂ ಎದೆಯೊಡ್ಡಲು ಸಜ್ಜಾಗಿರಬೇಕಾಗುತ್ತದೆ.

*ನಿಮ್ಮ ಜೀವನದ ಗುರಿ?
ಭಾರತ ತಂಡದಲ್ಲಿ ಆಡಲು  ಸಿಕ್ಕ ಪ್ರತಿ ಅವಕಾಶ ದಲ್ಲೂ ಪರಿಣಾಮಕಾರಿ ಆಡಿ ತಂಡದಲ್ಲಿ ಸ್ಥಾನ ಗಟ್ಟಿಮಾಡಿಕೊಳ್ಳಬೇಕು. 

* ಭಾರತ ತಂಡಕ್ಕೆ ಆಯ್ಕೆಯಾಗುವ ಕೆಲ ದಿನಗಳ ಮುನ್ನ ನಿಮ್ಮ ತಂದೆ ಗಂಭೀರ ವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಂತಹ ಸಂದಿಗ್ಧತೆಯಲ್ಲೂ  ಒತ್ತಡ ಮೀರಿ ನಿಂತು ಆಡಲು ಸಾಧ್ಯವಾಗಿದ್ದು ಹೇಗೆ ?
ಕೇರಳದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಿಂದ ಅಪ್ಪ ಟಿ. ವಾಸು ಅವರು ಆಯ ತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಆಗ ನಾನು ಕೋಲ್ಕತ್ತದಲ್ಲಿ ಇದ್ದೆ. ವಿಷಯ ತಿಳಿದಾಕ್ಷಣ ಮನೆಗೆ ಹಿಂತಿರುಗಿದೆ. ಅಪ್ಪನ ಸ್ಥಿತಿ ನೋಡಿ ಮಾನಸಿಕವಾಗಿ ಕುಸಿದು ಹೋಗಿದ್ದೆ. ಆ ಘಟನೆ ನಡೆದು ಎರಡು ದಿನಗಳ ನಂತರ ರಾಷ್ಟ್ರೀಯ ತಂಡದ ಶಿಬಿರಕ್ಕೆ ಆಯ್ಕೆಯಾದ ವಿಷಯ ತಿಳಿಯಿತು.

ಆ ಸ್ಥಿತಿಯಲ್ಲಿ ಅಪ್ಪನನ್ನು ಬಿಟ್ಟು ಎಲ್ಲಿಗೂ ಹೋಗಬಾರದೆಂದು ನಿಶ್ಚಿಯಿಸಿದೆ. ಇದನ್ನು ಅಪ್ಪನ ಬಳಿ ಹೇಳಿದಾಗ ಅವರು ತುಂಬಾ ಕೋಪ ಮಾಡಿಕೊಂಡರು. ಎರಡು ವರ್ಷಗಳ ನಂತರ ಮತ್ತೆ ತಂಡದಲ್ಲಿ ಅವಕಾಶ ಸಿಕ್ಕಿದೆ. ನನ್ನ ಬಗ್ಗೆ ಚಿಂತಿಸದೇ ಉತ್ತಮ ಆಟ ಆಡುವತ್ತ ಗಮನಹರಿಸು ಎಂದು ಸ್ಫೂರ್ತಿ ತುಂಬಿದರು.

ಬೆಂಗಳೂರು ಎಫ್‌ಸಿಯ ಯಶಸ್ಸಿನ ಹಾದಿ
ನಾಲ್ಕು ವರ್ಷಗಳ ಹಿಂದೆ ಫುಟ್‌ಬಾಲ್‌ ಲೋಕಕ್ಕೆ ಅಡಿ ಇಟ್ಟಿದ್ದ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ತಂಡ (ಬಿಎಫ್‌ಸಿ) ತಾನು ಆಡಿದ ಮೊದಲ ಐ ಲೀಗ್‌ ಟೂರ್ನಿಯಲ್ಲೇ ಟ್ರೋಫಿ ಎತ್ತಿ ಹಿಡಿದು ಹೊಸ ಭಾಷ್ಯ ಬರೆದಿತ್ತು.

ಆ ಬಳಿಕವೂ ಬೆಂಗಳೂರಿನ ತಂಡ ಐ ಲೀಗ್‌, ಫೆಡರೇಷನ್‌ ಕಪ್‌ ಮತ್ತು ಎಎಫ್‌ಸಿ ಕಪ್‌ ಟೂರ್ನಿಗಳಲ್ಲಿ ಉತ್ತಮ ಸಾಮರ್ಥ್ಯ ತೋರಿ ಫುಟ್‌ಬಾಲ್‌ ಪ್ರಿಯರ ಮನ ಗೆದ್ದಿದೆ.

ದೇಶಿಯ ಟೂರ್ನಿಗಳಲ್ಲಿ ಮೋಹನ್‌ ಬಾಗನ್‌,  ಈಸ್ಟ್‌ ಬೆಂಗಾಲ್‌, ಮಹಮ್ಮಡನ್‌ ಸ್ಪೋರ್ಟಿಂಗ್‌, ಸಲಗಾಂವ್ಕರ್‌ ಮತ್ತು ಚರ್ಚಿಲ್‌ ಬ್ರದರ್ಸ್‌ ತಂಡಗಳ ಆಧಿಪತ್ಯಕ್ಕೆ ತಡೆಯೊಡ್ಡಿದ ಕೀರ್ತಿಯೂ ಬೆಂಗಳೂರಿನ ತಂಡದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT