ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಕಾ ವೈರಸ್ ಹರಡುವಿಕೆ ತಡೆಗೆ ಜಾಗೃತಿ ಅಗತ್ಯ

Last Updated 30 ಮೇ 2017, 19:30 IST
ಅಕ್ಷರ ಗಾತ್ರ

ಗುಜರಾತ್‌ ರಾಜ್ಯದ  ಅಹಮದಾಬಾದ್‌ನ ಬಾಪು ನಗರದಲ್ಲಿ ಗರ್ಭಿಣಿ ಸೇರಿ ಮೂವರಲ್ಲಿ ಜೈಕಾ ವೈರಸ್ ಇರುವ ಪ್ರಕರಣಗಳನ್ನು ಭಾರತದ ಆರೋಗ್ಯ ಸಚಿವಾಲಯ ದೃಢ ಪಡಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ  (ಡಬ್ಲ್ಯುಎಚ್‌ಓ) ತಿಳಿಸಿದೆ. 2016ರ ನವೆಂಬರ್‌ನಿಂದ ಫೆಬ್ರುವರಿ 2017ರವರೆಗೆ ಅಹಮದಾಬಾದ್‌ನ ಈ ಜನದಟ್ಟಣೆಯ ಪ್ರದೇಶದಲ್ಲಿ ಈ ಪ್ರಕರಣಗಳು ವರದಿಯಾಗಿವೆ. ಆದರೆ ಈ ಬಗ್ಗೆ ಮಾಹಿತಿಗಳನ್ನು  ಕೇಂದ್ರ ಆರೋಗ್ಯ ಮತ್ತು ಕುಟುಂಬ ಸಚಿವಾಲಯ ಈವರೆಗೆ ನೀಡದಿದ್ದುದು ಅಚ್ಚರಿಯ ಸಂಗತಿ. ಮೊದಲ ಪ್ರಕರಣ ನವೆಂಬರ್‌ನಲ್ಲೇ ಪತ್ತೆಯಾಗಿದ್ದರೂ ಮೂರೂ  ಪ್ರಕರಣಗಳ ಬಗ್ಗೆ ತೀರಾ ಇತ್ತೀಚೆಗೆ ಮೇ 15ರಂದು ಡಬ್ಲ್ಯುಎಚ್‌ಓಗೆ ಮಾಹಿತಿ ನೀಡಲಾಗಿದೆ.  ಇದು ನಾವು ಅಳವಡಿಸಿಕೊಂಡಿರುವ ಸಾರ್ವಜನಿಕ ಆರೋಗ್ಯ ನೀತಿಗೆ ತದ್ವಿರುದ್ಧವಾದದ್ದು.  ಮುಂಜಾಗ್ರತೆ ಕ್ರಮಗಳನ್ನು ಅಳವಡಿಸಿಕೊಳ್ಳುವುದಕ್ಕಾಗಿ ಸ್ಥಳೀಯ ಆಡಳಿತಕ್ಕೂ ಈವರೆಗೆ ಮಾಹಿತಿ ನೀಡದೇ ಇದ್ದದ್ದು ಆತಂಕಕಾರಿ. ಮೇ 26ರಂದು ಡಬ್ಲ್ಯುಎಚ್‌ಓ ವೆಬ್‌ಸೈಟ್‌ನಲ್ಲಿ ಈ ವಿಚಾರ ಬಹಿರಂಗಗೊಂಡ ನಂತರವೇ  ಸ್ಥಳೀಯರಿಗೂ ವಿಚಾರ ತಿಳಿಯುವಂತಾದದ್ದು ವಿಪರ್ಯಾಸ.  ಅಹಮದಾಬಾದ್‌ನ ಆರೋಗ್ಯ ಅಧಿಕಾರಿಗಳಿಗೂ ಜೈಕಾ ಪ್ರಕರಣಗಳ ಮಾಹಿತಿ ಇರಲಿಲ್ಲ. ಇದು ವೈದ್ಯಕೀಯ ಸಂಹಿತೆಗೆ ವಿರುದ್ಧವಾದದ್ದು.  ರೋಗ ಹರಡುವುದನ್ನು ತಡೆಯಲು ಇಂತಹ ವಿಚಾರಗಳಲ್ಲಿ ಪಾರದರ್ಶಕತೆ ಅಗತ್ಯ. 2003ರಲ್ಲಿ ಚೀನಾದಲ್ಲಿ ಸಾರ್ಸ್  ರೋಗ ಪತ್ತೆಯಾದಾಗ ಅದನ್ನು ಮುಚ್ಚಿಡಲು ಪ್ರಯತ್ನಿಸಿದ್ದು ಜಾಗತಿಕವಾಗಿ ತೀವ್ರ ಟೀಕೆಗಳಿಗೆ ಗುರಿಯಾಗಿತ್ತು. ಈ ಕಾರಣದಿಂದಲೇ ಇತರ ರಾಷ್ಟ್ರಗಳಿಗೂ ಈ ಕಾಯಿಲೆ ಹಬ್ಬಲು ಕಾರಣವಾಗಿತ್ತು.

ಜೈಕಾ  ಸೋಂಕಿನಿಂದ ಸಾಮಾನ್ಯವಾಗಿ  ಮಗು ಹುಟ್ಟುವಾಗಲೇ ತೀವ್ರತರ ದೋಷಗಳಿಗೆ ಕಾರಣವಾಗುತ್ತದೆ. ಸೋಂಕು ಇರುವ ಶಿಶುಗಳಿಗೆ ಅತಿ ಚಿಕ್ಕದಾದ ತಲೆ ಇರುತ್ತದೆ. ಮಿದುಳು ಬೆಳವಣಿಗೆಯೂ ಸರಿಯಾಗಿ ಆಗುವುದಿಲ್ಲ . ಜಗತ್ತಿನ ಸುಮಾರು 30 ರಾಷ್ಟ್ರಗಳಲ್ಲಿ ಶಿಶು ಜನನ ಸಮಯದ ಈ ದೋಷಗಳಿಗೆ ಜೈಕಾ ಸೋಂಕು ಕಾರಣವಾಗಿದೆ. ಈ ಸೋಂಕು ಸಾಮಾನ್ಯವಾಗಿ ಸೊಳ್ಳೆಗಳಿಂದ ಹರಡುತ್ತದೆ. ಲೈಂಗಿಕ ಸಂಪರ್ಕದ ಮೂಲಕವೂ ಪಸರಿಸಬಹುದು. ರಾಷ್ಟ್ರದಲ್ಲಿ ಈಗ ಸೋಂಕಿಗೆ ಒಳಗಾಗಿರುವ ಮೂವರೂ ರಾಷ್ಟ್ರದ ಹೊರಗೆ ಪ್ರಯಾಣ ಮಾಡಿಲ್ಲ. ಹೀಗಾಗಿ ರಾಷ್ಟ್ರದ ಒಳಗಿನಿಂದಲೇ ಈ ಸೋಂಕು ಪಸರಿಸಿದೆ. ಮುಂದೆಯೂ ಇದು ಪಸರಿಸಬಹುದಾದ ಸಾಧ್ಯತೆ ಇರುವುದರಿಂದ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಇದಕ್ಕಾಗಿ ಸೊಳ್ಳೆಗಳ ನಿಯಂತ್ರಣ ಮುಖ್ಯವಾದದ್ದು. ರಸ್ತೆಗಳಲ್ಲಿ ನಿಲ್ಲುವ ನೀರು, ಗಬ್ಬು ನಾರುವ ಹಳ್ಳಕೊಳ್ಳಗಳು ಹಾಗೂ ಸ್ವಚ್ಛತೆಯ ಕೊರತೆಯಿಂದ ಉತ್ಪತ್ತಿಯಾಗುವ ಸೊಳ್ಳೆಗಳಿಂದಾಗಿ ಡೆಂಗಿ, ಚಿಕುನ್‌ಗುನ್ಯಾ ಹಾಗೂ ಮಲೇರಿಯಾದಂತಹ ಕಾಯಿಲೆಗಳು ಈಗಾಗಲೇ ಜನರನ್ನು ಕಾಡುತ್ತಿವೆ. ಇನ್ನು ಜೈಕಾ ನಿಯಂತ್ರಣಕ್ಕೆ ರಾಷ್ಟ್ರ ಪೂರ್ಣ ಪ್ರಮಾಣದಲ್ಲಿ ಸನ್ನದ್ಧವಾಗಬೇಕು. ಸೋಂಕು ತಗುಲುವುದನ್ನು ತಪ್ಪಿಸಿಕೊಳ್ಳಲು ವಹಿಸಬೇಕಾದ ಮುನ್ನೆಚ್ಚರಿಕೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT