ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿತಾಸಕ್ತಿ’ಗೆ ತಾರಾ ಸಂಸ್ಕೃತಿಯೇ ಅಡ್ಡಿ

Last Updated 2 ಜೂನ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಅತಿಯಾದ ‘ತಾರಾ ಸಂಸ್ಕೃತಿ’ಯಿಂದಾಗಿ ಬಿಸಿಸಿಐನಲ್ಲಿ ಹಿತಾಸಕ್ತಿ  ಸಂಘರ್ಷ  ತಾರಕಕ್ಕೇರಿದೆ ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ ಆರ್.ಎಂ. ಲೋಧಾ ಸಮಿತಿ ಶಿಫಾರಸುಗಳನ್ನು ಜಾರಿಗೆ ತರಲು ಸುಪ್ರೀಂ ಕೋರ್ಟ್ ನೇಮಿಸಿದ್ದ  ಆಡಳಿತಾಧಿಕಾರಿಗಳ ಸಮಿತಿಯಲ್ಲಿ  ಸದಸ್ಯರಾಗಿದ್ದ  ಗುಹಾ ಅವರು ಗುರುವಾರ ರಾಜೀನಾಮೆ ನೀಡಿದ್ದರು.  ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ಕೊಟ್ಟಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದರು.

ಆದರೆ ಅವರು  ಶುಕ್ರವಾರ ಸಿಒಎ ಮುಖ್ಯಸ್ಥ  ವಿನೋದ್ ರಾಯ್ ಅವರಿಗೆ ಏಳು ಪುಟಗಳ ಪತ್ರ ಬರೆದಿದ್ದಾರೆ. ಅದರಲ್ಲಿ ಬಿಸಿಸಿಐನಲ್ಲಿರುವ   ಅವ್ಯವಸ್ಥೆ ಮತ್ತು ನಿಯಮಬಾಹಿರ ಚಟುವಟಿಕೆಗಳನ್ನು ಕಠೋರವಾಗಿ ಟೀಕಿಸಿದ್ದಾರೆ. 

ಬಹುದಿನಗಳಿಂದ ತೆರೆಮರೆಯಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಬಹುತೇಕ ವಿವಾದಾತ್ಮಕ ವಿಷಯಗಳು ಅವರ ಪತ್ರದ ಮೂಲಕ ಬಹಿರಂಗವಾಗಿವೆ.  ಕ್ರಿಕೆಟ್ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಸುನಿಲ್ ಗಾವಸ್ಕರ್, ಮಹೇಂದ್ರಸಿಂಗ್ ದೋನಿ, ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ,  ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಮತ್ತು ಜಂಟಿ ಕಾರ್ಯದರ್ಶಿ  ಅಮಿತಾಭ್ ಚೌಧರಿ ಅವರ ಮೇಲೆ ನಿಯಮ ಉಲ್ಲಂಘನೆಯ ಆರೋಪ
ಮಾಡಿದ್ದಾರೆ.

‘ವಿಶ್ವದ ಯಾವುದೇ ಕ್ರೀಡೆಯಲ್ಲಿ ಇರದಷ್ಟು ತಾರಾ ಸಂಸ್ಕೃತಿ ಭಾರತದ ಕ್ರಿಕೆಟ್‌ನಲ್ಲಿದೆ. ಇದರಿಂದಾಗಿ ಕೋಚ್ ನೇಮಕ ಪ್ರಕ್ರಿಯೆ, ವೀಕ್ಷಕ ವಿವರಣೆಕಾರರ  ನೇಮಕದಲ್ಲಿ  ಈಗಿನ ಮತ್ತು ಮಾಜಿ ಆಟಗಾರರ ಪಾರುಪತ್ಯ ಮಿತಿ ಮೀರಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
‘ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರನ್ನು ಒಂದು ವರ್ಷದ ಒಪ್ಪಂದದಲ್ಲಿ ನೇಮಕ ಮಾಡಲಾಗಿತ್ತು. ಅವರ ಅವಧಿಯ ಮುಕ್ತಾಯ ದಿನವೂ ಎಲ್ಲರಿಗೂ ತಿಳಿದಿತ್ತು. ಮಾರ್ಚ್‌ನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿ ಮುಗಿದ ಕೂಡಲೇ ಹೊಸ ಕೋಚ್ ನೇಮಕಾತಿ ಪ್ರಕ್ರಿಯೆ ಮಾಡಬಹುದಿತ್ತು.  ಐಪಿಎಲ್‌ ಮುಗಿಯುವವರೆಗೂ ಯಾಕೆ ಕಾಯಬೇಕಿತ್ತು’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಬಿಸಿಸಿಐನಲ್ಲಿ ನಡೆಯುತ್ತಿರುವ ಹಿತಾಸಕ್ತಿ ಸಂಘರ್ಷ ಉಲ್ಲಂಘನೆ ಮತ್ತು ಆಡಳಿತ ವಿಷಯದಲ್ಲಿ ತಾರಾ ವರ್ಚಸ್ಸಿನ ಆಟಗಾರರ ಅನಗತ್ಯ ಹಸ್ತಕ್ಷೇಪದ ಕುರಿತು ಇದಕ್ಕೂ ಮುನ್ನ ನಿಮಗೂ (ವಿನೋದ್ ರಾಯ್) ಮತ್ತು ಇನ್ನಿತರ ಸಹೋದ್ಯೋಗಿಗಳಿಗೆ ಇಮೇಲ್ ಮಾಡಿದ್ದೆ’ ಎಂದು ನೆನಪಿಸಿದ್ದಾರೆ.

ರಾಮಚಂದ್ರ ಗುಹಾ  ಕಿಡಿನುಡಿಗಳು

ವಿರಾಟ್ ಕೊಹ್ಲಿ ಅವರು ತಂಡದ ಮುಖ್ಯ ಕೋಚ್‌ ನೇಮಕದಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಸರಿಯಲ್ಲ. ತಮ್ಮ ತಾರಾವರ್ಚಸ್ಸನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮುಂದೊಂದು ದಿನ ಬಿಸಿಸಿಐ ಪದಾಧಿಕಾರಿಗಳ ಮೇಲೂ ಸವಾರಿ ಮಾಡಬಹುದು.

ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರ ವಿಷಯದಲ್ಲಿ ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಮತ್ತು ಪದಾಧಿಕಾರಿ ಅಮಿತಾಬ್ ಚೌಧರಿ ಅವರು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ.

ಮಹೇಂದ್ರಸಿಂಗ್ ದೋನಿ ಟೆಸ್ಟ್‌ ಮಾದರಿಯಲ್ಲಿ ಆಡುತ್ತಿಲ್ಲ. ಆದರೂ ಅವರಿಗೆ ‘ಎ’ ದರ್ಜೆ ಗುತ್ತಿಗೆ ನೀಡಿದ್ದು ಏಕೆ?

ರಾಹುಲ್ ದ್ರಾವಿಡ್  ಅವರು ಬಿಸಿಸಿಐ ಮತ್ತು ಐಪಿಎಲ್ ಫ್ರಾಂಚೈಸ್ ಜೊತೆಗೆ ಗುತ್ತಿಗೆ ಹೊಂದಿದ್ದಾರೆ.

ಸುನಿಲ್ ಗಾವಸ್ಕರ್ ಅವರು ಪಿಎಂಜಿಯ (ಪ್ರೊಫೆಷನಲ್ ಮ್ಯಾನೇಜ್‌ಮೆಂಟ್ ಗ್ರೂಪ್)  ಮುಖ್ಯಸ್ಥರಾಗಿದ್ದಾರೆ. ಈ ಸಂಸ್ಥೆಯು ಭಾರತ ತಂಡದ ಪರ ಕಾರ್ಯನಿರ್ವಹಿಸುತ್ತದೆ. ಗಾವಸ್ಕರ್ ಅವರು ಬಿಸಿಸಿಐ ಡಾಟ್ ಟಿವಿಯಲ್ಲಿ ವೀಕ್ಷಕ ವಿವರಣೆಗಾರರಾಗಿಯೂ ಕೆಲಸ ಮಾಡುತ್ತಿದ್ದಾರೆ. ಇದು ನಿಯಮಬಾಹಿರ.

ಸೌರವ್ ಗಂಗೂಲಿ  ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿದ್ದರೂ, ಟಿ.ವಿ ವೀಕ್ಷಕ ವಿವರಣೆಗಾರರಾಗಿದ್ದಾರೆ.

ಸಿಒಎಯಲ್ಲಿ ನನ್ನ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಜಾವಗಲ್ ಶ್ರೀನಾಥ್ (ಐಸಿಸಿ ರೆಫರಿ ) ಅವರನ್ನು ನೇಮಕ ಮಾಡಿ.\

ದಿಟ್ಟ ನಿರ್ಧಾರ ಕೈಗೊಳ್ಳಿ :  ಸಲಹೆ
ಆಡಳಿತಾಧಿಕಾರಿಗಳ ಸಮಿತಿಯ ಘನತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಲು ದಿಟ್ಟ ನಿರ್ಧಾರ ತೆಗೆದುಕೊಳ್ಳಿರಿ’ ಎಂದು ಗುಹಾ ಅವರು ಸಿಒಎ ಅಧ್ಯಕ್ಷ ವಿನೋದ್ ರಾಯ್ ಅವರಿಗೆ ಸಲಹೆ ನೀಡಿದ್ದಾರೆ.
‘ಸೂಪರ್‌ಸ್ಟಾರ್ ಸಂಸ್ಕೃತಿಯನ್ನು ಪೋಷಿಸಿದರೆ ಬಿಸಿಸಿಐನಲ್ಲಿ ಯಾವ ನಿಯಮವನ್ನೂ ಜಾರಿಗೆ ತರಲು ಆಗುವುದಿಲ್ಲ. ಇರುವ ನಿಯಮಗಳ ಉಲ್ಲಂಘನೆಯೂ ರಾಜಾರೋಷವಾಗಿ ನಡೆಯುತ್ತದೆ. ಅದನ್ನು ಸಿಒಎ ತಡೆಯಬೇಕು’ ಎಂದು ಬರೆದಿದ್ದಾರೆ.

-ಭಾರತದ ತಂಡದ ಆಟಗಾರರ ಗುತ್ತಿಗೆಯನ್ನು ಪಾರದರ್ಶಕವಾಗಿ ನಿಗದಿ ಮಾಡುವಲ್ಲಿ ‘ತಾರಾ ಸಂಸ್ಕೃತಿ’ ಅಡ್ಡಿಯಾಗುತ್ತಿದೆ.

ರಾಮಚಂದ್ರ ಗುಹಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT