ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಕೋವಿಂದ್‌ ಆಯ್ಕೆ: ಬಿಜೆಪಿಯ ದೂರಗಾಮಿ ಕಾರ್ಯತಂತ್ರ

Last Updated 19 ಜೂನ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ರಾಮನಾಥ ಕೋವಿಂದ್‌ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ಮೂಲಕ ಮುಂದಿನ ಸಂಸತ್‌ ಚುನಾವಣೆಯ ಕಾರ್ಯತಂತ್ರವನ್ನು ಬಿಜೆಪಿ ಆರಂಭಿಸಿದೆ.

ದಲಿತ ಸಮುದಾಯದ ವ್ಯಕ್ತಿಯನ್ನು ದೇಶದ ಅತ್ಯುನ್ನತ ಹುದ್ದೆಯ ಅಭ್ಯರ್ಥಿಯಾಗಿ ಬಿಂಬಿಸುವ ಮೂಲಕ ಬಿಜೆಪಿ ಬಲವಾದ ಸಾಮಾಜಿಕ ಸಂದೇಶವನ್ನು ನೀಡಿದೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ದೊರೆತ ದಲಿತ ಸಮುದಾಯದ ಬೆಂಬಲವನ್ನು ಮುಂದಿನ ಸಾರ್ವತ್ರಿಕ ಚುನಾವಣೆವರೆಗೂ ಮುಂದುವರಿಸುವ ತಂತ್ರವನ್ನು ಹೆಣೆದಿದೆ.

ಕೋವಿಂದ್‌ ಅವರದ್ದು ಕಡುಬಡತನದ ಹಿನ್ನೆಲೆ ಮತ್ತು ಯಾವ ರೀತಿಯಲ್ಲಿಯೂ ವಿವಾದಾತ್ಮಕವಲ್ಲದ ವ್ಯಕ್ತಿತ್ವ. ಹೀಗಾಗಿ ಎನ್‌ಡಿಎ ಆಯ್ಕೆಯನ್ನು ತಿರಸ್ಕರಿಸುವುದು ಕಾಂಗ್ರೆಸ್‌, ಸಮಾಜವಾದಿ ಪಕ್ಷ, ಜೆಡಿಯು ಅಥವಾ ಬಿಎಸ್‌ಪಿಗೆ ಸುಲಭವಲ್ಲ. 

ಎರಡು ವರ್ಷಗಳ ಹಿಂದೆ ಬಿಹಾರ ರಾಜ್ಯಪಾಲರಾಗಿ ಕೋವಿಂದ್‌ ಅವರನ್ನು ನೇಮಿಸಿದಾಗ ಪ್ರಧಾನಿ ನರೇಂದ್ರ ಮೋದಿ ಅವರು ಹೀಗೆ ಟ್ವೀಟ್‌ ಮಾಡಿದ್ದರು: ‘ಅವರು ತಮ್ಮ ಜೀವನವಿಡೀ ದಲಿತರು ಮತ್ತು ಶೋಷಿತ ಸಮುದಾಯದ ಏಳಿಗೆಗೆ  ಕೆಲಸ ಮಾಡಿದ್ದಾರೆ’.

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಜತೆ ಕೋವಿಂದ್‌ ಬಹಳ ಉತ್ತಮ ಸಂಬಂಧ ಹೊಂದಿದ್ದಾರೆ. ಹಾಗಾಗಿ ಕೋವಿಂದ್‌ ಅವರ ಆಯ್ಕೆಯನ್ನು ನಿತೀಶ್‌ ಅವರು ವಿರೋಧಿಸುವ ಸಾಧ್ಯತೆ ಕಡಿಮೆ. ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರು ರಾಷ್ಟ್ರಪತಿ ಅಭ್ಯರ್ಥಿಯನ್ನು ಘೋಷಿಸಿದ ಬಳಿಕ ಕೋವಿಂದ್‌ ಅವರಿಗೆ ಅಭಿನಂದನೆ ಸಲ್ಲಿಸಿದ ಮೊದಲ ನಾಯಕ ನಿತೀಶ್‌.

ಮೃದು ಮಾತಿನ ಕೋವಿಂದ್‌ ಅವರು ಕೋರಿ ಸಮುದಾಯಕ್ಕೆ ಸೇರಿದವರು. ಉತ್ತರ ಭಾರತದಲ್ಲಿ ಇದು ಅತ್ಯಂತ ಹಿಂದುಳಿದ ಸಮುದಾಯವಾಗಿದೆ.
1994ರಲ್ಲಿ ರಾಜ್ಯಸಭೆ ಸದಸ್ಯರಾಗುವ ತನಕ ಅವರು ದೆಹಲಿಯ ಕಾಲಿಬಾಡಿಯಲ್ಲಿರುವ ಬಾಡಿಗೆ ಫ್ಲ್ಯಾಟ್‌ನಲ್ಲಿ ವಾಸವಿದ್ದರು. ವಿವಾದಗಳಿಂದ ಮಾರು ದೂರವಿರುವ ಕೋವಿಂದ್‌, ಬಿಜೆಪಿ ವಕ್ತಾರರಾಗಿದ್ದಾಗ ಎಂದೂ ಸುದ್ದಿ ವಾಹಿನಿಗಳಲ್ಲಿ ಕಾಣಿಸಿಕೊಂಡವರಲ್ಲ.

12 ವರ್ಷ ರಾಜ್ಯಸಭಾ ಸದಸ್ಯರಾಗಿದ್ದ ಅವರು ಈ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳ ಶಾಲೆಗಳ ಮೂಲಸೌಕರ್ಯ ಆಭಿವೃದ್ಧಿಗೆ ಒತ್ತು ನೀಡಿದ್ದರು. ಸಂಸದರ ಪ್ರದೇಶಾಭಿವೃದ್ಧಿ ನಿಧಿಯನ್ನು ಬಳಸಿಕೊಂಡು ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಶಾಲಾ ಕಟ್ಟಡಗಳನ್ನು ನಿರ್ಮಿಸಿದ್ದರು.

ದುರ್ಬಲ ವರ್ಗಗಳು ಮತ್ತು ಪರಿಶಿಷ್ಟ ಜಾತಿ, ಪಂಗಡಗಳ ಮಹಿಳೆಯರಿಗೆ ಉಚಿತ ಕಾನೂನು ನೆರವು ಒದಗಿಸಲು ವಕೀಲರಾಗಿದ್ದಾಗ ಅವರು ಸಾಕಷ್ಟು ಶ್ರಮಿಸಿದ್ದರು.

* ವಾಣಿಜ್ಯ ಮತ್ತು ಕಾನೂನು ವಿಷಯದಲ್ಲಿ ಕಾನ್ಪುರ ವಿಶ್ವವಿದ್ಯಾಲಯದಿಂದ ಪದವಿ
* 1971ರಲ್ಲಿ ವಕೀಲರಾಗಿ ನೋಂದಣಿ
* 1977ರಿಂದ 1979ರವರೆಗೆ ದೆಹಲಿ ಹೈಕೋರ್ಟ್‌ನಲ್ಲಿ ಕೇಂದ್ರ ಸರ್ಕಾರದ ವಕೀಲರಾಗಿದ್ದರು
* 1978ರಲ್ಲಿ ಸುಪ್ರೀಂ ಕೋರ್ಟ್‌ ವಕೀಲರಾಗಿ ನೋಂದಣಿ
* 1980ರಿಂದ 1993ರವರೆಗೆ ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರದ ವಕೀಲರಾಗಿದ್ದರು
* 1993ರವರೆಗೆ 16 ವರ್ಷ ಸುಪ್ರೀಂ ಕೋರ್ಟ್ ವಕೀಲರಾಗಿ ಕೆಲಸ ಮಾಡಿದ್ದಾರೆ
* 1994ರ ಏಪ್ರಿಲ್‌ನಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಅವರು ಸತತ ಎರಡು ಅವಧಿಗೆ (2006ರವರೆಗೆ) ಈ ಹುದ್ದೆಯಲ್ಲಿದ್ದರು
* ಕೋವಿಂದ್‌ ಅವರು ಸದಸ್ಯರಾಗಿದ್ದ ಸದನ ಸಮಿತಿಗಳು: ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿ ಸಮಿತಿ, ಗೃಹ ವ್ಯವಹಾರಗಳ ಸಮಿತಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಮಿತಿ, ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ ಸಮಿತಿ, ಕಾನೂನು ಮತ್ತು ನ್ಯಾಯಾಂಗ ಸಮಿತಿ. ರಾಜ್ಯಸಭಾ ಸದನ ಸಮಿತಿಗೆ ಅವರು ಅಧ್ಯಕ್ಷರೂ ಆಗಿದ್ದರು
* 1998–2002ರವರೆಗೆ ಬಿಜೆಪಿ ದಲಿತ ಮೋರ್ಚಾದ ಅಧ್ಯಕ್ಷರಾಗಿದ್ದರು. ಬಿಜೆಪಿಯ ರಾಷ್ಟ್ರೀಯ ವಕ್ತಾರರಾಗಿಯೂ ಕೆಲಸ ಮಾಡಿದ್ದಾರೆ.
* 2002ರ ಅಕ್ಟೋಬರ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು
* 2015ರ ಆಗಸ್ಟ್‌ 8ರಂದು ಬಿಹಾರ ರಾಜ್ಯಪಾಲರಾಗಿ ನೇಮಕ
* 1974ರಲ್ಲಿ ಸವಿತಾ ಅವರನ್ನು ಮದುವೆಯಾದರು. ಕೋವಿಂದ್‌ ದಂಪತಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಇದ್ದಾರೆ.

**

ಗುರುವಾರ ವಿರೋಧ ಪಕ್ಷಗಳ ನಿರ್ಧಾರ
ನವದೆಹಲಿ (ಪಿಟಿಐ): ರಾಷ್ಟ್ರಪತಿ ಹುದ್ದೆಗೆ ಸರ್ವಸಮ್ಮತ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂಬ ಎನ್‌ಡಿಎ ಮನವಿಯನ್ನು ಕಾಂಗ್ರೆಸ್‌ ಪಕ್ಷ ತಿರಸ್ಕರಿಸಿದೆ. ಗುರುವಾರದ (ಜೂನ್‌ 22) ಸಭೆಯ ಬಳಿಕ ಸ್ಪರ್ಧಿಸುವ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್‌ ಹೇಳಿದೆ.

ಬಿಜೆಪಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ ಎಂದು ಕಾಂಗ್ರೆಸ್‌ ಮುಖಂಡ ಗುಲಾಂ ನಬಿ ಆಜಾದ್‌ ಆರೋಪಿಸಿದ್ದಾರೆ. ‘ಎಲ್ಲ ವಿರೋಧ ಪಕ್ಷಗಳು ಒಮ್ಮತದ ನಿರ್ಧಾರ ಕೈಗೊಳ್ಳುವುದನ್ನು ಕಾಂಗ್ರೆಸ್‌ ಬಯಸಿದೆ. ಹಾಗಾಗಿ ಬಿಜೆಪಿಯ ಆಯ್ಕೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ಮಮತಾ ವಿರೋಧ: ಎನ್‌ಡಿಎ ಅಭ್ಯರ್ಥಿ ಕೋವಿಂದ್‌ ವಿರುದ್ಧ ವಿರೋಧ ಪಕ್ಷಗಳು ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕು ಎಂಬ ಇಂಗಿತವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವ್ಯಕ್ತಪಡಿಸಿದ್ದಾರೆ.  ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರೂ ಇದೇ ಅಭಿಪ್ರಾಯ ಹೊಂದಿದ್ದಾರೆ.

ಕೋವಿಂದ್‌ ಅವರು ದಲಿತ ಸಮುದಾಯದ ಅತಿ ದೊಡ್ಡ ನಾಯಕ ಅಲ್ಲ ಮತ್ತು ಅತ್ಯುನ್ನತ ಹುದ್ದೆಗೇರುವ ವ್ಯಕ್ತಿತ್ವವನ್ನೂ ಅವರು ಹೊಂದಿಲ್ಲ ಎಂದು ಮಮತಾ ಹೇಳಿದ್ದಾರೆ.

ರಾಷ್ಟ್ರಪತಿ ಅಭ್ಯರ್ಥಿಯಾಗುವವರು ಈಗಿನ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅಥವಾ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅಥವಾ ಬಿಜೆಪಿ ಹಿರಿಯ ಮುಖಂಡ ಎಲ್‌.ಕೆ. ಅಡ್ವಾಣಿ ಅವರಷ್ಟು ದೊಡ್ಡ ವ್ಯಕ್ತಿತ್ವವನ್ನು ಹೊಂದಿರಬೇಕು ಎಂದು ಮಮತಾ ಅಭಿಪ್ರಾಯಪಟ್ಟಿದ್ದಾರೆ.

ನಿತೀಶ್‌ ಇನ್ನೂ ನಿರ್ಧರಿಸಿಲ್ಲ: ಎನ್‌ಡಿಎ ಅಭ್ಯರ್ಥಿಗೆ ಬೆಂಬಲ ನೀಡುವ ಬಗ್ಗೆ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಏನನ್ನೂ ಸ್ಪಷ್ಟವಾಗಿ ಹೇಳಿಲ್ಲ. ಆದರೆ ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸುವ ಸಾಧ್ಯತೆ ಇದೆ ಎಂಬ ಸುಳಿವನ್ನು ನೀಡಿದ್ದಾರೆ.

ಎನ್‌ಡಿಎ ಅಭ್ಯರ್ಥಿಗೆ ಜೆಡಿಯು ಬೆಂಬಲ ನೀಡುತ್ತದೆಯೇ ಎಂಬ ಪ್ರಶ್ನೆಗೆ, ‘ಅದು ಈಗ ಮುಖ್ಯ ಅಲ್ಲ. ನನ್ನ ಭಾವನೆಯನ್ನು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರಿಗೆ ತಿಳಿಸಿದ್ದೇನೆ’ ಎಂದರು. ಇಬ್ಬರು ಮುಖಂಡರಿಗೆ ತಿಳಿಸಲಾದ ಭಾವನೆ ಏನು ಎಂಬ ಬಗ್ಗೆ ನಿತೀಶ್‌ ಸ್ಪಷ್ಟಪಡಿಸಿಲ್ಲ.

ಬಿಹಾರದ ರಾಜ್ಯಪಾಲರಾದ ನಂತರ 2015ರಿಂದಲೂ ಕೋವಿಂದ್‌ ಅವರ ಜತೆ ನಿತೀಶ್‌ ಉತ್ತಮ ಸಂಬಂಧ ಹೊಂದಿದ್ದಾರೆ. ಹಾಗಾಗಿ ಕೋವಿಂದ್‌ ಅವರನ್ನು ಬೆಂಬಲಿಸಲು ನಿತೀಶ್‌ ಬಯಸಬಹುದು ಎಂದಿದ್ದಾರೆ ಅವರ ಆಪ್ತರು.ಸೇನಾ ನಿರ್ಧಾರ ಇಂದು:  ಕೋವಿಂದ್‌ ಆಯ್ಕೆಯ ಬಗ್ಗೆ ಎನ್‌ಡಿಎ ಅಂಗಪಕ್ಷವಾಗಿರುವ ಶಿವಸೇನಾ ಅತೃಪ್ತಿ ವ್ಯಕ್ತಪಡಿಸಿದೆ. ಯಾರನ್ನು ಬೆಂಬಲಿಸಬೇಕು ಎಂಬ ಬಗ್ಗೆ ಮಂಗಳವಾರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸೇನಾ ಹೇಳಿದೆ.

ಕೃಷಿ ವಿಜ್ಞಾನಿ ಎಂ.ಎಸ್‌. ಸ್ವಾಮಿನಾಥನ್‌ ಅವರನ್ನು ಆಯ್ಕೆ ಮಾಡಬೇಕು ಎಂಬ ಪ್ರಸ್ತಾವವನ್ನು  ಸೇನಾ ಮುಂದಿಟ್ಟಿತ್ತು. ಅದನ್ನು ಎನ್‌ಡಿಎ ತಿರಸ್ಕರಿಸಿತ್ತು. ಇದು ಸೇನಾ ಅತೃಪ್ತಿಗೆ ಕಾರಣ.

ಬಿಜೆಡಿ, ಟಿಆರ್‌ಎಸ್‌ ಬೆಂಬಲ: ಎನ್‌ಡಿಎ ಅಭ್ಯರ್ಥಿಗೆ ಒಡಿಶಾದ ಆಡಳಿತಾರೂಢ ಬಿಜೆಡಿ ಮತ್ತು ತೆಲಂಗಾಣದ ಆಡಳಿತ ಪಕ್ಷ ಟಿಆರ್‌ಎಸ್‌ ಬೆಂಬಲ ವ್ಯಕ್ತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT