ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಚಲು ಹುಳು ಬೇಟೆ!

Last Updated 19 ಜೂನ್ 2017, 19:30 IST
ಅಕ್ಷರ ಗಾತ್ರ

ಮಳೆ ಸುರಿದು ನಿಂತರೆ ಸಾಕು ತುಮಕೂರು ಜಿಲ್ಲೆಯ ಈ ಬುಡಕಟ್ಟು ಸಮುದಾಯಗಳಿಗೆ ಎಲ್ಲಿಲ್ಲದ ಹಬ್ಬ. ಬಾಯಲ್ಲಿ ನೀರೂರಿಸುವ ಹುಳು ಬೇಟೆಗೆ ಅದೇ ತಕ್ಕ ಸಮಯ. ಗಡಿಬಿಡಿಯಲ್ಲಿ ಸಿದ್ಧತೆ ಮಾಡಿಕೊಳ್ಳುವ ಅವರು, ಸಂಜೆ ಆಗುತ್ತಿದ್ದಂತೆ ಹುತ್ತಗಳನ್ನು ಹುಡುಕಿಕೊಂಡು ಹೊರಟುಬಿಡುತ್ತಾರೆ.

ಹೌದು, ಮಳೆಗಾಲದಲ್ಲಿ ಮಾತ್ರ ಸಿಗುವ ಈಚಲು ಹುಳು ತುಮಕೂರು ಜಿಲ್ಲೆಯ ಗುಬ್ಬಿ, ಚಿಕ್ಕನಾಯಕನಹಳ್ಳಿ, ಶಿರಾ, ಮಧುಗಿರಿ, ಪಾವಗಡ ತಾಲ್ಲೂಕುಗಳ ಬಹುತೇಕ ಹಳ್ಳಿಗರ ನೆಚ್ಚಿನ ಆಹಾರ. ಲಂಟಾನದ ಹಂದರ ಹಾಕಿ, ಅದರೊಳಗೊಂದು ಲಾಟೀನು ಹೊತ್ತಿಸಿ ಆ ಹುಳುಗಳನ್ನು ಹಿಡಿಯುವ, ಹಟ್ಟಿಯ ಮುಂದೆ ಹರಡಿ ಒಣಗಿಸುವ, ಒಣಗಿದ ಹುಳುಗಳಿಂದ ಬಗೆ ಬಗೆಯ ಖಾದ್ಯ ಮಾಡಿ ಸವಿಯುವ ಸಂಭ್ರಮದ ಸೊಬಗನ್ನು ಬಲ್ಲವರೇ ಬಲ್ಲರು.

ಮಳೆಗಾಲದ ಆಹಾರವಾದ ಈಚಲು ಹುಳುಗಳನ್ನು ಬುಡಕಟ್ಟು ಹಾಗೂ ಅಲೆಮಾರಿ ಸಮುದಾಯಗಳ ಜನ ಮಳೆಗಾಲದ ಮೂರ್ನಾಲ್ಕು ತಿಂಗಳುಗಳವರೆಗೆ ಬೇಟೆ ಆಡುತ್ತಾರೆ. ಗೆದ್ದಲು ಜಾತಿಗೆ ಸೇರಿದ ಈ ಹುಳು ‘ವಿಂಗ್ಡ್‌ ವೈಟ್‌ ಆ್ಯಂಟ್‌’ ಎಂದು ಪರಿಚಿತವಾಗಿದೆ. ಒಣಗಿದ ಸೀಗಡಿ, ಕರಿಮೀನಿಗೆ ಪರ್ಯಾಯವಾಗಿ ಇದನ್ನು ಬಳಸುವುದು ರೂಢಿ. ಸೀಗಡಿ, ಕರಿಮೀನು ವರ್ಷಪೂರಾ ಸಿಕ್ಕರೆ, ಈಚಲು ಹುಳು ಸಿಗುವುದು ಅಲ್ಪದಿನಗಳವರೆಗೆ ಮಾತ್ರ.

‘ಅಯ್ಯೋ ಸಾಕಪ್ಪ, ಈಚಲು ಹುಳು ಕಾಟ. ಕುಡಿಯೋ ನೀರು, ತಿನ್ನೋ ಅನ್ನಕ್ಕೂ ಬಂದು ಬೀಳ್ತವೆ’ ಅನ್ನೋ ರೋದನ ಹಲವರದಾದರೆ, ‘ಎಲ್ಲಿ ಈಚಲು ಹುಳು’ ಎಂದು ಹುಡುಕುತ್ತಾ ಬರುವವರ ಗುಂಪು ಕೆಲವರದು. ಈಚಲು ಹುಳು ದೀಪದ ಬೆಳಕಿಗೆ ಮುತ್ತಿಕ್ಕಿ, ಕೆಲ ಹೊತ್ತಿನಲ್ಲೇ ರೆಕ್ಕೆ ಕಳಚಿ ಬೀಳುತ್ತದೆ. ಬೀದಿದೀಪದ ಬೆಳಕಿಗೆ ಬರುವ ಹುಳುಗಳನ್ನು ಗುಡಿಸಿ, ಕೇರಿ ಸಂಗ್ರಹಿಸಿ, ಒಣಗಿಸಿ ತಿನ್ನುವುದು ಇಲ್ಲಿ ಮಾಮೂಲು. ಇವುಗಳನ್ನು ನಾಜೂಕಿನಿಂದ ಬೇಟೆಯಾಡುವ ಮುದುಕಿಯರ ಕೈಚಳಕ ವಿಶಿಷ್ಟವಾದುದು.

ಮಳೆಗಾಲದ ಮೂರ್ನಾಲ್ಕು ತಿಂಗಳು ಒಣಗಿಸಿದ ಈಚಲು ಹುಳುವನ್ನು ಒಂದ್ಹೊತ್ತಿನ ನೆಂಚಿಕೆ ಆಹಾರವಾಗಿ ಬಳಸುವುದು ರೂಢಿ. ‘ಬಲ್ಲವನೇ ಬಲ್ಲ ಈಚಲು ಸವಿಯ’ ಎನ್ನುವ ಕಲ್ಗುಡಿಯ ಕೆಂಪಕ್ಕಜ್ಜಿ, ಈಚಲು ಹುಳು ಹಿಡಿದು ಮಾರುತ್ತಾರೆ. ಬೇಟೆಯ ತಂತ್ರ ಅರಿತಿರುವ ಕೆಂಪಕ್ಕನಂತಹ ಅಜ್ಜಿಯರು ಗೆದ್ದಲು ಕಟ್ಟುವ ಹುತ್ತದ ಗೂಡಿನ ಮೇಲೆ ಗೂಡು ನಿರ್ಮಿಸಿ, ‘ವಾಸನೆಯ ಮದ್ದು’ ಸಿಂಪಡಿಸಿ ತಹರೇವಾರಿ ರೀತಿಯಲ್ಲಿ ಮೂರ್ನಾಲ್ಕು ಕೆ.ಜಿ. ಈಚಲು ಹುಳುವನ್ನು ಒಂದರ್ಧ ತಾಸಿನಲ್ಲಿ ಒಮ್ಮೆಗೆ ಹಿಡಿದುಬಿಡುತ್ತಾರೆ.

ಕಾಡಂಚಿನ ಹಳ್ಳಿಗರು ಕಾಡೊಳಗಿನ ಹುತ್ತ, ತೋಟದ ನಡುವಿನ ಹುತ್ತ, ಬಯಲು ಹೊಲಮಾಳದ ಹುತ್ತವನ್ನೇ ‘ಈಚಲು ಬೇಟೆಗೆ’ ಸಿದ್ಧಮಾಡಿಕೊಳ್ಳುತ್ತಾರೆ. ಅರ್ಜುನ ಜೋಗಿಗಳು, ಹಂದಿಜೋಗರು, ದಲಿತರು, ಒಕ್ಕಲಿಗರು, ನಾಯಕರು ಈ ಹುಳುಗಳನ್ನು ಆಹಾರವಾಗಿ ಬಳಸುವುದುಂಟು. ನಾಯಕ ಮತ್ತು ಅರ್ಜುನಜೋಗಿ ಸಮುದಾಯದವರಿಗೆ ಇವುಗಳ ಬೇಟೆ ಕರಗತ. ಈಚಲು ಹುಳು ತಿನ್ನಲು ಹಾವು, ಹಲ್ಲಿ, ಕಪ್ಪೆಗಳ ಕಾಟ ವಿಪರೀತ. ಅವುಗಳ ಕಣ್ತಪ್ಪಿಸಿ ಬೇಟೆ ನಡೆಸುವ ಸ್ಥಳದಲ್ಲಿಯೇ ಮೂರ್ನಾಲ್ಕು ಗಂಟೆ ಇದ್ದು, ಹುಳು ಹಿಡಿದು ಬರುತ್ತಾರೆ ಅಜ್ಜಿಯರು. ಹುಳುಗಳ ಬರುವಿಕೆಗಾಗಿ ಅವರು ತಾಳ್ಮೆಯಿಂದ ಕಾಯುವ ಪರಿ ಅನನ್ಯ.

ಕಾಡು, ತೋಟ, ಹೊಲಮಾಳಗಳ ನಡುವಿನ ಹುತ್ತಗಳು ಈಚಲು ಬೇಟೆಗೆ ಸೂಕ್ತವಂತೆ. ಮಳೆ ಬಿದ್ದ ಮೇಲೆ, ಹುತ್ತದ ಕೋವಿಯ ಸುತ್ತ ಕಡ್ಡಿಯಲ್ಲಿ ಗೀಚಿದಂತೆ ಕಾಣುವ ಚಿತ್ರಣವೇ ಇವರಿಗೆ ಈಚಲು ಹುಳು ಬರುವ ಸೂಚನೆ ನೀಡುತ್ತದೆ. ಅಂತಹ ಹುತ್ತಗಳನ್ನೇ ಇವರು ಆಯ್ಕೆ ಮಾಡಿಕೊಳ್ಳುತ್ತಾರೆ. ಐದಾರು ಗಂಟೆ ಮುಂಚಿತವಾಗಿ ಹತ್ತಾರು ಕೊಡ ನೀರನ್ನೂ ಸುರಿಯುತ್ತಾರೆ.

ಲಂಟಾನುಗಿಡದ (ರೋಜನ್ ಬೇಲಿ) ಹತ್ತಾರು ಎಳೆಗಳನ್ನು ಕಮಾನು ರೀತಿಯಲ್ಲಿ ಬಾಗಿಸಿ ಹುತ್ತದ ಕೋವಿಗೆ ಸಿಕ್ಕಿಸುತ್ತಾರೆ. ಹುತ್ತದ ಪಕ್ಕ ಒಂದಡಿ ಅಗಲದ ಪಾತ್ರೆ ಇಡುವಷ್ಟು ಗುಂಡಿ ತೋಡಿ ನೀರು ತುಂಬಿದ ಪಾತ್ರ ಇಡುತ್ತಾರೆ. ಬಾಗಿದ ಎಳೆಗಳ ಮೇಲೆ ಚಾಪೆ, ಟಾರ್ಪಲ್, ಬೆಡ್ ಶೀಟ್ ಯಾವುದಾದರೊಂದನ್ನು ಪೂರ್ಣ ಕೌಚುತ್ತಾರೆ.

ಪಾತ್ರೆ ಇಟ್ಟಿರುವ ಮೇಲಿನ ಬಾಗಿದ ಎಳೆಗೆ ಹೊತ್ತಿಸಿದ ಪುಟ್ಟ ಲಾಟೀನು ಕಟ್ಟುತ್ತಾರೆ. ಹುತ್ತದ ಮೇಲೆ ಮೊದಲೇ ತಯಾರಿಸಿಕೊಂಡಿದ್ದ ಮದ್ದಿನ ಪುಡಿಯನ್ನು ಉದುರಿಸುತ್ತಾರೆ. ವಾಸನೆ ಘಾಟಿಗೆ, ದೀಪದ ಪ್ರಜ್ವಲ ಬೆಳಕಿಗೆ ಹುಳು ಬಂದು, ಲಾಟೀನಿನ ಕೆಳಗಿನ ನೀರಿಗೆ ಬೀಳುತ್ತವೆ. ಹುಳ ಬಂದು ಬಿದ್ದಂತೆ ಒಂದೆಡೆ ಸಂಗ್ರಹಿಸಿಕೊಳ್ಳುತ್ತಾರೆ. ನಂತರ ರೆಕ್ಕೆ ಕಳಚಿದ ಹುಳುಗಳನ್ನು ಬೇರ್ಪಡಿಸಿ ಬಿಸಿಲಿನಲ್ಲಿ ಒಣಗಿಸಿ ಆಹಾರವಾಗಿ ಬಳಕೆ ಮಾಡುತ್ತಾರೆ.

ಮದ್ದು ತಯಾರಿ
ಈಚಲನ್ನು ಸೀಸನ್ ಆಹಾರವಾಗಿ ಬಳಸುವ ಅಜ್ಜಿಯರು ಮೊದಲೇ ಮದ್ದು ತಯಾರಿಸಿಕೊಳ್ಳುತ್ತಾರೆ. ಎಕ್ಕದ ಎಲೆ, ಬೇವಿನಸೊಪ್ಪು, ಆಡುಮುಟ್ಟದಬಳ್ಳಿ, ಬಂದ್ರೆಸೊಪ್ಪು, ತುಂಬೆಸೊಪ್ಪು, ಈಶ್ವರಬಳ್ಳಿ, ಬೆಳ್ಳುಳ್ಳಿಯನ್ನು ಪುಡಿ ಮಾಡಿ ಮದ್ದು ಮಾಡಿಕೊಳ್ಳುತ್ತಾರೆ. ಇದನ್ನು ಹುತ್ತದ ಮೇಲೆ ಉದುರಿಸಿ, ಹುಳು ಬೇಟೆ ಆಡುತ್ತಾರೆ. ಈಚಲು ಹುಳು ಎದ್ದರೆ ಮಳೆ ಬರುತ್ತೆ ಎಂಬ ನಂಬಿಕೆ ಈ ಭಾಗದಲ್ಲಿ ದಟ್ಟವಾಗಿದೆ. ಆದ್ದರಿಂದಲೇ ಇದಕ್ಕೆ ಮಳೆ ಕರೆಯುವ ಹುಳು ಎಂದು ಕರೆಯುತ್ತಾರೆ.

ಹುರುಳಿ ಕಾಳು, ಹೆಸರುಕಾಳು, ಹುರಿದ ಕಡ್ಲೇಬೀಜ, ಜೋಳದ ಅವಲಿನ ಜೊತೆ ಈ ಹುಳು ಮಿಶ್ರಣ ಮಾಡಿ ತಿನ್ನುತ್ತಾರೆ. ಪಟ್ಟಣಿಗರು ಹುಳುವಿನ ರಾಶಿಗೆ ಒಗ್ಗರಣೆ ಹಾಕಿ ಭಕ್ಷಿಸುತ್ತಾರೆ. ಒಣಗಿದ ಈಚಲು ಹುಳುಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ.

ಹೆಚ್ಚಿನ ಪ್ರಮಾಣದಲ್ಲಿ ಹುಳು ಹಿಡಿದ ಮಂದಿ ಸಮೀಪದ ಸಂತೆಗೆ ಒಯ್ದು ಮಾರುತ್ತಾರೆ. ಅಜ್ಜಿಯರು ಈ ಹುಳುಗಳನ್ನು ಪಾವು-ಸೇರುಗಳಲ್ಲಿ ಮಾರಾಟ ಮಾಡುವ ನೋಟವನ್ನು ಒಮ್ಮೆ ನೋಡಬೇಕು. ಕೊಳ್ಳುವವರು ಚೌಕಾಸಿ ಮಾಡಲು ಮುಂದಾದರೆ, ಹುಳು ಹಿಡಿಯುವ ಕಷ್ಟ, ಅದರ ರುಚಿ, ಅದರಿಂದ ಆರೋಗ್ಯಕ್ಕೆ ಆಗುವ ಲಾಭ... ಹುಳು ಬೇಟೆಗಾರರ ಕಥೆಗಳಿಗೆ ಎದುರಿಗಿದ್ದವರು ಸುಸ್ತೋ ಸುಸ್ತು.

ಸೇರಿಗೆ ₹150ರಂತೆ ಮಾರಾಟ ಮಾಡುವ ಅಜ್ಜಿಯರಿಗೆ ಕೈಕಾಸು ಸಿಗುತ್ತದೆ. ಈ ಹುಳುವಿನಲ್ಲಿ ಪೌಷ್ಟಿಕಾಂಶ ಹೆಚ್ಚಿರುವ ಕಾರಣದಿಂದಲೇ ಆಹಾರ ಸಂಸ್ಕೃತಿಯ ಭಾಗವಾಗಿದೆ. ರೋಗ ನಿರೋಧಕಶಕ್ತಿ ಬೆಳೆಸಲು ಬೆಲ್ಲದ ಉಂಡೆಯಲ್ಲಿ ಈ ಹುಳುವನ್ನಿಟ್ಟು ಮಕ್ಕಳಿಗೆ ತಿನ್ನಿಸುವ ರೂಢಿಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT