ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ಮೇಲೆ ಜಿಎಸ್‌ಟಿ ಪರಿಣಾಮ

Last Updated 20 ಜೂನ್ 2017, 19:30 IST
ಅಕ್ಷರ ಗಾತ್ರ

ಬಹು ನಿರೀಕ್ಷೆಯ ಮತ್ತು ಅತಿ ದೊಡ್ಡ ತೆರಿಗೆ ಸುಧಾರಣಾ ಕ್ರಮ (ಜಿಎಸ್‌ಟಿ) ಭಾರತದಲ್ಲಿ ಇದೇ ಜುಲೈ 1ರಿಂದ ಜಾರಿಗೆ ಬರಲಿದೆ. ಚಿನ್ನದ ತೆರಿಗೆ ನಿರ್ಧರಣೆ ವಿಚಾರವಾಗಿ ಸಾಕಷ್ಟು ಚರ್ಚೆಗಳಾಗಿ, ಕೊನೆಗೂ ಶೇ 3ರ ತೆರಿಗೆ ನಿಗದಿಪಡಿಸಲಾಗಿದೆ. ಚಿನ್ನ ಮತ್ತು ಚಿನ್ನಾಭರಣಗಳಿಗೆ ಈಗಿರುವ ತೆರಿಗೆಗೆ ಹೋಲಿಸಿದರೆ ಹೊಸ ತೆರಿಗೆ ಸ್ವಲ್ಪ ಏರಿಕೆ ಆಗಿದ್ದರೂ, ನಿರ್ಧಾರಿತ ಪ್ರಮಾಣ ಉದ್ದಿಮೆಗೆ ಭಯ ಹುಟ್ಟಿಸಿದ್ದ ಪ್ರಮಾಣಕ್ಕಿಂತ ತುಂಬ ಕಡಿಮೆ ಇದೆ.

ಶೇ 3ರ ಹೊಸ ತೆರಿಗೆಯನ್ನು ಉದ್ದಿಮೆಯೂ ಹೆಚ್ಚಿನ ವಿರೋಧವಿಲ್ಲದೆ ಸ್ವಾಗತಿಸಿದೆ. ಈಗ ತೆರಿಗೆ ದರದ ಬಗ್ಗೆ ಸ್ಪಷ್ಟತೆ ಮೂಡಿರುವುದರಿಂದ, ಹೊಸ ತೆರಿಗೆ ಪದ್ಧತಿ ಭಾರತದ ಚಿನ್ನದ ಬೇಡಿಕೆಯ ಮೇಲೆ ಮತ್ತು ಸಂಘಟಿತ ಹಾಗೂ ಅಸಂಘಟಿತ ವಲಯದ ಚಿನ್ನಾಭರಣ ವಹಿವಾಟಿನ ಮೇಲೆ ಉಂಟುಮಾಡುವ ಪರಿಣಾಮಗಳ ಬಗ್ಗೆ ವಿಶ್ಲೇಷಿಸಬೇಕಾಗಿದೆ.

ಹೊಸ ತೆರಿಗೆಯ ಪರಿಣಾಮಗಳ ಬಗ್ಗೆ ಗ್ರಾಹಕರಿಗೆ ಸ್ಪಷ್ಟ ಚಿತ್ರಣ ನೀಡುವ ಸಲುವಾಗಿ ನಾವಿಲ್ಲಿ ಮೂರು ಲಕ್ಷ ರೂಪಾಯಿ ಮೌಲ್ಯದ (100 ಗ್ರಾಂ) ಚಿನ್ನ ಖರೀದಿಯ ಮೇಲೆ ಜಿಎಸ್‌ಟಿ ಪೂರ್ವ ಹಾಗೂ ಜಿಎಸ್‌ಟಿ ನಂತರ ಬರುವ ತೆರಿಗೆ ಪ್ರಮಾಣದ ಲೆಕ್ಕಾಚಾರ ಕೊಟ್ಟಿದ್ದೇವೆ (ಪಟ್ಟಿ ನೋಡಿ). ಅದರಂತೆ ಜಿಎಸ್‌ಟಿ ಜಾರಿಯ ಬಳಿಕ ಆಭರಣ ಚಿನ್ನ ಶೇ 3.24ರಷ್ಟು ದುಬಾರಿ ಆಗಲಿದೆ.

ಪ್ರಸಕ್ತ ಚಿನ್ನಾಭರಣ ವ್ಯಾಪಾರಿಗಳು ಆಭರಣ ಚಿನ್ನ ಖರೀದಿಸುವಾಗ ಶೇ 12.43ರಷ್ಟು ತೆರಿಗೆ ಕೊಡುತ್ತಿದ್ದಾರೆ. ಚಿನ್ನದ ಗಟ್ಟಿಗೆ ಶೇ 11.32ರಷ್ಟು ತೆರಿಗೆ ಮಾತ್ರ ಬೀಳುತ್ತದೆ. ಜಿಎಸ್‌ಟಿ ಜಾರಿಯ ನಂತರ  ಶೇ 3ರಷ್ಟು ತೆರಿಗೆ, ತಯಾರಿಕೆ ಮೇಲೆ ಶೇ 18ರಷ್ಟು ತೆರಿಗೆ ಹಾಗೂ ಅದಕ್ಕೆ ಶೇ 10ರಷ್ಟು ಆಮದು ಸುಂಕ ಸೇರಿಸಿದರೆ ಒಟ್ಟಾರೆ ತೆರಿಗೆ ಶೇ 15.67 ಆಗುತ್ತದೆ.

ಈ ಅಂಕಿಅಂಶಗಳ ಪ್ರಕಾರ, ಜಿಎಸ್‌ಟಿ ಜಾರಿಯಾದ ನಂತರ ಆಭರಣ  ಖರೀದಿಸುವವರಿಗೆ  ಚಿನ್ನ ಸ್ವಲ್ಪ ದುಬಾರಿಯಾಗುವುದು ಖಚಿತ. ಜನರು ಚಿನ್ನ ಖರೀದಿಸುವುದನ್ನು ಸರ್ಕಾರ ಪ್ರೋತ್ಸಾಹಿಸುವುದಿಲ್ಲ. ಬೆಲೆ ಏರಿಕೆಗೆ ಇದೂ ಕೂಡ ಒಂದು ಕಾರಣ. ಆರಂಭದಲ್ಲಿ ಒಂದಿಷ್ಟು ಪ್ರತಿರೋಧ ಬಂದರೂ ವರ್ತಕರು ಈ ಬೆಲೆ ಏರಿಕೆಯ ಬಿಸಿಯನ್ನು ಗ್ರಾಹಕರಿಗೆ ದಾಟಿಸುತ್ತಾರೆ ಎಂಬ ವಿಶ್ವಾಸ ನಮಗಿದೆ. ಆದರೆ ಜಿಎಸ್‌ಟಿ ಬಳಿಕ ಚಿನ್ನದ ಗಟ್ಟಿಯ ದರವೂ ಶೇ 1.98ರಷ್ಟು ಏರಿಕೆ ಆಗಲಿದೆ.

ಬೇಡಿಕೆ ಮೇಲೆ ಪರಿಣಾಮ
ಚಿನ್ನದ ಬೇಡಿಕೆಯ ವಿಚಾರಕ್ಕೆ ಬರುವುದಾದರೆ, ಮೊದಲೇ ಹೇಳಿರುವಂತೆ ತೆರಿಗೆಯಲ್ಲಾಗುವ ಸಣ್ಣ ಏರಿಕೆಯಿಂದ ಚಿನ್ನ ದುಬಾರಿಯಾಗಿ ಆರಂಭದಲ್ಲಿ ಬೇಡಿಕೆ ಸ್ವಲ್ಪ ಕುಸಿಯುವ ಸಾಧ್ಯತೆ ಇದೆ. ಆದರೆ ಕೊನೆಯ ಹಂತದ ಗ್ರಾಹಕರಿಗೆ ಯಾವುದೇ ಸಮಸ್ಯೆ ಆಗಲಾರದು. ಚಿನ್ನದ ಆಮದು ಪ್ರಮಾಣದ ಅಂಕಿ ಅಂಶಗಳನ್ನು ನೋಡಿದರೆ ಜಿಎಸ್‌ಟಿ ಜಾರಿಗೂ ಮೊದಲೇ ವರ್ತಕರು ಸಾಧ್ಯವಾಗುವಷ್ಟು ಚಿನ್ನವನ್ನು ಸಂಗ್ರಹಿಸಿಟ್ಟಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.

ಆದ್ದರಿಂದ ಜಿಎಸ್‌ಟಿ ಜಾರಿಯಾದ ನಂತರ ಬೇಡಿಕೆಯ ಮೇಲೆ ಯಾವ ಪರಿಣಾಮ ಆಗಬಹುದು ಎಂದು ಈಗಲೇ ವಿಶ್ಲೇಷಿಸುವುದು ಕಷ್ಟ. 2017ನೇ ಸಾಲಿನ ಮೊದಲ ಐದು ತಿಂಗಳಲ್ಲಿ ಭಾರತದ ಚಿನ್ನ ಆಮದು ಪ್ರಮಾಣ ಶೇ 144ರಷ್ಟು (424.1 ಟನ್‌) ಏರಿಕೆಯಾಗಿದೆ ಎಂದು ಜಿಎಫ್‌ಎಂಎಸ್‌ ಅಂಕಿಅಂಶ ತಿಳಿಸಿವೆ. ವರ್ಷದ ಮೊದಲಾರ್ಧದಲ್ಲೇ ಭಾರಿ ಪ್ರಮಾಣದಲ್ಲಿ ಆಮದು ಆಗಿರುವುದರಿಂದ, ಸಾಮಾನ್ಯವಾಗಿ ಚಿನ್ನದ ಆಮದು ಹೆಚ್ಚು ಇರಬೇಕಾದ ಸಾಲಿನ ಕೊನೆಯ ತ್ರೈಮಾಸಿಕದಲ್ಲಿ ಆಮದು ಕಡಿಮೆ ಆಗಬಹುದು ಎಂದು ಇದರರ್ಥ.

ಉದ್ದಿಮೆ ಹಾಗೂ ಗ್ರಾಹಕರು ಹೊಸ ವ್ಯವಸ್ಥೆಗೆ ಹೊಂದಿಕೊಂಡ ಮೇಲೆ ಬೇಡಿಕೆ ಮತ್ತೆ ಹೆಚ್ಚುವ ಸಾಧ್ಯತೆ ಇದೆ. ಈ ವರ್ಷಾಂತ್ಯದ ವೇಳೆಗೆ 2016ಕ್ಕಿಂತ 2017ರಲ್ಲಿ ಚಿನ್ನದ ಬೇಡಿಕೆ ಸಣ್ಣ ಪ್ರಮಾಣದಲ್ಲಾದರೂ ಏರಿಕೆಯಾಗಿರುವುದು ಕಂಡುಬರಲಿದೆ ಎಂಬುದು ನಮ್ಮ ನಿರೀಕ್ಷೆ. ಆದರೆ, ಕಳೆದ ಐದು ವರ್ಷಗಳ ಸರಾಸರಿ ಏರಿಕೆಗೆ ಹೋಲಿಸಿದರೆ ಈ ಬಾರಿ ಏರಿಕೆಯ ಪ್ರಮಾಣ ಸ್ವಲ್ಪ ಕಡಿಮೆ ಇರಬಹುದು.

ವ್ಯಾಪಾರದ ಮೇಲೆ ಪರಿಣಾಮ
ಹೊಸ ನಿಯಮಾವಳಿಯನ್ನು ಅನುಸರಿಸುವುದು ಮತ್ತು ಅಳವಡಿಸಿಕೊಳ್ಳುವುದು ಸುಲಭವಾಗಿರುವುದರಿಂದ ಸಂಘಟಿತ ವಲಯ ಮತ್ತು ಬ್ರ್ಯಾಂಡೆಡ್‌ ಆಭರಣ  ವ್ಯಾಪಾರಕ್ಕೆ  ಜಿಎಸ್‌ಟಿಯಿಂದ ಲಾಭವಾಗಲಿದೆ ಎಂಬುದು ಖಚಿತ. ಆದರೆ ಚಿಲ್ಲರೆ ವ್ಯಾಪಾರದಲ್ಲಿ ಹೆಚ್ಚುಕಡಿಮೆ ಶೇ 30ರಷ್ಟು ವಹಿವಾಟು ಸಂಘಟಿತ ವಲಯದಲ್ಲಿ ಬರುತ್ತದೆ. ಇವರಿಗೆ ಹೊಸ ನಿಯಮಾವಳಿಯನ್ನು ಕಟ್ಟುನಿಟ್ಟಾಗಿ  ಜಾರಿಮಾಡಲು ಕಷ್ಟವಾಗಬಹುದು.

ಎರಡನೆಯದಾಗಿ, ಚಿನ್ನಾಭರಣ ತಯಾರಿಕೆಯನ್ನೂ ಮಾಡುವ ಬ್ರ್ಯಾಂಡೆಡ್‌ ಹಾಗೂ ಸಂಘಟಿತ ವಲಯದ ವ್ಯಾಪಾರಿಗಳಿಗೆ ಶೇ 18ರಷ್ಟು ತಯಾರಿಕಾ ಶುಲ್ಕದಿಂದ ತಪ್ಪಿಸಿಕೊಳ್ಳಲೂ ಅವಕಾಶ ಇದೆ. ಮೂರನೆಯದಾಗಿ ಇಡೀ ಉದ್ದಿಮೆ ಸಂಘಟಿತ ವಲಯಕ್ಕೆ ತಿರುಗುವ  ಬದಲಾವಣೆ ಈಗಾಗಲೇ ಆರಂಭವಾಗಿದೆ. ದೊಡ್ಡ ಮುಖಬೆಲೆಯ ನೋಟುಗಳ ರದ್ದತಿ ಹಾಗೂ ನಗದು ವಹಿವಾಟಿಗೆ ₹ 2ಲಕ್ಷದ ಗರಿಷ್ಠ ಮಿತಿಯನ್ನು ಕಳೆದ ಬಜೆಟ್‌ನಲ್ಲಿ ಸರ್ಕಾರ ವಿಧಿಸಿರುವುದರಿಂದ, ಸಂಘಟಿತ ವಲಯಕ್ಕೆ ಹೆಚ್ಚು ಅನುಕೂಲವಾಗಿದೆ.

ಈವರೆಗೂ ಅಸಂಘಟಿತ ವಲಯದಲ್ಲೇ  ಹೆಚ್ಚು ನಗದು ವಹಿವಾಟು ನಡೆಯುತ್ತಿತ್ತು. ಈ ವಲಯ ಈಗ ಸಂಘಟಿತ ವಲಯಕ್ಕೆ ಬರುವುದು ಅನಿವಾರ್ಯವಾಗಿದೆ. ಒಟ್ಟಾರೆಯಾಗಿ ಜಿಎಸ್‌ಟಿ ಜಾರಿಯಾದ ನಂತರ ಆರಂಭದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಆಗಬಹುದು. ಆದರೆ, ದೊಡ್ಡ ಸಂಘಟಿತ ಹಾಗೂ ಬ್ರ್ಯಾಂಡೆಡ್‌ ವಲಯದ ವರ್ತಕರಿಗೆ ಲಾಭವಾಗಲಿದೆ.

ಜಿಎಸ್‌ಟಿ ಸರಿಯಾದ ದಿಕ್ಕಿನಲ್ಲಿಟ್ಟ ದಿಟ್ಟ ಹೆಜ್ಜೆ ಎಂಬುದು ನಮ್ಮ ಅಭಿಪ್ರಾಯ. ಕಾಲಾಂತರದಲ್ಲಿ ವ್ಯಾಪಾರದಲ್ಲಿ ಪಾರದರ್ಶಕತೆ ಹೆಚ್ಚಿ, ವ್ಯಾಪಾರಿಗಳು ಮತ್ತು ಗ್ರಾಹಕರು ಇಬ್ಬರಿಗೂ ಲಾಭವಾಗುವುದು.

ಸ್ಪಷ್ಟವಾದ ಮಾಹಿತಿಯ ಕೊರತೆಯಿಂದ ಕೆಲವು ವಿಚಾರಗಳಲ್ಲಿ ಇನ್ನೂ ಸಣ್ಣಪುಟ್ಟ ಗೊಂದಲಗಳಿವೆ. ಇವು ಉದ್ದಿಮೆ ಮೇಲೆ ದೊಡ್ಡ ಪರಿಣಾಮವನ್ನೇನೂ ಬೀರಲಾರವು. ಕಳೆದ ಹಲವು ದಶಕಗಳಿಂದ ಭಾರತೀಯರು ಚಿನ್ನವನ್ನು ಪ್ರಿಯವಾದ ಆಸ್ತಿ ಎಂದು ಭಾವಿಸುತ್ತ ಬಂದಿದ್ದಾರೆ. ಆದ್ದರಿಂದ ಜಿಎಸ್‌ಟಿ ಜಾರಿ ನಂತರ ಚಿನ್ನದ ಬೇಡಿಕೆ ಕುಸಿಯುವ ಸಾಧ್ಯತೆ ಇಲ್ಲ.
ನವನೀತ್‌ ದಮಾನಿ
(ಮೋತಿಲಾಲ್‌ ಓಸ್ವಾಲ್‌ ಕಮಾಡಿಟಿ
ಬ್ರೋಕರ್ಸ್‌ ಪ್ರೈವೇಟ್‌ ಲಿಮಿಟೆಡ್‌ ಉಪಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT