ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂರ್ಖಾಲ್ಯಾಂಡ್: ರಾಜಕೀಯ ಬದಿಗಿರಿಸಿ ಸಮಸ್ಯೆ ಪರಿಹರಿಸಿ

Last Updated 21 ಜೂನ್ 2017, 19:30 IST
ಅಕ್ಷರ ಗಾತ್ರ

ಕಳೆದ ಹದಿನೈದು ದಿನಗಳಿಂದ  ಡಾರ್ಜಿಲಿಂಗ್‌ನಲ್ಲಿ  ಪ್ರಕ್ಷುಬ್ಧ ಸ್ಥಿತಿ ಮುಂದುವರಿದಿದೆ. ಪ್ರತ್ಯೇಕ ಗೂರ್ಖಾಲ್ಯಾಂಡ್ ರಾಜ್ಯಕ್ಕೆ ಒತ್ತಾಯಿಸಿ ಗೂರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ನಡೆಸುತ್ತಿರುವ ಹೋರಾಟ ಹಿಂಸಾತ್ಮಕ ರೂಪ ತಾಳಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿಸಿದೆ. ಈ ಹಿಂದೆಯೂ ಡಾರ್ಜಿಲಿಂಗ್‌ನಲ್ಲಿ ಜನಾಂಗೀಯ ನೆಲೆಯ ಸಂಘರ್ಷಗಳು ನಡೆದಿವೆ.  ಈಗ ಮತ್ತೊಮ್ಮೆ  ಹಿಂಸೆ ಮರುಕಳಿಸಲು ರಾಜಕೀಯವೇ ಮುಖ್ಯ ಕಾರಣ  ಎನ್ನಬಹುದು. ಆದರೆ ಈ ಹಿಂಸೆಗೆ ಕಿಡಿ ಹೊತ್ತಿಸಿದ್ದು ಮಾತ್ರ ಭಾಷೆಯ ವಿಚಾರ. ಬಂಗಾಳಿ ಭಾಷೆಯನ್ನು 1ನೇ ತರಗತಿಯಿಂದ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕಡ್ಡಾಯ ಮಾಡಲಾಗುವುದು ಎಂದು  ಕಳೆದ ತಿಂಗಳು ಪಶ್ಚಿಮಬಂಗಾಳದ ತೃಣಮೂಲ ಕಾಂಗ್ರೆಸ್ ಸರ್ಕಾರ  ಪ್ರಕಟಿಸಿತು. ಇದಕ್ಕೆ ಪರ್ವತಪ್ರದೇಶಗಳಿಂದ ಸುತ್ತುವರಿದ ಡಾರ್ಜಿಲಿಂಗ್‌ನಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು.  ಏಕೆಂದರೆ, ಈ ಭಾಗದ ಬಹುತೇಕ ಜನರ ಭಾಷೆ ನೇಪಾಳಿ. ಅರೆ ಸ್ವಾಯತ್ತ ಪ್ರಾಧಿಕಾರವಾಗಿರುವ ಗೂರ್ಖಾಲ್ಯಾಂಡ್ ಪ್ರಾಂತೀಯ ಆಡಳಿತದ (ಜಿಟಿಎ) ಜೊತೆ ಸಮಾಲೋಚನೆ ನಡೆಸದೆ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದ್ದು ಸಮಸ್ಯೆಗೆ ಮೂಲವಾಯಿತು. ವಿರೋಧದ ದನಿ ಕೇಳಿಬಂದ ನಂತರ,  ಈ ನಿರ್ಧಾರ ಡಾರ್ಜಿಲಿಂಗ್‌ಗೆ ಅನ್ವಯಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿತು. ಆದರೆ ಅದು ಪರಿಸ್ಥಿತಿಯನ್ನು ತಿಳಿಗೊಳಿಸಲು ವಿಫಲವಾಯಿತು. ಬೂದಿ ಮುಚ್ಚಿದ ಕೆಂಡದಂತಿದ್ದ  ವಿವಾದಾತ್ಮಕ ವಿಚಾರಗಳು ಮುನ್ನೆಲೆಗೆ ಬಂದಿದ್ದು ದುರದೃಷ್ಟಕರ. ಈಗ ಜಿಟಿಎ ಮೇಲೆ ನಿಯಂತ್ರಣ ಹೊಂದಿರುವ ಬಿಮಲ್ ಗುರುಂಗ್ ಅವರ ಗೂರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ), ಪ್ರತ್ಯೇಕ ಗೂರ್ಖಾಲ್ಯಾಂಡ್ ಬೇಡಿಕೆಗೆ  ಪುನರುಜ್ಜೀವನ ನೀಡಿದೆ. ಜೊತೆಗೆ ನೇಪಾಳಿ ಭಾಷೆಗೆ ಶಾಸನಾತ್ಮಕ ರಕ್ಷಣೆ ನೀಡಬೇಕೆಂದೂ ಜಿಜೆಎಂ  ಒತ್ತಾಯಿಸಿದೆ.

ಪರ್ವತಪ್ರದೇಶಗಳಿಂದ ಸುತ್ತುವರಿದಿರುವ ಡಾರ್ಜಿಲಿಂಗ್ ಪ್ರದೇಶದ ಗೂರ್ಖಾ ರಾಜಕಾರಣದಲ್ಲಿ ಹಿಂದಿನಿಂದಲೂ ಭಾಷೆ ಸಮಸ್ಯೆ ಇದ್ದೇ ಇದೆ. ಗೂರ್ಖಾ, ಬಂಗಾಳಿ ಎಂಬಂಥ ಜನಾಂಗೀಯ ಸಮಸ್ಯೆ ಎದುರಾಗಿರುವುದೂ ಇದೇ ಮೊದಲೇನಲ್ಲ. ಆದರೆ ಸದ್ಯದ ಪರಿಸ್ಥಿತಿಗೆ ತೃಣಮೂಲ ಕಾಂಗ್ರೆಸ್ ಹಾಗೂ ಜಿಜೆಎಂ ನಡುವಿನ ರಾಜಕಾರಣ ಹಾಗೂ ಪರಸ್ಪರ ಅವಿಶ್ವಾಸ  ಹೆಚ್ಚು ಕಾರಣ ಎನ್ನಬಹುದು. ಡಾರ್ಜಿಲಿಂಗ್ ಪ್ರದೇಶದ ರಾಜಕೀಯದಲ್ಲಿ ಗೂರ್ಖಾ ಪಕ್ಷಗಳೇ ಪ್ರಾಬಲ್ಯ ಸಾಧಿಸಿವೆ. ಆದರೆ  ಕಳೆದೆರಡು ವರ್ಷಗಳಲ್ಲಿ  ಈ  ಪ್ರದೇಶದಲ್ಲಿ ತೃಣಮೂಲ ಕಾಂಗ್ರೆಸ್‌ ತನ್ನ ಛಾಪು ಮೂಡಿಸಲು  ಪ್ರಯತ್ನಿಸುತ್ತಿದೆ. 2016ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಡಾರ್ಜಿಲಿಂಗ್ ಪ್ರದೇಶದಾದ್ಯಂತ ತನ್ನ ಮತ ಪ್ರಮಾಣವನ್ನು ತೃಣಮೂಲ ಕಾಂಗ್ರೆಸ್‌  ಹೆಚ್ಚಿಸಿಕೊಂಡಿತು.  ಅಷ್ಟೇ ಅಲ್ಲ, ಈ ವರ್ಷ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಿರಿಕ್‌ನಲ್ಲಿ  ತೃಣಮೂಲ ಕಾಂಗ್ರೆಸ್ ಗೆಲುವು ಸಾಧಿಸಿದ್ದಂತೂ  ದೊಡ್ಡ ಸಾಧನೆ.  ಜೊತೆಗೆ ಇತ್ತೀಚೆಗೆ  ಮಮತಾ ಬ್ಯಾನರ್ಜಿ ನೇತೃತ್ವದ ಸಚಿವ ಸಂಪುಟ ಸಭೆಯನ್ನೂ ಡಾರ್ಜಿಲಿಂಗ್‌ನಲ್ಲೇ ನಡೆಸಲಾಯಿತು. ಈ ಬೆಳವಣಿಗೆಗಳನ್ನೆಲ್ಲಾ ಬೆದರಿಕೆಯಾಗಿ ಜಿಜೆಎಂ ಪರಿಗಣಿಸಿದೆ. ಡಾರ್ಜಿಲಿಂಗ್ ಪ್ರದೇಶದಲ್ಲಿ ತಾನು ಹೊಂದಿರುವ ಸಂಪೂರ್ಣ ನಿಯಂತ್ರಣಕ್ಕೆ ಒಡ್ಡಿದ ಸವಾಲು ಇದು ಎಂಬುದು ಜಿಜೆಎಂ ಭಾವನೆ. ತೃಣಮೂಲ ಕಾಂಗ್ರೆಸ್‌ನ ಈ ಬೆದರಿಕೆ ದೊಡ್ಡದಾಗಿ ಬೆಳೆಯುವುದು ಜಿಜೆಎಂಗೆ ಇಷ್ಟವಿಲ್ಲ. ಹೀಗಾಗಿ ಅದು ಆಕ್ರಮಣಕಾರಿ ನೀತಿ ಹಾಗೂ  ಸಂಘರ್ಷದ ವಿಧಾನ ಅನುಸರಿಸುತ್ತಿದೆ. ಇದಕ್ಕೆ ಪೂರಕವಾಗುವಂತೆ   ಭಾಷೆ ವಿವಾದ ಒದಗಿಬಂದಂತಾಗಿದೆ.

ಬಿಜೆಪಿ ಮಿತ್ರ ಪಕ್ಷವೂ ಆಗಿರುವ ಜಿಜೆಎಂ ಕೇಂದ್ರದಲ್ಲಿ ಆಡಳಿತದಲ್ಲಿರುವ ಎನ್‌ಡಿಎ ಭಾಗವಾಗಿದೆ. ಗೂರ್ಖಾಲ್ಯಾಂಡ್ ಬೇಡಿಕೆಗೆ ಬಿಜೆಪಿ ಈ ಹಿಂದೆ ಬೆಂಬಲ ಸೂಚಿಸಿದ್ದೂ ಇದೆ.  ಹೀಗಾಗಿ 2009ರಿಂದ ಡಾರ್ಜಿಲಿಂಗ್‌ನಿಂದ ಲೋಕಸಭೆಗೆ  ಬಿಜೆಪಿ  ಎಂಪಿಯೇ ಆಯ್ಕೆಯಾಗುತ್ತಿದ್ದಾರೆ. ಆದರೆ ಪರಿಷ್ಕೃತ ಗೂರ್ಖಾಲ್ಯಾಂಡ್ ಬೇಡಿಕೆ ಬಗ್ಗೆ  ಈಗ ಬಿಜೆಪಿ ನಿಲುವು ಸ್ಪಷ್ಟವಿಲ್ಲ.  ಗಡಿಭಾಗಗಳಿರುವ ಈ ಪ್ರದೇಶಕ್ಕೆ ಪ್ರತ್ಯೇಕ ರಾಜ್ಯ ಸ್ಥಾನಮಾನ ನೀಡುವುದು ಭದ್ರತೆ ದೃಷ್ಟಿಯಿಂದ ಸಾಧುವೂ ಅಲ್ಲ. ಸದ್ಯಕ್ಕೆ   ಸಮಸ್ಯೆ ಬಗೆಹರಿಯುವುದು ಮುಖ್ಯ. ಪ್ರವಾಸೋದ್ಯಮವೇ ಪ್ರಮುಖ ವರಮಾನವಾಗಿರುವ ಡಾರ್ಜಿಲಿಂಗ್‌ನಲ್ಲಿ ಪ್ರತಿಭಟನೆ, ಹಿಂಸಾಚಾರ ಮುಂದುವರಿಯುವುದು ಸಲ್ಲದು. ಮಾತುಕತೆ ಮೂಲಕ  ಈ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳುವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT