ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಶಾಸ್ತ್ರ ‘ಕೋರ್ಸ್‌ವರ್ಕ್‌’ ಪರೀಕ್ಷೆ ರದ್ದು

Last Updated 22 ಜೂನ್ 2017, 5:21 IST
ಅಕ್ಷರ ಗಾತ್ರ

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯ ಬುಧವಾರ ರಾಜ್ಯಶಾಸ್ತ್ರದ ಸಂಶೋಧನಾ ವಿದ್ಯಾರ್ಥಿಗಳಿಗೆ ನಿಗದಿ ಮಾಡಿದ್ದ ‘ಕೋರ್ಸ್‌ವರ್ಕ್‌’ ಪರೀಕ್ಷೆ ದಿಢೀರ್‌ ರದ್ದು ಮಾಡಿದೆ.

ಪರೀಕ್ಷೆ ದಿಢೀರ್ ರದ್ದು ಮಾಡಿದ ಪರಿಣಾಮ ದೂರದ ಊರುಗಳಿಂದ ಬಂದಿದ್ದ 18 ವಿದ್ಯಾರ್ಥಿಗಳು ಕುಲಪತಿ ಜೋಗನ್‌ ಶಂಕರ್, ಕುಲಸಚಿವ ಭೋಜ್ಯಾನಾಯ್ಕ ಅವರಿಗೆ ದೂರು ನೀಡಿ, ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯಶಾಸ್ತ್ರ ವಿಷಯದಲ್ಲಿ ಸಂಶೋಧನೆ ಕೈಗೊಳ್ಳಲು ಕೆಲವು ತಿಂಗಳ ಹಿಂದೆ ಈ ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎ.ಷಣ್ಮುಖ, ಪ್ರೊ.ಜಾವೇದ್, ಕೆ.ಚಂದ್ರಶೇಖರ್, ಸಹ್ಯಾದ್ರಿ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಪ್ರಹ್ಲಾದಪ್ಪ, ಡಾ.ಪ್ರಸನ್ನಕುಮಾರ್, ಪ್ರೊ.ಎಂ.ಬಿ.ಮಹಾವರ್ಕರ್ ಅವರನ್ನು ಈ ಸಂಶೋಧನಾರ್ಥಿಗಳಿಗೆ ಮಾರ್ಗದರ್ಶನ ಮಾಡಲು ವಿಶ್ವವಿದ್ಯಾಲಯ ನಿಯೋಜನೆ ಮಾಡಿತ್ತು.

ಪ್ರಶ್ನೆಪತ್ರಿಕೆ ಇಲ್ಲದೇ ಪರೀಕ್ಷೆಗೆ ಸಿದ್ಧತೆ: ಬುಧವಾರ  ‘ಕೋರ್ಸ್‌ವರ್ಕ್‌’ ಪರೀಕ್ಷೆ ನಿಗದಿ ಮಾಡಲಾಗಿತ್ತು. ಪ್ರವೇಶ ಪತ್ರಗಳನ್ನೂ ವಿತರಿಸಲಾಗಿತ್ತು. ಪರೀಕ್ಷಾ ಕೊಠಡಿ, ವಿದ್ಯಾರ್ಥಿಗಳು ಕುಳಿತುಕೊಳ್ಳುವ ಆಸನ ಸಂಖ್ಯೆಯನ್ನೂ ಬರೆಯಲಾಗಿತ್ತು. ಆದರೆ, ಪ್ರಶ್ನೆಪತ್ರಿಕೆಯನ್ನೇ ಸಿದ್ಧಪಡಿಸರಲಿಲ್ಲ.  ಈ ಪ್ರಕರಣದಿಂದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಸಾಕಷ್ಟು ಮುಜುಗರ ಅನುಭವಿಸಿದರು.

‘ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಹೊಣೆಯನ್ನು ವಿಶ್ವವಿದ್ಯಾಲಯದ ಪರೀಕ್ಷಾ ಮಂಡಳಿಗೆ ನೀಡಲಾಗಿತ್ತು. ಪರೀಕ್ಷೆ ನಿಗದಿಯಾಗಿರುವ ದಿನದ ಮಾಹಿತಿ ನೀಡಿದ್ದರೂ, ಮಂಡಳಿ ಪ್ರಶ್ನೆಪತ್ರಿಕೆಯನ್ನೇ ಸಿದ್ಧಪಡಿಸಿಲ್ಲ. ಇಂತಹ ಘಟನೆ ಭವಿಷ್ಯದಲ್ಲಿ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕಿದೆ’ ಎಂದು ಪ್ರಾಧ್ಯಾಪಕರೊಬ್ಬರು ‘ಪ್ರಜಾವಾಣಿ’ ಜತೆ ಅಳಲು ತೋಡಿಕೊಂಡರು.

***

ಪರೀಕ್ಷಾ ಮಂಡಳಿ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲವಾಗಿದೆ. ಇಂತಹ ಯಡವಟ್ಟಿಗೆ ಕಾರಣರಾದ ಮಂಡಳಿ ಮುಖ್ಯಸ್ಥ ಪ್ರೊ.ಚಂದ್ರಶೇಖರ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
–ಜೋಗನ್‌ ಶಂಕರ್, ಕುಲಪತಿ, ಕುವೆಂಪು ವಿವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT