ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹12 ಸಾವಿರ ಬಾರ್ ಬಿಲ್‌ ಕಟ್ಟಲು ವೃದ್ಧನ ಕೊಂದ!

ಕಳ್ಳತನಕ್ಕಾಗಿ ಮನೆಗೆ ನುಗ್ಗಿ ಕೃತ್ಯ ಎಸಗಿದ್ದ ಆರೋಪಿ ಸೆರೆ
Last Updated 24 ಜೂನ್ 2017, 20:03 IST
ಅಕ್ಷರ ಗಾತ್ರ

ಬೆಂಗಳೂರು: ಕಳ್ಳತನ ಮಾಡುವ ಉದ್ದೇಶದಿಂದ ಯಲಹಂಕ ಉಪನಗರದ ಮನೆಗೆ ನುಗ್ಗಿ ಅನಂತರಾಮಯ್ಯ (67) ಎಂಬುವರನ್ನು ಕೊಲೆಗೈದು ಪರಾರಿಯಾಗಿದ್ದ ಆರೋಪಿ ನವೀನ್‌ (29) ಶನಿವಾರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಹಾಸನ ಜಿಲ್ಲೆ ದೊಡ್ಡಗೇಣಿಗೆರೆ ಗ್ರಾಮದ ನವೀನ್, ಕೃತ್ಯ ಎಸಗಿದ ಬಳಿಕ ಗ್ರಾಮಕ್ಕೆ ಮರಳಿ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಉಳಿದುಕೊಂಡಿದ್ದ. ಯಲಹಂಕ ಉಪವಿಭಾಗದ ಪೊಲೀಸರ ವಿಶೇಷ ತಂಡವು ಆ ಕಟ್ಟಡದಲ್ಲೇ ಆರೋಪಿಯನ್ನು ಬಂಧಿಸಿದೆ.

ಜೂನ್ 20ರ ಸಂಜೆ ಹಾಸನದಿಂದ ಬಸ್ಸಿನಲ್ಲಿ ನಗರಕ್ಕೆ ಬಂದಿದ್ದ ಆರೋಪಿ, ಮರುದಿನ  ನಸುಕಿನಲ್ಲಿ ಕಳ್ಳತನ ಮಾಡಲು ಯಲಹಂಕ 4ನೇ ಹಂತದ ಮನೆಯೊಂದಕ್ಕೆ ನುಗ್ಗಿದ್ದ. ಆ ವೇಳೆ  ಮನೆಯ ಬಾಲಕ ಮಹಮದ್ ಅನೀಸ್ (12) ಎಚ್ಚರಗೊಂಡಿದ್ದ.  ಬಾಲಕನ ತಲೆಗೆ ರಾಡ್‌ನಿಂದ ಹೊಡೆದಿದ್ದ.

ಆ ಮನೆಯಿಂದ ಹೊರಬಂದ ಬಳಿಕ, ಅನಂತರಾಮಯ್ಯ ಅವರ ಮನೆಗೆ ನುಗ್ಗಿದ್ದ.  ಸದ್ದು ಕೇಳಿ ಅವರು ಎಚ್ಚರಗೊಂಡಿದ್ದರು. ಅವರ  ತಲೆಗೂ ರಾಡ್‌ನಿಂದ ಹೊಡೆದು ಪರಾರಿಯಾಗಿದ್ದ. ಚಿಕಿತ್ಸೆಗೆ ಸ್ಪಂದಿಸದ ಅನಂತರಾಮಯ್ಯ ಅವರು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

‘ಮದ್ಯ ವ್ಯಸನಿಯಾಗಿದ್ದ ನವೀನ್, ನಿತ್ಯ ಸಾಲ ಮಾಡಿ ಕುಡಿಯುತ್ತಿದ್ದ. ಬಾರೊಂದರ ಮಾಲೀಕರಿಗೆ ಆತ  ₹12,000 ಕೊಡಬೇಕಿತ್ತು. ಬಿಲ್‌ ಕೊಡದಿದ್ದರಿಂದ ಮಾಲೀಕರು ಬೈಯ್ದಿದ್ದರು. ಅದನ್ನು ಕಟ್ಟುವುದಕ್ಕಾಗಿ ಕಳ್ಳತನ ಮಾಡಲು ಆರೋಪಿಯು ಯಲಹಂಕ ಉಪನಗರದ ಮನೆಗಳಿಗೆ ನುಗ್ಗಿದ್ದ’ ಎಂದು ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಹೇಮಂತ್‌ ನಿಂಬಾಳ್ಕರ್‌ ತಿಳಿಸಿದರು.

ಚಾವಣಿಯಿಂದ ಚಾವಣಿಗೆ ಜಿಗಿಯುತ್ತಿದ್ದ: ‘ರಸ್ತೆಯಲ್ಲಿ ನಡೆದು ಹೋದರೆ ನಾಯಿಗಳು ಬೊಗಳುತ್ತವೆ. ಗಸ್ತು ಪೊಲೀಸರು ಪ್ರಶ್ನಿಸುತ್ತಾರೆ ಎಂದು ಆರೋಪಿ ಚಾವಣಿಯಿಂದ ಚಾವಣಿಗೆ ಜಿಗಿದುಕೊಂಡು ಹೋಗಿ ಮನೆಗಳಿಗೆ ನುಗ್ಗುತ್ತಿದ್ದ’ ಎಂದು ತನಿಖಾಧಿಕಾರಿ ವಿವರಿಸಿದರು.

ಎರಡು ಮದುವೆ, ಇಬ್ಬರು ಮಕ್ಕಳು: ‘ಆರೋಪಿ ಎರಡು ಮದುವೆಯಾಗಿದ್ದು, ಮೊದಲ ಪತ್ನಿಗೆ ಇಬ್ಬರು ಮಕ್ಕಳಿದ್ದಾರೆ.  ಈ ಹಿಂದೆ ಬೆಂಗಳೂರಿನ ಬೇಕರಿ ಹಾಗೂ ಹೋಟೆಲ್‌ನಲ್ಲಿ ಕೆಲಸ ಮಾಡಿದ್ದ. ಆತನಿಗೆ ತಿಂಗಳಿಗೆ ₹ 6,000 ಸಂಬಳ ಸಿಗುತ್ತಿತ್ತು’ ಎಂದು ಪೊಲೀಸರು ತಿಳಿಸಿದರು.

‘ಕುಟುಂಬ ನಿರ್ವಹಣೆ ಹಾಗೂ ಮಕ್ಕಳಿಗೆ ಶಿಕ್ಷಣ ಕೊಡಿಸಲು ಸಂಬಳ ಸಾಲುತ್ತಿರಲಿಲ್ಲ. ಹೀಗಾಗಿ ಕಳ್ಳತನ ಮಾಡಿ ಹಣ ಸಂಪಾದಿಸಲು ಆರಂಭಿಸಿದ್ದೆ’ ಎಂದು ಆರೋಪಿ ಹೇಳಿಕೆ ನೀಡಿರುವುದಾಗಿ ತನಿಖಾಧಿಕಾರಿ ತಿಳಿಸಿದರು.

‘ಆರೋಪಿಗೆ ಸಹೋದರನ ಜೊತೆ ಸೇರಿ ಪಾಲುದಾರಿಕೆಯಲ್ಲಿ ಕಟ್ಟಡ ನಿರ್ಮಾಣ ಕಂಪೆನಿ ಆರಂಭಿಸಲು ಸಿದ್ಧತೆ ನಡೆಸಿದ್ದ ಎಂಬ ಮಾಹಿತಿ ಇದೆ. ಇದನ್ನು ಖಚಿತಪಡಿಸಿಕೊಳ್ಳುತ್ತಿದ್ದೇವೆ’ ಎಂದು ಹೇಳಿದರು. 

ಪೊಲೀಸ್‌ ದಾಖಲೆಯಿಂದ ಸಿಕ್ಕಿಬಿದ್ದ: ‘ಕೃತ್ಯ ನಡೆದ ಮನೆಯಲ್ಲಿ ಸಂಗ್ರಹಿಸಿದ್ದ ಆರೋಪಿಯ ಬೆರಳಚ್ಚು ಮಾದರಿ ಪೊಲೀಸ್‌ ದಾಖಲೆಯಲ್ಲಿ ಸಂಗ್ರಹವಿತ್ತು. ಸಿ.ಸಿ.ಟಿ.ವಿಯಲ್ಲೂ ಆತನ ಚಹರೆ ಸೆರೆಯಾಗಿತ್ತು. ಆತನ ಬಂಧನಕ್ಕೆ ಈ ಪುರಾವೆಗಳು ನೆರವಾದವು’ ಎಂದು ಪೊಲೀಸರು ತಿಳಿಸಿದರು. 

**

ಪ್ರತಿಭಾವಂತ ವಿದ್ಯಾರ್ಥಿಗೆ ಕಳ್ಳತನವೇ ವೃತ್ತಿ
‘ಎಸ್ಸೆಸ್ಸೆಲ್ಸಿಯಲ್ಲಿ ಶೇ 76 ಹಾಗೂ ಪಿಯುಸಿಯಲ್ಲಿ ಶೇ 82ರಷ್ಟು ಫಲಿತಾಂಶ ಪಡೆದಿದ್ದ ಆರೋಪಿಯು 2005ರಲ್ಲಿ ಮೈಸೂರಿನ ಕೆ.ಆರ್‌.ಪುರ ಠಾಣೆ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದ. ಆತನಿಗೆ ಮೂರೂವರೆ ವರ್ಷ ಶಿಕ್ಷೆಯೂ ಆಗಿತ್ತು. ಜೈಲಿನಲ್ಲಿ ಸಹಕೈದಿಗಳಿಂದ ಕಳ್ಳತನದ ಬಗ್ಗೆ ಹೆಚ್ಚು ತಿಳಿದುಕೊಂಡ’ ಎಂದು ತನಿಖಾಧಿಕಾರಿ ತಿಳಿಸಿದರು.

‘ಜೈಲಿನಿಂದ ಹೊರಗೆ ಬಂದಿದ್ದ ಆರೋಪಿಯು ಸರಣಿ ಕಳ್ಳತನ ನಡೆಸಲು ಆರಂಭಿಸಿದ್ದ. ಆತನ ವಿರುದ್ಧ ಮೈಸೂರು ಹಾಗೂ ಹಾಸನದಲ್ಲಿ 20 ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ ಕೃತ್ಯವೆಸಗಿ ಸಿಕ್ಕಿಬಿದ್ದಿದ್ದು ಇದೇ ಮೊದಲು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT