ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 27 ಜೂನ್ 2017, 19:30 IST
ಅಕ್ಷರ ಗಾತ್ರ

ಊರು, ಹೆಸರು ಬೇಡ
* ನಾನು ಸಂಬಂಧಿಗಳಿಂದ ಪಡೆದ ಸಾಲ ಹಾಗೂ ಸಹಕಾರ ಸಂಘದಿಂದ ಪಡೆದ ಸಾಲಕ್ಕಾಗಿ ನನ್ನ ಮನೆಯನ್ನು ಸಹಕಾರ ಸಂಘದಲ್ಲಿ ಅಡವಿಟ್ಟಿದ್ದೇನೆ. ಸಾಲ ಪಡೆದ ಉದ್ದೇಶ ಏನೆಂದರೆ, ಈ ಹಣದಿಂದ ನನ್ನ ಮಕ್ಕಳು ರಿಯಲ್ ಎಸ್ಟೇಟ್  ವಹಿವಾಟು ನಡೆಸುತ್ತಾರೆ. ಮುಂದೆ ₹ 45 ಲಕ್ಷ ಲಾಭ ಬರಬಹುದು. ಈ ಹಣಕ್ಕೆ ತೆರಿಗೆ ಇದೆಯೇ, ಸಾಲ ತೀರಿಸಿ ಉಳಿದ ಹಣ ನನ್ನ ಹಾಗೂ ಹೆಂಡತಿ ಹೆಸರಿನಲ್ಲಿ ಠೇವಣಿ ಮಾಡಿದರೆ ತೆರಿಗೆ ಬರುತ್ತದೆಯೇ ತಿಳಿಸಿ.

ಉತ್ತರ: ಯಾವುದೇ ಉದ್ಯೋಗ ಅಥವಾ ಇನ್ನಿತರ ಕೆಲಸಗಳಿಂದ ಬರುವ ವರಮಾನಕ್ಕೆ ತೆರಿಗೆ ಇದ್ದೇ ಇರುತ್ತದೆ. ನಿಮ್ಮ ಮಕ್ಕಳು ಸ್ಥಿರ ಆಸ್ತಿ, ನಿವೇಶನ ಕೊಂಡು ಮಾರಾಟ ಮಾಡುವಾಗ ಅವರಿಗೆ ಬಂಡವಾಳ ವೃದ್ಧಿ ತೆರಿಗೆ ಬರುತ್ತದೆ. ಬಂದಿರುವ ಲಾಭ, ಮಕ್ಕಳು, ನಿಮಗೂ ನಿಮ್ಮ ಹೆಂಡತಿಗೂ ಹಂಚಿದಲ್ಲಿ ಹೀಗೆ ನಿಮಗೆ ಬಂದಿರುವ ಆದಾಯಕ್ಕೆ ತೆರಿಗೆ ಇರುವುದಿಲ್ಲ. ಆದರೆ, ಹೀಗೆ ಬಂದಿರುವ ಹಣ ನಿಮ್ಮ ಹಾಗೂ ನಿಮ್ಮ ಹೆಂಡತಿ ಹೆಸರಿನಲ್ಲಿ ಠೇವಣಿಯಾಗಿರಿಸಿ, ಇಲ್ಲಿ ಬರುವ ವಾರ್ಷಿಕ ಬಡ್ಡಿ ಹಾಗೂ ಇತರೆ ಆದಾಯವಿರುವಲ್ಲಿ, ಎಲ್ಲವನ್ನೂ ಸೇರಿಸಿ, ವಾರ್ಷಿಕವಾಗಿ ₹ 3 ಲಕ್ಷಕ್ಕೂ ಹೆಚ್ಚಿನ ವರಮಾನವಿದ್ದಲ್ಲಿ, ₹ 3 ಲಕ್ಷಕ್ಕಿಂತ ಹೆಚ್ಚಿನ ವರಮಾನಕ್ಕೆ ಮಾತ್ರ ತೆರಿಗೆ ಕೊಡಬೇಕಾಗುತ್ತದೆ.

ಸಿದ್ದು. ಎಂ., ಬೆಳಗಾವಿ
* ರಕ್ಷಣಾ ವಿಭಾಗದಲ್ಲಿ ಕೆಲಸ ಮಾಡುತ್ತೇನೆ. ವಯಸ್ಸು 23. ನನ್ನ ಸಂಬಳ ₹ 25,000 ನನ್ನ ತಿಂಗಳ ಖರ್ಚು ₹ 5,000. ಈ ವರೆಗೆ ಏನೂ ಉಳಿತಾಯ ಮಾಡಿಲ್ಲ. ಇದುವರೆಗೆ 2 ವರ್ಷ ಸೇವೆ ಮುಗಿದಿದೆ. 15 ವರ್ಷಗಳ ಸೇವಾವಧಿ ಇದ್ದು, ಇನ್ನೂ13 ವರ್ಷವಿದೆ. ನನ್ನ ಭವಿಷ್ಯಕ್ಕೆ ಹೇಗೆ ಉಳಿತಾಯ ಮಾಡಲಿ, ಮ್ಯೂಚುವಲ್‌ ಫಂಡ್‌ನ ವಿಚಾರ ಕೂಡಾ ತಿಳಿಸಿರಿ.

ಉತ್ತರ: ನೀವು 23 ವರ್ಷದವರಿದ್ದು, ನಿಮಗೆ ಉತ್ತಮ ಭವಿಷ್ಯವಿದೆ. ಈಗಿನಿಂದಲೇ ಸರಿಯಾದ ಉಳಿತಾಯದ  ಪ್ಲ್ಯಾನ್‌ ಹಾಕಿಕೊಂಡಲ್ಲಿ, ನೀವು ಜೀವನದಲ್ಲಿ ಏನನ್ನೂ ಸಾಧಿಸಬಹುದು. ರಕ್ಷಣಾ ವಿಭಾಗದಲ್ಲಿ ಕೆಲಸ ಮಾಡುವ ನಿಮಗೆ ಹೆಚ್ಚಿನ ಅಗತ್ಯಗಳು, ಕಡಿಮೆ ದರದಲ್ಲಿ ಸಿಗುವುದರಿಂದ, ಆದಾಯದ ಸಿಂಹಪಾಲು ಉಳಿತಾಯಕ್ಕೆ ಮುಡುಪಾಗಿ ಇಡಬಹುದು. ನೀವು ಅವಿವಾಹಿತರು. ಮದುವೆ ತನಕ ಅಂದರೆ ಇನ್ನೂ 5 ವರ್ಷಗಳ ಕಾಲ ಕನಿಷ್ಠ ₹ 10,000 ಆರ್‌.ಡಿ. 5 ವರ್ಷಗಳ ಅವಧಿಗೆ ಮಾಡಿರಿ. ಅಷ್ಟರಲ್ಲಿ ನಿಮಗೆ ಮದುವೆ ಆಗಬಹುದು. ಹೀಗೆ ಕೂಡಿಟ್ಟ ಹಣ ಸ್ವಲ್ಪ ಸಾಲ ಮಾಡಿಯಾದರೂ, 30 X 40 ನಿವೇಶನ ಕೊಂಡುಕೊಳ್ಳಿ. ನಂತರ ಕೂಡಾ ನಿಮ್ಮ ಪರಿಸರ–ಆದಾಯಕ್ಕನುಗುಣವಾಗಿ ದೀರ್ಘಾವಧಿ ಆರ್‌.ಡಿ. ಮಾಡುತ್ತಾ ಬನ್ನಿ. ಇದರಿಂದ ಉಳಿತಾಯ ಮಾತ್ರವಲ್ಲ ಬೇಡವಾದ ಖರ್ಚಿಗೆ ಕಡಿವಾಣವಾಗುತ್ತದೆ. ಸದ್ಯಕ್ಕೆ ₹ 2000  ಪ್ರತೀ ತಿಂಗಳು ತುಂಬುವ ಎಸ್‌ಐಪಿ (ಕ್ರಮಬದ್ಧವಾದ ಉಳಿತಾಯ  ಪ್ಲ್ಯಾನ್‌) ಎಸ್‌.ಬಿ.ಐ. ಮ್ಯೂಚುವಲ್‌ ಫಂಡ್‌ನಲ್ಲಿ ಮಾಡಿ.

ಹೆಸರು, ಊರು–ಬೇಡ
* ನನ್ನ ವಯಸ್ಸು 23.  ಉದ್ಯೋಗದಲ್ಲಿ ಇದ್ದೇನೆ. ಪಿಎಫ್‌–ಇಎಸ್‌ಐ ಕಳೆದು ₹ 11,000 ಕೈಗೆ ಸಿಗುತ್ತದೆ. ನನಗೆ ಕರ್ಣಾಟಕ ಬ್ಯಾಂಕಿನಲ್ಲಿ ಖಾತೆ ಇದೆ. ಇಲ್ಲಿ ₹ 1,000 ಆರ್‌.ಡಿ. ಮಾಡಬಯಸಿದ್ದೇನೆ. ನನಗೆ ಎಲ್‌ಐಸಿ ಪಾಲಸಿ ಮಾಡಲು ಯಾವ ಸ್ಕೀಮ್‌ ಉತ್ತಮ ತಿಳಿಸಿರಿ.

ಉತ್ತರ: ನೀವು ಆರಿಸಿಕೊಂಡ ಕರ್ಣಾಟಕ ಬ್ಯಾಂಕ್‌, ರಾಜ್ಯದ ಉತ್ತಮ ಖಾಸಗಿ ಬ್ಯಾಂಕ್‌. ಅಲ್ಲಿ ತಕ್ಷಣ ₹ 1000 ಆರ್‌.ಡಿ. 5 ವರ್ಷಗಳ ಅವಧಿಗೆ ಪ್ರಾರಂಭಿಸಿ ಉಳಿತಾಯ ಖಾತೆಗೆ ಸ್ಟ್ಯಾಂಡಿಂಗ್‌ ಇನ್‌್ಸಟ್ರಕ್ಷನ್‌ ಕೊಟ್ಟಲ್ಲಿ, ಅವರೇ ಪ್ರತೀ ತಿಂಗಳೂ ಈ ಖಾತೆಯಿಂದ ಆರ್‌.ಡಿ.ಗೆ ₹ 1000 ವರ್ಗಾಯಿಸುತ್ತಾರೆ. ಈ ಸೇವೆ ಶುಲ್ಕ ರಹಿತ ಕೂಡಾ. ಜೊತೆಗೆ ಎಲ್‌ಐಸಿಯವರ ಜೀವನ ಆನಂದ ಪಾಲಿಸಿ ಮಾಡಿಸಿರಿ. ಇದೊಂದು ಎಲ್ಐಸಿಯವರ ಉತ್ಕೃಷ್ಟ ಯೋಜನೆ ಹಾಗೂ ಇಲ್ಲಿ ದೀರ್ಘಾವಧಿ ಲಾಭ ತುಂಬಾ ಚೆನ್ನಾಗಿದೆ. ಈ ಎರಡೂ ಯೋಜನೆ ತಕ್ಷಣ ಪ್ರಾರಂಭಿಸಿರಿ. ಸಣ್ಣ ಉಳಿತಾಯದಿಂದ ದೊಡ್ಡ ಕನಸು ಕಾಣುವ ಅವಕಾಶ ಇವೆರಡರಲ್ಲಿಯೂ ಇದೆ. ನಿಮಗೆ ಶುಭವಾಗಲಿ.

ಹೆಸರು, ಊರು–ಬೇಡ
* ನನ್ನ ವಯಸ್ಸು 40. ಸಹಕಾರಿ ಸಂಘದಲ್ಲಿ ಕೆಲಸ. ತಿಂಗಳ ಸಂಬಳ ₹ 20,000. ಎಲ್ಲಾ ಕಡಿತ ಹಾಗೂ ಖರ್ಚು ಕಳೆದು ₹ 10,000  ಉಳಿಸುತ್ತೇನೆ. ನನಗೆ 10ನೇ ತರಗತಿಯಲ್ಲಿ ಓದುವ ಮಗನಿದ್ದಾನೆ. ₹ 6 ಲಕ್ಷದ ಭೋಗ್ಯದ ಮನೆಯಲ್ಲಿದ್ದೇವೆ. ನನ್ನ ಗಂಡನಿಗೆ ಯಾವ ಆದಾಯ ವಿರುವುದಿಲ್ಲ. ಬಂಗಾರದ ಮೇಲೆ ಸಾಲ ಪಡೆದಿದ್ದೇವೆ. ಬಂಗಾರದ ಸಾಲ ₹ 2.50 ಲಕ್ಷವಿದ್ದು, ಈ ಹಣ ತೀರಿಸಲು, ಪ್ಯಾನ್‌ ಕಾರ್ಡು ಕೇಳುತ್ತಾರೆ. ಪ್ಯಾನ್‌ ಕಾರ್ಡು ಮಾಡಿಸಿದರೆ ಐ.ಟಿ. ರಿಟರ್ನ್‌ ತುಂಬಬೇಕೇ? ಇನ್ಶುರನ್ಸ್‌ ಪ್ರೀಮಿಯಂ ನನ್ನ ಖಾತೆಯಿಂದ ಇ.ಸಿ.ಎಸ್‌. ಮಾಡಿಸಿದ್ದೇನೆ. ಗಂಡನ ಪ್ರೀಮಿಯಮ್‌ ಹಣ ನಾನು ಕಟ್ಟಿದರೆ ಅದು ಗಂಡನ ಆದಾಯವಾಗುತ್ತದೆಯೇ? ನಾನು ಯಾವ ರೀತಿ ಉಳಿಸಿದರೆ ಒಂದು ಮನೆ ಕೊಂಡು ಕೊಳ್ಳಬಹುದು. ಭೋಗ್ಯದ ಹಣಕ್ಕೆ ಚೆಕ್‌ ಪಡೆದರೆ ಅದಕ್ಕೆ ತೆರಿಗೆ ಬರುತ್ತದೆಯೇ.

ಉತ್ತರ: ನಿಮ್ಮ ವಾರ್ಷಿಕ ಒಟ್ಟು ಆದಾಯ ₹ 2.40 ಲಕ್ಷ. ನೀವು ಆದಾಯ ತೆರಿಗೆಗೆ ಒಳಗಾಗುವುದಿಲ್ಲ. ₹ 50,000ಕ್ಕೂ ಹೆಚ್ಚಿನ ಯಾವುದೇ ವ್ಯವಹಾರ ಮಾಡುವಾಗ ಪ್ಯಾನ್‌ ಕಾರ್ಡ್‌ ಅವಶ್ಯವಿದೆ. ಪ್ಯಾನ್‌ ಕಾರ್ಡು ಮಾಡಿಸಿ. ಆದಾಯ ಸರ್ಕಾರ ನಿಗದಿಪಡಿಸಿದ ಮಿತಿಯಲ್ಲಿ ಇರುವ ತನಕ ಪ್ಯಾನ್‌ ಕಾರ್ಡ್‌ ಹೊಂದಿದ್ದರೂ ರಿಟರ್ನ್‌ ತುಂಬುವ ಅವಶ್ಯವಿಲ್ಲ. ಭೋಗ್ಯದ ಹಣ ಚೆಕ್‌ ಮುಖಾಂತರ ಪಡೆದರೂ, ಈ ಹಣ ವರಮಾನ ಅಥವಾ ಆದಾಯವೆಂದು ಪರಿಗಣಿಸಲಾಗದು, ಕೊಟ್ಟ ಹಣ ವಾಪಸು ಪಡೆಯುವಾಗ ತೆರಿಗೆ ಪ್ರಶ್ನೆ ಉದ್ಭವಿಸುವುದಿಲ್ಲ. ತೆರಿಗೆ ಭಯದಿಂದ ಹೊರಬಂದು, ಮಗನ ಓದುವಿನ ವಿಚಾರದಲ್ಲಿ ಹೆಚ್ಚಿನ ಗಮನ ಹರಿಸಿರಿ. ನಿಮ್ಮ ಆದಾಯ ಹಾಗೂ ನೀವು ಉಳಿಸಬಹುದಾದ ಹಣದಲ್ಲಿ, ಈ ಹಣದುಬ್ಬರದ ಪರಿಸ್ಥಿತಿಯಲ್ಲಿ ಮನೆ ಕೊಳ್ಳಲು ಸಾಧ್ಯವಿಲ್ಲ. ₹ 10,000, 5 ವರ್ಷಗಳ ಆರ್‌.ಡಿ. ಮಾಡಿ, ಮುಂದೆ ನಿವೇಶನ ಕೊಳ್ಳಿರಿ.

ರಾಜಲಕ್ಷ್ಮೀ, ಊರು ಬೇಡ
* ನನ್ನ ಮಗ ಐ.ಟಿ. ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ್ದಾನೆ. ವಾರ್ಷಿಕ ವರಮಾನ ₹ 9 ಲಕ್ಷ. ಎಲ್‌.ಐ.ಸಿ.ಗೆ ₹ 600 ತುಂಬುತ್ತಾನೆ.  ತಂದೆಯವರ ಹೆಸರಿನಲ್ಲಿ ವಾರ್ಷಿಕ ₹ 12,500 ವಿಮೆ ತುಂಬುತ್ತಾನೆ. ಈ ಹಣ ಮಗನ ತೆರಿಗೆಗೆ ಅನುಕೂಲವಾಗುತ್ತಿದೆಯೇ? (ತಂದೆ ಅವಲಂಬಿತರು ವಯಸ್ಸು 55) ತಂದೆ ಸಾಲ ತೀರಿಸಬೇಕು. ಜಮೀನಿಗೆ ಬಂಡವಾಳ ಹಾಕಬೇಕು. ತೆರಿಗೆ ವಿನಾಯ್ತಿ– ಉಳಿತಾಯದ ಬಗ್ಗ ತಿಳಿಸಿರಿ.

ಉತ್ತರ: ತಂದೆಯ ಸಾಲ ಆದಷ್ಟು ಬೇಗ ತೀರಿಸಲು ಮಗನಿಗೆ ಹೇಳಿರಿ, ಜಮೀನಿಗೆ ಬಂಡವಾಳ ಹಾಕಿದಲ್ಲಿ ಉತ್ತಮ ವರಮಾನ ಬರುತ್ತದೆಯೇ ಎನ್ನುವುದನ್ನು ಹಣ ಹೂಡುವ ಮುನ್ನ ಖಚಿತಪಡಿಸಿಕೊಳ್ಳಿ, ತಂದೆಯವರು ಮಗನಿಂದ ಅವಲಂಬಿತರಾದರೆ, ಮಗ ಕಟ್ಟುವ ವಿಮೆ ಪ್ರೀಮಿಯಂ ಹಣ ತೆರಿಗೆ ವಿನಾಯ್ತಿಗೆ ಪಡೆಯಬಹುದು. ನಿಮ್ಮ ಮಗ ಪಿಪಿಎಫ್‌ ಖಾತೆ ತೆರೆದು ಮಾಸಿಕ ₹ 10,000 ತುಂಬಲು ಹೇಳಿ. ಅದೇ ರೀತಿ ತೆರಿಗೆ ಉಳಿಸಲು ನ್ಯಾಷನಲ್‌ ಪೆನ್ಶನ್‌ ಸ್ಕೀಮಿಗೆ ವಾರ್ಷಿಕ ₹ 50,000 ತುಂಬಲು ಹೇಳಿ. ಮುಂದೆ ನಿವೃತ್ತಿ ನಂತರ ಪಿಂಚಣಿ ಪಡೆಯಬಹುದು ಹಾಗೂ ಈಗ ತೆರಿಗೆ ಉಳಿಸಬಹುದು.

ಹೆಸರು, ಊರು–ಬೇಡ
* ನಾನು ರಾಜ್ಯ ಸರ್ಕಾರದ ನಿವೃತ್ತ ನೌಕರ. 2016–17 ಸಾಲಿನ ಪಿಂಚಣಿ ₹ 2.20 ಲಕ್ಷ. ನನ್ನ ಹೆಂಡತಿಯೂ ರಾಜ್ಯ ಸರ್ಕಾರದ ನೌಕರಳಾಗಿ ಸೇವೆ ಸಲ್ಲಿಸುತ್ತಿರುವಾಗ ಅಂದರೆ ತಾ. 19–1–2007 ರಂದು ಮರಣ ಹೊಂದಿದ್ದು ಅವಳ ವಾರ್ಷಿಕ ಪಿಂಚಣಿ ₹ 80,216 ನಮ್ಮಿಬ್ಬರ ನೌಕರಿಯಲ್ಲಿ ಉಳಿಸಿದ ಹಣ ಹಾಗೂ ನಿವೃತ್ತಿಯಿಂದ ಬಂದ ಹಣ ₹ 27.91 ಲಕ್ಷ ನಮ್ಮೊಡನಿದೆ. ನಮ್ಮಿಬ್ಬರ ಠೇವಣಿಗಳಿಂದ ಬರುವ ಬಡ್ಡಿ ₹ 2.19 ಲಕ್ಷ. ಬ್ಯಾಂಕಿಗೆ 15ಎಚ್‌ ಫಾರಂ ಸಲ್ಲಿಸಿದ್ದೇನೆ. ನನ್ನ ವಯಸ್ಸು 65. ನಾನು ಆದಾಯ ತೆರಿಗೆ ವ್ಯಾಪ್ತಿಗೆ ಬರಬಹುದೇ, ರಿಟರ್ನ್‌ ತುಂಬಬೇಕೇ?

ಉತ್ತರ: ನಿಮ್ಮ ವಾರ್ಷಿಕ ಪಿಂಚಣಿ ₹ 2.20 ಲಕ್ಷ. ನಿಮಗೆ ಬಂದಿರುವ ಬ್ಯಾಂಕ್‌ ಬಡ್ಡಿಯಲ್ಲಿ ನಿಮ್ಮ ಹೆಸರಿನಲ್ಲಿರುವ ಠೇವಣಿ ಮೇಲೆ ಎಷ್ಟು ಬಂದಿದೆ ಎನ್ನುವುದು ಮುಖ್ಯವಾಗುತ್ತದೆ. ಪಿಂಚಣಿ ಹಾಗೂ ಹೀಗೆ ಬರುವ ಬಡ್ಡಿ ವಾರ್ಷಿಕವಾಗಿ ₹ 3 ಲಕ್ಷ ದಾಟಿದಲ್ಲಿ, ಅಂತಹ ಮೊತ್ತಕ್ಕೆ ನೀವು ತೆರಿಗೆ ಸಲ್ಲಿಸಬೇಕು.  ನಿಮ್ಮ ಹೆಂಡತಿ ನಿಧನದಿಂದಾಗಿ ಅವರ ಪಿಂಚಣಿ ನಿಮಗೆ ಬರುವಲ್ಲಿ, ಆ ಹಣ ಕೂಡಾ ನಿಮ್ಮ ಆದಾಯಕ್ಕೆ ಸೇರಿಸಬೇಕಾಗುತ್ತದೆ. ಇದೇ ವೇಳೆ ನಿಮ್ಮ ಹೆಂಡತಿ ಹೆಸರಿನಲ್ಲಿರುವ ಠೇವಣಿಗೆ, ನಿಮ್ಮ ನಾಮ ನಿರ್ದೇಶನವಿದ್ದಲ್ಲಿ, ಹೀಗೆ ಈ ಠೇವಣಿ ನಿಮ್ಮ ಹೆಸರಿಗೆ ವರ್ಗಾಯಿಸುವಾಗ ನಿಮ್ಮ ಹಾಗೂ ನಿಮ್ಮ ಹೆಂಡತಿ ಹೆಸರಿನಲ್ಲಿ ಇದುವರೆಗೆ ಇರಿಸಿದ ಠೇವಣಿ ಮೇಲಿನ ಬಡ್ಡಿ ಕೂಡಾ ನಿಮ್ಮ ಆದಾಯಕ್ಕೆ ಸೇರುತ್ತದೆ ಮತ್ತು ಈ ಎಲ್ಲಾ ಮೊತ್ತದಿಂದ ಬರುವ ಹಣ ನಿಮ್ಮ ಆದಾಯವೆಂದೇ ಪರಿಗಣಿಸಲಾಗುತ್ತದೆ. ನೀವು ಆದಾಯ ತೆರಿಗೆ ರಿಟರ್ನ್‌ ತುಂಬಲೇಬೇಕು.

ಕೃಷ್ಣೇ ಗೌಡ, ಮಂಡ್ಯ
* ನನ್ನ ವಯಸ್ಸು 48. ಅಧ್ಯಾಪಕ. ತಿಂಗಳ ಸಂಬಳ ₹ 48,970. ಕಡಿತ ಜಿಪಿಎಫ್‌₹ 1500, ಕೆಜಿಐಡಿ ₹ 3000, ಕೆಜಿಐಡಿ ಸಾಲದ ಕಂತು ₹ 5300 ಎಲ್‌ಐಸಿ ₹ 2448, ಜಿಐಎಸ್‌ ₹ 180, ಪಿಎಲ್‌ಐ ₹ 2265, ಗೃಹಸಾಲದ ಕಂತು ₹ 10,160. ನಿವೇಶನ ಕೊಳ್ಳಲು ಪಡೆದ ಸಾಲದ ಕಂತು 3800. ಪ್ರತೀ ತಿಂಗಳ ಚೀಟಿ ₹ 2500 ಮಗನ ವಿದ್ಯಾಭ್ಯಾಸದ ಖರ್ಚು ₹ 6000, ಮನೆ ಖರ್ಚು ₹ 7500. ಎಲ್ಲಾ ಹೋಗಿ ₹ 4000 ಉಳಿಯುತ್ತದೆ. ನನ್ನ ಉಳಿತಾಯ ಸರಿ ಇದೆಯೇ. ಆದಾಯ ತೆರಿಗೆ ಉಳಿಸಲು ಮಾರ್ಗ ತಿಳಿಸಿ.

ಉತ್ತರ: ಗೃಹಸಾಲದ  ಕಂತು, ಸೆಕ್ಷನ್‌ 80ಸಿ, ಹಾಗೂ ಬಡ್ಡಿ ಸೆಕ್ಷನ್‌ 24(ಬಿ) ಆಧಾರದ ಮೇಲೆ ವಿನಾಯ್ತಿ ಪಡೆಯಿರಿ. ಮಗನ ಶಿಕ್ಷಣ ಸಾಲ ಪಡೆದಲ್ಲಿ, ಸಾಲದ ಬಡ್ಡಿ ಸೆಕ್ಷನ್‌ 80ಇ ಆಧಾರದ ಮೇಲೆ ವಿನಾಯ್ತಿ ಪಡೆಯಿರಿ. ನಿಮ್ಮ ಎಲ್ಲಾ ಉಳಿತಾಯ ಚೆನ್ನಾಗಿದೆ. ಹಾಗೆಯೇ ಮುಂದುವರಿಸಿ. 80ಸಿ ಆಧಾರದ ಮೇಲೆ ಗರಿಷ್ಠ ಹೂಡಿಕೆ ಆಗಿರುವುದರಿಂದ, ಉಳಿದ ಒಂದೇ ಮಾರ್ಗ, ಸೆಕ್ಷನ್‌ 80ಸಿಸಿಡಿ(1ಬಿ) ಆಧಾರದ ಮೇಲೆ ವಾರ್ಷಿಕ  ₹ 50,000 ಕಟ್ಟಿ (ನ್ಯಾಷನಲ್‌ ಪೆನ್ಶನ್‌ ಸ್ಕೀಮ್‌) ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು. ಮಗನ ವಿದ್ಯಾಭ್ಯಾಸ ಮುಗಿಯುತ್ತಲೇ ಅವನಿಗೆ ತಿಂಗಳಿಗೆ ಕೊಡುವ ₹ 6000, ಉಳಿಯುವುದರಿಂದ, ಈ ಮೊತ್ತ 10 ವರ್ಷಗಳ ಆರ್‌.ಡಿ. ಮಾಡಿರಿ. ಶೇ 7.5 ಬಡ್ಡಿದರದಲ್ಲಿ, 10 ವರ್ಷ ಕಳೆಯುತ್ತಲೇ  ದೊಡ್ಡ ಮೊತ್ತ ಪಡೆಯುವಿರಿ.

ಕೆ.ಆರ್‌. ಉಜ್ಜನಪ್ಪ, ಹೊಳಲ್ಕೆರೆ
* 2012 ರಲ್ಲಿ, ಕೆನರಾ ಬ್ಯಾಂಕಿನಲ್ಲಿ, ಬಿಇ ಓದಲು ನನ್ನ ಮಗಳ ಸಲುವಾಗಿ ₹ 1 ಲಕ್ಷ, 2013 ರಲ್ಲಿ ಒಂದ ಲಕ್ಷ, 2014 ರಲ್ಲಿ ಒಂದು ಲಕ್ಷ ಹಾಗೂ 2015 ರಲ್ಲಿ ಒಂದು ಲಕ್ಷ ಹೀಗೆ ₹ 4 ಲಕ್ಷ ಸಾಲ ಪಡೆದಿದ್ದೇನೆ. ಇದಕ್ಕೆ ಸಾಲ ಪಡೆದ ದಿನಾಂಕದಿಂದ ಬಡ್ಡಿ ಕಟ್ಟಬೇಕೇ ಅಥವಾ ಕೋರ್ಸು ಮುಗಿದ ಒಂದು ವರ್ಷ ನಂತರ ಬಡ್ಡಿ ಕಟ್ಟಬೇಕೇ?

ಉತ್ತರ: ನಿಮ್ಮ ವಾರ್ಷಿಕ ಆದಾಯ ₹ 4.50 ಲಕ್ಷ ದೊಳಗಿರುವಲ್ಲಿ ಬಡ್ಡಿ ಅನುದಾನಿತ ಮಾದರಿ ಶಿಕ್ಷಣ ಸಾಲದ ಅಡಿಯಲ್ಲಿ, ಕೋರ್ಸು ಮುಗಿದು ಒಂದು ವರ್ಷ ಅಥವಾ ಕೆಲಸಕ್ಕೆ ಸೇರಿ ಆರು ತಿಂಗಳ ತನಕ ಸಂಪೂರ್ಣ ಬಡ್ಡಿ ಕಟ್ಟುವ ಅವಶ್ಯವಿಲ್ಲ. ಆದರೆ ವಿಚಾರದಲ್ಲಿ ಸಾಲ ಪಡೆಯುವ ಮುನ್ನ ಬ್ಯಾಂಕಿಗೆ ಕಾಗದ ಪತ್ರ ಒದಗಿಸಬೇಕು. ಈ ಸಾಲ ಹೊರತುಪಡಿಸಿ ಸಾಮಾನ್ಯ ಶಿಕ್ಷಣ ಸಾಲ ಪಡೆದಲ್ಲಿ. ಸಾಲದ ಮೊತ್ತಕ್ಕನುಗುಣವಾಗಿ, ಸಾಲ ಪಡೆದ ತಾರೀಕಿನಿಂದಲೇ ಬಡ್ಡಿ ಬ್ಯಾಂಕಿಗೆ ಸಲ್ಲಿಸಬೇಕಾಗುತ್ತದೆ.

ಹೆಸರು, ಊರು ಬೇಡ
* ನನ್ನ ವಯಸ್ಸು 60, ಪತ್ನಿಯ ವಯಸ್ಸು 52, ಮಗಳ ವಯಸ್ಸು 21 (ಬಿ.ಇ. ಓದುತ್ತಿದ್ದಾಳೆ) ಹೀಗೆ ನಮ್ಮದು 3 ಜನರ ಕುಟುಂಬ. ಇದುವರೆಗೆ ಖಾಸಗಿ ಉದ್ಯೋಗ ಹಾಗೂ ಒಕ್ಕಲುತನ ಮಾಡುತ್ತಿದ್ದು ಈಗ ಯಾವ ಉದ್ಯೋಗವೂ ಇಲ್ಲ. ನನ್ನ ಹೆಂಡತಿಗೆ ಅವರ ತಂದೆಯವರಿಂದ ಬಂದಿರುವ ಜಮೀನು ಮಾರಾಟ ಮಾಡಿ ಬಂದಿರುವ ₹ 32 ಲಕ್ಷ ಎಸ್.ಬಿ.ಐ.ನಲ್ಲಿ ಠೇವಣಿಯಲ್ಲಿರಿಸಿದ್ದೇನೆ. ನಮಗೆ ವಾಸಿಸುವ ಮನೆ ಹಾಗೂ 6 ನಿವೇಶನ (ಖಾಲಿ ಜಾಗ) ಇವೆ. ನನ್ನ ಹೆಸರಿನಲ್ಲಿ ₹ 10 ಲಕ್ಷ ಠೇವಣಿ ಇದೆ. ನಮ್ಮೆಲ್ಲರ ಹತ್ತಿರ ಪ್ಯಾನ್ ಕಾರ್ಡ್ ಇದೆ. ಬ್ಯಾಂಕಿಗೆ ವಾರ್ಷಿಕವಾಗಿ 15ಜಿ ಫಾರಂ ಸಲ್ಲಿಸುತ್ತಿದ್ದೇನೆ. ಹೀಗಿದ್ದೂ ತೆರಿಗೆ ರಿಟರ್ನ್ ಸಲ್ಲಿಸಬೇಕೇ? ತಿಳಿಸಿರಿ.

ಉತ್ತರ: ನಿಮಗೆ ₹ 10 ಲಕ್ಷ ಠೇವಣಿಯಿಂದ ವಾರ್ಷಿಕವಾಗಿ ಬರುವ ಬಡ್ಡಿ ಹೊರತುಪಡಿಸಿ, ಬೇರಾವ ಆದಾಯ ಇಲ್ಲದಿರುವುದರಿಂದ, ಆದಾಯ ತೆರಿಗೆ ಬರುವುದಿಲ್ಲ ಹಾಗೂ ರಿಟರ್ನ್ ತುಂಬುವ ಅವಶ್ಯವಿಲ್ಲ. ನೀವು ಜಮೀನು ಮಾರಾಟ ಮಾಡಿ ಬಂದಿರುವ ಸಂಪೂರ್ಣ ಹಣ ₹ 32 ಲಕ್ಷ ನಿಮ್ಮ ಹೆಂಡತಿಯ ಹೆಸರಿನಲ್ಲಿಯೇ ಠೇವಣಿ ಇರಿಸಿದಲ್ಲಿ, ಈ ಠೇವಣಿಯಿಂದ ಅವರು ವಾರ್ಷಿಕವಾಗಿ ₹ 2.50 ಲಕ್ಷಕ್ಕೂ ಹೆಚ್ಚಿನ ವರಮಾನ ಬಡ್ಡಿ ರೂಪದಲ್ಲಿ ಪಡೆದರೆ ಹಾಗೆ ಬಂದಿರುವ ₹2.50 ಲಕ್ಷಕ್ಕೂ ಹೆಚ್ಚಿನ ವರಮಾನಕ್ಕೆ ತೆರಿಗೆ ಸಲ್ಲಿಸಬೇಕು ಹಾಗೂ ರಿಟರ್ನ್ ಸಲ್ಲಿಸಬೇಕು.

ಪ್ರಾಯಶಃ ಅವರು ₹ 2.50 ಲಕ್ಷದೊಳಗೆ ಬಡ್ಡಿ ಪಡೆಯುತ್ತಿರಬೇಕು. ಹೀಗಾದಲ್ಲಿ ಮಾತ್ರ ತೆರಿಗೆ ಬರುವುದಿಲ್ಲ. ರಿಟರ್ನ್ ತುಂಬುವ ಅವಶ್ಯವಿಲ್ಲ. ತೆರಿಗೆ ಉಳಿಸಲು, ₹2.50 ಲಕ್ಷಕ್ಕೂ ಹೆಚ್ಚಿನ ವರಮಾನದ ಮೊತ್ತ 5 ವರ್ಷಗಳ ಎಸ್.ಬಿ.ಐ. ತೆರಿಗೆ ಉಳಿಸುವ ಠೇವಣಿಯಲ್ಲಿ ಇರಿಸಿ ವಿನಾಯಿತಿ ಪಡೆಯಬಹುದು. ಆದರೆ, ವಾರ್ಷಿಕ ಬಡ್ಡಿ ವರಮಾನ ₹ 2.50 ಲಕ್ಷ ದಾಟಿದಲ್ಲಿ ರಿಟರ್ನ್ ತುಂಬಬೇಕಾಗುತ್ತದೆ.

ಈ ಎಲ್ಲಾ ಗೊಂದಲದಿಂದ ಪಾರಾಗಲು, ಅಂದರೆ ತೆರಿಗೆ ವಿನಾಯಿತಿ  ಹಾಗೂ ರಿಟರ್ನ್ ತುಂಬುವ ಕೆಲಸದಿಂದ ಪಾರಾಗಲು, ₹ 32 ಲಕ್ಷ ವಿಂಗಡಿಸಿ, ನಿಮ್ಮ ಹೆಂಡತಿ ಹೆಸರಿನಲ್ಲಿ ₹ 25 ಲಕ್ಷ ಹಾಗೂ ನಿಮ್ಮ ಹೆಸರಿನಲ್ಲಿ ₹ 7 ಲಕ್ಷ ಅದೇ ಬ್ಯಾಂಕಿನಲ್ಲಿ ಠೇವಣಿ ಇರಿಸಿರಿ. ನಿಮಗೊಂದು ಕಿವಿಮಾತು: ಬ್ಯಾಂಕ್ ಹೊರತುಪಡಿಸಿ ಹೆಚ್ಚಿನ ವರಮಾನದ ಆಸೆಯಿಂದ ಅಭದ್ರವಾದ ಹಣಕಾಸು ಸಂಸ್ಥೆಯಲ್ಲಿ ಠೇವಣಿ ಮಾಡಬೇಡಿ ಹಾಗೂ ಖಾಲಿ ನಿವೇಶನ ಮಾರಾಟ ಮಾಡಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT