ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ ಎದುರಿಸುವ ಶಕ್ತಿಯಿದೆ– ವಿಶ್ವನಾಥ್‌

Last Updated 28 ಜೂನ್ 2017, 9:05 IST
ಅಕ್ಷರ ಗಾತ್ರ

ಮೈಸೂರು: ‘ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎದುರಿಸುವ ಶಕ್ತಿ ನನಗಿದೆ’ ಎಂದು ಅಡಗೂರು ಎಚ್‌.ವಿಶ್ವನಾಥ್‌ ಇಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
‘ಸಿದ್ದರಾಮಯ್ಯ ಒಬ್ಬ ಢೋಂಗಿ ಸಮಾಜವಾದಿ. ಪಂಚೆ ಸುತ್ತಿಕೊಂಡು, ಟವೆಲ್‌ ಧರಿಸಿಬಿಟ್ಟರೆ ಅವರು ಸಮಾಜವಾದಿ ಆಗುವುದಿಲ್ಲ. ಅಲ್ಲದೇ, ಸಿದ್ದರಾಮಯ್ಯ ಕೃತಘ್ನ.

ಸಹಾಯ ಮಾಡಿದವರನ್ನು ನೆನೆಯುವ ಗುಣ ಅವರಲ್ಲಿಲ್ಲ. ಹಾಗಾಗಿ, ಇಂತಹ ವ್ಯಕ್ತಿಗೆ ಹೆದರಿ ಕಂಬಳಿ ಹೊದ್ದು ಕೂರಲು ಸಾಧ್ಯವೇ? ಈ ರಾಜ್ಯದ ಮುಖ್ಯಮಂತ್ರಿಯನ್ನು ಚುನಾವಣೆಯಲ್ಲಿ ಎದುರಿಸುತ್ತೇನೆ’ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ವಿಶ್ವನಾಥ್‌, ‘ನಾನು ಪಕ್ಕಾ ಕಾಂಗ್ರೆಸ್ಸಿಗ. ನನ್ನನ್ನು ಕಾಂಗ್ರೆಸ್‌ ಬಿಡುವಂಥ ಪರಿಸ್ಥಿಯನ್ನು ನಿರ್ಮಿಸಿದ ನಿಮಗೆ ಒಳ್ಳೆಯದಾಗುತ್ತದೆಯೇ? 40 ವರ್ಷಗಳಿಂದ ಕಾಂಗ್ರೆಸ್ಸಿನಲ್ಲಿದ್ದೆ. ನನ್ನ ತಾಯಿಯಂಥ ಪಕ್ಷವನ್ನು ಬಿಡಿಸಿದಿರಿ. ನೀವು ಮನುಷ್ಯರಾಗಿ ಬದುಕುತ್ತಿಲ್ಲ’ ಎಂದು ಕಿಡಿಕಾರಿದರು.

‘ಜುಲೈ 2ರಂದು ನಾನು ಯಾವ ಪಕ್ಷ ಸೇರುತ್ತೇನೆ ಎನ್ನುವುದನ್ನು ಮೈಸೂರಿನಲ್ಲೇ ಪ್ರಕಟಿಸುತ್ತೇನೆ. ನನ್ನ ತತ್ವ, ಸಿದ್ಧಾಂತವನ್ನು ಗಾಳಿಗೆ ತೂರಿ ಕೋಮುವಾದಿಗಳ ಜತೆಯಂತೂ ಕೈಗೂಡಿಸುವುದಿಲ್ಲ’ ಎಂದರು.

‘ಏಕವಚನದಲ್ಲಿ ಮಾತನಾಡುವುದನ್ನೇ ಸಿದ್ದರಾಮಯ್ಯ ಹಿರಿತನ ಎಂದು ಭಾವಿಸಿದ್ದಾರೆ. ನಾನು ಹಳ್ಳಿಯಿಂದ ಬಂದವನೇ. ನಮ್ಮಲ್ಲಿ ಇಂತಹ ಸಂಸ್ಕೃತಿ ಇಲ್ಲ. ತಮ್ಮ ಸಂಸ್ಕೃತಿಯನ್ನು ರಾಜ್ಯದ ಸಂಸ್ಕೃತಿ ಎಂಬಂತೆ ಬಿಂಬಿಸುವ ಅಗತ್ಯವಿಲ್ಲ’ ಎಂದು ಕುಟುಕಿದರು.

ಹೊಸ ಪುಸ್ತಕ ರಚನೆ: ‘ಈ ಮೂರು ತಿಂಗಳಲ್ಲಿ ನಡೆದಿರುವ ರಾಜಕೀಯ ಬೆಳವಣಿಗೆಗಳನ್ನು ಕೃತಿ ರೂಪದಲ್ಲಿ ದಾಖಲಿಸುತ್ತಿದ್ದೇನೆ. ಇದಕ್ಕಾಗಿ ಆಗಸ್ಟ್‌ನಲ್ಲಿ ಗ್ರೀಸ್‌ಗೆ ಹೋಗಿ ಬರುವೆ. ಜಗತ್ತಿನ ಪುರಾತನ ಪ್ರಜಾಪ್ರಭುತ್ವಗಳಲ್ಲಿ ಒಂದಾದ ಅಲ್ಲಿನ ಆಡಳಿತವನ್ನು ದಾಖಲಿಸಿ, ನಮ್ಮ ರಾಜಕೀಯ ಸ್ಥಿತಿಗತಿಗಳ ಬಗ್ಗೆ ತುಲನಾತ್ಮಕ ಕೃತಿ ರಚಿಸುವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT