ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ– ಟ್ರಂಪ್ ಭೇಟಿ ಬಾಂಧವ್ಯಕ್ಕೆ ಹೊಸ ಬಲ

Last Updated 28 ಜೂನ್ 2017, 20:28 IST
ಅಕ್ಷರ ಗಾತ್ರ

2014ರಲ್ಲಿ ಪ್ರಧಾನಿಯಾದ ನಂತರ ಅಮೆರಿಕಕ್ಕೆ  ನರೇಂದ್ರ ಮೋದಿ ಅವರು ನೀಡುತ್ತಿರುವ ಐದನೇ ಭೇಟಿ ಹೆಚ್ಚಿನ ಕುತೂಹಲ ಸೃಷ್ಟಿಸಿತ್ತು.  ಅಮೆರಿಕದ ಹೊಸ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗಿನ ಮೊದಲ ಭೇಟಿ ಇದು.

ಎರಡು ದಶಕಗಳಿಂದ ಪೋಷಿಸಿಕೊಂಡು ಬಂದಿರುವ ಆಯಕಟ್ಟಿನ ಭಾರತ-ಅಮೆರಿಕ ಸಹಭಾಗಿತ್ವ, ‘ಅಮೆರಿಕವೇ ಮೊದಲು’ ಎಂದು ಘೋಷಿಸಿದ ಟ್ರಂಪ್ ಅವರ ಕಾಲದಲ್ಲೂ ಮುಂದುವರಿಯುವುದೇ ಎಂಬುದು ಪ್ರಶ್ನೆಯಾಗಿತ್ತು. ಈ ಬಾಂಧವ್ಯ ಅಬಾಧಿತವಾಗಿ ಮುಂದುವರಿಯುವ ಸೂಚನೆ ಸಿಕ್ಕಿದೆ ಎಂಬುದು ಸಮಾಧಾನಕರ.

‘ಶ್ವೇತಭವನಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ಎದುರುನೋಡುತ್ತಿದ್ದೇನೆ. ನಿಜವಾದ ಸ್ನೇಹಿತನ ಜೊತೆ ಮಹತ್ವದ ಚರ್ಚೆಗಳಿಗಾಗಿ ಕಾದಿದ್ದೇನೆ’ ಎಂಬಂತಹ ಮಾತನ್ನು ಟ್ರಂಪ್ ಅವರು ತಮ್ಮ ಪ್ರೀತಿಯ ಮಾಧ್ಯಮವಾದ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು ವಿಶೇಷ. ಟ್ವಿಟರ್‌ನಲ್ಲಿ ಟ್ರಂಪ್‌ಗೆ 3.2 ಕೋಟಿ ಹಿಂಬಾಲಕರಿದ್ದಾರೆ. ತಾವು ಮತ್ತು ಮೋದಿ, ಸಾಮಾಜಿಕ ಜಾಲತಾಣಗಳಲ್ಲಿ ಜಾಗತಿಕ ನಾಯಕರು ಎಂಬುದನ್ನೂ ನಂತರ ತಮ್ಮ ಭಾಷಣದಲ್ಲಿ ಟ್ರಂಪ್ ಪ್ರಸ್ತಾಪಿಸಿದರು.

ಮೋದಿ ಮತ್ತು ಟ್ರಂಪ್ ಅವರು ಶ್ವೇತಭವನದಲ್ಲಿ ಭೇಟಿಯಾಗುವ ಕೆಲವೇ ಗಂಟೆಗಳ ಮೊದಲು ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥ  ಸೈಯದ್ ಸಲಾವುದ್ದೀನ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದ ಅಮೆರಿಕ, ಬಲವಾದ ಸಂದೇಶವನ್ನೇ ರವಾನಿಸಿತು. ಮೊದಲ ಭೇಟಿಯಲ್ಲೇ ಮೋದಿ – ಟ್ರಂಪ್ ವೈಯಕ್ತಿಕ ಸಂಬಂಧ ಗಟ್ಟಿಗೊಂಡಿದ್ದೂ ಸ್ಪಷ್ಟ.

ಟ್ರಂಪ್‌ ಅಧ್ಯಕ್ಷರಾದ ಮೇಲೆ ಅಮೆರಿಕಕ್ಕೆ ಭೇಟಿ ನೀಡುತ್ತಿರುವ 46ನೇ ವಿಶ್ವ ನಾಯಕ ಮೋದಿ. ಆದರೆ ಔತಣಕೂಟದ ಆಹ್ವಾನ ಪಡೆದುಕೊಂಡ ಮೊದಲ ವಿಶ್ವನಾಯಕ ಎಂಬುದನ್ನು ಗಮನಿಸಬೇಕು. ಇಬ್ಬರು ನಾಯಕರೂ ಪರಸ್ಪರರನ್ನು ಇನ್ನಿಲ್ಲದಂತೆ ಹೊಗಳಿ ಎರಡು ಬಾರಿ ಅಪ್ಪಿಕೊಂಡಿದ್ದೂ ಇದಕ್ಕೆ ಸಾಕ್ಷಿ.

ಭಯೋತ್ಪಾದನೆ ವಿರುದ್ಧದ ಹೋರಾಟ ಉಭಯ ರಾಷ್ಟ್ರಗಳಿಗೂ ಸಮಾನ ಕಾಳಜಿಯ ವಿಚಾರವಾಗಿ ಈ ಭೇಟಿ ಕಾಲದಲ್ಲಿ ಹೊರಹೊಮ್ಮಿದ್ದು ಸ್ಪಷ್ಟ. ಪಾಕಿಸ್ತಾನದ ವಿರುದ್ಧದ ಭಾಷೆ ನೇರವಾಗಿತ್ತಲ್ಲದೆ ಹೆಚ್ಚು ತೀವ್ರವೂ ಆಗಿತ್ತು ಎಂಬುದು ವಿಶೇಷ.

ಪಾಕಿಸ್ತಾನವನ್ನು ನೆಲೆಯಾಗಿಸಿಕೊಂಡು ಮುಂಬೈ ದಾಳಿ ಸೇರಿದಂತೆ ಹಲವು ಭಯೋತ್ಪಾದನಾ ದಾಳಿಗಳನ್ನು ನಡೆಸಿದ ಉಗ್ರರ ತ್ವರಿತ ವಿಚಾರಣೆಗೆ ಜಂಟಿ ಹೇಳಿಕೆಯಲ್ಲಿ ಪಾಕಿಸ್ತಾನಕ್ಕೆ ಕರೆ ನೀಡಲಾಗಿದೆ. ಜೊತೆಗೆ ಚೀನಾ– ಪಾಕಿಸ್ತಾನ ಆರ್ಥಿಕ ಕಾರಿಡಾರ್‌ ಯೋಜನೆಯ ಬಗ್ಗೆ  ಭಾರತ ವಕ್ತಪಡಿಸಿರುವ ಆತಂಕಕ್ಕೆ ಅಮೆರಿಕವೂ ಧ್ವನಿಗೂಡಿಸಿರುವುದು ಭಾರತಕ್ಕೆ ಬಲ ತಂದಿದೆ.

ರಕ್ಷಣಾ ಸಹಕಾರ ಹೆಚ್ಚಳದ ಇಂಗಿತವೂ ವ್ಯಕ್ತವಾಗಿದೆ. ಕರಾವಳಿ ಕಣ್ಗಾವಲಿಗಾಗಿ ತನ್ನ ಶಸ್ತ್ರಾಗಾರಕ್ಕೆ ಸೇರಿಸಿಕೊಳ್ಳಲು ಬಯಸಿದ್ದ 22 ಡ್ರೋನ್‌ಗಳನ್ನು ಪಡೆದುಕೊಳ್ಳಲು ಭಾರತ ಯಶಸ್ವಿಯಾಗಿದೆ. ಈ ಹೈಟೆಕ್ ಆಯುಧಗಳನ್ನು ಖರೀದಿಸುತ್ತಿರುವ ಮೊದಲ ‘ನ್ಯಾಟೋ’ಯೇತರ  ರಾಷ್ಟ್ರ ಭಾರತ ಎಂಬುದನ್ನೂ ಗಮನಿಸಬೇಕು.

‘ಸಹಭಾಗಿತ್ವದಿಂದ ಸಮೃದ್ಧಿ’(Prosperity through Partnership) ಎಂಬ ಭಾರತ ಅಮೆರಿಕ ಜಂಟಿ ಹೇಳಿಕೆಯ ಶೀರ್ಷಿಕೆಯೇ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ. ಶ್ವೇತಭವನದೊಳಗೆ ಮೋದಿ ಸುತ್ತಾಟ, ಭಾರತಕ್ಕೆ ಭೇಟಿ ನೀಡಲು ಇವಾಂಕಾ ಟ್ರಂಪ್ ಒಪ್ಪಿಕೊಂಡಿರುವುದು ಹಾಗೂ ಟ್ರಂಪ್ ಅವರ ಹಿರಿಯ ಸಲಹೆಗಾರ ಹಾಗೂ ಅಳಿಯ ಜೇರ್ಡ್ ಕುಶ್‌ನರ್ ಮಾತುಕತೆಗಳಲ್ಲಿ ಪಾಲ್ಗೊಂಡಿರುವುದು ಒಳ್ಳೆಯ ಸಂಕೇತಗಳನ್ನೇ ರವಾನಿಸಿವೆ. ಆದರೆ ಟ್ರಂಪ್ ಜೊತೆಗಿನ ಮೋದಿಯವರ ಮೊದಲ ಭೇಟಿಯನ್ನು ಯಶಸ್ವಿಯಾಗಿಸುವ ಒತ್ತಡದಲ್ಲಿ  ವಲಸೆ ಹಾಗೂ ಹವಾಮಾನ ಬದಲಾವಣೆ ವಿಚಾರಗಳನ್ನು ಹೆಚ್ಚು ಪ್ರಮುಖವಾಗಿ ಮುಂದಕ್ಕೊಯ್ಯಲಾಗಿಲ್ಲ. ಎಚ್‌1ಬಿ ವೀಸಾ ವಿಚಾರವಂತೂ  ಚರ್ಚೆಗೇ ಬರಲಿಲ್ಲ.

ಟ್ರಂಪ್ ಅವರು ನೇರವಾಗಿಯೇ ಅಮೆರಿಕದ ಆದ್ಯತೆಗಳನ್ನು ಹರವಿಟ್ಟಿದ್ದಾರೆ. ಅಮೆರಿಕ ರಫ್ತಿಗೆ ಇರುವ ಅಡ್ಡಿಗಳನ್ನು ಭಾರತ ತೆಗೆದುಹಾಕಬೇಕು;  ಜೊತೆಗೆ ಆಮದು –ರಫ್ತು ಸಮತೋಲನ ಕಾಯ್ದುಕೊಳ್ಳಬೇಕೆಂದೂ ಹೇಳಿದ್ದಾರೆ. ಭಾರತದ ಐಪಿಆರ್ ಕಾನೂನುಗಳ ಬಗ್ಗೆ ಪಾಶ್ಚಿಮಾತ್ಯ ಜಗತ್ತಿನ ಅತೃಪ್ತಿಯನ್ನೂ ಟ್ರಂಪ್ ಪ್ರಸ್ತಾಪಿಸಿದ್ದಾರೆ.

ಜಾಗತಿಕ ನೆಲೆಯಲ್ಲಿ ಭಾರತ ಬರಲಿರುವ ತಿಂಗಳುಗಳಲ್ಲಿ ಹೆಚ್ಚು ಎಚ್ಚರದಿಂದ ಹೆಜ್ಜೆ ಇರಿಸಬೇಕಾಗುತ್ತದೆ. ಚೀನಾ ಜೊತೆಗಿನ ನಮ್ಮ ಸಂಬಂಧ ಸೂಕ್ಷ್ಮವಾದದ್ದು. ಭಾರತ – ಅಮೆರಿಕ ಬಾಂಧವ್ಯ ಬಲವರ್ಧನೆಗೆ ಚೀನಾ ಅಸಹನೆ ವ್ಯಕ್ತಪಡಿಸಿದೆ. ಮೋದಿಯವರು ಅಮೆರಿಕದಲ್ಲಿದ್ದಾಗಲೇ ಭಾರತ– ಚೀನಾ ಸೇನಾಪಡೆಗಳು ಗಡಿ ಘರ್ಷಣೆಯಲ್ಲಿ ತೊಡಗಿವೆ. ಜೊತೆಗೆ ಕೈಲಾಸ ಮಾನಸಸರೋವರ ಯಾತ್ರಾರ್ಥಿಗಳಿಗೆ ನಾಥು–ಲಾ ಮಾರ್ಗ ಮುಚ್ಚಲಾಗಿದೆ. ಈ ಸಂದೇಶವನ್ನು ಭಾರತ ಕಡೆಗಣಿಸಲಾಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT