ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯದಂಗಡಿ ಬಂದ್‌: ಮಿಶ್ರ ಪ್ರತಿಕ್ರಿಯೆ

Last Updated 28 ಜೂನ್ 2017, 20:38 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಯ 500 ಮೀಟರ್‌ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಸ್ಥಗಿತಗೊಳ್ಳುವ ದಿನ ಸಮೀಪಿಸುತ್ತಿವೆ. ಇಂದಿರಾನಗರ ಹಾಗೂ ಕೋರಮಂಗಲ ಪ್ರದೇಶದಲ್ಲಿ ಬಾರ್‌, ರೆಸ್ಟೋರೆಂಟ್‌ಗಳು ಬಾಗಿಲು ಮುಚ್ಚುವ ಅಥವಾ ಸ್ಥಳಾಂತರಗೊಳ್ಳುವ ಬಗ್ಗೆ ಸ್ಥಳೀಯರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಈ ನಿರ್ಧಾರದ ಬಗ್ಗೆ ಹಲವರು ಸಂತಸ ಹಂಚಿಕೊಂಡರೆ, ಇನ್ನು ಕೆಲವರು ಇದರ ಅನುಷ್ಠಾನದ ಬಗ್ಗೆ ಅಪನಂಬಿಕೆ ವ್ಯಕ್ತಪಡಿಸಿದ್ದಾರೆ. 
ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಕಿವಿಗಡಚಿಕ್ಕುವ ಮ್ಯೂಸಿಕ್‌ ಬಳಸುವ ಬಗ್ಗೆ ಹಾಗೂ ಪಾನಮತ್ತರಿಂದ ಆಗುತ್ತಿರುವ ಕಿರಿಕಿರಿಯ ಬಗ್ಗೆ ಇಲ್ಲಿನ ನಿವಾಸಿಗಳು  ಬಿಬಿಎಂಪಿಗೆ ಹಾಗೂ ಪೊಲೀಸರಿಗೆ ಇತ್ತೀಚೆಗೆ ದೂರು ನೀಡಿದ್ದರು.

ಇಂದಿರಾನಗರದಲ್ಲಿರುವ ಸುಮಾರು  15 ಹಾಗೂ ಕೋರಮಂಗಲದಲ್ಲಿರುವ 49 ಪಬ್‌ ಮತ್ತು ಬಾರ್‌ಗಳು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ವ್ಯಾಪ್ತಿಯಲ್ಲಿವೆ ಎಂದು ಗುರುತಿಸಲಾಗಿದೆ.  

ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ, ಹೆದ್ದಾರಿಯಿಂದ 500 ಮೀಟರ್‌ ವ್ಯಾಪ್ತಿಯ ಮದ್ಯ ಮಾರಾಟ ಮಳಿಗೆಗಳಿಗೆ   ನೋಟಿಸ್‌ ಜಾರಿಗೊಳಿಸಲಾಗಿದೆ. ನಗರದ ಪ್ರದೇಶದಲ್ಲಿ ಹಾದುಹೋಗುವ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಯಿಂದ ಹೊರಗಿಡಲು ರಾಜ್ಯ ಸರ್ಕಾರ ನಡೆಸಿದ ಪ್ರಯತ್ನ ಫಲ ನೀಡಿಲ್ಲ. ಹಾಗಾಗಿ  ಇಲ್ಲಿನ ಅನೇಕ ರೆಸ್ಟೋರೆಂಟ್‌ಗಳು ಮದ್ಯ ಮಾರಾಟ ಸ್ಥಗಿತಗೊಳಿಸಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

‘ಇದೊಂದು ಉತ್ತಮ ನಡೆ. ಇದರಿಂದಾಗ ನಮ್ಮ ಪ್ರದೇಶದಲ್ಲಿ ಶಾಂತಿ ನೆಲೆಸಲಿದೆ. ಅಲ್ಲದೆ, ಇನ್ನು ಮುಂದೆ ಇಲ್ಲಿ ಪ್ರಶಾಂತಮಯ ರಾತ್ರಿಗಳನ್ನು ನಿರೀಕ್ಷಿಸಬಹುದು.  ಕುಡುಕರಿಂದಾಗಿ ಇಲ್ಲಿ ಅನೇಕ ವೇಳೆ ಕಠಿಣ ಪರಿಸ್ಥಿತಿ ಎದುರಿಸಬೇಕಾಗಿ ಬಂದಿತ್ತು. ರಾತ್ರಿಯೂ ಮುಕ್ತವಾಗಿ ಸಂಚರಿಸಬಹುದಾ ದಿನಗಳಿಗಾಗಿ ನಾವು ಎದುರುನೋಡುತ್ತಿದ್ದೆವು’ ಎಂದು  ಇಂದಿರಾನಗರದ ನಿವಾಸಿ ನಾಗರಾಜ ಪಾಟೀಲ  ತಿಳಿಸಿದರು.

ಇಂದಿರಾನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ  ಸ್ವರ್ಣ ವೆಂಕಟರಮಣ್‌ ಅವರ ಪ್ರಕಾರ, ಇದು ಸ್ವಾಗತಾರ್ಹ ಬೆಳವಣಿಗೆ.
‘ಸುಪ್ರೀಂ ಕೋರ್ಟ್‌ ಆದೇಶದ ಬಳಿಕವೂ ಕೆಲ ಬಾರ್‌ಗಳು ಮಾತ್ರ ಬಾಗಿಲು ಮುಚ್ಚಲಿವೆ. ಪಬ್‌, ಬಾರ್‌ಗಳಿಗೆ ಪರವಾನಗಿ ನೀಡುವ ಮುನ್ನ ಅಧಿಕಾರಿಗಳು ಆ ಸ್ಥಳದ ಧಾರಣಾ ಸಾಮರ್ಥ್ಯದ ಅಧ್ಯಯನ ಮಾಡಬೇಕು. ವಾರಾಂತ್ಯದಲ್ಲಿ ಎದುರಾಗುವ ಈ ರಗಳೆಯಿಂದ ಶಾಶ್ವತ ಪರಿಹಾರ ನಿರೀಕ್ಷಿಸುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT