ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾತಾಂತ್ರಿಕ ಮೌಲ್ಯಗಳ ಸಂಕೇತ

ತಮ್ಮ ಮೂಗಿನ ನೇರದ ಅಂಕು-ಡೊಂಕಿನ ನೈತಿಕತೆಯನ್ನೇ ಒಪ್ಪಿಕೊಳ್ಳಬೇಕೆಂಬ ಆಗ್ರಹ ಸರಿಯಲ್ಲ
Last Updated 4 ಜುಲೈ 2017, 19:30 IST
ಅಕ್ಷರ ಗಾತ್ರ

ಪ್ರೊ. ರಾಜಾರಾಮ ತೋಳ್ಪಾಡಿ
ಪ್ರೊ. ನಿತ್ಯಾನಂದ ಬಿ. ಶೆಟ್ಟಿ

ಉಡುಪಿಯ  ಕೃಷ್ಣ ಮಠದಲ್ಲಿ ನಡೆದ ಇಫ್ತಾರ್ ಕೂಟ ದೊಡ್ಡ ವಿವಾದವಾಗಿರುವುದನ್ನು ಗಮನಿಸಿ ಈ ಬರಹಬರೆಯಲಾಗಿದೆ. ಹೊರನೋಟಕ್ಕೆ ಪರ–ವಿರೋಧಗಳ ಒಂದು ಸ್ಥಳೀಯವಾದ ಆಗು-ಹೋಗು ಎಂದು ಇದು ಕಾಣಿಸಿದರೂ ಕರಾವಳಿ ಕರ್ನಾಟಕದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಪ್ರಕ್ಷುಬ್ಧತೆಯ ಕಿಡಿಗಳು ಈ ವಿದ್ಯಮಾನದಲ್ಲಿವೆ. ಇದನ್ನೊಂದು ಸ್ಥಳೀಯ ಘಟನೆಯಾಗಿ ನೋಡದೆ ಜಾಗತಿಕ ವಿದ್ಯಮಾನದ ಭಾಗವಾಗಿ ಗ್ರಹಿಸುವ ಪ್ರಯತ್ನ ಈ ಬರಹದ ಉದ್ದೇಶ.

ಭಾರತ ಒಂದು ಪ್ರಜಾತಾಂತ್ರಿಕ ಸಮಾಜವಾಗಿ ಉಳಿದು ಬರಬೇಕೆಂಬುದು ಅನೇಕರ ಬಯಕೆ. ಪ್ರಜಾತಂತ್ರದಲ್ಲಿ ಯಾವುದು ಸರಿ? ಯಾವುದು ತಪ್ಪು? ಎನ್ನುವುದರ ಕುರಿತು ವೈಚಾರಿಕತೆಯ ವಿವೇಕದಲ್ಲಿ ನಿಷ್ಕರ್ಷಿಸುವ ಅಧಿಕಾರ ನಮಗಿದೆ. ಈ ನಿಷ್ಕರ್ಷೆಯಲ್ಲಿ ಮೂಡಿಬಂದ ನಿಲುವುಗಳನ್ನು ಮುಕ್ತವಾಗಿ  ವ್ಯಕ್ತಪಡಿಸುವ ಅಧಿಕಾರವೂ ನಮಗಿದೆ.

ಪ್ರಜಾತಂತ್ರದ ಜೀವಂತಿಕೆಗೆ ಅತ್ಯವಶ್ಯವಾದ ಈ ವೈಚಾರಿಕ ಸ್ವಾತಂತ್ರ್ಯವನ್ನು ವ್ಯಕ್ತಿ ಮತ್ತು ಸಮುದಾಯಗಳು ಕಾನೂನಿನ ಚೌಕಟ್ಟು ಮತ್ತು ಸಾರ್ವಜನಿಕ ಸಭ್ಯತೆಯ ಇತಿಮಿತಿಗಳಲ್ಲಿ ನಿರ್ವಹಿಸಬೇಕು. ಈ ಅರ್ಥದಲ್ಲಿ ಪೇಜಾವರ ಶ್ರೀಗಳು ಮಾಡಿದ್ದು ಸರಿಯೇ ಅಥವಾ ತಪ್ಪೇ ಎಂದು ವಿಮರ್ಶಿಸುವ ಹಾಗೂ ವಿವೇಕಯುಕ್ತವಾದ ಸಂಯಮದಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸುವ ಪ್ರಜಾತಾಂತ್ರಿಕ ಅಧಿಕಾರ ನಮಗಿದೆ.

ಆದರೆ, ಉಡುಪಿಯ ಈ ವಿವಾದವನ್ನು ಕೇವಲ ಪ್ರಜಾತಾಂತ್ರಿಕ ಚೌಕಟ್ಟಿನಲ್ಲಷ್ಟೇ ಗ್ರಹಿಸಲು ಸಾಧ್ಯವಿಲ್ಲ. ಇದನ್ನು ಜಗತ್ತಿನ ಉದ್ದಗಲಕ್ಕೂ ಹಬ್ಬಿರುವ, ಕಳೆದ ಮೂರು ದಶಕಗಳಿಂದ ಆಕ್ರಮಣಶೀಲವಾಗಿ ಪ್ರಕಟಗೊಳ್ಳುತ್ತಿರುವ ಸಾಂಸ್ಕೃತಿಕ ವಿದ್ಯಮಾನದ ಪರಿಪ್ರೇಕ್ಷ್ಯದಲ್ಲಿ ಅರ್ಥ ಮಾಡಿಕೊಳ್ಳಬೇಕು. ಈ ಘಟನೆಯಿಂದ ವ್ಯಕ್ತಿ-ಸಮುದಾಯ-ಧಾರ್ಮಿಕ ಪರಂಪರೆಗಳ ಸ್ವಾಯತ್ತತೆ, ಸ್ವಾತಂತ್ರ್ಯಕ್ಕೆ ಮಾನ್ಯತೆ ಇಲ್ಲ ಎಂಬ ಸಂದೇಶ ರವಾನೆಯಾಗಿದೆ.

ಪೇಜಾವರ ಶ್ರೀಗಳ ವಿರುದ್ಧ ಹೂಂಕರಿಸುತ್ತಿರುವ ನಾಯಕರು, ಶ್ರೀಗಳನ್ನು ಒಂದು ಧಾರ್ಮಿಕ ಪರಂಪರೆಯ ಪ್ರತಿನಿಧಿಯೆಂದೂ ಭಾವಿಸಿಲ್ಲ. ಶ್ರೀಗಳು ಸಮುದಾಯಗಳ ಹಿತದೃಷ್ಟಿಯಿಂದ ತಮ್ಮ ಪರಂಪರೆಯ ಆಚಾರ ವಿಚಾರಗಳಿಗೆ ಕುಂದು ಬರದ ರೀತಿಯಲ್ಲಿ ಯಥೋಚಿತವಾದ ತೀರ್ಮಾನಗಳನ್ನು ತೆಗೆದುಕೊಳ್ಳಬಲ್ಲರು ಹಾಗೂ ತಮ್ಮ ಧಾರ್ಮಿಕ ವಿವೇಚನೆಯಲ್ಲಿ ಸೂಕ್ತವಾದ ಹೆಜ್ಜೆಗಳನ್ನು ಇಡಬಲ್ಲರು ಎಂಬುದನ್ನೂ ತಿಳಿದುಕೊಳ್ಳುವುದಿಲ್ಲ.

ಜನಾಂಗೀಯ ರಾಷ್ಟ್ರೀಯವಾದದಿಂದ ಉನ್ಮತ್ತಗೊಂಡ ರಾಜಕೀಯ ಹಿಂದುತ್ವದ ನಶೆ ಏರಿಸಿಕೊಂಡ ಈ ಸಂಘಟನೆಗಳಿಗೆ ಈ ದೇಶದಲ್ಲಿ ಶತಮಾನಗಳಿಂದ ಜೀವಂತವಾಗಿರುವ ಧಾರ್ಮಿಕ ಸಮುದಾಯಗಳ ಮತ್ತು ಪರಂಪರೆಗಳ ಬಗ್ಗೆ ಲವಲೇಶ ಪರಿಚಯವೂ ಇದ್ದಂತೆ ಕಾಣುವುದಿಲ್ಲ. 

20ನೆಯ ಶತಮಾನದ ಉತ್ತರಾರ್ಧದಲ್ಲಿ ಅಸ್ತಿತ್ವಕ್ಕೆ ಬಂದ ಈ ಸಂಘಟನೆಗಳು;  ಹಿಂದೂ ಧರ್ಮವೆಂದರೆ ತಾವು ವ್ಯಾಖ್ಯಾನಿಸಿದಂತೆ ಮತ್ತು ತಾವು ಯಾವುದನ್ನು ಭಾರತೀಯ ಸಂಸ್ಕೃತಿ ಎಂದು ನಿರ್ವಚಿಸುತ್ತೇವೆಯೋ ಅದಕ್ಕನುಗುಣವಾಗುವ ರೀತಿಯಲ್ಲಿ ಭಾರತದ ಅಸಂಖ್ಯಾತ ಧಾರ್ಮಿಕ ಪರಂಪರೆ ಹಾಗೂ ಮಠ ಮಾನ್ಯಗಳು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು ಮತ್ತು ಹಿಂದೂ ಧರ್ಮದ ಚೌಕಟ್ಟಿನಲ್ಲಿ ಬರುವ ವ್ಯಕ್ತಿಗಳೂ ತಾವು ಕೊಡುವ  ತುತ್ತೂರಿಗಳನ್ನೇ ಊದಬೇಕೆಂದು ತಿಳಿದುಕೊಂಡಿರುವಂತೆ ಕಾಣುತ್ತದೆ.

ಪೇಜಾವರ ಶ್ರೀಗಳು ವಿಶ್ವ ಹಿಂದೂ ಪರಿಷತ್ತಿನ ನಾಯಕರಲ್ಲಿ ಒಬ್ಬರು ಅನ್ನುವುದು ನಿಜ. ಅವರಿಗೆ ಆರ್‌ಎಸ್‌ಎಸ್ ಕುರಿತು ಒಲವು ಇದೆ ಎನ್ನುವುದೂ ನಿಜ. ಅವರ ನೀತಿ-ನಿಲುವುಗಳ ಕುರಿತು ನಮ್ಮ ವಿಚಾರ-ವಿಮರ್ಶೆಗಳನ್ನು, ಸಹಮತ-ಭಿನ್ನಮತಗಳನ್ನು ನಾವು ನಿರಂತರವಾಗಿ ಪ್ರಜಾತಾಂತ್ರಿಕ ಸಂಯಮದಲ್ಲಿ ವ್ಯಕ್ತಪಡಿಸುತ್ತಲೂ ಇರಬೇಕು. ಆದರೆ ಇಂದು ಪ್ರಶ್ನೆ ಅದಲ್ಲ.

ಸುದೀರ್ಘವಾದ ಒಂದು ಪರಂಪರೆಯ ಧರ್ಮಗುರುಗಳಾದ, ವ್ಯಾಪಕವಾದ ಜನ ನಂಬುಗೆಯ ಮಠದ ಪೀಠಾಧಿಪತಿಗಳಾದ ಅವರ ಮುಂದೆ ತೋರುಬೆರಳ ಸನ್ನೆ ಮಾಡಿ ‘ನೀವು ಇದನ್ನು ಮಾಡಬೇಡಿ, ನೀವು ಮಾಡುವುದೇ ಆದಲ್ಲಿ ನಮ್ಮನ್ನು ಕೇಳಿ ಮಾಡಿ. ನೀವು ಹೀಗೆ ಮಾಡಿರುವುದು ಹಿಂದೂ ಧರ್ಮಕ್ಕೆ ಆದ ಅವಮಾನ. ನೀವು ಪೀಠತ್ಯಾಗ ಮಾಡಿ ಪೀಠವನ್ನು ಕಿರಿಯ ಸ್ವಾಮಿಗಳಿಗೆ ವಹಿಸಿ’ ಎಂದೆಲ್ಲ ತಾಕೀತು ಮಾಡುವ ಅಧಿಕಾರ ಯಾರಿಗೂ ಇಲ್ಲ.

ಧಾರ್ಮಿಕ ಪರಂಪರೆಯ ಕುರಿತು ಆಳವಾದ ಜ್ಞಾನ ಮತ್ತು ಮಠಾಧಿಪತಿಗಳಾಗಿ ಸುದೀರ್ಘವಾದ ಅನುಭವ ಪೇಜಾವರ ಶ್ರೀಗಳಿಗಿದೆ. ಧರ್ಮ ಸೂಕ್ಷ್ಮಗಳನ್ನು ಅವರಿಗೆ ಹೇಳಿಕೊಡಬೇಕಾಗಿಲ್ಲ. ಹಾಗೆಂದ ಮಾತ್ರಕ್ಕೆ ಅವರು ಪ್ರಶ್ನಾತೀತರು ಎಂದೂ ನಾವು ಹೇಳುತ್ತಿಲ್ಲ. ಅವರ ನಡೆ-ನುಡಿ ಕುರಿತು ನಾಗರಿಕ ಸಮಾಜದಲ್ಲಿ ವಿಚಾರ ವಿಮರ್ಶೆ ನಡೆಯುತ್ತಲೇ ಇರಬೇಕು. ಆದರೆ ಈ ಅನೈತಿಕ ಪೊಲೀಸರಿಗೆ ನಾಗರಿಕ ಪ್ರಜಾತಾಂತ್ರಿಕ ಕ್ರಿಯಾಚರಣೆಯಲ್ಲಿ ಯಾವತ್ತೂ ನಂಬಿಕೆ ಇಲ್ಲ. ಅವರು ತಾವು ನಂಬಿದ ಅಥವಾ ತಮ್ಮ ಮೂಗಿನ ನೇರದ ಅಂಕು-ಡೊಂಕಿನ ನೈತಿಕತೆಯನ್ನೇ ಪೇಜಾವರರೂ ಒಪ್ಪಿಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ಇದು ಅಪ್ರಜಾತಾಂತ್ರಿಕವಾದ ಕೃತ್ಯ.

ನಮ್ಮ ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ಮೂಡಿಬಂದ ಹಲವು ಮತಗಳು ತೀವ್ರವಾದ ಮತಭೇದವನ್ನು ತಮ್ಮೊಳಗೆ ಹೊಂದಿವೆ. ಭಾರತೀಯ ಸಂತ ಪರಂಪರೆ ಟೀಕಿಸದೆ ಇರುವ ಯಾವ ಮತವೂ ಭಾರತೀಯ ಸಂದರ್ಭದಲ್ಲಿ ಇಲ್ಲ. ಹಾಗೆಯೇ ಯಾವ ಭಾರತೀಯ ಸಂತನನ್ನೂ ವಿಮರ್ಶಿಸದೆ ಒಪ್ಪಿಕೊಂಡ ಯಾವ ಮತಸಂಪ್ರದಾಯವೂ ನಮ್ಮಲ್ಲಿಲ್ಲ.

ಭಾರತದ ಸಂದರ್ಭದಲ್ಲಿ ನಡೆದಷ್ಟು ತೀಕ್ಷ್ಣವಾದ ಆಧ್ಯಾತ್ಮಿಕ ವಾಗ್ವಾದಗಳನ್ನು ಜಗತ್ತಿನ ಬೇರೆಡೆ ನಾವು ಕಾಣಲಾರೆವು. ಇದು ನಮ್ಮ ಹೆಮ್ಮೆಗೆ ಕಾರಣವಾಗಬೇಕು. ಆದರೆ ಆಧುನಿಕ ರಾಜಕೀಯದ ಪೋಷಾಕನ್ನು ಒಳಗೆ ಧರಿಸಿ ಹೊರಗೆ ಹುಸಿ ಧಾರ್ಮಿಕತೆಯ ಮುಖವಾಡ ಹಾಕಿರುವ ಮತೀಯ ಸಂಘಟನೆಗಳಿಗೆ ನೈಜ ಧಾರ್ಮಿಕರು–ಅನುಭಾವಿಗಳು ಯಾವುದನ್ನು ಹೆಮ್ಮೆಯಾಗಿ ಸಂಭ್ರಮದಿಂದ ಕಾಣುತ್ತಾರೋ ಅದೊಂದು ಸಂಕೋಚದ ಮತ್ತು ನಾಚಿಕೆಯ ವಿಷಯ.

ಜೈನ- ಬೌದ್ಧ- ಪಾರ್ಸಿ- ಇಸ್ಲಾಂ-ಕ್ರಿಶ್ಚಿಯನ್- ಸೂಫಿ ಇತ್ಯಾದಿ ಮತಸಂಪ್ರದಾಯಗಳು- ಅನುಭಾವಿ ಪಂಥಗಳು ಭಾರತವನ್ನು ಶ್ರೀಮಂತಗೊಳಿಸಿದಷ್ಟು ಬೇರಾವ ದೇಶವನ್ನೂ ಶ್ರೀಮಂತಗೊಳಿಸಿಲ್ಲ. ಆದರೆ ಈ ಶ್ರೀಮಂತಿಕೆ ನಮ್ಮ ಮಾನವೀಯ ಅನುಕಂಪವನ್ನು ವಿಶಾಲಗೊಳಿಸಿವೆಯೇ ಎಂಬ ಪ್ರಶ್ನೆಗೆ ಉತ್ತರ ಸುಲಭವಾಗಿಲ್ಲ ಎಂಬುದನ್ನು ಉಡುಪಿಯ ಈ ಘಟನೆಗಳು ಹೇಳುತ್ತಿವೆ.

ಪೇಜಾವರರು ತಾವು ಪ್ರತಿಪಾದಿಸುವ ಹಿಂದೂ ಮತದ ಅಂಕು-ಡೊಂಕುಗಳನ್ನು ಕಾಣಬಲ್ಲವರಾಗಿದ್ದಾರೆ. ಪ್ರಕ್ಷುಬ್ಧತೆಯನ್ನು ಒಳಗೊಂಡ ಈ ಸಮಾಜದಲ್ಲಿ ಸಣ್ಣಪುಟ್ಟ ಹೊಂದಾಣಿಕೆಯಾದರೂ ಸಾಧ್ಯವೇ ಎಂಬುದನ್ನು ಅವರು ಅಲ್ಲಿ-ಇಲ್ಲಿ ಪರಿಶೀಲಿಸುತ್ತಿದ್ದಾರೆ. ಅವರು ಮೂಲತಃ ಓರ್ವ ಮಠಾಧೀಶರು. ಅವರು ಈ ಲೋಕದ ನಿಗೂಢಗಳಿಗೆ ಸ್ಪಂದಿಸುವ ಸಂತರಲ್ಲ.  ಬದಲಿಗೆ ಈ ಲೋಕದ ಆತಂಕಕ್ಕೆ ಸ್ಪಂದಿಸುವ ಧಾರ್ಮಿಕ ಗುರು. ಅವರು ಧಾರ್ಮಿಕ ಗುರುವಾಗಿರುವುದರಿಂದಲೇ ಭಿನ್ನ-ಭಿನ್ನ ಸಮುದಾಯಗಳ ನಡುವೆ ಸಾಮರಸ್ಯದ ಮತ್ತು ಸಹಜೀವನದ ರಾಜಕೀಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದನ್ನು  ಸಹಾನುಭೂತಿಯಿಂದ ನೋಡಬೇಕಾಗಿದೆ.

‘ಯಾವ ದೇವರನ್ನು ಪೂಜಿಸಿದರೂ ಅದು ಕೇಶವನನ್ನು ತಲುಪುತ್ತದೆ’ ಎಂಬ ಶ್ರದ್ಧೆಯನ್ನು ಹೊಂದಿರುವ ನೈಜ ಹಿಂದೂವಿನ ನಂಬಿಕೆಗೆ ಈ ವಿವಾದ ಮರ್ಮಾಘಾತ ನೀಡಿದೆ. ನಾರಾಯಣ ಗುರುವಿನಂತಹ ಅದ್ವೈತವಾದಿ ನಾಲ್ಕು ವೇದಗಳನ್ನು ಒಗ್ಗೂಡಿಸಿ ಒಂದು ವೇದವನ್ನಾಗಿಯೂ ಬೈಬಲ್, ಕುರ್‌ಆನ್ ಮತ್ತು ಬೌದ್ಧಗ್ರಂಥಗಳನ್ನು ಇನ್ನುಳಿದ ಮೂರು ವೇದಗಳಾಗಿಯೂ ಪರಿಗಣಿಸಬೇಕು ಎಂಬ ಸಲಹೆಯನ್ನು  ನೀಡಿದ್ದರಂತೆ. ಆಧುನಿಕ  ಹಿಂದುತ್ವವಾದಿಗಳಲ್ಲಿ ನಾರಾಯಣ ಗುರು; ಶಿಶುನಾಳ ಷರೀಫರಂತಹವರಿಗೆ ದೀಕ್ಷೆ ನೀಡಿದ ಗುರು ಗೋವಿಂದ ಭಟ್ಟರ ತತ್ವಗಳಿಗೆ ಬೆಲೆ ಇಲ್ಲ.

ಪೇಜಾವರ ಶ್ರೀಗಳು ಕರಾವಳಿ ಪ್ರದೇಶದ ಸಾಮಾಜಿಕ ಸಹಜೀವನದ ನೆನಪುಗಳನ್ನು ಇಟ್ಟುಕೊಂಡವರು. ಈ ವಿವಾದದ ಸಂದರ್ಭದಲ್ಲೂ ಹಿಂದೂ-ಮುಸ್ಲಿಂ ಸಮುದಾಯಗಳ ನಡುವಿನ ಆತ್ಮೀಯವಾದ ಅನೇಕ ಚಾರಿತ್ರಿಕ ನೆನಪುಗಳನ್ನು ಅವರು ಮೆಲುಕು ಹಾಕಿದ್ದಾರೆ. ಅವರ ವ್ಯಕ್ತಿತ್ವದಲ್ಲಿರುವ  ಮಾನವೀಯ ಕಳಕಳಿ ಈ ಬಗೆಯ ಸೌಹಾರ್ದ ಕೂಟವನ್ನು ಏರ್ಪಡಿಸುವಂತೆ ಪ್ರಚೋದಿಸಿದೆ.

ನಮ್ಮ ದೃಷ್ಟಿಯಲ್ಲಿ ಈ ಸೌಹಾರ್ದ ಕೂಟ ಒಂದು ಪ್ರಜಾತಾಂತ್ರಿಕ ಸಂಕೇತ. ಈ ಸಂಕೇತವನ್ನು ಗೌರವಿಸಿ ಅದರ ಕಳಕಳಿಗೆ ಮಣಿಯಬೇಕೇ ಹೊರತು ಕ್ಷುಲ್ಲಕರಂತೆ ವರ್ತಿಸಬಾರದು. ಈ ವಿದ್ಯಮಾನವು  ಬಿಗಡಾಯಿಸುತ್ತಿರುವ ನಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನದಲ್ಲಿ ನಾವು ಕಳೆದುಕೊಳ್ಳುತ್ತಿರುವ ಪ್ರಜಾತಾಂತ್ರಿಕ ಮೌಲ್ಯಗಳ ಕುರಿತು ನಮ್ಮನ್ನು ಎಬ್ಬಿಸುವ ಮುನ್ನೆಚ್ಚರಿಕೆಯ ಕರೆಗಂಟೆಯೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT