ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಕೂಲಸ್ಥರ ಬಡಾವಣೆಗಳಲ್ಲೂ ಡೆಂಗಿ ಕಾಟ

Last Updated 7 ಜುಲೈ 2017, 6:09 IST
ಅಕ್ಷರ ಗಾತ್ರ

ದಾವಣಗೆರೆ: ಅನುಕೂಲಸ್ಥರ ಬಡಾವಣೆಗಳಲ್ಲೂ ಡೆಂಗಿ ಕಾಟ ಹೆಚ್ಚಾಗಿದೆ ಎಂದು ಜಿಲ್ಲಾ ಕೀಟಜನ್ಯ ರೋಗಗಳ ನಿಯಂತ್ರಣಾಧಿಕಾರಿ ಡಾ.ಮೀನಾಕ್ಷಿ ಹೇಳಿದರು. ಪಾಲಿಕೆ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳ ಬಗೆಗಿನ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

‘ಮಲೇರಿಯಾ ಹರಡುವ ಅನಾಫಿಲಿಸ್‌ ಸೊಳ್ಳೆಗಳು ಕೊಳಚೆ ನೀರಿನಲ್ಲಿ ಸಂತಾನೋತ್ಪತ್ತಿ ಮಾಡಿದರೆ, ಡೆಂಗಿಗೆ ಕಾರಣವಾಗುವ ಈಡಿಸ್‌ ಸೊಳ್ಳೆಗಳು ಶುದ್ಧ ನೀರಿನಲ್ಲೇ ಮೊಟ್ಟೆಯಿಟ್ಟು ವಂಶಾಭಿವೃದ್ಧಿ ಮಾಡುತ್ತವೆ. ಅನುಕೂಲಸ್ಥರ ಮನೆಗಳಲ್ಲಿ ದೊಡ್ಡ ತೊಟ್ಟಿಗಳು, ಎ.ಸಿ, ಏರ್‌ಕೂಲರ್‌, ರೆಫ್ರಿಜರೇಟರ್‌, ಕಮೋಡ್‌ಗಳು ಇರುತ್ತವೆ. ಇವುಗಳಲ್ಲಿರುವ ಶುದ್ಧ ನೀರಿನಿಂದಾಗಿ ಸೊಳ್ಳೆಗಳ ಸಂಖ್ಯೆ ಹೆಚ್ಚಿ, ಡೆಂಗಿ ಹರಡುತ್ತದೆ’ ಎಂದು ತಿಳಿಸಿದರು.

ಹೀಗಾಗಿ, ವಾರಕ್ಕೊಮ್ಮೆ ಎಲ್ಲರೂ ಶುಷ್ಕ ದಿನ ಆಚರಿಸಬೇಕು. ಮನೆಯಲ್ಲಿನ ನೀರು ಸಂಗ್ರಹಾಗಾರಗಳನ್ನು ತೊಳೆದು ಒಣಗಿಸಬೇಕು. ಎಳನೀರು ಚಿಪ್ಪು, ಖಾಲಿ ಬಾಟಲಿ, ಹಳೆಯ ಟೈರ್‌ಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರವಹಿಸಬೇಕು. ಹೋಟೆಲ್‌ಗಳು, ಜ್ಯೂಸ್‌ ಅಂಗಡಿಗಳು, ಲಾಡ್ಜ್‌ಗಳ ಮಾಲೀಕರಿಗೆ ಶುಚಿತ್ವ ಕಾಪಾಡಿಕೊಳ್ಳುವಂತೆ ಪಾಲಿಕೆ ಅಧಿಕಾರಿಗಳು ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.

ಸಂಘಟಿತ ಪ್ರಯತ್ನ ಅಗತ್ಯ: ಪಾಲಿಕೆ ಆಯುಕ್ತ ಬಿ.ಎಚ್‌.ನಾರಾಯಣಪ್ಪ ಮಾತನಾಡಿ, ‘ನಗರದಲ್ಲಿ ಡೆಂಗಿ ಹರಡದಂತೆ ಅಭಿಯಾನ ನಡೆಸಬೇಕಿದೆ. ಇದಕ್ಕಾಗಿ ಆರೋಗ್ಯ ಇಲಾಖೆಗೆ ಪಾಲಿಕೆಯ ಆರೋಗ್ಯ ಮತ್ತು ಸ್ವಚ್ಛತಾ ವಿಭಾಗದ ಸಿಬ್ಬಂದಿ ಸಹಕಾರ ನೀಡಬೇಕು. ಡೆಂಗಿ ನಿಯಂತ್ರಣಕ್ಕೆ ಸಂಘಟಿತ ಪ್ರಯತ್ನ ಅಗತ್ಯ ಎಂದು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ತ್ರಿಪುಲಾಂಬಾ ಮಾತನಾಡಿ, ‘ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಜ್ವರ ಪೀಡಿತರ ಚಿಕಿತ್ಸೆಗಾಗಿಯೇ 5 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಸರ್ಕಾರ ವಿಧಿಸಿರುವ ಕನಿಷ್ಠ ಶುಲ್ಕವನ್ನೂ ಜ್ವರ ಪೀಡಿತರಿಂದ ಪಡೆಯಬಾರದು ಎಂದು ಸೂಚಿಸಲಾಗಿದೆ’ ಎಂದರು.

ಜ್ವರದಿಂದ ತೀವ್ರವಾಗಿ ಬಳಲಿದವರನ್ನು ಗ್ರಾಮೀಣ ಭಾಗದ ವೈದ್ಯರು ಖಾಸಗಿ ಆಂಬುಲೆನ್ಸ್‌ ಪಡೆದೂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಬಹುದು. ಖಾಸಗಿ ಆಂಬುಲೆನ್ಸ್‌ನ ಬಾಡಿಗೆಯನ್ನೂ ಆರೋಗ್ಯ ಇಲಾಖೆಯಿಂದ ಪಾವತಿಸಲಾಗುವುದು. ವೈದ್ಯರು ಕಾಳಜಿಯಿಂದ ಜ್ವರಪೀಡಿತರಿಗೆ ಚಿಕಿತ್ಸೆ ನೀಡಬೇಕು ಎಂದು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮೇಯರ್‌ ಅನಿತಾಬಾಯಿ ಮಾಲತೇಶ್‌, ಉಪ ಮೇಯರ್‌ ಮಂಜಮ್ಮ, ಪಾಲಿಕೆಯ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಶ್ರೀನಿವಾಸ್, ಜಿ.ಬಿ.ಲಿಂಗರಾಜ್, ದಿಲ್‌ಶಾನ್ ಶೇಖ್ ಅಹ್ಮದ್, ಬಸಪ್ಪ, ಪಾಲಿಕೆ ಅಧೀಕ್ಷಕ ಎಂಜಿನಿಯರ್‌ ಸತೀಶ್, ಡಾ.ಗಂಗಾಧರ್, ಡಾ.ಮಂಜುನಾಥ್ ಪಾಟೀಲ್, ಡಾ.ಚಂದ್ರಶೇಖರ್ ಸುಂಕದ್‌ ಅವರೂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT