ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರದ ಸಂರಕ್ಷಣೆಗೆ ಕಂಕಣಬದ್ಧರಾಗಿ

Last Updated 8 ಜುಲೈ 2017, 10:57 IST
ಅಕ್ಷರ ಗಾತ್ರ

ಕುದೂರು(ಮಾಗಡಿ): ‘ನಿಸರ್ಗ ನಮ್ಮೆಲ್ಲರಿಗೆ ಬೇಕಾದುದನ್ನು ಕೊಡುವ ಮಾತೆ ಇದ್ದಂತೆ ಎಂಬುದನ್ನು ಎಲ್ಲರೂ ಮನವರಿಕೆ ಮಾಡಿಕೊಂಡು ಪರಿಸರ ಸಂರಕ್ಷಣೆಗೆ ಮುಂದಾಗಬೇಕು‘ ಎಂದು ಹಿರಿಯ ಪತ್ರಕರ್ತ ಹಾಗೂ ಪರಿಸರವಾದಿ ನಾಗೇಶ ಹೆಗಡೆ ತಿಳಿಸಿದರು.

ಕುದೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶುಕ್ರವಾರ ನಡೆದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮಾವಿನ ಸಸಿ ನೆಟ್ಟು ನೀರೆರೆದು ಅವರು ಮಾತನಾಡಿದರು,

ಜಗತ್ತಿನ ಪ್ರಜ್ಞಾವಂತರ ನಗರ ಎನಿಸಿಕೊಂಡಿರುವ ಬೆಂಗಳೂರಿನ  ಜನರು ತಮ್ಮ ಮನೆಗಳಲ್ಲಿ ಬೆಟ್ಟದಷ್ಟು ಕಸದ ರಾಶಿಯನ್ನು ತಂದು ಹಳ್ಳಿಗಳಿಗೆ ಸುರಿಯುತ್ತಿದ್ದಾರೆ. ನೂರಾರು ಕೆರೆಗಳಿಗೆ ವಿಷ ಹರಿಸಿ ಜಲಚರಗಳ ಸಾವಿಗೆ ಕಾರಣರಾಗುತ್ತಿದ್ದಾರೆ. ಹಸಿ ಕಸ, ಪ್ಲಾಸ್ಟಿಕ್ ಕಸ, ಎಲೆಕ್ಟ್ರಾನಿಕ್ಸ್ ಕಸ, ಗಾಜಿನ ಕಸ, ಪೇಪರ್ ಕಸವನ್ನು ಪ್ರತ್ಯೇಕಿಸಿ ಸುವ್ಯವಸ್ಥಿತವಾಗಿ ಸಂಸ್ಕರಿಸುವ ತಿಳಿವಳಿಕೆ ಇಲ್ಲದವರಾಗಿದ್ದಾರೆ ಎಂದರು.

ಮನೆಯಲ್ಲಿ ಇರುವವರೆಲ್ಲರೂ ವಾಹನ ಹೊಂದಿದ್ದು ವಿಪರೀತ ಓಡಾಟದಿಂದ ವಾಯುಮಾಲಿನ್ಯ ಉಂಟಾಗಿ ಉಸಿರಾಟಕ್ಕೆ ಮಾರಕವಾಗಿದೆ. ಕೊಳೆಚೆಯಿಂದಾಗಿ ಸೊಳ್ಳೆಗಳು ಮಿತಿಮೀರಿ ಏರಿದ್ದು ಡೆಂಗಿ ಪೀಡಿತರ ಸಂಖ್ಯೆ ಏರುತ್ತಿದೆ. ನಿತ್ಯದ ಅಪಘಾತಕ್ಕೆ ಅಮಾಯಕರು ಬಲಿಯಾಗುತ್ತಿದ್ದಾರೆ.  ಪ್ರತಿಯೊಬ್ಬ ಪ್ರಜೆಯೂ ಪರಿಸರ ಅವಲಂಬಿಯಾಗಿಯೇ ಬದುಕಬೇಕು. ಪ್ರತಿಯೊಂದು ದೇಶವೂ ಪರಿಸರ ಉಳಿಸುವ ಪ್ರಯತ್ನ ಮಾಡಬೇಕು ಎಂದರು.

ಗಿಡಮರಗಳನ್ನು ನೆಟ್ಟು ಬೆಳೆಸುವ, ಪರಿಸರ ಸ್ನೇಹಿ ತಂತ್ರಜ್ಞಾನ ಬಳಸುವ, ಪ್ಲಾಸ್ಟಿಕ್ ರಹಿತ ಜೀವನ ವಿಧಾನ ಅನುಸರಿಸುವುದರತ್ತ ಗಮನ ಹರಿಸಬೇಕು ಎಂದು ತಿಳಿಸಿದರು.
ಪ್ರಭಾರ ಉಪ ನಿರ್ದೇಶಕ ಸಿರಾಜ್ ಉರ್ ರೆಹಮಾನ್ ಮಾತನಾಡಿ  ವಿದ್ಯಾರ್ಥಿಗಳು ಪರಿಸರ ಉಳಿಸುವ ಆಂದೋಲನ ಕೈಗೊಳ್ಳಬೇಕು ಎಂದರು.

ಉಪನ್ಯಾಸಕ ಜಿ.ಶಿವಣ್ಣ ಕೊತ್ತೀಪುರ ಜಗತ್ತಿನಲ್ಲಿ 200 ದಶಲಕ್ಷ ಬಾಲಕಾರ್ಮಿಕರು ಅಶುದ್ಧ ಪರಿಸರದಲ್ಲಿ ದುಡಿಯುತ್ತಿದ್ದಾರೆ. ಅವರಲ್ಲಿ 80 ದಶಲಕ್ಷ ಮಕ್ಕಳು ಭಾರತದಲ್ಲಿದ್ದಾರೆ. ಭಾರತದಲ್ಲಿ ದುಡಿಯುವ ಶಕ್ತಿ ಮತ್ತು ಮನಸ್ಸಿರುವ ವಯಸ್ಕರಿಗೆ ಉದ್ಯೋಗವಿಲ್ಲ.

ಸ್ವಚ್ಛಂದವಾಗಿ ಆಟವಾಡುತ್ತಾ ನಕ್ಕು ನಲಿಯುತ್ತಾ ಶಿಕ್ಷಣ ಕಲಿತು ಪ್ರಜ್ಞಾವಂತರಾಗಬೇಕಾದ ಮಕ್ಕಳು ಕೈಗಾರಿಕೆ, ಗ್ಯಾರೇಜ್‌, ಹೋಟೆಲ್‌, ಪಟಾಕಿ ಅಂಗಡಿ, ರೇಷ್ಮೆ ಹುರಿ ಕಾರ್ಖಾನೆಗಳಲ್ಲಿ ದುಡಿದು ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. ಬಂಡವಾಳಗಾರರ ಶೋಷಣೆಗೆ ಮಕ್ಕಳು ಒಳಗಾಗಿ ಆಧುನಿಕ ಜೀತದಾಳುಗಳಾಗಿದ್ದಾರೆ ಎಂದು ತಿಳಿಸಿದರು.
ಪ್ರಾಂಶುಪಾಲ ಎಂ.ರತ್ನಮ್ಮ, ಕಾಲೇಜು ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷ ವೆಂಕಟೇಶ, ಕಾಲೇಜು ಅಭಿವೃದ್ದಿ  ಸದಸ್ಯರಾದ  ಕೆ.ಬಿ.ವಿಜಯ ಗುಪ್ತ, ರಾಘವೇಂದ್ರ ಹಾಗೂ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT