ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಿತ್ರೆಯ ಭಾರ ಹೊರಬೇಕಿಲ್ಲ

Last Updated 9 ಜುಲೈ 2017, 19:30 IST
ಅಕ್ಷರ ಗಾತ್ರ

ಪೇಜಾವರ ಶ್ರೀಗಳ  ಸೌಹಾರ್ದ ಕೂಟಕ್ಕೆ ಸಂಬಂಧಿಸಿದ ನಮ್ಮ ಲೇಖನಕ್ಕೆ (ಪ್ರ.ವಾ., ಚರ್ಚೆ, ಜುಲೈ 5) ದಿನೇಶ್ ಅಮಿನ್‌ ಮಟ್ಟು ಅವರ ಪ್ರತಿಕ್ರಿಯೆಯನ್ನು (ಪ್ರ.ವಾ., ಚರ್ಚೆ, ಜುಲೈ 7) ಗಮನಿಸಿ ಈ ಲೇಖನ ಬರೆಯಲಾಗಿದೆ.

ನಾವು ನಮ್ಮ ಬರಹದಲ್ಲಿ ಹೇಳಿದ್ದಿಷ್ಟು: ಶ್ರೀಗಳು ಇಫ್ತಾರ್ ನೆಪದಲ್ಲಿ ಸೌಹಾರ್ದಕೂಟ ಮಾಡಿದ್ದು ಸರಿಯೋ ತಪ್ಪೋ ಎಂಬ ವಿಮರ್ಶೆ ನಮ್ಮದಲ್ಲ. ಸೌಹಾರ್ದಕೂಟ ಏರ್ಪಡಿಸುವ ನೈತಿಕ ಅರ್ಹತೆ ಅವರಿಗಿದೆಯೋ ಇಲ್ಲವೋ ಎಂಬ ಪರಿಶೀಲನೆಯೂ ನಮ್ಮದಲ್ಲ. ಭಾರತೀಯ ಧಾರ್ಮಿಕ ಪರಂಪರೆಗಳಲ್ಲಿ ಒಂದು ಧಾರೆಯ ಗುರುವಾಗಿರುವ ಅವರಿಗೆ ಇಂತಹ ಸಮಾರಂಭ ಹಮ್ಮಿಕೊಳ್ಳುವುದಕ್ಕಿದ್ದ  ಸ್ವಾಯತ್ತತೆಯನ್ನು ಪ್ರಶ್ನಿಸಿದ ಹಿಂದೂ ಸಂಘಟನೆಗಳಿಗೆ ಧರ್ಮವೂ ಗೊತ್ತಿಲ್ಲ; ಪ್ರಜಾಪ್ರಭುತ್ವವೂ ಗೊತ್ತಿಲ್ಲ. ವ್ಯಕ್ತಿ ಮತ್ತು ಸಂಸ್ಥೆಗಳಿಗಿರುವ  ಪ್ರಜಾಸತ್ತಾತ್ಮಕವಾದ ಹಕ್ಕನ್ನು ನಿರಾಕರಿಸುವ ಈ ಬಗೆಯ ದುಂಡಾವರ್ತಿಗಳು ಪ್ರಪಂಚದೆಲ್ಲೆಡೆ ಕಂಡು ಬರುತ್ತಿರುವುದರಿಂದ, ನಮ್ಮ ಲೇಖನದ ಕಟುಟೀಕೆ ಒಬ್ಬನ ನೀತಿ-ನಡವಳಿಕೆಯನ್ನು ಇನ್ನೊಬ್ಬ ನಿಯಂತ್ರಿಸುವ ಮತ್ತು ನಿರ್ದೇಶಿಸುವ ಈ ಜಾಗತಿಕ ವಿದ್ಯಮಾನದ ವಿರುದ್ಧ ಇದೆ. 

ಪೇಜಾವರ ಶ್ರೀಗಳು ಹಿಂದುತ್ವದ ಪ್ರತಿಪಾದಕರು ಎನ್ನುವುದರ ಕುರಿತು ನಮಗೆ ಯಾವ ಅನುಮಾನವೂ ಇಲ್ಲ.  ಇದಕ್ಕಾಗಿ ಅವರ ಜೊತೆ ನಮಗೆ ಆಳವಾದ ತಾತ್ವಿಕ ಭಿನ್ನಾಭಿಪ್ರಾಯವಿದೆ. ಅವರು ನಡೆಸುವ  ಅನೇಕ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಂಜಸತೆಯ ಬಗೆಗೆ ಅನುಮಾನ ಮತ್ತು ಅಸಮಾಧಾನ ನಮಗೂ ಇದೆ. 1992ರ ಬಾಬರಿ ಮಸೀದಿ ಧ್ವಂಸದ ಕೃತ್ಯವನ್ನು ಮತ್ತು ಅದರಲ್ಲಿ ಅವರ ಭಾಗವಹಿಸುವಿಕೆಯನ್ನು ಖಂಡಿಸಿ ಅವರಿಗೆ ಬಹಿರಂಗ ಪತ್ರವನ್ನೂ ಬರೆದಿದ್ದೆವು. ಆದ್ದರಿಂದ ನಾವು ಪೇಜಾವರರನ್ನು ಸಮರ್ಥಿಸುತ್ತಿದ್ದೇವೆ ಎಂಬ ಮಾತಿನಲ್ಲಿ ಹುರುಳಿಲ್ಲ.
ಶ್ರೀಗಳ ನಡೆ-ನುಡಿಗಳ ಕುರಿತು ಚಾರಿತ್ರಿಕ ಎಚ್ಚರ ನಮಗಿರಬೇಕೇ ಹೊರತು ಆ ಚರಿತ್ರೆಯ ಭಾರವನ್ನು ನಾವೀಗ ಹೊರಬೇಕಾಗಿಲ್ಲ. ಚಾರಿತ್ರಿಕ ವಿದ್ಯಮಾನಗಳು ಒಂದು ಹಿನ್ನೆಲೆಯಾಗಿ, ನೆನಪಾಗಿ ನಮ್ಮ ದೃಷ್ಟಿಕೋನಗಳನ್ನು ರೂಪಿಸಬೇಕು. ಆದರೆ ಅದೇ ಭೂತಾಕಾರವಾಗಿ ಆವರಿಸಿಕೊಂಡು ನಮ್ಮ ದೃಷ್ಟಿಯನ್ನು ಮಂದಗೊಳಿಸಬಾರದು. ಚರಿತ್ರೆಯ ಭಾರದಿಂದ ಉಂಟಾಗುವ ದೃಷ್ಟಿದೋಷ ವರ್ತಮಾನದ ಪ್ರಸ್ತುತವನ್ನು ಸ್ಪಷ್ಟವಾಗಿ ಕಾಣದಂತೆ ಮಾಡೀತು. ಅಲ್ಪಸಂಖ್ಯಾತರ ಬಗ್ಗೆ ಹಿಂದುತ್ವವಾದಿಗಳ ದೃಷ್ಟಿಯನ್ನು ಮಸುಕುಗೊಳಿಸಿರುವುದೂ ಇದೇ ಬಗೆಯ ಚರಿತ್ರೆಯ ಭಾರ ಎನ್ನುವುದನ್ನು ನಾವಿಲ್ಲಿ ನೆನಪು ಮಾಡಿಕೊಳ್ಳಬೇಕು.

ಹಿಂದುತ್ವದ ಪ್ರತಿಪಾದಕರಾಗಿರುವ ಶ್ರೀಗಳ ಕೆಲಸಗಳನ್ನು ವಿಮರ್ಶಿಸುವ ಜೊತೆಜೊತೆಯಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದದ ಕುರಿತು ಅವರು ನಡೆಸುತ್ತಿರುವ ಪ್ರಯತ್ನಗಳನ್ನು ಗುರುತಿಸಬೇಕು ಎಂಬುದಷ್ಟೇ ನಮ್ಮ ಕಾಳಜಿ. ಹಾಗೆ ಮಾಡದಿದ್ದಲ್ಲಿ ಮನುಷ್ಯ ಕಾಲ-ಸಂದರ್ಭಗಳಲ್ಲಿ ಬದಲಾಗುತ್ತಾನೆ ಮತ್ತು ಆತನ ಚಿಂತನೆ-ಧೋರಣೆಗಳು ಸ್ಥಿರವಾಗಿರದೆ ಚಲನಶೀಲವಾಗಿರುತ್ತವೆ ಎನ್ನುವ ಮಾನವ ಜೀವಂತಿಕೆಯನ್ನು ನಾವು ನಿರಾಕರಿಸಿದಂತೆ ಆಗುತ್ತದೆ. ನಮ್ಮ ಎಲ್ಲ ಸಾಂಸ್ಕೃತಿಕ ನಾಯಕರು, ಸಾಧುಸಂತರು, ರಾಜಕಾರಣಿಗಳು ಏಕರೂಪದ ಘನವಸ್ತುಗಳಲ್ಲ. ಮಾನವಪರವಾದ ಹೆಜ್ಜೆಗಳನ್ನು ಯಾರು ಯಾವ ಹೊತ್ತಿನಲ್ಲಿಡುತ್ತಾರೋ ಅದನ್ನು ಗುರುತಿಸುವ ಸಂವೇದನಾಶೀಲತೆಯನ್ನು ನಾವು ಹೊಂದಿರಬೇಕಾಗುತ್ತದೆ.
ಒಂದು ಕಾಲಕ್ಕೆ ಉಗ್ರ ಹಿಂದುತ್ವವಾದಿಯಂತೆ ಕಾಣಿಸುತ್ತಿದ್ದ ಬಿಜೆಪಿಯ ‘ಉಕ್ಕಿನ ಮನುಷ್ಯ’ ಎಲ್.ಕೆ. ಅಡ್ವಾಣಿಯವರು  ಇಂದು ಮೆದುವಾಗಿರುವುದನ್ನು, ಭಾರತೀಯ ಪ್ರಜಾಪ್ರಭುತ್ವದ ಕುರಿತು ತೀವ್ರವಾದ ಕಳಕಳಿ ಮತ್ತು ಕಳವಳವನ್ನು ವ್ಯಕ್ತಪಡಿಸಿರುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು. ಈ ಅರ್ಥದಲ್ಲಿ ಪೇಜಾವರರ ಪೂರ್ವಚರಿತ್ರೆ ಏನೇ ಇದ್ದರೂ ಅವರಿಟ್ಟ ವರ್ತಮಾನದ ಈ ಕಿರುಹೆಜ್ಜೆಯನ್ನು ನಾವು ಗುರುತಿಸಬೇಕಾಗಿದೆ.
ನಮ್ಮ ಲೇಖನದಲ್ಲಿ ಪೇಜಾವರರನ್ನು ನಾರಾಯಣ ಗುರುಗಳಿಗೆ ಹೋಲಿಸಿಲ್ಲ. ದಿನೇಶ್ ಅವರು ನಮ್ಮ ಲೇಖನದ ಆಶಯವನ್ನು ಸರಿಯಾಗಿ ಗ್ರಹಿಸಿಲ್ಲ. ಇದು ‘ಪಠ್ಯ’ವನ್ನು ಗ್ರಹಿಸುವ ನಮ್ಮ ಸಮಕಾಲೀನ ಓದಿನಲ್ಲಿರುವ ತೊಡಕು  ಎಂದು ನಾವು ಭಾವಿಸುತ್ತೇವೆ. ಪೇಜಾವರ ಶ್ರೀಗಳಿಗೆ ಹಿಂದೂ ಧರ್ಮದ ಪಾಠ ಮಾಡಲು ಹೊರಟಿರುವ ಹಿಂದುತ್ವವಾದಿಗಳು ನಾರಾಯಣ ಗುರುಗಳಂಥವರ ಉದಾಹರಣೆಗಳನ್ನು ಮರೆಯಬಾರದು. ಹಿಂದೂ ಎಂದು ನಾವಿಂದು ಕರೆಯುವ  ಧಾರ್ಮಿಕ ಸಂಪ್ರದಾಯಗಳ ಕೂಡುಕಟ್ಟಿನ ಬಹುತ್ವವನ್ನು ಹಾಗೂ ಪ್ರಾಚೀನ ಹಿಂದೂ ಪರಂಪರೆಗಳ ಔದಾರ್ಯದ ಚರಿತ್ರೆಯನ್ನು ಮರುನೆನಪಿಸುವ ಉದ್ದೇಶದಿಂದ ನಾರಾಯಣ ಗುರುಗಳ, ಗೋವಿಂದ ಭಟ್ಟರ ನಿದರ್ಶನವನ್ನು ನಾವು ಕೊಟ್ಟಿದ್ದೇವೆ. ಆದ್ದರಿಂದ, ನಾವು ಪೇಜಾವರರನ್ನು ನಾರಾಯಣ ಗುರುಗಳಿಗೆ ಹೋಲಿಸಿದ್ದೇವೆ ಎನ್ನುವುದು ಸತ್ಯಕ್ಕೆ  ದೂರವಾದ ಮಾತು.

ಇನ್ನು, ‘ನಾರಾಯಣ ಗುರುಗಳ ತತ್ವಗಳನ್ನು ಒಪ್ಪಿದ್ದೇನೆಂದು ಪೇಜಾವರರ ಬಾಯಲ್ಲಿ  ಹೇಳಿಸಿ’ ಎನ್ನುವ ಸವಾಲು.  ಇಂತಹ ಪ್ರಕ್ಷುಬ್ಧ ಕಾಲದಲ್ಲೂ ಪಂಥಾಹ್ವಾನಗಳ ಮೂಲಕ ನಾವು ತಲುಪುವ ಗಮ್ಯ ಸ್ಥಾನವಾದರೂ ಯಾವುದು? ಅದ್ವೈತ ಸಿದ್ಧಾಂತಗಳನ್ನು ತಾತ್ವಿಕವಾಗಿ ಪ್ರತಿನಿಧಿಸುವ ಮತ್ತು ಭಾರತೀಯ ಸಂತ ಪರಂಪರೆಯಲ್ಲೇ ಕೊನೆಯವರಾದ ನಾರಾಯಣ ಗುರುಗಳ ಚಿಂತನೆಗಳಿಗೆ, ತಾತ್ವಿಕವಾಗಿ ದ್ವೈತ ಸಂಪ್ರದಾಯಕ್ಕೆ ಸೇರಿದ ಓರ್ವ ಮಠಾಧೀಶರನ್ನು  ಒಪ್ಪಿಸುವ ಸವಾಲಿಗೂ; ಪ್ರಮೋದ ಮುತಾಲಿಕ್, ‘ಮಸೀದಿಯಲ್ಲಿ ಗಣೇಶ ಹಬ್ಬ ಮಾಡಿಸಿ, ಹನುಮಾನ್ ಚಾಲೀಸ ಓದಿಸಿ’ ಎಂದು ಪೇಜಾವರ ಶ್ರೀಗಳಿಗೆ ಒಡ್ಡಿದ ಸವಾಲಿಗೂ ಯಾವ ವ್ಯತ್ಯಾಸವಾದರೂ ಇದೆಯೇ?  ಅಷ್ಟಾಗಿ ಪೇಜಾವರರ ಬಾಯಿಯಲ್ಲಿ ನಮಗೆ ಬೇಕಾದುದನ್ನು ಅಥವಾ ಇನ್ನೊಬ್ಬರಿಗೆ ಬೇಕಾದುದನ್ನು ಹೊರಡಿಸಲು ನಾವು ಅವರ ಗಿಂಡಿಮಾಣಿಗಳೂ ಅಲ್ಲ ಅಥವಾ ಪರ್ಯಾಯ ಪೇಜಾವರ ಮಠದ ಸಾರ್ವಜನಿಕ ವಕ್ತಾರರೂ ಅಲ್ಲ. 

ಪೇಜಾವರರು ಆಯೋಜಿಸಿದ ಸೌಹಾರ್ದ ಕೂಟವನ್ನು ಹಿಂದುತ್ವ ಪುರೋಭಿವೃದ್ಧಿಗಾಗಿ ಹೆಣೆದ ರಾಜಕೀಯ ತಂತ್ರ ಎಂದಾಗಲೀ ಅಥವಾ ಪೇಜಾವರರು ತಮ್ಮ ಜನಪ್ರಿಯತೆಗಾಗಿ ನಡೆಸಿದ ಮಸಲತ್ತು ಎಂದಾಗಲೀ ನಾವು ಭಾವಿಸಿಲ್ಲ. ದೇಶ-ರಾಜ್ಯ, ದೇವರು-ಧರ್ಮ ಇತ್ಯಾದಿಗಳಿಗಿಂತ ನನ್ನ ಕುಟುಂಬ-ಸಂಸಾರ ದೊಡ್ಡದು ಎಂದು ನಂಬಿರುವ ಸಾಮಾನ್ಯ ಸಂಸಾರಸ್ಥರಾದ ನಮ್ಮೆಲ್ಲರ ಜನಜೀವನದಲ್ಲಿ, ಕ್ಷೀಣಿಸುತ್ತಿರುವ ಪರಸ್ಪರ ನಂಬಿಕೆ-ವಿಶ್ವಾಸಗಳನ್ನು ಮರಳಿ ತರುವ ಪ್ರಯತ್ನವನ್ನು ಯಾರು ಮಾಡುತ್ತಾರೋ ಅವರನ್ನು ತತ್ಕಾಲದ ಸನ್ನಿವೇಶದಲ್ಲಿ ಮೆಚ್ಚುವ ಒಂದು ಸಂಕೇತವನ್ನಾದರೂ ತೋರಿಸದೇ ಇದ್ದರೆ ಸಾಮಾನ್ಯ ಜನರ ಬದುಕು ದುರ್ಭರವಾಗುತ್ತದೆ.

ಸಮುದಾಯಗಳ ನಡುವೆ ಬಂಧುತ್ವ ವೃದ್ಧಿಸುವ ಕೆಲಸವನ್ನು ಮಾಡಹೊರಟವರು ಅದನ್ನು ಪ್ರಾಮಾಣಿಕವಾಗಿ ಮಾಡದಿದ್ದರೆ ಅದು ಅವರ ಸಮಸ್ಯೆಯೇ ಹೊರತು ನಮ್ಮದಲ್ಲ. ಕರಾವಳಿಯಲ್ಲಿ ಈಗ ನಡೆಯುತ್ತಿರುವ ಸಂಘರ್ಷದಿಂದ ನಿಜಕ್ಕೂ ಅನಾಥರಾಗಿರುವವರು ಮಡಿವಾಳ, ಕುಂಬಾರ, ಕೊಟ್ಟಾರಿ, ಮೊಗವೀರ, ಬಿಲ್ಲವ ಇತ್ಯಾದಿ ಹಿಂದುಳಿದ ಸಮುದಾಯಗಳಿಗೆ ಸೇರಿದ ಜನರು. ದುಡಿಯುವ ಎರಡೂ ಕೈಗಳನ್ನು ನಂಬಿ ಜೀವ ಹಿಡಿದು ನಿಂತಿರುವ ಅಮ್ಮ, ಅಪ್ಪ, ಅಕ್ಕ, ತಮ್ಮ, ತಂಗಿಗಳೆಂಬ ಐದಾರು ಬಾಯಿಗಳು. ಮುಸ್ಲಿಮರಲ್ಲಿ ಮೀನುಮಾರುವ, ರಿಕ್ಷಾ ಓಡಿಸುವ ಮತ್ತು ಗುಜರಿ ಹೆಕ್ಕುವ ಕುಟುಂಬದವರು.   ಸೌಹಾರ್ದಕೂಟವನ್ನು ನಾವು ಈ ಹಿನ್ನೆಲೆಯಲ್ಲಿ ನೋಡಬಯಸುತ್ತೇವೆ. ಸ್ನಾನದ ನೀರಿನ ಜೊತೆ ಶಿಶುವನ್ನೂ ಎಸೆಯುವವರು ನಾವು ಆಗಬಾರದು ಎಂಬುದಷ್ಟೇ ನಮ್ಮ ಕಾಳಜಿ.

ವ್ಯಕ್ತಿಗಳ, ಸಮುದಾಯಗಳ ಚಿಂತನೆಗಳು ಮತ್ತು ಕ್ರಿಯಾಚರಣೆಗಳು ನಿರಂತರವಾದ ವಿಮರ್ಶೆಗೆ ಒಳಗಾಗಿ ಎಲ್ಲರ ಒಳಿತನ್ನು ಸಾಧಿಸಬೇಕು. ಪ್ರಗತಿಶೀಲತೆ, ಎಡಪಂಥೀಯತೆ, ಸೆಕ್ಯುಲರ್‌ವಾದಗಳು ನಾವು ಹಾಕಿಕೊಳ್ಳುವ ಬಣ್ಣದ ಗಾಜುಗಳಾಗದೆ, ನಮ್ಮ ಚಿಂತನೆ- ಕ್ರಿಯಾಚರಣೆಗಳಿಗೆ ತಡೆಗೋಡೆಗಳಾಗದೆ ತಾತ್ವಿಕ ನಿಷ್ಕರ್ಷೆಯ ದಾರಿದೀಪಗಳಾಗಬೇಕು ಎಂದು ನಾವು ವಿನಮ್ರವಾಗಿ ತಿಳಿಯುತ್ತೇವೆ.

-ಪ್ರೊ. ರಾಜಾರಾಮ ತೋಳ್ಪಾಡಿ
-ಪ್ರೊ. ನಿತ್ಯಾನಂದ ಬಿ. ಶೆಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT