ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ರಾಜ್ಯದ ಸಾಂಸ್ಕೃತಿಕ ಕೇಂದ್ರವಾಗಲಿ

ಕೃತಿಗಳ ಲೋಕಾರ್ಪಣೆಯಲ್ಲಿ ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ
Last Updated 10 ಜುಲೈ 2017, 4:56 IST
ಅಕ್ಷರ ಗಾತ್ರ

ದಾವಣಗೆರೆ: ‘ವಿಶ್ವ ಕನ್ನಡ ಸಮ್ಮೇಳನ ಆಯೋಜಿಸುವ ಮೂಲಕ ದಾವಣಗೆರೆ ನಗರವು ಕರ್ನಾಟಕದ ಸಾಂಸ್ಕೃತಿಕ ಕೇಂದ್ರ ಬಿಂದುವಾಗಿ ಹೊರಹೊಮ್ಮಲಿ’ ಎಂದು ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಹಾರೈಸಿದರು.

ನಗರದ ಚಿಂದೋಡಿ ಲೀಲಾ ರಂಗಮಂದಿರದಲ್ಲಿ ಭಾನುವಾರ ದಾವಣಗೆರೆ ಜಿಲ್ಲಾ ಕಾರ್ಯನಿರತ ಪರ್ತಕರ್ತರ ಸಂಘ, ‘ನೀವು–ನಾವು’ ತಂಡದ ಸಹಯೋಗದಲ್ಲಿ ಆಯೋಜಿಸಿದ್ದ ಲೇಖಕ ಬಾ.ಮ.ಬಸವರಾಜಯ್ಯ ಅವರ ‘ಸುದ್ದಿಯೊಳಗಿನ ಕಿಚ್ಚು’ (ನಾಟಕ) ಹಾಗೂ ‘ಒಂದು ಕಾಡಿನ ಕಥೆ’ (ಮಕ್ಕಳ ನಾಟಕ) ಕೃತಿಗಳ ಲೋಕಾರ್ಪಣೆ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ವಿಶ್ವ ಕನ್ನಡ ಸಮ್ಮೇಳನದ ಸಾಂಸ್ಕೃತಿಕ ಚಟುವಟಿಕೆ ಹಾಗೂ ಪರಿಕಲ್ಪನೆಗಳು ಮೂರು ದಿನಗಳಿಗೆ ಸೀಮಿತವಾಗದೆ ನಗರದಲ್ಲಿ ನಿರಂತರವಾಗಿ ನಡೆಯುತ್ತಿರಬೇಕು ಎಂದು ಆಶಿಸಿದರು.

‘ಲೇಖಕ ಬಾ.ಮ. ಬಸವರಾಜಯ್ಯ ಅವರು ತಮ್ಮ ‘ಸುದ್ದಿಯೊಳಗಿನ ಕಿಚ್ಚು’ ಕೃತಿಯಲ್ಲಿ ಪತ್ರಕರ್ತ ಹಾಗೂ ರಾಜಕಾರಣಿಯ ಒಡನಾಟವನ್ನು ಪ್ರತಿಬಿಂಬಿಸಿದ್ದಾರೆ. ಕೆಲ ರಾಜಕಾರಣಿಗಳು ಸ್ವಾರ್ಥ ಹಿತಾಸಕ್ತಿಗಾಗಿ ಕೆಲ ಪತ್ರಕರ್ತರನ್ನು ಬಳಸಿಕೊಳ್ಳುವುದು ಸಾಮಾನ್ಯ. ಅನ್ಯಾಯ, ಅನೀತಿಯಿಂದ ವರ್ತಿಸಿದ್ದ ರಾಜಕಾರಣಿಯನ್ನು ಕೃತಿಯಲ್ಲಿ ಖಂಡಿಸುವ ಮೂಲಕ ಶಿಕ್ಷಿಸಬೇಕಿತ್ತು. ಆದರೆ, ಇದಾಗಿಲ್ಲ. ತಿಪ್ಪೇಸಾರಿಸುವ ಕೆಲಸವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಗುರು ಪೂರ್ಣಿಮೆ ದಿನದಂದು ಕೃತಿಗಳ ಲೋಕಾರ್ಪಣೆ ಮಾಡುವ ಮೂಲಕ ಬಾ.ಮ. ಬಸವರಾಜಯ್ಯ   ಗುರು ನಮನ ಸಲ್ಲಿಸಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.

ಕೃತಿಗಳ ಪರಿಚಯ ಮಾಡಿದ ನಾಟಕಕಾರ ಡಾ.ಡಿ.ಎಸ್‌.ಚೌಗಲೆ, ‘ರಾಜಕೀಯ ವಿಡಂಬನೆಯ ನಾಟಕ ಕೃತಿಗಳು ತುಂಬಾ ವಿರಳ. ನಾಟಕದ ಕಥಾ ವಸ್ತುವಿನಲ್ಲಿಯೂ ನ್ಯಾಯ ಸಮಾನತೆ ಇರಬೇಕು. ಲೇಖಕರು ಈ ನಿಟ್ಟಿನಲ್ಲಿಯೂ ಚಿಂತನೆ ನಡೆಸಬೇಕು’ ಎಂದು ಹೇಳಿದರು.

ಈ ನಾಟಕ ಕೃತಿಯು ವರ್ತಮಾನಕ್ಕೆ ಪೂರಕವಾಗಿದ್ದು, ಸಾಮಾಜಿಕ ಹಾಗೂ ರಾಜಕೀಯ ವಿಚಾರಗಳನ್ನು ಪ್ರಸ್ತುತಪಡಿಸಿದೆ ಎಂದು ಅಭಿಪ್ರಾಯಪಟ್ಟರು.
‘ಒಂದು ಕಾಡಿನ ಕಥೆ’ ಮಕ್ಕಳ ನಾಟಕದಲ್ಲಿ ಅರಣ್ಯದೊಂದಿಗೆ ಮನುಷ್ಯನ ಒಡನಾಟವನ್ನು ಪ್ರಸ್ತುತಪ ಡಿಸಲಾಗಿದೆ.

ಮನುಷ್ಯ ಸಹಜವಾಗಿ ಜೀವಿಸುತ್ತಿಲ್ಲ. ಸ್ವೇಚ್ಛಾಚಾರದಿಂದ ಹಾಗೂ ಸ್ವಾರ್ಥ ಬದುಕಿನಿಂದ ಪರಿಸರ ನಾಶ ಮಾಡುತ್ತಿದ್ದಾನೆ. ಅಂತಿಮವಾಗಿ ಪರಿಸರವೇ ಆತನಿಗೆ ಪಾಠ ಕಲಿಸುತ್ತದೆ ಎಂಬ ಅಂಶವನ್ನು ಈ ಕೃತಿಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಅವರು ಹೇಳಿದರು.

ಸ್ವಾಭಾವಿಕ ನೆಲೆಯೊಳಗೆ ಮಕ್ಕಳು ಬದುಕುವಂತಹ ವಾತಾವರಣವನ್ನು ಪೋಷಕರು ನಿರ್ಮಿಸಿಕೊಡಬೇಕಾದ ಅವಶ್ಯಕತೆ ಇದೆ ಎಂದರು. ಇದೇ ಸಮಯದಲ್ಲಿ ಶ್ರೀನಿವಾಸ ಜಿ.ಕಪ್ಪಣ್ಣ ಅವರನ್ನು ಗೌರವಿಸಲಾಯಿತು.

ಸುಶ್ರಾವ್ಯ ಸಂಗೀತ ವಿದ್ಯಾಲಯದ ಯಶಾ ದಿನೇಶ್‌ ತಂಡದವರು ಭಾವಗೀತೆಗಳನ್ನು ಪ್ರಸ್ತುತಪಡಿಸಿದರು. ಬಾ.ಮ. ಬಸವರಾಜಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಪತ್ರಕರ್ತ ಎಂ.ಎಸ್‌. ಶಿವಶರಣಪ್ಪ ಅಧ್ಯಕ್ಷತೆ ವಹಿಸಿದ್ದರು.

ವಿಚಾರವಾದಿ ಪ್ರೊ.ಬಿ.ವಿ. ವೀರಭದ್ರಪ್ಪ, ಪ್ರೊ.ಎಸ್‌. ಹಾಲಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ರವೀಂದ್ರ ಸಿರಿವರ, ಎನ್‌.ರಾಜು, ಎಸ್‌.ಎಸ್‌. ಸಿದ್ದರಾಜು, ಎನ್‌.ಟಿ.ಮಂಜುನಾಥ, ಚಂದ್ರಶೇಖರ ತಾಳ್ಯ ಉಪಸ್ಥಿತರಿದ್ದರು. ಪತ್ರಕರ್ತ ವೀರಪ್ಪ ಎಂ.ಭಾವಿ ಸ್ವಾಗತಿಸಿದರು. ನಾಗರಾಜ ಸಿರಿಗೆರೆ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT