ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸಂಖ್ಯೆ: 2021ರ ವೇಳೆಗೆ ಭಾರತವೇ ಪ್ರಥಮ

Last Updated 12 ಜುಲೈ 2017, 5:22 IST
ಅಕ್ಷರ ಗಾತ್ರ

ಶಿವಮೊಗ್ಗ: ಭಾರತದ ಜನಸಂಖ್ಯೆ ನಾಗಾಲೋಟದಲ್ಲಿ ಸಾಗಿದ್ದು, 2021ರ ವೇಳೆಗೆ ವಿಶ್ವದಲ್ಲೇ ಮೊದಲ ಸ್ಥಾನಕ್ಕೆ ತಲುಪಲಿದೆ ಎಂದು ಅರ್ಥಶಾಸ್ತ್ರಜ್ಞ  ಬಿ.ಎಂ.ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದರು.

ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಭಾರತೀಯ ಕುಟುಂಬ ಯೋಜನಾ ಘಟಕದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶ್ವದ ಜನಸಂಖ್ಯೆ 746 ಕೋಟಿ ತಲುಪಿದೆ. ಚೀನಾದ ಜನಸಂಖ್ಯೆ 140 ಕೋಟಿ ಇದೆ. ಭಾರತದ ಜನಸಂಖ್ಯೆ132 ಕೋಟಿ ಇದೆ. ವಿಶ್ವ ಜನಸಂಖ್ಯೆಯ ಶೇ 36ರಷ್ಟು  ಚೀನಾ ಹಾಗೂ ಭಾರತದಲ್ಲೇ ಇದೆ ಎಂದು ಅಂಕಿ–ಅಂಶ ನೀಡಿದರು.

ಕೆಲವು ರಾಷ್ಟ್ರಗಳಲ್ಲಿ ಜನಸಂಖ್ಯೆ ಇಲ್ಲದೆ ಸಮಸ್ಯೆಗಳು ಎದುರಾಗಿವೆ. ಕೆಲವು ರಾಷ್ಟ್ರಗಳಲ್ಲಿ ಜನಸಂಖ್ಯೆಯೇ ದೊಡ್ಡ ಸಮಸ್ಯೆಯಾಗಿದೆ. ಜನಸಂಖ್ಯೆಯ ಹೆಚ್ಚಳ ನಿರುದ್ಯೋಗದ ಸಮಸ್ಯೆ ಸೃಷ್ಟಿಸುತ್ತದೆ. ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ 65ರಷ್ಟು 35 ವರ್ಷ ವಯೋಮಿತಿಯ ಒಳಗಿನ ಯುವಜನರು ಇದ್ದಾರೆ.

ಅವರಿಗೆ ಶಿಕ್ಷಣ ನೀಡಿ, ಉದ್ಯೋಗ ನೀಡದಿದ್ದರೆ ಅವರು ಸಮಾಜ, ದೇಶಕ್ಕೆ ಕಂಟಕವಾಗುತ್ತಾರೆ. ಯುವ ಜನರಿಗೆ ಉತ್ತಮ ಮಾರ್ಗದರ್ಶನ ನೀಡಬೇಕು. ಉದ್ಯೋಗ ದೊರೆತರೆ ಅವರೇ ದೇಶದ ಆಸ್ತಿಯಾಗುತ್ತಾರೆ ಎಂದು ವಿಶ್ಲೇಷಿಸಿದರು.

ಜನಸಂಖ್ಯೆ ಹೆಚ್ಚಳ ನಿರುದ್ಯೋಗ ಸಮಸ್ಯೆ, ದೇಶದ ಆರ್ಥಿಕ ವ್ಯವಸ್ಥೆ, ಪರಿಸರ ಸಮತೋಲನದ ಮೇಲೆ ಪರಿಣಾಮ ಬೀರಲಿದೆ. ನಿರಂತರ ಅರಣ್ಯ ನಾಶದ ಪರಿಣಾಮ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಎಲ್ಲಾ ವಸ್ತುಗಳಿಗೂ ಬೇಡಿಕೆ ಹೆಚ್ಚಾಗಲಿದೆ. ಮಾಲಿನ್ಯದ ಪ್ರಮಾಣ ಹೆಚ್ಚಾಗಿ. ಮಾಲಿನ್ಯ, ಹವಾಮಾನ ವೈಪರೀತ್ಯದತಂಹ ಸಮಸ್ಯೆಗಳು ಎದುರಾಗುತ್ತವೆ ಎಂದರು. 

ಇಂತಹ ಹಲವು ಸಮಸ್ಯೆಗಳಿಗೆ ಜನಸಂಖ್ಯೆ ನಿಯಂತ್ರಣ ಮಾತ್ರವೇ ಪರಿಹಾರ. ಜನಸಂಖ್ಯಾ ನಿಯಂತ್ರಣಕ್ಕಾಗಿ ಜನಜಾಗೃತಿ ಮೂಡಿಸುವುದರ ಜತೆಗೆ, ಮಹಿಳಾ ಸಾಕ್ಷರತೆಯ ಪ್ರಮಾಣ ಹೆಚ್ಚಿಸಬೇಕು. ಕುಟುಂಬ ಯೋಜನೆಯ ಅರಿವು ಮೂಡಿಸಬೇಕು.

ಗ್ರಾಮೀಣ ಜನರ ಜೀವನಮಟ್ಟ ಸುಧಾರಣೆ ಮಾಡಬೇಕು ಎಂದು ಸಲಹೆ ನೀಡಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ್ ಮಾತನಾಡಿ, ‘ದೇಶದ ಆರ್ಥಿಕ ಪ್ರಗತಿ ಆ ದೇಶದ ಜನಸಂಖ್ಯೆಯ ಮೇಲೆ ಆಧಾರಿತವಾಗಿದೆ. ಮಹಿಳೆಯರಿಗೆ ಶಿಕ್ಷಣ ಮತ್ತು ಆರ್ಥಿಕ ಪ್ರಜ್ಞೆ ಮೂಡಿಸಬೇಕು. ಜನಸಂಖ್ಯೆ ನಿಯಂತ್ರಣದ ಕುರಿತು ಅರಿವು ಮೂಡಿಸಬೇಕು’ ಎಂದರು.

ಜನಸಂಖ್ಯೆಯಿಂದ ದೇಶಕ್ಕೆ ಸಮಸ್ಯೆ ಎಂದುಕೊಳ್ಳದೆ ಆ ಜನಸಂಖ್ಯೆಯನ್ನೇ ಸಂಪನ್ಮೂಲವಾಗಿ ದೇಶದ ಪ್ರಗತಿಗೆ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್ ಮಾತನಾಡಿ, ‘ದೇಶದಲ್ಲಿ ಜನಸಂಖ್ಯೆ ಪ್ರಮಾಣ ಹೆಚ್ಚಾಗುತ್ತಿದೆ. ಈ ಕುರಿತು ಜಾಗೃತಿ ಮೂಡಿಸಲು ಇದು ಸರಿಯಾದ ಕಾಲ’ ಎಂದರು.

ಮಹಾವಿದ್ಯಾಲಯದ ಪ್ರಾಂಶುಪಾಲ ಡಿ.ಆರ್.ದಯಾನಂದ ಅಧ್ಯಕ್ಷತೆ ವಹಿಸಿದ್ದರು. ಸಮಸ್ಥೆಯ ಅಧ್ಯಕ್ಷ ಎ.ಎಸ್.ವಿಶ್ವನಾಥ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ನಟರಾಜ್, ಎಫ್‌ಪಿಎ ಅಧ್ಯಕ್ಷ ರಮೇಶಬಾಬು, ಹೂವಯ್ಯ ಗೌಡ,   ಪ್ರೊ.ಕೆ.ಎಂ.ನಾಗರಾಜ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT