ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜವಾದಿ ಹೋರಾಟಗಾರ ಇನ್ನಿಲ್ಲ

ಯಲ್ಲಾಪುರ ನಾಕಾ ಸಮೀಪವಿರುವ ಅವರ ಮನೆಗೆ ಭೇಟಿ ನೀಡಿ ಮೃತರ ಅಂತಿಮ ದರ್ಶನ
Last Updated 13 ಜುಲೈ 2017, 11:44 IST
ಅಕ್ಷರ ಗಾತ್ರ

ಶಿರಸಿ: ಊಳುವವನೇ ಒಡೆಯ ಹೋರಾಟದ ಮೂಲಕ ರಾಜಕೀಯ ಪ್ರವೇಶಿಸಿ ಸತತ ನಾಲ್ಕು ಬಾರಿ ಸಂಸದ ರಾಗಿ ಆಯ್ಕೆಯಾಗಿದ್ದ ದೇವರಾಯ ನಾಯ್ಕ ಅವರು ಬುಧವಾರ ನಿಧನರಾದರು.

ಸಮಾಜದ ಹಿರಿಯರು, ಎಲ್ಲ ರಾಜಕೀಯ ಪಕ್ಷಗಳ ಪ್ರಮುಖರು, ಸಾರ್ವಜನಿಕರು ಇಲ್ಲಿನ ಯಲ್ಲಾಪುರ ನಾಕಾ ಸಮೀಪವಿರುವ ಅವರ ಮನೆಗೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದರು.

‘1960ರ ದಶಕದಲ್ಲಿ ಸಮಾಜವಾದಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ದೇವರಾಯ ನಾಯ್ಕರು ಊಳುವ ಬಡವನಿಗೆ ಆ ಭೂಮಿಯ ಮೇಲೆ ಹಕ್ಕು ಇದೆ ಎಂದು ಬಲವಾಗಿ ಪ್ರತಿಪಾದಿ ಸುತ್ತಿದ್ದರು. ಮೌಲ್ಯಯುತ ರಾಜಕಾರಣ ಮಾಡಿದ್ದ ಅವರನ್ನು ಗ್ರಾಮೀಣ ಭಾಗದ ಜನರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಅವರಿಗೆ ಹತ್ತಿರದ ಒಡನಾಡಿಯಾಗಿದ್ದರು.

ದಿವಂಗತ ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮಟ್ಟದ ಜನ ಕಲ್ಯಾಣ ಸಮಿತಿ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದರು’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ನೆನಪಿಸಿಕೊಂಡರು.

‘ವಯೋ ಸಹಜ ಕಾರಣಗಳಿಂದ ಅವರು ಇತ್ತೀಚಿನ ದಿನಗಳಲ್ಲಿ ಸಕ್ರಿಯ ರಾಜಕಾರಣದಿಂದ ದೂರ ಉಳಿದಿ ದ್ದರೂ ಪಕ್ಷಕ್ಕೆ ಸದಾ ಮಾರ್ಗದರ್ಶಕ ರಾಗಿದ್ದರು’ ಎಂದು ಅವರು ಹೇಳಿದರು.

‘ದೇವರಾಯ ನಾಯ್ಕರು ಸಂಸದರಾಗಿದ್ದ ಕೊನೆಯ ಅವಧಿಯಲ್ಲಿ ಸಂಸದ ನಿಧಿ ಎಂಬ ಪ್ರತ್ಯೇಕ ಅನುದಾನ ವ್ಯವಸ್ಥೆ ಜಾರಿಗೆ ಬಂತು. ಆಗ ಅವರು ಗ್ರಾಮೀಣ ಪ್ರದೇಶಗಳಿಗೆ ವಿಶೇಷ ಆದ್ಯತೆ ನೀಡಿದ್ದರು’ ಎಂಬುದನ್ನು ಜಿಲ್ಲಾ ಪಂಚಾಯ್ತಿ ಸದಸ್ಯ ಜಿ.ಎನ್. ಹೆಗಡೆ ಮುರೇಗಾರ ನೆನಪಿಸಿಕೊಂಡರು.

1962ರಲ್ಲಿ ರಾಜಕೀಯಕ್ಕೆ ಇಳಿದ ಅವರು 1964 ರಲ್ಲಿ ಪಿಎಸ್‌ಪಿ (ಪ್ರಜಾ ಸೋಷಿಯಲಿಸ್ಟ್ ಪಾರ್ಟಿ) ಜಿಲ್ಲಾ ಕಾರ್ಯ ನಿರ್ವಾಹಕ ಸಮಿತಿಯ ಸದಸ್ಯರಾಗಿ ಕೆಲಸ ಮಾಡಿದ್ದರು. 1969 ರಲ್ಲಿ ಪಿಎಸ್‌ಪಿ ಕಾಂಗ್ರೆಸ್‌ನೊಂದಿಗೆ ವಿಲೀನಗೊಂಡ ಮೇಲೆ ಕಾಂಗ್ರೆಸ್ ಕಾರ್ಯಕರ್ತರಾಗಿ ಮುಂದುವರಿದರು. ಅವರ ಸಾಮರ್ಥ್ಯ ಗುರುತಿಸಿ ಪಕ್ಷ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿ, ಸಂಚಾಲಕರನ್ನಾಗಿ ನೇಮಿಸಿತ್ತು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮತ್ತು ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಮಂಡಳಿ ಸದಸ್ಯರಾಗಿ, ಭೂ ನ್ಯಾಯ ಮಂಡಳಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಮಕ್ಕಳನ್ನು ರಾಜಕಾರಣಕ್ಕೆ ತಂದಿಲ್ಲ: ಕೆನರಾ ಲೋಕಸಭಾ ಕ್ಷೇತ್ರದಲ್ಲಿ ನಾಲ್ಕು ಬಾರಿ ಸಂಸದರಾಗಿ ಕೆಲಸ ಮಾಡಿ ಐದನೇ ಬಾರಿಗೆ ಸ್ವಯಂ ಪ್ರೇರಣೆಯಿಂದ ಟಿಕೆಟ್‌ ನಿರಾಕರಿಸಿದ್ದು ದೇವರಾಯ ನಾಯ್ಕ ಅವರ ವಿಶೇಷತೆಯಾಗಿದೆ. ‘1996ರ ಚುನಾವಣೆಯಲ್ಲಿ ಹಣದ ಜೊತೆ ಕುಸ್ತಿ ಮಾಡಲು ಆಗುವುದಿಲ್ಲ ಎನಿಸಿತು.

ಹೀಗಾಗಿ ಚುನಾವಣೆಯಿಂದ ಹಿಂದೆ ಸರಿದೆ. ಅಂದಿನ ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಡಿ.ಕೆ. ನಾಯ್ಕ ಅವರು ಮನೆಗೆ ಬಂದು ‘ಕಾಂಗ್ರೆಸ್‌ ಟಿಕೆಟ್‌ ನಿಮಗೇ, ಚುನಾವಣೆಗೆ ಸ್ಪರ್ಧಿಸಿ’ ಎಂದರು. ನಾನು ಬೇಡವೆಂದು ನಯವಾಗಿ ತಿರಸ್ಕರಿಸಿದೆ. ಇಂದಿನ ವಂಶ ಪಾರಂಪರ್ಯ ರಾಜಕಾರಣ, ಇಳಿ ವಯಸ್ಸು ತಲುಪಿದರೂ ರಾಜಕೀಯ ದಿಂದ ಹಿಂದೆ ಸರಿಯದವರಿಗೆ ಜನರೇ ಉತ್ತರಿಸಬೇಕು. ನನ್ನ ಮಕ್ಕಳನ್ನು ನಾನು ರಾಜಕಾರಣಕ್ಕೆ ತಂದಿಲ್ಲ.    

ರಾಜಕಾರಣಕ್ಕೆ ಬರಲೂ ಬೇಡಿ ಅಂತ ಹೇಳಿದ್ದೆ’ ಎಂದು ದೇವರಾಯ ನಾಯ್ಕ ಅವರು 2014ರ ಲೋಕ ಸಭಾ ಚುನಾವಣೆ ಸಮೀಪಿಸುತ್ತಿರುವಾಗ ‘ಪ್ರಜಾವಾಣಿ’ ನಡೆಸಿದ್ದ  ಸಂದರ್ಶನದಲ್ಲಿ ಹೇಳಿದ್ದರು. ಆಗ ಅವರ ಜೊತೆಗಿದ್ದ ಕೆಲವು ಕಾಂಗ್ರೆಸ್‌ ಕಾರ್ಯಕರ್ತರು ಈ ಸಂದರ್ಭವನ್ನು ಈಗ ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT