ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಮಂದಿರದ ಮಕ್ಕಳಿಗೆ ಏನು ಬೇಕು?

ಸಂಗತ
Last Updated 13 ಜುಲೈ 2017, 19:30 IST
ಅಕ್ಷರ ಗಾತ್ರ

ರಾಜ್ಯದಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಗಂಡು– ಹೆಣ್ಣುಮಕ್ಕಳಿಗಾಗಿ ಪ್ರತ್ಯೇಕವಾಗಿ ಇರುವ 54 ಸರ್ಕಾರಿ ಬಾಲಮಂದಿರಗಳಲ್ಲಿ 4000ಕ್ಕೂ ಹೆಚ್ಚು ಮಕ್ಕಳು ಪೋಷಣೆ ಮತ್ತು ರಕ್ಷಣೆಯನ್ನು ಪಡೆದಿದ್ದಾರೆ. ಬೀದಿ ಮಕ್ಕಳು, ಅನಾಥರು, ಏಕಪೋಷಕರ ಮಕ್ಕಳು, ಬಾಲಕಾರ್ಮಿಕರಾಗಿದ್ದ ಮಕ್ಕಳು, ಜೈಲಿನಲ್ಲಿರುವ ಪೋಷಕರ ಮಕ್ಕಳು, ಬಾಲ್ಯವಿವಾಹ, ಲೈಂಗಿಕ ದೌರ್ಜನ್ಯಕ್ಕೊಳ ಗಾದ ಮಕ್ಕಳು... ಹೀಗೆ ಶೋಷಣೆ ಮತ್ತು ನಿರ್ಲಕ್ಷ್ಯಕ್ಕೆ ಒಳಗಾದ ವಿಭಿನ್ನ ರೀತಿಯ 6ರಿಂದ 18 ವರ್ಷದವರೆಗಿನ ಮಕ್ಕಳ ರಕ್ಷಣಾ ಸಂಸ್ಥೆಗಳಾಗಿ ಈ ಬಾಲಮಂದಿರಗಳು ಕಾರ್ಯನಿರ್ವಹಿಸುತ್ತಿವೆ.

ಆದರೆ ಈ ಬಾಲಮಂದಿರಗಳಿಂದ ಮಕ್ಕಳು ಪದೇ ಪದೇ ಓಡಿಹೋಗುವುದು, ನಾಪತ್ತೆಯಾಗುವುದು ಸುದ್ದಿಯಾಗುತ್ತಲೇ ಇರುತ್ತದೆ. ಮೊದಲೇ ಅಸಹಾಯಕರಾದ, ವಿಶೇಷ ಕಾಳಜಿಯ ಅವಶ್ಯಕತೆಯಿರುವ ಈ ಮಕ್ಕಳು ಏಕಾಂಗಿಯಾಗಿ ಬೀದಿಗೆ ಬಿದ್ದಾಗ ದೌರ್ಜನ್ಯಕ್ಕೊಳಗಾಗುವ ಸಾಧ್ಯತೆ ಅಧಿಕ. ಅದರಲ್ಲೂ ಹೆಣ್ಣುಮಕ್ಕಳು ಅನೇಕ ರೀತಿಯ ಶೋಷಣೆಗೆ, ಲೈಂಗಿಕ ದುರ್ಬಳಕೆಗೆ ಒಳಗಾಗಿ ಪೊಲೀಸರು ಅವರನ್ನು ಹುಡುಕಿ ಕರೆತರುವ ವೇಳೆಗಾ ಗಲೇ ಅವರ ಬದುಕು ಸರಿಪಡಿಸಲಾಗದಷ್ಟು ಹದಗೆಟ್ಟಿರುತ್ತದೆ.

ಕೆಲವು ಮಕ್ಕಳು ಪತ್ತೆಯೇ ಆಗದೇ ಹೋಗುತ್ತಾರೆ. ಕೆಲವು ಸಂದರ್ಭಗಳಲ್ಲಿ ವಾಪಸು ಕರೆತರುವಷ್ಟರಲ್ಲಿ ಹೆಣ್ಣುಮಗಳು ಗರ್ಭಿಣಿಯಾಗಿರುತ್ತಾಳೆ. ಅವಳು ಮತ್ತೆ ಬಾಲಮಂದಿರದಲ್ಲೂ ಇರಲು ಇಷ್ಟಪಡದೆ, ಅಕ್ಕರೆಯಿಂದ ನೋಡಿಕೊಳ್ಳುವ ಸಂಬಂಧಿಕರೂ ಇರದೆ ಅಸಹಾಯಕಳಾಗಿ ಪುನಃ ಬೀದಿಗೆ ಬಿದ್ದ ಅನೇಕ ಉದಾಹರಣೆಗಳು ನಮ್ಮ ಮುಂದಿವೆ.

ಬಾಲಮಂದಿರ ಉಸ್ತುವಾರಿ ಹೊತ್ತಿರುವ ಅಧೀಕ್ಷಕರು, ಅದರ ಸಿಬ್ಬಂದಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಅವರ ಸಹಾಯಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು, ಸಮಗ್ರ ಮಕ್ಕಳ ರಕ್ಷಣಾ ಘಟಕದ ನಿರ್ದೇಶಕರು... ಹೀಗೆ ದೊಡ್ಡ ಪಡೆಯೇ ಸರ್ಕಾರಿ ವ್ಯವಸ್ಥೆಯೊಳಗೆ ಕೆಲಸ ನಿರ್ವಹಿಸುತ್ತಿದ್ದರೂ ಯಾರೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹೊಣೆಗಾರಿಕೆಯನ್ನು ಬೇರೊಬ್ಬರ ಮೇಲೆ ಹೊರಿಸಿ ಕೈ ತೊಳೆದುಕೊಳ್ಳುತ್ತಿದ್ದಾರೆ.

ವಾಪಸು ಬಂದ ಮಕ್ಕಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೂಲಂಕಷವಾಗಿ ವಿಚಾರಿಸಿದರೆ ಸತ್ಯಾಂಶ ಹೊರಬರುತ್ತದೆ. ಮಗುವಿಗೆ ಬಾಲಮಂದಿರದಲ್ಲಿ ಅನನುಕೂಲ ಇತ್ತೇ, ಕೊರತೆ ಇತ್ತೇ, ತಮ್ಮಿಂದೇನಾದರೂ ಲೋಪದೋಷಗಳು ಜರುಗಿವೆಯೇ, ಮಗುವನ್ನು ಹೊರಗಿನವರಾರೋ ಮರುಳು ಮಾಡಿ ಕರೆದೊಯ್ದಿದ್ದರೇ ಎಂಬ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ಅದರ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬಹುದು. ಬಾಲಮಂದಿರದಲ್ಲಿ ಸುವ್ಯವಸ್ಥೆಯನ್ನು ಕಾಪಾಡಬಹುದು. ಮಕ್ಕಳನ್ನು ಜೋಪಾನವಾಗಿ ರಕ್ಷಿಸುವ ಕೆಲಸವನ್ನೂ ಮಾಡಬಹುದು. ಆದರೆ ಅದ್ಯಾವುದನ್ನೂ ಸಂಬಂಧಿಸಿದವರು ಮಾಡುತ್ತಿಲ್ಲ.

ಬಾಲಮಂದಿರದಲ್ಲಿ ಮಕ್ಕಳ ಸುರಕ್ಷತೆ ಮತ್ತು ಸಮಗ್ರ ಯೋಗಕ್ಷೇಮವನ್ನು ನೋಡಿಕೊಳ್ಳಲೆಂದೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ, ಮಕ್ಕಳಿಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಮಕ್ಕಳ ಹಕ್ಕುಗಳಿಗಾಗಿ ಕೆಲಸ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತರನ್ನೊಳಗೊಂಡ ಬಾಲಮಂದಿರ ತನಿಖಾ ಸಮಿತಿಯೆಂಬ ಇಲಾಖೇತರ ಸಮಿತಿಯನ್ನು ರಚಿಸಲಾಗಿರುತ್ತದೆ. ಇದು, ಮೂರು ತಿಂಗಳಿ ಗೊಮ್ಮೆ ಸಭೆ ನಡೆಸಿ ವಿಚಾರಣೆ ನಡೆಸಬೇಕು. ಆದರೆ ವರ್ಷಕ್ಕೊಮ್ಮೆ ಅದರ ಸಭೆ ನಡೆದರೆ ಹೆಚ್ಚು! ಬಹಳಷ್ಟು ಬಾರಿ ಈ ಸದಸ್ಯರಿಗೂ ಬಾಲಮಂದಿರದ ಮಕ್ಕಳಿಗೂ ನೇರ ಸಂಪರ್ಕವೇ ಇರುವುದಿಲ್ಲ! ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಾಟಾಚಾರದ ಸಭೆ ನಡೆಸಲಾಗು ತ್ತದೆ. ಹೆಸರಿಗೆ ಮಾತ್ರ ಇದು ತನಿಖಾ ಸಮಿತಿ.

ಇಂತಹ ವಿಷಯಗಳಲ್ಲಿ ಶಿಸ್ತು ಕ್ರಮ ಜರುಗಿಸಲು ಸಾಧ್ಯವಿರುವ, ಪ್ರತಿ ಜಿಲ್ಲೆಯಲ್ಲಿ 18 ವರ್ಷದೊಳಗಿನ ಮಕ್ಕಳ ನ್ಯಾಯದಾನದ ಅಧಿಕಾರ ಹೊಂದಿರುವ ಮಕ್ಕಳ ಕಲ್ಯಾಣ ಸಮಿತಿಗಳು ಕೂಡ ಹಲವು ಜಿಲ್ಲೆಗಳಲ್ಲಿ ತಮ್ಮ ಅಧಿಕಾರವನ್ನು ಸಮರ್ಪಕವಾಗಿ ಚಲಾಯಿಸುತ್ತಿಲ್ಲ. ಅಧಿಕಾರಿಗಳ, ಪ್ರತಿಷ್ಠಿತರ ವಿರೋಧ ಕಟ್ಟಿಕೊಳ್ಳದೆ, ಅವರೊಂದಿಗೆ ಗುಪ್ತ ಹೊಂದಾಣಿಕೆಯನ್ನೂ ಮಾಡಿಕೊಂಡು, ಕೆಲವು ಬಾರಿ ಸತ್ಯಕ್ಕೆ ವಿರುದ್ಧವಾದ, ಬಹು ನಾಜೂಕಾದ ನಿರ್ಣಯವನ್ನು ತೆಗೆದುಕೊಳ್ಳುತ್ತಿರುತ್ತವೆ. ಮಕ್ಕಳಿಗೆ ಸಂಬಂಧಿಸಿದ ಈ ಬಹುಪಾಲು ಸಮಿತಿಗಳು ಹಾಗೂ ಇಲಾಖೆಗಳು ಕೂಡ ಮಗುವಿನ ಹೆಸರಿನಲ್ಲಿಯೇ ತಮ್ಮ ಬದುಕಿಗೆ ಅನ್ನದ ವ್ಯವಸ್ಥೆಯಾಗಿರುವುದನ್ನು ಮರೆತುಬಿಟ್ಟಿರುವುದು ವಿಪರ್ಯಾಸ. ಹೀಗೆಂದೇ ಇವು ಮಗು ಕೇಂದ್ರಿತವಾಗಿ, ನಿಷ್ಪಕ್ಷಪಾತವಾಗಿ ವ್ಯವಹರಿಸುತ್ತಿಲ್ಲ.

ಮಕ್ಕಳಿಗೆ ಉಚಿತ ಊಟ, ವಸತಿ, ಬಟ್ಟೆ, ಶೈಕ್ಷಣಿಕ ವ್ಯವಸ್ಥೆ, ಮನರಂಜನೆಗೆ ಬೇಕಾದ ಟಿ.ವಿ... ಇತ್ಯಾದಿ ಹೆಚ್ಚೇ ಎನಿಸುವಷ್ಟು ಅನುಕೂಲಗಳಿದ್ದೂ ಇಲ್ಲಿಂದ ಮಕ್ಕಳು ಏಕೆ ಓಡಿ ಹೋಗುತ್ತಾರೋ ಗೊತ್ತಿಲ್ಲ ಎಂದು ಸಂಬಂಧಿಸಿದ ಅಧಿಕಾರಿಗಳು, ಸಿಬ್ಬಂದಿ ಅಮಾಯಕರಂತೆ ಕೇಳುವಾಗ ವ್ಯಥೆಯೆನಿಸುತ್ತದೆ. ಕಡತಗಳೊಂದಿಗೆ ವ್ಯವಹರಿಸುವ ಇಲಾಖೆಗಳ ಕಥೆ ಬೇರೆ.  ಆದರೆ ಮಗುವೊಂದು ಜೀವ. ಆ ಮಕ್ಕಳಿಗೆ ಭೌತಿಕ ಪೋಷಣೆ ನೀಡುವ ಇವಿಷ್ಟೇ ಸಾಕೇ, ನಿಜಕ್ಕೂ ಅವರಿಗಿರುವ ಕೊರತೆಯೇನು, ಬೇಕಿರುವುದೇನು ಎಂಬ ಪ್ರಶ್ನೆಗಳನ್ನು ಸಂಬಂಧಿಸಿದವರೆಲ್ಲರೂ ಹಾಕಿಕೊಂಡರೆ ಮಾತ್ರ ಸಮರ್ಪಕ ದಾರಿಗಳು ಕಂಡೀತು.

ಇಲ್ಲಿ ವಿಭಿನ್ನ ಪರಿಸರದಿಂದ ಬಂದ, ಸಾಮಾಜೀಕರಣದ ಶಿಸ್ತಿಗೆ ಒಳಪಡದ,  ಅನೇಕ ರೀತಿಯ ದೈಹಿಕ– ಮಾನಸಿಕ ಒತ್ತಡಕ್ಕೆ ಒಳಗಾಗಿ ಬಂದಿರುವ, ಪ್ರೀತಿಯ ಕೊರತೆಯಿಂದ ಬಳಲುತ್ತಿರುವ ಮಕ್ಕಳಿರುತ್ತಾರೆ. ಅವರೆಲ್ಲರನ್ನೂ ಪ್ರತ್ಯೇಕವಾಗಿ ಗಮನಿಸಬೇಕು.  ಕಾಳಜಿಯಿಂದ ನೋಡಿಕೊಳ್ಳಬೇಕು. ಪ್ರತೀ ಮಗು ಕಾತರದಿಂದ ನಿರೀಕ್ಷಿಸುವ ಕೌಟುಂಬಿಕ ಬಾಂಧವ್ಯ ಮತ್ತು ಸಾಂತ್ವನವನ್ನು ತುಂಬಿಕೊಡಲು ಅವರೊಡನೆ ಒಡನಾಡುವ ಎಲ್ಲರಿಗೂ ವಿಶೇಷ ಸಿದ್ಧತೆ ಬೇಕು. ಬಹುಶಃ ಕೊರತೆಯಾಗುತ್ತಿರುವುದು ಇಲ್ಲಿಯೇ. ಮಕ್ಕಳೊಂದಿಗೆ ಒಡನಾಡುವ ಸಿಬ್ಬಂದಿ ನೇಮಕದಲ್ಲಿ ಇಂಥ ಅಂಶಗಳ ಬಗ್ಗೆ ಗಮನಹರಿಸಬೇಕು. ಮಕ್ಕಳ ಮನೋಲೋಕದ ಕುರಿತು ವಿಶೇಷ ಅಧ್ಯಯನ ಮಾಡಿರುವವರು ಅಥವಾ ಮಕ್ಕಳ ಒಡನಾಟದಲ್ಲಿ ಕನಿಷ್ಠ ಹತ್ತು ವರ್ಷಗಳ ಅನುಭವವಿರುವವರನ್ನೇ ಇಂಥ ಹುದ್ದೆಗಳಿಗೆ  ನೇಮಕ ಮಾಡಿಕೊಳ್ಳಬೇಕು.

ಸದ್ಯಕ್ಕೆ, ಬಾಲಮಂದಿರದ ಅಧೀಕ್ಷಕರಿಂದ ಹಿಡಿದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳವರೆಗೆ ಇಲಾಖೆಯ ಅಂದಾಜು ಶೇಕಡ 50ಕ್ಕೂ ಅಧಿಕ ಹುದ್ದೆಗಳು ಖಾಲಿಯಿವೆ! ಒಬ್ಬ ಅಧಿಕಾರಿಗೆ ಮೂರ್ನಾಲ್ಕು ಹುದ್ದೆಯ ಜವಾಬ್ದಾರಿ.  ಇವರಲ್ಲಿ ಕೆಲವರು  ಬೇರೆ ಇಲಾಖೆಯಿಂದ  ನಿಯೋಜನೆಗೊಂಡವರು! ಇಂತಹವರಿಂದ ಮಕ್ಕಳಿಗೆ ಸಮರ್ಪಕ ನ್ಯಾಯ ದೊರಕಲು ಸಾಧ್ಯವೇ?  ಪ್ರತಿಯೊಂದು ಮಗುವಿನ ವಿಭಿನ್ನ ಸಮಸ್ಯೆಯನ್ನು ಅರ್ಥೈಸಿಕೊಳ್ಳುವ ವ್ಯವಧಾನ ಎಷ್ಟು ಜನ ಅಧಿಕಾರಿಗಳಿಗಿದೆ? ಅಂಥ ಸಂವೇದನಾಶೀಲತೆ ಈ ಕೆಲಸದ ಒತ್ತಡದ ಮಧ್ಯೆ ಅವರಿಗೆ ಇರಲು ಸಾಧ್ಯವೇ?

ಈ ಕೊರತೆಯನ್ನು ತಕ್ಕಮಟ್ಟಿಗೆ ತುಂಬಿಸಲೆಂದೇ ಬಾಲಮಂದಿರಗಳಿಗೆ ಹೊರಗುತ್ತಿಗೆಯ ಆಧಾರದ ಮೇಲೆ   ಐದು ವರ್ಷ ಗಳಿಂದ ಆಪ್ತಸಮಾಲೋಚಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಹಲವು ಕಡೆಗಳಲ್ಲಿ ಆ ಹುದ್ದೆಯೂ ಖಾಲಿ ಬಿದ್ದಿದೆ. ಭರ್ತಿಯಾದ ವರೂ  ಆಗಷ್ಟೇ ಶಿಕ್ಷಣ ಪೂರೈಸಿದವರು, ಅನುಭವ ಇಲ್ಲದವರು.

ಮಕ್ಕಳ ಸಂಬಂಧಿತ ಎಲ್ಲಾ ಅಂತರರಾಷ್ಟ್ರೀಯ ಕಾಯ್ದೆಗಳೂ, ನಮ್ಮ ಬಾಲನ್ಯಾಯ ಅಧಿನಿಯಮವೂ ‘ವಿತ್ ದ ಬೆಸ್ಟ್ ಇಂಟರೆಸ್ಟ್ ಆಫ್ ದ ಚೈಲ್ಡ್’ ಎಂಬ ಧ್ಯೇಯವಾಕ್ಯದೊಂದಿಗೇ ತುಟ್ಟತುದಿಗಾ ದರೂ ಹೋಗಿ ಮಕ್ಕಳಿಗೆ ಅವರ ಹಕ್ಕನ್ನು ಕೊಡಮಾಡಬೇಕೆಂದು ಆಗ್ರಹಿಸುತ್ತವೆ. ನಮ್ಮ ಹೆಜ್ಜೆ ಈ ಘೋಷವಾಕ್ಯದಿಂದ ಎಷ್ಟೊಂದು ದೂರವಿದೆ ಎಂದು ವಿಷಾದವೆನಿಸುತ್ತದೆ.  ಇಲಾಖೆ ಈಗಲಾದರೂ ಮಕ್ಕಳ ಕೇಂದ್ರಿತವಾಗಿ ಗಂಭೀರವಾಗಿ ಯೋಚಿಸಬೇಕು. ಬಾಲಮಂದಿರಗಳು ಮಕ್ಕಳಿಗೆ ತಾಯ್ತನದ ನೆಮ್ಮದಿಯ ಕೇಂದ್ರ ಗಳಾಗಬೇಕು. ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ ಕೇಂದ್ರಗಳಾಗ ಬೇಕು. ಅವುಗಳನ್ನು ಹಾಗೆ  ಪುನರ್ ರೂಪಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT