ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಡುಗಾಡು ಸಿದ್ಧರಿಗೆ ಬಿಡಾರವೇ ಸೂರು

Last Updated 14 ಜುಲೈ 2017, 5:59 IST
ಅಕ್ಷರ ಗಾತ್ರ

ತುರುವನೂರು: ‘ಖಾಲಿ ಇರುವ ಜಾಗಗಳಲ್ಲಿ ನಿರ್ಮಿಸಿಕೊಳ್ಳುವ ಬಿಡಾರವೇ ನಮಗೆ ನೆತ್ತಿ ಮೇಲಿನ ಸೂರು. ವಾಸಿಸಲು ಸ್ವಂತ ಮನೆಯಾಗಲಿ, ನಿವೇಶನವಾಗಲಿ ಯಾವುದೇ ಸೌಲಭ್ಯಗಳಿಲ್ಲ. ಸರ್ಕಾರಕ್ಕೆ, ಅಧಿಕಾರಿಗಳಿಗೆ ನಮ್ಮ ಬಗ್ಗೆ ಕಾಳಜಿಯೇ ಇಲ್ಲ.!’ ಕಳೆದ 15 ವರ್ಷಗಳಿಂದ ಚಿತ್ರದುರ್ಗ ತಾಲ್ಲೂಕಿನ ತಮಟಕಲ್ಲು ರಸ್ತೆ ಮಾರ್ಗದಲ್ಲಿ ವಾಸಿಸುತ್ತಿರುವ ಸುಡುಗಾಡು ಸಿದ್ಧರು ತಮ್ಮ ಸಮಸ್ಯೆಗಳನ್ನು  ‘ಪ್ರಜಾವಾಣಿ’ ಜತೆ ಬಿಚ್ಚಿಟ್ಟಿದ್ದು ಹೀಗೆ.

‘ಸ್ವಾಮಿ ನಮ್ದು ಕೂಲಿ ಕೆಲಸ. ಕೆಲಸ ಸಿಕ್ಕರೆ ಒಪ್ಪತ್ತಿನ ಊಟ, ಇಲ್ಲದಿದ್ದರೆ ಗಂಜಿಯೇ ಗತಿ. ಒಂದು ವೇಳೆ ಕೂಲಿ ಕೆಲಸ ಸಿಗದಿದ್ದರೆ, ಮನೆ ಮಂದಿಯೆಲ್ಲಾ ಉಪವಾಸ ಮಾಡುವಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಿತ್ಯ ಬದುಕನ್ನು ದೂಡಬೇಕಿದೆ’ ಎನ್ನುತ್ತಾರೆ ಚಳ್ಳಕೆರೆ ತಾಲ್ಲೂಕು ರಂಗವ್ವನಹಳ್ಳಿಯಿಂದ ಬಂದು ವಾಸಿಸುತ್ತಿರುವ ಮಂಜುನಾಥ್.

‘ಚಳ್ಳಕೆರೆ ಸಮೀಪ ಮೂರು ಎಕರೆ ಜಮೀನು ಇದೆ. ಆದರೆ, ಮಳೆ ಇಲ್ಲ, ತಿನ್ನೋಕೆ ಅನ್ನ ಇಲ್ಲ. ನಾವು ಒಂಬತ್ತು ಮಂದಿ ಅಣ್ಣ–ತಮ್ಮಂದಿರಿದ್ದೇವೆ. ಇರುವುದು ಕೇವಲ ಒಂದು ಮನೆ. ಅದರಲ್ಲಿ ಹೇಗೆ ಪಾಲು ಹಂಚಿಕೊಳ್ಳಲಿ. ಹೀಗಿರುವಾಗ ಹೊಲದಲ್ಲಿ ಯಾವ ಬೆಳೆ ಬೆಳೆಯಲಿ? ಅದಕ್ಕಾಗಿ ಚಳ್ಳಕೆರೆ ಬಿಟ್ಟು ಚಿತ್ರದುರ್ಗದಲ್ಲಿ ಬಿಡಾರ ಹೂಡಿದ್ದೇವೆ’ ಎನ್ನುತ್ತಾರೆ ಮಹಾ ನಂದೀಶ್.

ಸ್ನಾನಗೃಹಗಳಿಲ್ಲ: ಸ್ವಂತ ಸೂರಿಲ್ಲದೆ ಬಿಡಾರಗಳಲ್ಲಿ ವಾಸವಾಗಿರುವ ಕಾರಣ ವಿದ್ಯುತ್ ಸಂಪರ್ಕವಿಲ್ಲ. ಶೌಚ ಗೃಹ ಮರೀಚಿಕೆಯಾಗಿದ್ದು, ಬಯಲನ್ನೇ ಆಶ್ರಯಿಸಿಕೊಂಡಿದ್ದಾರೆ. ಜತೆಗೆ ವಿಷ ಜಂತುಗಳ ಭಯದ ನಡುವೆ ಜೀವನ ಚಕ್ರ ಮುಂದೆ ಸಾಗುತ್ತಿದೆ. ಈ ನಡುವೆ ಕೊಡಪಾನ ವ್ಯಾಪಾರ ಮಾಡುತ್ತಿದ್ದ ಬಳ್ಳಾರಿ ಜಿಲ್ಲೆಯ ಲಕ್ಷ್ಮಮ್ಮ (25) ಅವರಿಗೆ ಈಚೆಗೆ ಹಾವು ಕಚ್ಚಿದ್ದು, ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುತ್ತಾರೆ ಇಲ್ಲಿನ ವಾಸಿಗಳಾದ ರಾಮುಡು, ಸೀನು.

ಮೂಲ ಸೌಲಭ್ಯಗಳಿಲ್ಲ: ‘30ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಸುಮಾರು 500 ಮಂದಿ ಇದ್ದಾರೆ. ಚರಂಡಿ ವ್ಯವಸ್ಥೆ ಇಲ್ಲ, ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಆದ್ದರಿಂದ ಇದೇ ರಸ್ತೆ ಮಾರ್ಗದಲ್ಲಿ ಒಂದು ಕಿಲೋಮೀಟರ್ ದೂರವಿರುವ ಚೌಡಮ್ಮ ದೇಗುಲದ ಸಮೀಪದಿಂದ ನೀರನ್ನು ತರುವ ಸ್ಥಿತಿ ನಿರ್ಮಾಣವಾಗಿದೆ. ಮೆದೇಹಳ್ಳಿ ಗ್ರಾಮ ಪಂಚಾಯ್ತಿಯಿಂದ ತಕ್ಕಮಟ್ಟಿಗೆ ನೀರಿನ ಸೌಲಭ್ಯ ಒದಗಿಸಲಾಗಿದೆ. ಆದರೂ ಮೂಲಸೌಲಭ್ಯ  ನಮ್ಮ ಸಮುದಾಯಕ್ಕೆ ಗಗನ ಕುಸುಮವಾಗಿದೆ’ ಎಂದು ಅಳಲು ತೋಡಿಕೊಂಡರು.

ಬದುಕಿನ ಚಿತ್ರಣ: ‘ದೈನಂದಿನ ಕಾರ್ಯ ಆರಂಭವಾಗುವುದೇ ದೈವಾರಾಧನೆಯ ಮೂಲಕ. ಜೀವನೋಪಾಯಕ್ಕಾಗಿ ಪಾರಂಪರಿಕ ಕಲೆಗಳನ್ನು ನೆಚ್ಚಿಕೊಂಡಿದ್ದೇವೆ. ನಾಟಿ ಚಿಕಿತ್ಸೆ, ಗಿಳಿ ಶಾಸ್ತ್ರ, ಜನಪದ ಕಲಾ ಸೇವೆ ಸೇರಿದಂತೆ ಸಣ್ಣಪುಟ್ಟ ಸ್ಟೇಷನರಿ ವಸ್ತುಗಳ ಮಾರಾಟ ಮಾಡುತ್ತಿದ್ದೇವೆ.

ಸಹಜವಾಗಿ ಅಲೆಮಾರಿಗಳಂತೆ ನಮ್ಮ ಜೀವನ. ಅನಕ್ಷರಸ್ಥರಾದ ನಮಗೆ ಹಾಳು ಬಿದ್ದ ಕಟ್ಟಡಗಳು, ಬಯಲು ಪ್ರದೇಶಗಳ ಬಿಡಾರಗಳೇ ಆಶ್ರಯ ತಾಣಗಳಾಗಿವೆ’ ಎನ್ನುತ್ತಾರೆ ವೃದ್ಧೆ ಗಂಗಮ್ಮ. ಸಂಕಷ್ಟದ ನಡುವೆಯೇ ಮಕ್ಕಳಿಗೆ ಶಿಕ್ಷಣ ಕೊಡಿಸುವ ಪ್ರಯತ್ನಕ್ಕೂ ಸಮುದಾಯದವರು ಮುಂದಾಗಿದ್ದು, ಮುಖ್ಯವಾಹಿನಿಗೆ ಬರುವತ್ತ ಈಗ ತಾನೆ ಅಂಬೆಗಾಲು ಇಡುತ್ತಿದ್ದಾರೆ.

* * 

ನಾವು 10 ಕಲಾವಿದರಿದ್ದೇವೆ. ಅದರಲ್ಲಿ ನಾನೇ ಹಿರಿಯವನಾಗಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ನಮ್ಮ ಕಲೆಯನ್ನು ಪ್ರಸ್ತುತ ಪಡೆಸಿದ್ದೇವೆ. ಕಾರ್ಯಕ್ರಮ ನೀಡಿದಾಗ ಮಾತ್ರ ಸ್ವಲ್ಪ ಸಂಭಾವನೆ ಸಿಗುತ್ತದೆ.
ಗಂಗಪ್ಪ, ಕೊಂಡಮಾಮ ಕಲಾವಿದ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT