ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದೆಲ್ಲೆಡೆ ತ್ಯಾಜ್ಯರಾಶಿ: ಅಸಮಾಧಾನ

Last Updated 15 ಜುಲೈ 2017, 7:03 IST
ಅಕ್ಷರ ಗಾತ್ರ

ರಾಯಚೂರು: ‘ರಾಯಚೂರು ನಗರವು ಜಿಲ್ಲೆಯ ಇತರೆ ನಗರ ಹಾಗೂ ಪಟ್ಟಣಗಳಿಗಿಂತಲೂ ಸ್ವಚ್ಛತೆಯಲ್ಲಿ ಹಿಂದುಳಿದಿದೆ. ನಗರಸಭೆಯು ಶುಚಿತ್ವದ ಕಡೆಗೆ ಗಮನ ಹರಿಸುತ್ತಿಲ್ಲ’ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಡೆಂಗಿ ವಿರೋಧಿ ಮಾಸಾಚರಣೆ ಹಾಗೂ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಸಚ್ಛತೆ ಹಾಗೂ ಶುದ್ಧ ಕುಡಿಯುವ ನೀರು ಪೂರೈಸುವ ಕೆಲಸಗಳು ಸಂಪೂರ್ಣ ವಿಫಲವಾಗಿವೆ. ಫಾಗಿಂಗ್‌ ವ್ಯವಸ್ಥೆಯು ಸಮರ್ಪಕವಾಗಿ ನಡೆಯುತ್ತಿಲ್ಲ ಎನ್ನುವುದು ನಗರಸಭೆ ಪೌರಾಯುಕ್ತರ ಮಾತಿನಿಂದ ಗೊತ್ತಾಗಿದೆ. ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ವಿಜಯಾ ಅವರು ಕೂಡಲೇ ಈ ಬಗ್ಗೆ ತನಿಖೆ ನಡೆಸಿ ವರದಿ ನೀಡಬೇಕು’ ಎಂದು ಸೂಚನೆ ನೀಡಿದರು.

‘ಶುಚಿತ್ವದ ವಾತಾವರಣ ನಗರದಲ್ಲಿ ಮಾಯವಾಗಿದೆ. ನಗರವೆಲ್ಲ ಕಸದ ಗುಡ್ಡೆಯಂತೆ ಕಾಣುತ್ತಿದೆ. ಚರಂಡಿ, ಒಳಚರಂಡಿ ಹಾಗೂ ಸ್ವಚ್ಛತೆಗೆ ಗಮನ ಹರಿಸಲು ಅನೇಕ ಬಾರಿ ಸೂಚನೆ ನೀಡಿದರೂ ಅಧಿಕಾರಿಗಳು ನಿಷ್ಕಾಳಜಿ ವಹಿಸುತ್ತಿದ್ದಾರೆ’ ಎಂದು ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು.

‘ಪರಿಸರ ಎಂಜಿನಿಯರ್‌ ಅವರಿಗೆ ದೀರ್ಘಾವಧಿ ರಜೆ ಹೇಗೆ ನೀಡಲಾಗಿದೆ. ಇದಕ್ಕೆ ಮೇಲಧಿಕಾರಿಗಳ ಅನುಮತಿ ಪಡೆಯಲಾಗಿದೆಯೆ ಎಂದು ಪ್ರಶ್ನಿಸಿದರು. ಸಿಯಾತ್‌ಲಾಬ್, ಜಲಾಲನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಘನತ್ಯಾಜ್ಯ ವಿಲೇವಾರಿಯಾಗದೆ ಜನರು ಡೆಂಗಿ ಜ್ವರಕ್ಕೀಡಾಗುತ್ತಿರುವ ಮಾಹಿತಿ ಇದೆ. ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸದೆ ವೇತನ ಪಡೆಯುತ್ತಿದ್ದಾರೆ’ ಎಂದು ಖಾರವಾಗಿ ಹೇಳಿದರು.

‘ನಗರದ 35 ವಾರ್ಡ್‌ಗಳಲ್ಲಿ 500 ಕ್ಕೂ ಹೆಚ್ಚು ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಲಾಗುತ್ತಿದೆ. ಪ್ರತಿದಿನ ವಾರ್ಡ್‌ಗೆ ತೆರಳಿ ಪೌರಕಾರ್ಮಿಕರು ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಯಾವುದೇ ಕೆಲಸಗಳಾಗುತ್ತಿಲ್ಲ. ಆದರೆ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಹಣ ಪಾವತಿಸಲಾಗುತ್ತಿದೆ’ ಎಂದರು.

‘ಮಲೇರಿಯಾ, ಆನೆಕಾಲು ರೋಗ, ಡೆಂಗಿ ಜ್ವರ, ಇವು ಸೊಳ್ಳೆಯಿಂದ ಹರಡುವ ರೋಗಗಳಾಗಿದ್ದು ಸ್ವಚ್ಛತೆ ಕಾಪಾಡಿದಾಗ ಮಾತ್ರ ಇವುಗಳಿಂದ ದೂರ ಇರಬಹುದು. ಮನೆಯಲ್ಲಿ ನೀರು ಸಂಗ್ರಹಣ ಸಾಮಗ್ರಿಗಳನ್ನು ಮುಚ್ಚಿಡಬೇಕು ರಾತ್ರಿ ಮಲಗುವಾಗ ಸೊಳ್ಳೆ ಪರದೆಗಳನ್ನು ಉಪಯೋಗಿಸುವುದು ಅವಶ್ಯಕವಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.

‘ಕ್ಷಯರೋಗದಿಂದ ದೇಶದಲ್ಲಿ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಇದೊಂದು ಸಾಂಕ್ರಾಮಿಕ ರೋಗವಾಗಿದೆ. 2016 ರ ವರದಿಯ ಪ್ರಕಾರ ಪ್ರಪಂಚದಲ್ಲಿ 69 ಲಕ್ಷ ಹಾಗೂ ಭಾರತದಲ್ಲಿ 28 ಲಕ್ಷ ಕ್ಷಯರೋಗಿಗಳಿದ್ದಾರೆ. ಈ ಕಾರ್ಯಕ್ರಮ ತೀಕ್ಷ್ಣಗೊಳಿಸುವ ದೃಷ್ಟಿಯಿಂದ ಎರಡನೇ ಮತ್ತು ಮೂರನೇ ಹಂತವಾಗಿ ಜುಲೈ 17 ರಿಂದ 31 ರ ವರೆಗೆ ಹಾಗೂ ಡಿಸೆಂಬರ್ 4 ರಿಂದ 18 ರ ವರೆಗೆ ವಿಶೇಷ ಆಂದೋಲನವನ್ನು ನಡೆಸಲಾಗುತ್ತಿದೆ’ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಮ್.ಕೆ.ಎಸ್ ನಶೀರ, ನಗರಸಭೆ ಪೌರಾಯುಕ್ತ ಕೆ. ಗುರುಲಿಂಗಪ್ಪ, ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ.ಕೆ.ನಾಗರಾಜ, ಮಲೇರಿಯಾ ಅಧಿಕಾರಿ ಡಾ.ವಿಜಯಾ ಕೆ. ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಸುರೇಂದ್ರ ಬಾಬು, ರಿಮ್ಸ್ ಮೆಡಿಕಲ್‌ನ ಅಧೀಕ್ಷಕ ಡಾ.ಬಸವರಾಜ ಪೀರಾಪುರ ಇದ್ದರು.

* * 

ಹಂದಿಗಳನ್ನು ಸಾಗಿಸಲು ನಗರಸಭೆಗೆ ಅನೇಕ ಬಾರಿ ಸೂಚನೆ ನೀಡಲಾಗಿದೆ. ಆದರೆ ಸದಸ್ಯರು ಇದಕ್ಕೆ ವಿರೋಧಿಸುತ್ತಿದ್ದಾರೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ
ಡಾ.ಬಗಾದಿ ಗೌತಮ
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT